ನಾನು ನನ್ನ ಕನಸು: ಇಂದು ರಾಷ್ಟ್ರೀಯ ಹೆಣ್ಣುಮಕ್ಕಳ ದಿನ..

Girl Child
Published on
ಇಂದು (ಜ. 24) ರಾಷ್ಟ್ರೀಯ ಹೆಣ್ಣುಮಕ್ಕಳ ದಿನ. 2008ರಲ್ಲಿ ಮೊದಲ ಬಾರಿಗೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಆಚರಣೆೆ ಆರಂಭಿಸಿತು. ಸಮಾಜದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಲಿಂಗ ಆಧಾರಿತ ತಾರತಮ್ಯದ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಇದರ ಮಧ್ಯೆ ಹೆಣ್ಣು ಮಕ್ಕಳ ಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಸರ್ಕಾರಗಳೂ ಅನೇಕ ಕಾರ್ಯಕ್ರಮ ಜಾರಿಗೊಳಿಸಿವೆ. ಈ ಸಂದರ್ಭದಲ್ಲಿ ನಾಳೆಯ ಬದುಕನ್ನು ಸುಂದರವಾಗಿಸಿಕೊಳ್ಳುವ ಕನಸನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ ಕರೆಗೆ ನಾಡಿನ ವಿವಿಧೆಡೆಯಿಂದ ಅನೇಕರು ಸ್ಪಂದಿಸಿದ್ದಾರೆ. ಅವುಗಳಲ್ಲಿ ಆಯ್ದ ಕೆಲವು ಬರಹಗಳು ಇಲ್ಲಿವೆ. ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು. ನಾಡಿನ ಎಲ್ಲ ಹೆಣ್ಣುಮಕ್ಕಳಿಗೂ ‘ಹೆಣ್ಣುಮಕ್ಕಳ ದಿನ’ದ ಶುಭಾಶಯಗಳು.

ವೈದ್ಯಳಾಗಿ ಗ್ರಾಮೀಣ ಭಾಗದಲ್ಲಿ ಸೇವೆ

ಕರೊನಾ ಸಂಕಷ್ಟದ ದಿನಗಳಲ್ಲಿ ಬೆಂಗಳೂರಿನಲ್ಲಿ ದುಡಿಯುತ್ತಿದ್ದ ಅಪ್ಪ ಅನಿವಾರ್ಯವಾಗಿ ನಮ್ಮ ಹಳ್ಳಿಯಲ್ಲಿ ದುಡಿಮೆ ಕಂಡುಕೊಳ್ಳು ವಂತಾಯಿತು. ಅಂದು ಕರೊನಾದಿಂದ ಜನರನ್ನು ರಕ್ಷಣೆ ಮಾಡಲು ವೈದ್ಯರು ಅವಿರತ ಶ್ರಮಿಸುತ್ತಿರುವುದನ್ನು ನೋಡಿ ನಾನೂ ವೈದ್ಯಳಾಗಬೇಕೆಂಬ ಕನಸು ನನ್ನಲ್ಲಿ ಮೂಡಿದೆ. ಅಂದು ಬೆಂಗಳೂರಿನಲ್ಲಿ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ನಾನು ಈಗ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೇನೆ. ಸರ್ಕಾರಿ ಶಾಲೆಗಳು ಪರಸ್ಪರ ಸಹಕಾರ ಮನೋಭಾವದ ಉತ್ತಮವಾದ ಜೀವನ ಶಿಕ್ಷಣ ಕೊಡುತ್ತವೆ ಎಂಬುದು ನನ್ನ ಅನುಭವಕ್ಕೆ ಬಂದಿದೆ. ಹಾಗಾಗಿ ನಾನು ವೈದ್ಯಳಾದ ಮೇಲೆ ನಮ್ಮ ಹಳ್ಳಿಯ ಹಾಗೂ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ಮಕ್ಕಳಿಗೆ ಅಗತ್ಯ ಕಲಿಕಾ ಸಾಮಗ್ರಿ ನೀಡುವುದು, ಅವರಿಗೆ ಆರೋಗ್ಯ ಶಿಬಿರ ನಡೆಸುವುದು ಮತ್ತು ಉಚಿತ ಆರೋಗ್ಯ ಸೇವೆ ನೀಡಬೇಕೆಂಬುದು ನನ್ನ ಇಂಗಿತ.

| ಪ್ರಾರ್ಥನಾ. ಆರ್.ಎಸ್., 5ನೇ ತರಗತಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಸಣ್ಣಕೆರೆ, ಕೊಪ್ಪ, ಚಿಕ್ಕಮಗಳೂರು

5 ರೂ. ಡಾಕ್ಟರ್ ರೀತಿ ಸಹಾಯ

ಎಲ್ಲರಂತೆ ನನಗೂ ಆಸೆ ಕನಸುಗಳಿವೆ. ನನಗೆ ಸೈಕಲ್ ತುಳಿಯುವುದು, ಚಿತ್ರ ಬಿಡಿಸುವುದೆಂದರೆ ಇಷ್ಟ. ದೊಡ್ಡವಳಾದ ಮೇಲೆ ಡಾಕ್ಟರ್ ಆಗುವ ಕನಸಿದೆ. ಅಮ್ಮ ಹೇಳುತ್ತಿರುತ್ತಾಳೆ, ಸಂಪಾದಿಸಿದ ದುಡ್ಡೆಲ್ಲಾ ಆಸ್ಪತ್ರೆಗೆ ಆಯ್ತು. ಮಧ್ಯಮ ವರ್ಗ, ಕೆಳ ವರ್ಗದವರಿಗೆ ಉಚಿತವಾಗಿ ಊಟ ಸಿಗುತ್ತೆ ಎನ್ನುವುದರ ಬದಲು ಆರೋಗ್ಯ ತಪಾಸಣೆ ಸಿಗುತ್ತೆ ಎನ್ನುವುದರಲ್ಲಿ ಖುಷಿ. ಅವಳಾಡೋ ದೊಡ್ಡ ದೊಡ್ಡ ಮಾತುಗಳು ನನಗೆ ಅರ್ಥ ಆಗದಿದ್ದರೂ ನಾನು ಡಾಕ್ಟರ್ ಆದ್ರೆ 5 ರೂಪಾಯಿ ಡಾಕ್ಟರಂತೆ ಜನರಿಗೆ ಸಹಾಯ ಮಾಡಬಹುದು ಅನ್ನುವುದೇ ನನ್ನ ಕನಸು.

