ಪ್ರತಿಯೊಂದು ಸೋಲು ಹೊಸ ಪಾಠ : ಯುವೋದ್ಯಮಿ ಅಪ್ರಮೇಯ ರಾಧಾಕೃಷ್ಣ ಅಭಿಮತ

RIM
Published on

ಬೆಂಗಳೂರು: ಯಾವುದೇ ಸಾಧನೆ ಮಾಡಲು ಹೊರಟ ವ್ಯಕ್ತಿಗೆ ತನ್ನ ಮೊದಲ ಹೆಜ್ಜೆಯಲ್ಲೇ ಯಶಸ್ಸು ಸಿಗುವುದಿಲ್ಲ. ಪ್ರತಿಯೊಂದು ಸೋಲು ಕೂಡಾ ಆತನ ಮುಂದಿನ ಸಾಧನೆಗೆ ಪಾಠವಾಗುತ್ತದೆ ಎಂದು ಕೂ ಆ್ಯಪ್ ಮತ್ತು ಟ್ಯಾಕ್ಸಿ ಫಾರ್ ಶ್ಯೂರ್ ಸಂಸ್ಥಾಪಕ ಅಪ್ರಮೇಯ ರಾಧಾಕೃಷ್ಣ ಹೇಳಿದ್ದಾರೆ.

ಎಂ.ಎಸ್.ರಾಮಯ್ಯ ಇನ್‌ಸ್ಟಿಟ್ಯೂಟ್ರ್ ಫಾರ್ ಮ್ಯಾನೇಜ್‌ಮೆಂಟ್ (ಆರ್‌ಎಂಐ) ನ 28ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

ಹೊಸದಾಗಿ ಸಾಧನೆ ಮಾಡಲು ಹೊರಟವರಿಗೆ ಮೊದಲಿಗೆ ಪ್ರಶಂಸೆ ದೊರೆಯುವುದಿಲ್ಲ. ಸಮಾಜ ನಮ್ಮ ಮೊದಲ ಪ್ರಯತ್ನದಲ್ಲೇ ಪ್ರಶಂಸಿಸಬೇಕೆಂಬ ನಿರೀಕ್ಷೆಯನ್ನೂ ಮಾಡಬಾರದರು. ವೃತ್ತಿ ಬದುಕು ಆರಂಭವಾದ ನಂತರ ಯಾವುದನ್ನೂ ಲಘುವಾಗಿ ಸ್ವೀಕರಿಸಬಾರದು. ಸಮಾಜದ ಪ್ರತಿಯೊಂದು ಪ್ರತಿಕ್ರಿಯೆಯನ್ನು ಗಂಭೀರವಾಗಿ ಸ್ವೀಕರಿಸಬೇಕು. ಪ್ರಥಮ ಹೆಜ್ಜೆ ಯಾವಾಗಲೂ ಕಠಿಣವಾಗಿರುತ್ತದೆ. ಜಗತ್ತು ಹೊಸದಾಗಿ ಉದ್ಯಮಕ್ಕೆ ಕಾಲಿಡುವವರಿಗಾಗಿ ಕಾಯುತ್ತಿರುತ್ತದೆ. ಪರಿಶ್ರಮ ಪಡುವವರು ಇಲ್ಲಿ ಗೆದ್ದೇ ಗೆಲ್ಲುತ್ತಾರೆ. ಉದ್ಯಮ ಜಗತ್ತು ಕ್ರಿಯಾಶೀಲ ಮತ್ತು ಧೈರ್ಯದಿಂದ ಮುನ್ನುಗ್ಗುವ ಯುವಕರಿಗೆ ಸದಾ ತೆರೆದುಕೊಂಡಿದ್ದು ರಾಮಯ್ಯದಂತಹ ದೈತ್ಯ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ವಿಭಿನ್ನವಾದ ಸಾಧನೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ರಾಧಾಕೃಷ್ಣ ವಿಶ್ವಾಸ ವ್ಯಕ್ತಪಡಿಸಿದರು.

