ಮನುಷ್ಯನ ರೀತಿ ನೀರಲ್ಲಿ ಮುಳುಗಿ ಸಾಯುತ್ತಿರುವಂತೆ ನಟಿಸಿದ ಮೊಸಳೆ! ತಜ್ಞರು ಕೊಟ್ರು ಅಚ್ಚರಿ ಉತ್ತರ... Crocodiles

Crocodiles
Published on

Crocodiles : ಮೊಸಳೆ ಎಂಬ ಪದ ಕೇಳಿದರೆ ಸಾಕು ಎಲ್ಲರ ಕೈ-ಕಾಲು ನಡುಗುತ್ತದೆ. ಬಹುಶಃ ಆಸ್ಟ್ರೇಲಿಯನ್ ಝೂಕೀಪರ್ ದಿವಂಗತ ಸ್ಟೀವ್​ ಇರ್ವಿನ್​ ಮಾತ್ರ ಮೊಸಳೆ ಪದ ಕೇಳಿದರೆ ಎಲ್ಲಿಲ್ಲದ ಉತ್ಸಾಹ ಬರುತ್ತಿತ್ತು. ಮೊಸಳೆಯ ಹರಿತವಾದ ಹಲ್ಲು, ದೊಡ್ಡ ದವಡೆ ಮತ್ತು ತೀವ್ರ ನೋಟ ಸಾಕು ಯಾವುದೇ ವ್ಯಕ್ತಿ ಭಯ ಬೀಳಲು, ಅಂತಹುದರಲ್ಲಿ ಮೊಸಳೆ ಏನಾದರೂ ತುಂಬಾ ಹತ್ತಿರಕ್ಕೆ ಬಂದಲ್ಲಿ ಆ ವ್ಯಕ್ತಿ ಭಯದಲೇ ಹೆಪ್ಪುಗಟ್ಟಿಬಿಡುತ್ತಾನೆ.

ಮೊಸಳೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಪ್ರತಿನಿತ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇರುತ್ತದೆ. ಅದರಲ್ಲಿ ಕೆಲವೊಂದು ವಿಡಿಯೋಗಳು ವಿಶೇಷ ಕಾರಣಕ್ಕೆ ಜನರ ಗಮನವನ್ನು ಸೆಳೆಯುತ್ತದೆ. ಇದೀಗ ಅಂಥದ್ದೇ ವಿಡಿಯೋವೊಂದು ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಮೊಸಳೆಯೊಂದು ನದಿಯಲ್ಲಿ ಮನುಷ್ಯನಂತೆ ಮುಳುಗುತ್ತಿರುವ ರೀತಿಯಲ್ಲಿ ನಟಿಸುತ್ತಿದೆ. ಮನುಷ್ಯನನ್ನು ತನ್ನತ್ತ ಸೆಳೆದು ಬೇಟೆಯಾಡಲು ಮೊಸಳೆ ಈ ತಂತ್ರವನ್ನು ಪ್ರಯೋಗಿಸಿದೆ ಎಂದು ವೈರಲ್​ ವಿಡಿಯೋ ಬಗ್ಗೆ ಹೇಳಲಾಗುತ್ತಿದೆ.

travly ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ 6 ದಿನಗಳ ಹಿಂದಷ್ಟೇ ವಿಡಿಯೋವನ್ನು ಅಪ್​​ಲೋಡ್​ ಮಾಡಲಾಗಿದೆ. ಇಂಡೋನೇಷ್ಯಾದಲ್ಲಿ ಉಪ್ಪುನೀರಿನ ಮೊಸಳೆಗಳು ಮಾನವ ಬೇಟೆಯನ್ನು ಆಕರ್ಷಿಸಲು ಮುಳುಗುತ್ತಿರುವಂತೆ ನಟಿಸಲು ಕಲಿತಿವೆ ಎಂದು ವಿಡಿಯೋ ಕುರಿತು ಬರೆಯಲಾಗಿದೆ. ಸದ್ಯ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಎಷ್ಟರಮಟ್ಟಿಗೆ ಅಂದರೆ, ಈವರೆಗೆ 2 ಮಿಲಿಯನ್​ಗೂ ಅಧಿಕ ಮಂದಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ, 21 ಲಕ್ಷಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ. ಅಚ್ಚರಿಯ ಸಂಗತಿ ಏನೆಂದರೆ, 22 ಸಾವಿರಕ್ಕೂ ಅಧಿಕ ಮಂದಿ ವಿಡಿಯೋಗೆ ಕಾಮೆಂಟ್​ ಮಾಡಿದ್ದಾರೆ.