| ತನಿಷಾ. ಜಿ 3ನೇ ತರಗತಿ, ಕ್ರೖೆಸ್ಟ್ ಪಬ್ಲಿಕ್ ಸ್ಕೂಲ್ ಬೋಗಾದಿ, ಮೈಸೂರು

ಸಂಗೀತವೇ ನನ್ನ ಉಸಿರು

ಪ್ರತಿಯೊಬ್ಬರೂ ಜೀವನದಲ್ಲಿ ಕನಸು ಕಾಣುತ್ತಾರೆ. ಕೆಲವರು ಡಾಕ್ಟರ್, ಪೊಲೀಸ್ ಹೀಗೆ ದೊಡ್ಡ ದೊಡ್ಡ ವ್ಯಕ್ತಿಗಳಾಗಬೇಕೆಂದು ಕನಸು ಕಂಡಿರುತ್ತಾರೆ. ಹೀಗೆ ನಾನು ಒಂದು ಕನಸು ಕಂಡಿದ್ದೇನೆ. ಅದೆೆಂದರೆ ನನಗೆ ದೊಡ್ಡ ಗಾಯಕಿಯಾಗುವ ಕನಸು. ಚಿಕ್ಕ ವಯಸ್ಸಿನಿಂದಲೇ ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ್ದು, ಎಲ್ಲ ತರಹದ ಹಾಡು ಕೇಳಿ ಕಲಿತು ಹಾಡಲು ಪ್ರಯತ್ನಿಸುವೆ. ಪ್ರತಿ ಭಾನುವಾರ ನಾನು ಆರಾಧನಾ ಕಲಾ ಕೇಂದ್ರದಲ್ಲಿ ಹಾಡುತ್ತೇನೆ ಹಾಗೂ ಅವರು ನನಗೆ ಪ್ರೋತ್ಸಾಹಿಸುತ್ತಾರೆ. ಅಲ್ಲದೇ ನಾನು ದೊಡ್ಡವಳಾಗಿ ಸೌಂಡ್ ಇಂಜಿನಿಯರಿಂಗ್ ಕೋರ್ಸ್ ಮಾಡಿ ನನ್ನ ಸ್ವಂತ ಟ್ಯೂನ್​ಗಳನ್ನು ರಚಿಸಿ ಹಾಡುವ ಆಸೆ. ಎಲ್ಲ ತರಹದ ಸಂಗೀತ ವಾದ್ಯ ನುಡಿಸುವುದನ್ನು ಕಲಿತು ದೊಡ್ಡ ವೇದಿಕೆಯ ಮೇಲೆ ನುಡಿಸುವುದು, ಹಾಡುವುದು ನನ್ನ ಕನಸು. ಈ ನನ್ನ ಕನಸನ್ನು ನನಸಾಗಿಸಲು ನನ್ನ ಕುಟುಂಬದ ಎಲ್ಲ ಸದಸ್ಯರ ಸಲಹೆ ಹಾಗೂ ಸಹಕಾರ ನನಗಿದೆ.

| ಸುನಿಧಿ ತೊರವಿ 8ನೇ ತರಗತಿ, ಚಿನ್ಮಯ ವಿದ್ಯಾಲಯ, ಮಯೂರಿ ಬಡಾವಣೆ, ಹುಬ್ಬಳ್ಳಿ

ವೃತ್ತಿ ಜೀವನ ಬಡವರಿಗೆ ಮೀಸಲು

ಎಂಬಿಬಿಎಸ್ ಮಾಡಿ ಗ್ರಾಮೀಣ ಭಾಗದಲ್ಲಿ ಸರ್ಕಾರಿ ವೈದ್ಯಳಾಗಿ ಬಡಜನರ ಸೇವೆ ಮಾಡುತ್ತಾ ನನ್ನ ವೃತ್ತಿ ಜೀವನ ಮಾಡಬೇಕೆಂದು ಸಂಕಲ್ಪ ಮಾಡಿದ್ದೇನೆ. ಇಂದಿನ ಈ ಯಾಂತ್ರಿಕ ಯುಗದಲ್ಲಿ ಅನೇಕ ಬಡವರು ಆರೋಗ್ಯ ಸೇವೆಯಿಂದ ವಂಚಿತರಾಗಿದ್ದು, ಅವರ ಸೇವೆ ಮಾಡಿ ನನ್ನ ಜೀವನ ಕಳೆಯುತ್ತೇನೆ. ಆರೋಗ್ಯವೇ ಮಹಾಭಾಗ್ಯ ಎನ್ನುವ ಮಂತ್ರದೊಂದಿಗೆ ನನ್ನ ಸೇವೆ ಸಲ್ಲಿಸುತ್ತೇನೆ. ಈಗಿನ ಕಾಲದಲ್ಲಿ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ತೋರಿಸಲು ಎಷ್ಟೋ ಬಡಜನರಿಗೆ, ವೃದ್ಧರಿಗೆ ದುಡ್ಡು ಇರೋದಿಲ್ಲ. ರೋಗಿಗಳು ಇದ್ದಲ್ಲಿಗೆ ಹೋಗಿ ಸೂಕ್ತ ಚಿಕಿತ್ಸೆ ನೀಡಿ ರೋಗವಾಸಿ ಮಾಡುವ ಜತೆಗೆ ಅವರ ಆರ್ಥಿಕ ಪರಿಸ್ಥಿತಿಗೆ ನನ್ನದೊಂದು ಚಿಕ್ಕ ಸಹಾಯದೊಂದಿಗೆ ಸೇವೆ ಸಲ್ಲಿಸುವುದೇ ನನ್ನ ಧ್ಯೇಯ.

| ಸ್ಪೂರ್ತಿ ರಾಮಚಂದ್ರ ಪೋದ್ದಾರ, 3ನೇ ತರಗತಿ, ಪುಷ್ಪಾತಾಯಿ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ, ಸಿದ್ದಾಪುರ

ಬಾಳಿನ ಕಲೆ ರೂಪಿಸಿಕೊಳ್ಳುವೆ

ನಿನ್ನೆ ಸತ್ತಿದೆ. ಸಾಯುವ ಮುನ್ನ ಇಂದನ್ನು ಹೆತ್ತಿದೆ. ಇಂದು ಬರಲಿರುವ ನಾಳೆಯನ್ನು ಹೊತ್ತಿದೆ. ಇದು ಸಮಯದ ಕಥೆ. ಹೀಗೆಯೇ ಬದುಕು ಕೂಡ ಅನೇಕ ರಹಸ್ಯಗಳ ಜೊತೆಗೂಡಿದೆ. ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ, ಬದುಕು ಅನಿವಾರ್ಯ. ಬದುಕು ಬಾಳಬೇಕು. ಹೀಗೇ? ನನ್ನ ಪ್ರಕಾರ, ಕಷ್ಟದಲ್ಲಿರುವವನ ಕಣ್ಣೀರು ಒರೆಸುವವ ಉತ್ತಮ. ಆದರೆ ಕಣ್ಣೀರೇ ಬಾರದಂತೆ ನೋಡಿಕೊಳ್ಳುವವ ಅತ್ಯುತ್ತಮ. ಇಲ್ಲಿ ನಾವು ಸಂತೋಷ ಪಟ್ಟುಕೊಳ್ಳುವುದಕ್ಕಿಂತ ಇತರರ ಸಂತೋಷಕ್ಕೆ ಕಾರಣವಾಗುವುದರಲ್ಲಿ ಸಿಗುವ ಆತ್ಮಾನಂದವು ನನ್ನ ಕನಸಾಗಿದೆ. ಸರಳ ವಿಷಯಗಳನ್ನು ಕಠಿಣಗೊಳಿಸದೆ, ಕಠಿಣ ವಿಷಯಗಳನ್ನು ಸರಳೀಕರಿಸಿ ಬದುಕಿ, ಬಾಳಿನ ಕಲೆಯನ್ನು ರೂಪಿಸಿಕೊಳ್ಳಬೇಕೆಂಬುದು ಕನಸು.

| ಫಾತಿಮಾ ಸನಿಯ್ಯ 9ನೇ ತರಗತಿ, ಇಂಡಿಯನ್ ಆಂಗ್ಲ ಮಾಧ್ಯಮ ಶಾಲೆ, ಉಪ್ಪಿನಂಗಡಿ.