ಪದವಿ ಪ್ರದಾನ ಸಮಾರಂಭದಲ್ಲಿ 292 ವಿದ್ಯಾರ್ಥಿಗಳಿಗೆ ಮ್ಯಾನೇಜ್ಮೆಂಟ್ ಸ್ನಾತಕೋತ್ತರ ಡಿಪ್ಲೊಮಾ (ಪಿಜಿಡಿಎಂ) ಪದವಿಯನ್ನು ನೀಡಲಾಯಿತು. ಅತಿಹೆಚ್ಚು ಅಂಕ ಪಡೆದ 7 ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ ಹಾಗೂ ಅತ್ಯುತ್ತಮ ಸಾಧನೆ ಮಾಡಿದ ಮನೀಶಾ ಎ. ಗೌಡ ಎಂಬ ವಿದ್ಯಾರ್ಥಿನಿಗೆ ಬಂಗಾರದ ಪದಕ ನೀಡಿ ಗೌರವಿಸಲಾಯಿತು.

ಸಂಸ್ಥಾಪಕ ಎಂ.ಎಸ್.ರಾಮಯ್ಯ ಅವರ ಭಾವಚಿತ್ರಕ್ಕೆ ಗಣ್ಯರ ಪುಷ್ಪಾರ್ಚನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಗೋಕುಲ ಎಜುಕೇಷನ್ ಫೌಂಡೇಷನ್ ಟ್ರಸ್ಟಿ ಎಂ.ಆರ್.ಆನಂದರಾಮ್, ಮುಖ್ಯಾಧಿಕಾರಿ ಡಾ. ಎಚ್.ವಿ.ಪಾರ್ಶ್ವನಾಥ್, ನಿರ್ದೇಶಕರಾದ ಡಾ ಎ.ಎಚ್. ರಾಜಾಸಾಬ್, ಡಾ ಮಾನಸಾ ನಾಗಭೂಷಣಂ, ರಿಜಿಸ್ಟ್ರಾರ್ ಡಾ ಸವಿತಾ ರಾಣಿ ರಾಮಚಂದ್ರನ್ ಮತ್ತಿತರರು ಉಪಸ್ಥಿತರಿದ್ದರು.

ಭಿನ್ನವಾದ ಯೋಚನೆ ಸಾಧನೆಯ ಸೂಚನೆ

ವಿದ್ಯಾರ್ಥಿಗಳು ಭಿನ್ನವಾಗಿ ಯೋಚಿಸುವುದನ್ನು ರೂಢಿಸಿಕೊಳ್ಳಬೇಕು. ಭಿನ್ನವಾದ ಯೋಚನೆ ಸಾಧನೆಯ ಸೂಚನೆ ಎಂದು ಶಿಕ್ಷಣತಜ್ಞ ಡಾ.ಕರಿಸಿದ್ದಪ್ಪ ಹೇಳಿದರು. ಭಿನ್ನವಾದ ಯೋಚನೆಯಿಂದ ಎಷ್ಟೆಲ್ಲಾ ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ಅಪ್ರಮೇಯಾ ರಾಧಾಕೃಷ್ಣ ಸಾಕ್ಷಿಯಾಗಿದ್ದಾರೆ. ಸಾವಿರ ಐಐಟಿ ಪದವಿಧರರಿಗೆ ಅಪ್ರಮೇಯಾ ಒಬ್ಬರು ಸರಿಸಾಟಿಯಾಗುತ್ತಾರೆ. ಅದಕ್ಕೆ ಕಾರಣ ಅವರ ಭಿನ್ನವಾದ ಅಲೋಚನೆ. ಆದ್ದರಿಂದ ಇಂದು ಪದವಿ ಪಡೆದ ವಿದ್ಯಾರ್ಥಿಗಳು ಉತ್ತಮ ಭವಿಷ್ಯಕ್ಕಾಗಿ ಶ್ರಮವಹಿಸಿ ಎಂದು ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net