ಈ ವಿಡಿಯೋ ವೈರಲ್ ಆದ ನಂತರ, ಅನೇಕ ಜನರು ಮೊಸಳೆಯ ತಂತ್ರವನ್ನು ಶ್ಲಾಘಿಸುತ್ತಿದ್ದರೆ, ಬಹುತೇಕರು ವಿಡಿಯೋದ ಸತ್ಯಾಸತ್ಯತೆಯ ಬಗ್ಗೆಯೂ ಪ್ರಶ್ನೆಗಳು ಎತ್ತಿದ್ದಾರೆ. ಆದರೆ, ವಿಡಿಯೋ ಅಧಿಕೃತತೆ ಬಗ್ಗೆ ಯಾವುದೇ ಮೊಸಳೆಗಳು ಮನುಷ್ಯರನ್ನು ಆಕರ್ಷಿಸಲು ಇದನ್ನು ಮಾಡುತ್ತವೆ ಎಂದು ನಂಬಲು ಸಾಧ್ಯವಿಲ್ಲ ಎಂದು ಅನೇಕ ತಜ್ಞರು ಹೇಳುತ್ತಾರೆ.

ತಜ್ಞರು ಏನು ಹೇಳುತ್ತಾರೆ?

ಮೊಸಳೆ ದಾಳಿಗಳು ನಿಸ್ಸಂದೇಹವಾಗಿ ಭಯಾನಕವಾಗಿರುತ್ತವೆ. ಆದರೆ, ಒಂದು ಪ್ರಾಣಿ ಉದ್ದೇಶಪೂರ್ವಕವಾಗಿ ಮನುಷ್ಯರನ್ನು ಬೇಟೆಯಾಡಲು ಸೆಳೆಯುತ್ತವೆ ಎಂಬುದನ್ನು ನಂಬಲು ಅಸಾಧ್ಯವಾಗಿದೆ. ಇದೊಂದು ತಪ್ಪು ಮಾಹಿತಿ ಎಂದು ಅನೇಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಾರ್ಲ್ಸ್ ಡಾರ್ವಿನ್ ವಿಶ್ವವಿದ್ಯಾಲಯದಲ್ಲಿ ಮಾನವ ಮತ್ತು ಮೊಸಳೆ ಸಂಘರ್ಷದ ಸಂಶೋಧಕರಾದ ಬ್ರಾಂಡನ್ ಸೈಡ್ಲಿಯು ಅವರು ಯಾಹೂ ನ್ಯೂಸ್​​ಗೆ ಪ್ರತಿಕ್ರಿಯಿಸಿದ್ದು, ಮೊಸಳೆಯ "ಅಸಹಜ" ನಡವಳಿಕೆಯನ್ನು ನಾನು ಮೊದಲೇ ನೋಡಿದ್ದೇನೆ. ಆದರೆ, ವೈರಲ್​ ಆಗುತ್ತಿರುವ ಈ ಮೊಸಳೆಯ ವಿಡಿಯೋ ಹಿಂದೆ ಏನೋ ಒಂದು ಘಟನೆ ನಡೆದಿದೆ ಎಂದು ತೋರುತ್ತಿದೆ. ಬಹುಶಃ ಮೊಸಳೆಯ ಬಾಯಿಯಲ್ಲಿ ಬೇಟೆಯಾಗಿರುವ ಜೀವಿ ಇರಬಹುದು. ಉಪ್ಪುನೀರಿನ ಮೊಸಳೆಗಳು ನೀರಿನ ಅಡಿಯಲ್ಲಿ ತಿರುಗುತ್ತವೆ. ಅವುಗಳ ದವಡೆಗೆ ಆಹಾರ ಸಿಕ್ಕಾಗ ನೀವು ಅವುಗಳ ಕೈಗಳನ್ನು ಗಾಳಿಯಲ್ಲಿ ಮೇಲಕ್ಕೆತ್ತುವುದು ಸಾಮಾನ್ಯ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net