ಕಲಿತ ನಾರಿ ಪ್ರಗತಿಗೆ ದಾರಿ

ಅಪ್ಪನಿಗಿರುವ ಮೂರು ಹೆಣ್ಣುಮಕ್ಕಳಲ್ಲಿ ಎರಡನೆಯವಳು ನಾನು. ನಮ್ಮೂರಿನಲ್ಲಿ ಪ್ರೌಢಶಾಲೆ ಇಲ್ಲದ ಕಾರಣ ದಿನಾ 5-6 ಕಿಲೋಮೀಟರ್ ನಡೆದುಕೊಂಡೇ ಹೋಗಿ ಪಕ್ಕದ ರಾಮಜೋಗಿಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದೇನೆ. ನನಗೆ ನನ್ನದೇ ಆದ ಕನಸುಗಳಿವೆ. ಕಲಿತ ನಾರಿ ಪ್ರಗತಿಗೆ ದಾರಿ ಎಂಬಂತೆ, ಪರ್ವತಾರೋಹಿ ಬಚೇಂದ್ರಿಪಾಲ್, ರಾಷ್ಟ್ರಪತಿ ಮುಮು, ಲೇಖಕಿ ಮಹದೇವಿ ವರ್ವಜಿ ಮುಂತಾದವರು ನನಗೆ ಮಾದರಿ ಹಾಗೂ ಸ್ಪೂರ್ತಿಯಾಗಿದ್ದಾರೆ. ಗ್ರಾಮೀಣ ಪ್ರತಿಭೆಯಾದ ನಾನು, ಉತ್ತಮ ಹಾಗೂ ಉನ್ನತ ವ್ಯಾಸಂಗ ಪಡೆದು, ಈಗ ನನಗೆ ಪಾಠಮಾಡುವ ಗುರುಗಳಂತೆ ನಾನೂ ಒಬ್ಬ ಆದರ್ಶ ಶಿಕ್ಷಕಿಯಾಗಬೇಕೆಂಬುದು ನನ್ನ ಕನಸು. ಕನಸು ನನಸಾಗಿಸಲು ಶಿಸ್ತನ್ನು ಜೀವನ ಪೂರ್ತಿ ಅಳವಡಿಸಿಕೊಂಡು ವಿಜಯಶಾಲಿಯಾಗಬೇಕೆಂದು ಬಯಸಿದ್ದೇನೆ. ಒಬ್ಬ ಆದರ್ಶ ಶಿಕ್ಷಕಿಯಾಗಬೇಕೆಂಬ ನನ್ನ ಕನಸಿಗೆ ಕಾಲ, ಶಿಕ್ಷಕರು ಹಾಗೂ ತಂದೆ- ತಾಯಿ ಸಹಕರಿಸುತ್ತಾರೆಂಬ ಭರವಸೆಯಿಂದ ಮುಂದಿನ ದಿನಗಳನ್ನು ವೀಕ್ಷಿಸುತ್ತಿದ್ದೇನೆ.

| ತ್ರಿಷಾ ಎಸ್.ಪಿ 10ನೇ ತರಗತಿ ಆಂಗ್ಲ ಮಾಧ್ಯಮ ಸರ್ಕಾರಿ ಪ್ರೌಢಶಾಲೆ, ರಾಮಜೋಗಿಹಳ್ಳಿ, ಚಳ್ಳಕೆರೆ ತಾಲೂಕು

ನಾನಾಗಬೇಕು ನಾಟ್ಯ ಮಯೂರಿ...

ನಾನು, ನನ್ನ ತಂದೆ-ತಾಯಿ, ನನ್ನ ತಂಗಿ. ಇದೇ ನನ್ನ ಪ್ರೀತಿಯ ಪುಟ್ಟ ಜಗತ್ತು. ಪ್ರತಿದಿನ ಅಭ್ಯಾಸದ ನಡುವೆ ನಾನು ಸ್ವಲ್ಪ ಬಿಡುವು ಮಾಡಿಕೊಳ್ಳುತ್ತೇನೆ. ನನ್ನ ಕನಸು, ಮಾಡಬೇಕಾದ ಸಾಧನೆ ಬಗ್ಗೆ ಯೋಚಿಸುತ್ತೇನೆ. ನನಗೂ ಹಲವು ಕನಸುಗಳಿವೆ. ಆದರೆ, ಇದರಲ್ಲಿ ಅತ್ಯಂತ ಇಷ್ಟವಾಗಿದ್ದು ನೃತ್ಯ. ಹೌದು, ಡಾನ್ಸ್ ಅಂದರೆ ನಾನು ಈ ಲೋಕವನ್ನೇ ಮರೆಯುತ್ತೇನೆ. ನೃತ್ಯವನ್ನು ಶಾಸ್ತ್ರೀಯವಾಗಿ ಕಲಿಯಬೇಕೆಂಬ ಆಸೆ ಇದ್ದರೂ ಕೈಗೂಡಿಲ್ಲ. ಯೂಟ್ಯೂಬ್​ನಲ್ಲಿ ವೃತ್ತಿಪರ ಡಾನ್ಸರ್​ಗಳ ವಿಡಿಯೋ ನೋಡಿ ಕಲಿಯುತ್ತಿದ್ದೇನೆ. ಈ ಜಗತ್ತಿ್ತನಲ್ಲಿ ಲಯವಿಲ್ಲದ ವಸ್ತು ಯಾವುದೂ ಇಲ್ಲ. ಸಂಗೀತ ಕೇಳಿದಾಗ ನನ್ನ ಕಾಲುಗಳು ತನ್ನಿಂತಾನೇ ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕಲಾರಂಭಿಸುತ್ತವೆ. ನಾನು ಊರಿಗೆ ಹೋದಾಗ ಕುಣಿಯುವುದೇ ನನ್ನ ಕೆಲಸ. ನಾನು ಹುಟ್ಟಿದ್ದೇ ನೃತ್ಯಗಾತಿಯಾಗಲು ಎಂದು ನನ್ನ ಅಜ್ಜ-ಅಜ್ಜಿ ಹೇಳುತ್ತಿರುತ್ತಾರೆ. ನನ್ನ ಕುಟುಂಬದ ಸಹಕಾರದಿಂದಾಗಿ ಇಂದಲ್ಲ, ನಾಳೆ ನಾನು ನನ್ನ ಕನಸನ್ನು ನನಸಾಗಿಸಿ ನಾಟ್ಯ ಮಯೂರಿ ಆಗುತ್ತೇನೆ.

