ಪುತ್ತೂರಿನಲ್ಲಿ ಸರ್ಕಾರಿ ಆಯುರ್ವೇದ ಕಾಲೇಜು, ಆಸ್ಪತ್ರೆ ಸ್ಥಾಪನೆ - ಅಖಿಲ ಭಾರತ ಅಡಕೆ ಬೆಳೆಗಾರರ ಸಂಘ ಒತ್ತಾಯ

Published on

ಪುತ್ತೂರು: ದ.ಕ. ಜಿಲ್ಲೆ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಉತ್ತಮ ಗುಣಮಟ್ಟದ ವೈದ್ಯಕೀಯ, ದಂತ ವೈದ್ಯಕೀಯ, ನಸಿಂಗ್, ಇಂಜಿನಿಯರಿಂಗ್ ಶಿಕ್ಷಣ ಲಭ್ಯವಿದೆ. ಆದರೆ ಈ ಭಾಗದಲ್ಲಿ ಯಾವುದೇ ಸರ್ಕಾರಿ ಆಯುರ್ವೇದ ಕಾಲೇಜು ಇಲ್ಲ. ಭಾರತದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಾದ ಆಯುರ್ವೇದ ದ.ಕ.ಜಿಲ್ಲೆಯಲ್ಲಿ ಜನಪ್ರಿಯವಾಗಿದೆ. ಪಾಶ್ರ್ವವಾಯು, ಅಸ್ತಮಾ, ಸಂಽವಾತ, ಕಾಮಾಲೆ ಹಾಗೂ ಆಧುನಿಕ ಜೀವನಶೈಲಿ ರೋಗಗಳಾದ ಮಧುಮೇಹ ಇತ್ಯಾದಿ ಕಾಯಿಲೆಗಳಿಗೆ ಹೆಚ್ಚಿನ ರೋಗಿಗಳು ಆಯುರ್ವೇದದ ಮೊರೆಹೋಗಿದ್ದಾರೆ. ಈ ಜಿಲ್ಲೆಯಿಂದ ಆಯುರ್ವೇದ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಸಂಖ್ಯೆಕೂಡಾ ಹೆಚ್ಚಿದ್ದು ಸರ್ಕಾರಿ ಕಾಲೇಜಿನ ಅಲಭ್ಯತೆಯಿಂದ ರಾಜ್ಯ ಹಾಗೂ ದೇಶದ ವಿವಿಧೆಡೆ ಕಲಿಯುತ್ತಿದ್ದಾರೆ.

ಇದರ ಜೊತೆಗೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಡಕೆ ಪ್ರಧಾನ ಬೆಳೆಯಾಗುತ್ತಿದೆ. ಪಾರಂಪರಿಕ ಕೃಷಿಯಾದ ಅಡಕೆಯನ್ನೇ ನಂಬಿ ಕೃಷಿಕರು ಬದುಕುತ್ತಿದ್ದಾರೆ. ಅಡಕೆಯನ್ನು ವಿವಿಧ ಆಯುರ್ವೇದ ಔಷಧಗಳಿಗೂ ಉಪಯೋಗ ಮಾಡಬಹುದು ಎಂದು ಹಲವು ಸಂಶೋಧನೆಗಳಿಂದ ದೃಢವಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಆಯುರ್ವೇದ ಕಾಲೇಜು ಒಂದರ ಸ್ಥಾಪನೆಯು ಸರ್ಕಾರಿ ಮಟ್ಟದಲ್ಲಿ ಅವಶ್ಯವಾಗಿದೆ. ಇದರಿಂದ ಅಡಕೆಯ ವೈಜ್ಞಾನಿಕ ಸಂಶೋಧನೆಗೆ ತುಂಬಾ ಅನುಕೂಲವಾಗಬಹುದು. ಅಲ್ಲದೆ, ಸಾಂಪ್ರದಾಯಿಕ ಔಷಧವನ್ನು ಉತ್ತೇಜಿಸುವುದು ಮಾತ್ರವಲ್ಲದೆ ಅಡಕೆಯ ಸಂಭಾವ್ಯ ಪ್ರಯೋಜನಗಳನ್ನು ವೈಜ್ಞಾನಿಕ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಕೊಡುಗೆ ನೀಡಿದಂತಾಗುತ್ತದೆ.

ಈ ಕಾರಣದಿಂದ ಪುತ್ತೂರಿನಲ್ಲಿ ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯನ್ನು ಸ್ಥಾಪಿಸುವ ಮೂಲಕ, ಸಮಗ್ರ ಆರೋಗ್ಯ ಪದ್ಧತಿಗಳನ್ನು ಉತ್ತೇಜಿಸಲು ಸರ್ಕಾರವು ಕ್ರಮ ಕೈಗೊಳ್ಳಬೇಕಾಗಿ ಅಖಿಲ ಭಾರತ ಅಡಕೆ ಬೆಳೆಗಾರರ ಸಂಘವು ಒತ್ತಾಯಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net