| ಶ್ರೇಯಾ ರವಿ ಕಮತಿ ಶಾರದಾ ವಿದ್ಯಾ ಮಂದಿರ ಶಾಲೆ, ಕಾಡುಗೋಡಿ, ಬೆಂಗಳೂರು

ರಿಂಪಾ ಶಿವ ನೋಡಿ ಚಿಗುರೊಡೆದ ಕನಸು

ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ದೇವಸ್ಥಾನದ ವಠಾರದಲ್ಲಿ ವಾರಕ್ಕೊಂದು ದಿನ ನಡೆಯುತಿದ್ದ ತಬಲಾ ತರಗತಿಗೆ ಅಪ್ಪನ ಜೊತೆ ನಾನೂ ಹೋಗುತ್ತಿದ್ದೆ. ಆಗ ನನಗೆ ಮೂರುವರೆ ವರ್ಷ. ತಬಲಾ ತರಗತಿಯಲ್ಲಿ ಕುಳಿತು ಮಕ್ಕಳ ಕಲಿಕೆ ವೀಕ್ಷಿಸುತ್ತಿದ್ದ ನನ್ನ ಗಮನ, ಏಕಾಗ್ರತೆ ಹಾಗೂ ಆಸಕ್ತಿ ಗುರುತಿಸಿದ ನನ್ನ ಗುರುಗಳು ತರಗತಿಗೆ ಸೇರಿಸಿಕೊಂಡರು. ಅಲ್ಲಿಂದ ನನ್ನ ತಬಲಾ ಕಲಿಕೆ ಆರಂಭವಾಯಿತು. ಮನೆಯಲ್ಲಿ ಅಭ್ಯಾಸ ಮಾಡಲು ಅಪ್ಪ ಸಹಾಯ ಮಾಡುತ್ತಿದ್ದರು. ಗುರುಗಳು ಯಾವಾಗಲೂ, ನೀನು ರಿಂಪಾ ಶಿವ ಅವರಂತೆ ತಬಲಾ ನುಡಿಸ್ಬೇಕು ಎಂದು ಹೇಳುತ್ತಿದ್ದರು. ನನಗೆ ರಿಂಪಾ ಶಿವ ಯಾರೆಂದು ಗೊತ್ತಿರಲಿಲ್ಲ. ಸ್ವಲ್ಪ ದಿನಗಳ ನಂತರ, ನನ್ನ ಅದೃಷ್ಟವೋ ಎಂಬಂತೆ, ಮಣಿಪಾಲದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ನನಗೆ ರಿಂಪಾ ಶಿವ ಅವರನ್ನು ಭೇಟಿ ಮಾಡುವ, ಅವರೊಂದಿಗೆ ಮಾತಾಡುವ ಹಾಗೂ ಅವರ ತಬಲಾ ಕೈ ಚಳಕ ನೋಡುವ ಭಾಗ್ಯ ಒದಗಿ ಬಂತು. ನನಗೆ ಅವರಂತೆಯೇ ತಬಲಾ ನುಡಿಸಬೇಕು ಎಂಬ ಕನಸು ಚಿಗುರಿತು. ಇದಕ್ಕಾಗಿ ಸತತ ಅಭ್ಯಾಸ ನಡೆಸುತ್ತಾ ಬಂದಿದ್ದೇನೆ.

| ಆದ್ಯಾ ಯು 4ನೇ ತರಗತಿ, ಮೌಂಟ್ ಕಾರ್ವೆಲ್ ಸೆಂಟ್ರಲ್ ಸ್ಕೂಲ್, ಮಂಗಳೂರು

ಒಟ್ಟಿಗೆ ದೇಶಸೇವೆ ಮಾಡಲು ಬದ್ಧ

ನಾವಿಬ್ಬರು ಅವಳಿಗಳು. ಬಾಲ್ಯದಿಂದಲೂ ಒಟ್ಟಿಗೆ ಬೆಳೆದಿದ್ದೇವೆ. ಜಗಳವಾಡಿದ್ದೇವೆ. ಈಗಲೂ ಜಗಳವಾಡುತ್ತೇವೆ. ಮತ್ತೆ ಒಂದಾಗುತ್ತೇವೆ. ಎಷ್ಟೇ ಕಿತ್ತಾಡಿದರೂ ಒಬ್ಬರನ್ನೊಬ್ಬರು ಬಿಟ್ಟಿರಲು ನಮ್ಮಿಬ್ಬರಿಂದ ಸಾಧ್ಯವಿಲ್ಲ. ಈಗ ನಾವಿಬ್ಬರೂ ಎಂಟನೇ ತರಗತಿಯಲ್ಲಿ ಓದುತ್ತಿದ್ದೇವೆ. ನಮ್ಮ ಟೀಚರ್ ಪ್ರೋತ್ಸಾಹದಿಂದ ಎನ್​ಸಿಸಿ ತರಬೇತಿಗೆ ಸೇರಿಕೊಂಡೆವು. ಈ ತರಬೇತಿಯಿಂದ ನಾವು ಶಿಸ್ತು ಕಲಿತೆವು. ದೇಶ ಪ್ರೇಮ, ದೇಶ ರಕ್ಷಣೆಯ ಕುರಿತು ನಮ್ಮ ಟೀಚರ್ ತುಂಬಾ ಚೆನ್ನಾಗಿ ವಿವರಿಸಿದ್ದಾರೆ. ಈಗ ನಮ್ಮಿಬ್ಬರದೂ ಒಂದೇ ಕನಸು. ಅದೆಂದರೆ ದೇಶಸೇವೆಗಾಗಿ ಭಾರತೀಯ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸುವುದು. ನಮ್ಮ ಕನಸು ನನಸಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ನಮ್ಮ ದೇಶ ಸೇವೆಯ ಒಂದು ಅವಕಾಶ ಸಿಕ್ಕರೆ ತುಂಬಾ ಖುಷಿಯಾಗುತ್ತದೆ.

| ಅದಿಶ್ರೀ, ಅಂಜುಶ್ರೀ ರವಿ ನಾಯ್ಕ 8ನೇ ತರಗತಿ, ವಿ.ಕೆ ಪ್ರೌಢಶಾಲೆ, ಅಂಕೋಲಾ

ಕೃಷಿಕಳಾಗುವೆ...

ಜೀವನದಲ್ಲಿ ಎಲ್ಲರೂ ವೈದ್ಯರಾಗಬೇಕು, ಇಂಜಿನಿಯರ್ ಆಗಬೇಕು. ವಕೀಲನಾಗಬೇಕು ಹೀಗೆ ಏನೇನೋ ಕನಸು ಕಂಡಿರುತ್ತಾರೆ. ಆದರೆ ನಾನು ಮಾತ್ರ ಆಧುನಿಕ ಕೃಷಿಕಳಾಗಬೇಕೆಂದು ಬಯಸುತ್ತೇನೆ. ಏಕೆಂದರೆ ನಮ್ಮದು ಹಳ್ಳಿಗಳ ದೇಶ. ಇಲ್ಲಿನ ಜನರ ಮುಖ್ಯ ಕಸುಬು ಕೃಷಿ. ಈ ಕೃಷಿಗೆ ಜೀವ ತುಂಬುವ ಕನಸು ನನ್ನದು. ಕಲ್ಪತರು ನಾಡಿನಲ್ಲಿರುವ ನಮ್ಮ ಊರಿನಲ್ಲಿ ಸುಮಾರು ಏಳು ಎಕರೆ ಜಮೀನಿದೆ. ಆದರೆ ಉಳುಮೆ ಮಾಡುವವರಿಲ್ಲದೆ ಎರಡು ಎಕರೆಯಲ್ಲಿ ಮಾತ್ರ ಕೃಷಿ ಮಾಡುತ್ತಿದ್ದು, ಉಳಿದದ್ದು ಪಾಳು ಬಿದ್ದಿದೆ. ಕೃಷಿಕರ ಹಲವು ಕುಟುಂಬಗಳು ನಗರದತ್ತ ವಲಸೆ ಬರುತ್ತಿರುವುದರಿಂದ ಉಳುಮೆ ಮಾಡುವವರೇ ಇಲ್ಲದಂತಾಗಿದೆ. ನಾನು ದೊಡ್ಡವಳಾದ ಮೇಲೆ ಕೃಷಿಯಲ್ಲೇ ಸ್ನಾತಕೋತ್ತರ ಪದವಿ ಗಳಿಸಿ ಅದರಲ್ಲಿ ಹೆಸರು ಮಾಡಬೇಕೆಂದಿದ್ದೇನೆ. ಆಧುನಿಕ ಬೇಸಾಯ, ಯಂತ್ರೋಪಕರಣಗಳ ಬಳಕೆ ಹೀಗೆ ನವನವೀನ ವಿಧಾನ ಅಳವಡಿಸಿಕೊಂಡು ಉತ್ತಮ ಇಳುವರಿ ಗಳಿಸಿ ದೇಶದ ಪ್ರಗತಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತೇನೆ. ಇದಕ್ಕೆ ನನ್ನ ಪಾಲಕರ ಸಹಮತವೂ ಇದೆ.

| ಹರ್ಷಿತಾ ಎಸ್ ಗಿರಿ 4ನೇ ತರಗತಿ, ಗಂಗೋತ್ರಿ ಇಂಟರ್ ನ್ಯಾಷನಲ್ ಸ್ಕೂಲ್, ತುಮಕೂರು

ಸಮಾಜ ಸುಧಾರಕಳಾಗಿ ದೇಶಕ್ಕೆ ಕೀರ್ತಿ

ಭಾರತದ ಸಂಸ್ಕೃತಿ, ವಿಶೇಷತೆ, ಶ್ರೇಷ್ಠತೆಯನ್ನು ಅಜರಾಮರವಾಗಿಸುವ ಮತ್ತು ಪ್ರಜಾಪ್ರಭುತ್ವದ ಮೌಲ್ಯ ಸಿದ್ಧಾಂತಗಳನ್ನು ಕಾಪಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯ. ಈ ನಿಟ್ಟಿನಲ್ಲಿ ನಾನು ನನ್ನ ಶಿಕ್ಷಣದ ಜತೆಗೆ ನಮ್ಮ ದೇಶದ, ನಾಡು, ಭಾಷೆಯ ಬಗ್ಗೆ ಅಭಿಮಾನ-ಸ್ವಾಭಿಮಾನಿಯಾಗಿ ಬಾಳುತ್ತೇನೆ. ನಮ್ಮ ಸಂಸ್ಕ›ತಿ, ಕಲೆ, ಸಾಹಿತ್ಯ, ಸಂಗೀತ, ಪರಂಪರೆ, ಆಚಾರ-ವಿಚಾರ ಪಾಲಿಸುತ್ತಾ ಪಾಲಿಸುವಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತೇನೆ. ಅದರಂತೆ ಭರತನಾಟ್ಯ ಕಲೆಯ ಆರಾಧಕಳಾದ ನಾನು ಈ ಕಲೆಯನ್ನು ಉಳಿಸಿ-ಬೆಳೆಸುವ ಮನೋಭಾವ ಹೊಂದಿದ್ದೇನೆ. ಕಲೆಯ ಜತೆಗೆ ಶಿಕ್ಷಣದಲ್ಲೂ ವಿಶೇಷ ಸಾಧನೆ ಮಾಡಿ ಐಎಎಸ್ ಅಧಿಕಾರಿಯಾಗುವ ಮೂಲಕ ಜವಾಬ್ದಾರಿಯುತ ನಾಗರಿಕಳಾಗಿ, ಸಮಾಜ ಸುಧಾರಕಳಾಗಿ ನನ್ನ ಜನ್ಮಭೂಮಿ, ಸಮಾಜ, ಕುಟುಂಬ, ಗುರು-ಹಿರಿಯರಿಗೆ ಕೀರ್ತಿ ತರುವ ಕಾರ್ಯ ನನ್ನಿಂದಾಗಬೇಕು ಎಂಬುದು ನನ್ನಾಸೆ.

| ಚಂದನ ಕಳಸಾಪುರ 7ನೇ ತರಗತಿ, ದಿ. ಯೂನಿಕ್ ಆಂಗ್ಲ ಮಾಧ್ಯಮ ಶಾಲೆ, ಲಕ್ಷ್ಮೇಶ್ವರ

ಕನಸಿನ ಬೀಜ ಮೊಳಕೆಯೊಡೆದಿದೆ

ಕರೋನ ಸಂದರ್ಭದಲ್ಲಿ ಆದ ಸಾವು-ನೋವು ನೋಡಿ ನಾನು ನನ್ನ ಕೈಲಾದಷ್ಟು ಸೇವೆ ಮಾಡಬೇಕು, ನೊಂದವರಿಗೆ ಸಾಂತ್ವನ ಹೇಳಬೇಕು ಎನಿಸಿತು ಅದಕ್ಕೆ ಉತ್ತಮ ಆಯ್ಕೆ ಡಾಕ್ಟರ್ ಆಗುವುದು. ಕನಸಿನ ಬೀಜ ಮೊಳಕೆಯೊಡೆದಿದೆ. ಅದರ ವಾರಸುದಾರಳಾಗಲು ಸತತ ಪ್ರಯತ್ನದೊಂದಿಗೆ ಪೋಷಿಸಬೇಕು. ಆಗ ಮಾತ್ರ ನಾನು ಕಂಡ ಕನಸು ಫಸಲು ಕೊಡುತ್ತದೆ. ಈ ನನ್ನ ಕನಸಿಗೆ ಬೇಕಾದ ಅರ್ಹತೆ ಪಡೆಯಲು ಪಾಲಕರು ಮತ್ತು ಶಾಲೆ ಸದಾ ನನ್ನೊಂದಿಗಿದೆ. ನಾವು ಚಿಕ್ಕವರಿದ್ದಾಗಲೇ ಕನಸು ಕಾಣಬೇಕು. ಆಗ ಮಾತ್ರ ನಾವು ನಮ್ಮ ಗುರಿ ತಲುಪಲು ಸಾಧ್ಯ ಎಂಬುದು ನನ್ನ ನಂಬಿಕೆ. ಸ್ವಾಮಿ ವಿವೇಕಾನಂದರ ನುಡಿಯಂತೆ ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಎನ್ನುತ್ತಾ ನಮ್ಮ ಕನಸುಗಳನ್ನು ಹೊತ್ತು ಸಾಗಬೇಕಾಗಿದೆ. ಈ ನನ್ನ ಕನಸಿಗೆ ನಿಮ್ಮೆಲ್ಲರ ಹಾರೈಕೆ ಇರಲಿ.

| ರಕ್ಷಾ ಇ. ಏ. ಶ್ರೀ ಚನ್ನಮಲ್ಲಿಕಾರ್ಜುನ ವಿದ್ಯಾಸಂಸ್ಥೆ, ಶಿಕಾರಿಪುರ

ಹೆತ್ತವರನ್ನು ಹೆಮ್ಮೆಪಡಿಸುವ ಗುರಿ

ನನ್ನ ಕನಸು ನನ್ನದು ಮಾತ್ರವಲ್ಲ, ನನ್ನ ತಂದೆ ತಾಯಿಯರದು ಸಹ. ನಾನು ಐಎಎಸ್ ಅಧಿಕಾರಿಯಾಗಿ ನನ್ನ ರಾಜ್ಯ ಮತ್ತು ದೇಶಕ್ಕೆ ಸೇವೆ ಸಲ್ಲಿಸಬೇಕು ಹಾಗೂ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ಪರೀಕ್ಷೆಗೆ ಹಗಲು ರಾತ್ರಿ ಓದುತ್ತೇನೆ. ಐಎಎಸ್ ಅಧಿಕಾರಿಯಾಗುವ ಕನಸಿಗೆ ಪ್ರೇರಣೆ ಎಂದರೆ ಅದು ನಮ್ಮ ದೇಶದಲ್ಲಿ ಗೌರವಾನ್ವಿತ ಸ್ಥಾನವಾಗಿದೆ. ಒಂದು ದಿನ ನಾನು ನನ್ನ ಗುರಿ ಸಾಧಿಸುತ್ತೇನೆ ಮತ್ತು ನನ್ನ ಹೆತ್ತವರ ಆಸೆ ಪೂರೈಸುತ್ತೇನೆ ಎಂಬ ವಿಶ್ವಾಸ ನನಗಿದೆ. ನಾನು ಅವರನ್ನು ಸಂತೋಷದಿಂದ ಇಡುತ್ತೇನೆ.

| ಸುಪ್ರಿಯಾ. ಎಂ . ಹೆಳವರ್ ಕಾನ್ವೆಂಟ್ ಪ್ರೌಡಶಾಲೆ, ಕೇಶ್ವಾಪೂರ್, ಹುಬ್ಬಳ್ಳಿ

ನೂರಾರು ಜನರಿಗೆ ಕೆಲಸ ಕೊಡಬೇಕು

ನನಗೆ ಯೋಚನೆ ಮಾಡುವುದು, ಕನಸು ಕಟ್ಟುವುದು ಎಂದರೆ ಬಹಳ ಇಷ್ಟ. ಯೋಚಿಸಿದಾಗ ನಮ್ಮ ಜೀವನದ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ. ನಾನು ಹೆಚ್ಚಾಗಿ ಭವಿಷ್ಯದ ಬಗ್ಗೆ, ಕನಸಿನ ಬಗ್ಗೆ, ಗುರಿಗಳ ಬಗ್ಗೆ ಮೆಟ್ಟಿಲು ಕಟ್ಟುತ್ತಾ ಹೋಗುತ್ತೇನೆ. ಏರುವ ದಾರಿ ಹುಡುಕುತ್ತಾ ಹೋಗುತ್ತೇನೆ. ಜೀವನ ಇರುವುದು ಸಾಗಿಸೋಕಲ್ಲ, ಅನುಭವಿಸೋಕೆ. ಆದರೆ ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ನಿರ್ದಿಷ್ಟ ಗುರಿ, ಆಸೆ, ಕನಸುಗಳು ಹಾರಾಡುತ್ತಿ ರಬೇಕು. ನನಗಂತೂ ಹಲವಾರು ಕನಸುಗಳಿವೆ. ನನ್ನದೇ ಆದ ಒಂದು ಕಂಪನಿ ಸ್ಥಾಪಿಸಬೇಕು, ನೂರಾರು ಜನರಿಗೆ ಕೆಲಸ ಕೊಡಬೇಕು. ಓದಲು ಕಷ್ಟಪಡುವ, ಅರ್ಧಕ್ಕೆ ಶಿಕ್ಷಣ ಬಿಡುವ ಪ್ರತಿಭಾವಂತ ಮಕ್ಕಳನ್ನು ಹುಡುಕಿ ಸಹಾಯ ಮಾಡಬೇಕು ಎನ್ನುವುದು ನನ್ನ ಅಚಲ ಕನಸು. ಎಲ್ಲಕ್ಕಿಂತ ಹೆಚ್ಚಾಗಿ ಒಂದು ವೃದ್ಧಾಶ್ರಮ ಸ್ಥಾಪಿಸಿ ವೃದ್ಧರ ಸೇವೆ ಮಾಡಬೇಕು. ಈ ಎಲ್ಲ ಕನಸುಗಳ ನನಸಿಗೆ ಶಕ್ತಿ ಮೀರಿ ಪ್ರಯತ್ನಿಸುವೆ. ಬರುವ ಕಷ್ಟಗಳನ್ನೆಲ್ಲ ಎದುರಿಸುವೆ.

| ನಿಧಿ ಜಯರಾಜ್ ಶೆಟ್ಟಿ 9ನೇ ತರಗತಿ, ಲಿಟಲ್ ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ. ಉಡುಪಿ

ಕಷ್ಟ ಪಟ್ಟರೆ ಮಾತ್ರ ಇಷ್ಟ ಪಟ್ಟದ್ದು ಸಿಗಲಿದೆ

ಡಾ.ಅಬ್ದುಲ್ ಕಲಾಂ ಅವರ ಪ್ರಕಾರ ಕಷ್ಟ ಪಟ್ಟರೆ ಮಾತ್ರ ಇಷ್ಟಾರ್ಥ ಈಡೇರುವುದು. ಇದೇ ಕಾರಣದಿಂದ ನಾನು ನನ್ನ ಕನಸನ್ನು ಈಡೇರಿಸಲು ಸತತ ಅಧ್ಯಯನದತ್ತ ಗಮನ ಹರಿಸುತ್ತಿದ್ದೇನೆ. ನನ್ನ ಈ ಕನಸಿನ ಸಾಕಾರ ನನ್ನ ಕುಟುಂಬಮಾತ್ರವಲ್ಲ, ಸಮಾಜಕ್ಕೂ ಉಪಯೋಗವಾಗಬೇಕು. ನಮ್ಮ ಈ ಭವ್ಯ ಭಾರತ ಸದೃಢವಾಗಲು ಶಾಂತಿಯುತ ಸಮಾಜ, ಸಮಾನ ಅವಕಾಶ, ಭ್ರಷ್ಟಾಚಾರವಿಲ್ಲದ ವ್ಯವಸ್ಥೆ, ಪಕ್ಷಪಾತವಿಲ್ಲದ ಶೈಕ್ಷಣಿಕ ವ್ಯವಸ್ಥೆ ಸಾಕಾರಗೊಳ್ಳಬೇಕು. ನಾನು ಚೆನ್ನಾಗಿ ಓದಿ ಐಎಎಸ್ ಅಧಿಕಾರಿಯಾಗಬೇಕೆಂಬ ಮಹದಾಸೆ ಇದೆ. ಉನ್ನತ ಅಧಿಕಾರಿಯಾಗಿ ಈ ಸಮಾಜದ ಸೇವೆ ಮಾಡಬೇಕು. ಭ್ರಷ್ಟಾಚಾರದಂತಹ ಅನಿಷ್ಟ ಅವ್ಯವಸ್ಥೆಗಳನ್ನು ನಿಮೂಲನೆ ಮಾಡಿ, ಸರ್ಕಾರದ ಪ್ರತಿಯೊಂದು ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಸಿಗಬೇಕು. ನಮ್ಮ ಭಾರತ ಈಗ ವಿಶ್ವದಲ್ಲೇ ದೊಡ್ಡ ಶಕ್ತಿಯಾಗಿ ಬೆಳೆಯುತ್ತಿದೆ. ಭವಿಷ್ಯದ ಭಾರತವು ಯುವಶಕ್ತಿಯ ಮೇಲೆ ಅವಲಂಬಿತವಾಗಿದೆ. ಎಲ್ಲರೂ ಎಳೆ ವಯಸ್ಸಿನಲ್ಲಿಯೇ ಉನ್ನತ ಕನಸು ಇಟ್ಟುಕೊಂಡು ಆ ಕನಸನ್ನು ನನಸು ಮಾಡಿಕೊಂಡು ನಮ್ಮ ದೇಶದ ಋಣ ತೀರಿಸೋಣ.

| ಭೂಮಿಕಾ ಪಾಣಿಶೆಟ್ಟಿ ಕಲ್ಪವೃಕ್ಷ ಶಾಲೆ ಬೈಲಹೊಂಗಲ

ನನ್ನ ಜೀವನವೇ ನನಗೆ ಮಾರ್ಗದರ್ಶನ

ಚಿಕ್ಕವಳಿದ್ದಾಗ ನನಗೆ ತುಂಬಾ ಕಫ ಬರುತ್ತಿತ್ತು. ಏನೇ ತಿಂದರೂ ನಬಲೇಸ್ ಮಾಡಿಸಬೇಕಿತ್ತು. ಮಧ್ಯರಾತ್ರಿ ಸಹ ಆಸ್ಪತ್ರೆಗೆ ಹೋಗಬೇಕಿತ್ತು. ಉಸಿರಾಡಲು ತುಂಬಾ ಕಷ್ಟವಾಗುತ್ತಿತ್ತು. ಮೂರು ವರ್ಷ ಇದೇ ಕಷ್ಟ ಅನುಭವಿಸಿದ್ದೆ. ನಂತರ ನನ್ನ ಪಾಲಕರು ತುಂಬಾ ಯೋಚಿಸಿ ನುರಿತ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದರು. ಈಗ ನಾನು ತುಂಬಾ ಚೆನ್ನಾಗಿದ್ದೇನೆ. ಆರೋಗ್ಯದಲ್ಲೂ, ಓದಿನಲ್ಲೂ ಮತ್ತು ಇನ್ನಿತರ ಚಟುವಟಿಕೆ ಅಂದರೆ ನನಗೆ ಇಷ್ಟವಾದ ಭರತನಾಟ್ಯ ಹಾಗೂ ಚಿತ್ರಕಲೆಯಲ್ಲಿ ಭಾಗವಹಿಸುತ್ತೇನೆ. ಚಿಕ್ಕ ವಯಸ್ಸಿನಲ್ಲಿ ಅನುಭವಿಸಿದ ಕಷ್ಟ ಕಂಡು ನಾನು ವೈದ್ಯೆ ಆಗಬೇಕೆಂದು ನಿರ್ಧರಿಸಿದ್ದೇನೆ. ಇದನ್ನು ನನಸು ಮಾಡಲು ಪರಿಶ್ರಮದಿಂದ ಹಾಗೂ ವಿಶ್ವಾಸದಿಂದ ಪ್ರಯತ್ನ ಮಾಡುತ್ತೇನೆ.

| ಸಾನ್ವಿ ಎಸ್. ಕೆರೂಡಿ 6ನೇ ತರಗತಿ, ಬಿ.ಜಿ.ಎಸ್.ಐ.ಆರ್. ಎಸ್. ಕುಂಬಳಗೋಡು

ಬೆಂಗಳೂರು ನನ್ನ ಕನಸಿಗೆ ಅಪ್ಪನ ಹೆಗಲು

ಆರ್ವಿು ಡಾಕ್ಟರ್ ಆಗಬೇಕು ಎನ್ನುವುದು ನನ್ನ ಕನಸು. ಆರ್ವಿು ಡಾಕ್ಟರ್ ಯಾಕೆ ಆಗಬೇಕು ಅಂದರೆ ಹಗಲು-ರಾತ್ರಿ ಎನ್ನದೆ ನಮ್ಮ ದೇಶಕ್ಕಾಗಿ ಹೋರಾಡುವ ನಮ್ಮ ಯೋಧರಿಗೆ ಯುದ್ಧದ ಸಮಯದಲ್ಲಿ ಗಾಯಗೊಂಡವರ ಆರೈಕೆ, ಇತರ ಸಮಯ ದಲ್ಲಿಯೂ ಅವರೊಂದಿಗೆ ಇದ್ದು, ಅವರ ಆರೋಗ್ಯ ರಕ್ಷಣೆ ಮಾಡಬೇಕೆನ್ನುವುದು ನನ್ನ ಕನಸು. ನನ್ನ ಕನಸಿಗೆ ಡಾ. ವಿಷ್ಣುವರ್ಧನ್ ಅವರ ಮುತ್ತಿನಹಾರ ಚಲನಚಿತ್ರ ನನ್ನ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿದೆ. ನನ್ನ ಕನಸಿಗೆ ನನ್ನ ತಂದೆ ಪ್ರೋತ್ಸಾಹ ನೀಡುತ್ತಿದ್ದಾರೆ. ಅದಕ್ಕಾಗಿ ನಾನು ಇಷ್ಟಪಟ್ಟು ಓದುತ್ತಿದ್ದೇನೆ. ಆರ್ವಿು ಡಾಕ್ಟರ್ ಆಗುತ್ತೇನೆ. ಇದು ನನ್ನ ಕನಸು. ಇದನ್ನು ನನಸು ಮಾಡಿಕೊಳ್ಳುತ್ತೇನೆ.

| ನಾಗಮಣಿ ವಜ್ರಬಂಡಿ 9ನೇ ತರಗತಿ, ಆದರ್ಶ ವಿದ್ಯಾಲಯ, ಸಿಂಧನೂರು, ರಾಯಚೂರು

ವಿದ್ಯೆಯೊಂದಿಗೆ ವಿನಯವೂ ಮುಖ್ಯ

ನಮ್ಮದು ಮಧ್ಯಮ ಕುಟುಂಬ. ಮನೆಯಲ್ಲಿ ನಾನು, ಅಜ್ಜಿ, ಅಪ್ಪ, ಮತ್ತು ನನ್ನ ಮುದ್ದು ತಂಗಿ ಪ್ರೀತಿ ಮತ್ತು ಸಂತೋಷದಿಂದ ಜೀವನ ನಡೆಸುತ್ತಿದ್ದೇವೆ. ನಮ್ಮ ತಂದೆ ವೃತ್ತಿಪರ ರೈತರು. ಅವರಿಗೆ ವಿದ್ಯಾಭ್ಯಾಸದಲ್ಲಿ ತುಂಬಾ ಆಸಕ್ತಿ. ನನಗೆ ವಿಜ್ಞಾನ ಆಸಕ್ತಿ ಮತ್ತು ಪ್ರಿಯವಾದ ವಿಷಯ. ನನಗೆ ವಿಜ್ಞಾನದಲ್ಲಿ ಆಸಕ್ತಿ ಬಂದಾಗಿನಿಂದ ಇನ್ನೂ ಅದರಲ್ಲಿ ಆಳವಾಗಿ ಅಧ್ಯಯನ ಮಾಡಬೇಕು. ಜತೆಗೆ ನನ್ನ ಭವಿಷ್ಯದಲ್ಲಿ ಅಪ್ಪನ ಬೆವರಿನ ಹನಿಯ ತ್ಯಾಗಕ್ಕೂ, ನನ್ನ ಆತ್ಮತೃಪ್ತಿಗೂ ಮತ್ತು ನೂರಾರು ಜನರ ಜೀವರಕ್ಷಣೆಗೂ ಉಪಯೋಗವಾಗುವಂತೆ ವೃತ್ತಿ ವೈದ್ಯೆ ಆಗಬೇಕೆಂಬ ಆಸೆ ಚಿಗುರೊಡೆಯಿತು. ಅದರಲ್ಲಿ ಮುಖ್ಯವಾಗಿ ಹೃದ್ರೋಗ ತಜ್ಞೆ ಆಗಬೇಕೆಂಬುದು ನನ್ನ ಕನಸು. ವಿದ್ಯೆಯೊಂದಿಗೆ ವಿನಯ, ಸಂಸ್ಕಾರ, ಪರೋಪಕಾರ ಇವುಗಳನ್ನು ಮೈಗೂಡಿಸಿಕೊಂಡು ಕುಟುಂಬಕ್ಕೆ ನಮ್ಮ ಶಾಲೆಗೆ ಹಾಗೂ ನಮ್ಮ ಭವ್ಯ ಭಾರತಕ್ಕೆ ಕೀರ್ತಿ ತರುವ ಮಗಳಾಗಬೇಕೆಂಬುದು ನನ್ನ ಮನದಾಳದ ಬಯಕೆ.

| ಜ್ಞಾನ. ವಿ. 9ನೇ ತರಗತಿ ಬಿಜಿಎಸ್ ಪಬ್ಲಿಕ್ ಸ್ಕೂಲ್, ಹೇಮಗಿರಿ, ಕೆ.ಆರ್.ಪೇಟೆ ತಾಲೂಕು, ಮಂಡ್ಯ

ಜಿಂಕೆಯ ಹಾಗೆ ನಾನು...

ಹಕ್ಕಿಯ ಹಾಗೆ ರೆಕ್ಕೆಯ ಬಿಚ್ಚಿ

ಬಾನಲಿ ನಾನು ಹಾರುವೆನು,

ನನ್ನಯ ಕನಸನು ನನಸು ಮಾಡಲು,

ಮೇಲಕೆ ಮೇಲಕೆ ಹಾರುವೆನು,

ಛಲವನು ಬಿಡದೆ ಮುಂದಕೆ ನಾನು ಸಾಗುವೆನು!!

ವಿಜ್ಞಾನದಲ್ಲಿ ಮೋಡಿಯ ಮಾಡುತ,

ದೇಶಕ್ಕೆ ಹೆಮ್ಮೆಯ ವಿಜ್ಞಾನಿ ಆಗುವೆನು,

ಜಿಂಕೆಯ ಹಾಗೆ ನಾನು ನನ್ನ ಕನಸಿನ ಹಿಂದೆ ಓಡುವೆನು,

ಹಿಂದಕೆ ತಿರುಗದೆ, ಮುಂದೆ ಸಾಗುತ ನಾನು,

ನನ್ನಯ ಗುರಿಯನು ತಲುಪುವೆನು!!

ಅಮ್ಮನ ನೋಡಿ ಕಂಡ ಕನಸಿದು,

ಪ್ರತಿ ಮನೆಯಲ್ಲೂ ಇರುವ ವಿಜ್ಞಾನಿಯವರು,

ಅಡುಗೆಯಲಿ ಹೊಸ ಹೊಸ ಪ್ರಯೋಗ ಮಾಡಿ,

ಪ್ರತಿದಿನ ಹೊಸತನು ಮಾಡುವರು!!

ಹೊಸ ಹೊಸ ಸಂಶೋಧನೆಗಳನು ಮಾಡುವ ಆಸೆ,

ಅದಕೆ ಅನ್ವೇಷಣೆಯನು ಮಾಡುವೆನು,

ನಮ್ಮಯ ದೇಶವ ಮುನ್ನಡೆಸಲು ನಾನು,

ಹಗಲು ರಾತ್ರಿ ಎನ್ನದೇ ದುಡಿಯುವೆನು!!

ಸಿಂಹಿಣಿಯಂತೆ ಧೈರ್ಯದಿಂದ ಸಾಗಿ,

ವಿಜ್ಞಾನದ ಹೂವಿನ ಸುಗಂಧವ ಬೀರುವೆನು,

ಎಷ್ಟೇ ಎತ್ತರ ಬೆಳೆದರು ಕೂಡ ನಮ್ರತೆಯಿಂದ

ತಲೆ ಬಾಗುವೆನು,

ನನ್ನಯ ಕನಸನು ನನಸು ಮಾಡಲು,

ಪ್ರತಿದಿನ ಹೊಸ ವಿಷಯವನ್ನು ಕಲಿಯುವೆನು!!!

| ಅನ್ವೇಷಾ.ಡಿ.ಆರ್ 9ನೇ ತರಗತಿ, ನ್ಯಾಷನಲ್ ಪಬ್ಲಿಕ್ ಶಾಲೆ, ಶಿವಮೊಗ್ಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net