

ವಿಶ್ವಸಂಸ್ಥೆಯ ಪ್ರಕಾರ, 2027ರಲ್ಲಿ ಭಾರತದ ಜನಸಂಖ್ಯೆ ಚೀನಾವನ್ನು ಮೀರುತ್ತದೆ. ಚೀನಾದ ಭೂವಿಸ್ತೀರ್ಣ ಭಾರತಕ್ಕಿಂತ 3 ಪಟ್ಟು ಹೆಚ್ಚು. ಚೀನಾದಲ್ಲಿ ವಿಶ್ವದ 7% ನೀರು ಲಭ್ಯವಿದ್ದರೆ, ಭಾರತವು ವಿಶ್ವದ ಜಲ ಸಂಪನ್ಮೂಲಗಳ ಕೇವಲ 4%ರಷ್ಟು ಮಾತ್ರ ಹೊಂದಿದೆ. ಜನಸಂಖ್ಯಾ ಸಾಂದ್ರತೆಗೆ ಸಂಬಂಧಿಸಿ, ಚೀನಾದಲ್ಲಿನ ಪರಿಸ್ಥಿತಿ ನಮಗಿಂತ 3 ಪಟ್ಟು ಉತ್ತಮವಾಗಿದೆ. ಭಾರತದಲ್ಲಿ ಜನಸಂಖ್ಯಾ ಸಾಂದ್ರತೆ ಪ್ರತಿ ಚದರ ಕಿಲೋಮೀಟರಿಗೆ 440 ಜನರು. ಚೀನಾದಲ್ಲಿ ಪ್ರತಿ ಚದರ ಕಿ.ಮೀ.ಗೆ 148 ವ್ಯಕ್ತಿಗಳು.
ಜನಸಂಖ್ಯೆಯನ್ನು ನಿಯಂತ್ರಿಸಲು ಚೀನಾ ಕಠಿಣ ಕಾನೂನುಗಳನ್ನು ಜಾರಿಗೆ ತಂದಿತು. 1970ರಲ್ಲಿ ಚೀನಾ ‘ಎರಡು ಮಕ್ಕಳ ನೀತಿ’, 1979ರಲ್ಲಿ ‘ಒಂದು ಮಕ್ಕಳ ನೀತಿ’ಯನ್ನು ಅನುಷ್ಠಾನಕ್ಕೆ ತಂದಿತು. ‘ಒನ್ ಚೈಲ್ಡ್ ಪಾಲಿಸಿ’ ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಸುಮಾರು 400 ಮಿಲಿಯನ್ ಮಕ್ಕಳು ಜನಿಸುವುದನ್ನು ತಡೆಯಲಾಯಿತು, ಕ್ರಮೇಣ ಶಿಶುಗಳ ಜನನ ಪ್ರಮಾಣ ಕಡಿಮೆಯಾಗಿದ್ದರಿಂದ 2015ರಲ್ಲಿ ‘ಒಂದು ಮಕ್ಕಳ ನೀತಿ’ಯನ್ನು ಕೊನೆಗೊಳಿಸಿತು. ಆದರೆ, ಭಾರತದಲ್ಲಿ ಜನಸಂಖ್ಯೆ ಬೆಳವಣಿಗೆಯ ಸಮಸ್ಯೆಯನ್ನು ಸರ್ಕಾರಗಳು ಎಂದಿಗೂ ಗಂಭೀರವಾಗಿ ಪರಿಗಣಿಸಿಲ್ಲ. ಅನಕ್ಷರತೆ, ನಿರುದ್ಯೋಗ, ಭ್ರಷ್ಟಾಚಾರ, ಬಾಲಕಾರ್ವಿುಕ ಪದ್ಧತಿ, ಕಳ್ಳಸಾಗಣೆ, ಬಡತನ, ರೋಗ ಮತ್ತು ಹಸಿವಿನ ಸಮಸ್ಯೆಗಳು ಜನಸಂಖ್ಯೆ ಬೆಳವಣಿಗೆಗೆ ನೇರವಾಗಿ ಸಂಬಂಧ ಹೊಂದಿವೆ. ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ 102, ಶಿಕ್ಷಣ ಸೂಚ್ಯಂಕದಲ್ಲಿ 145, ವಿಶ್ವ ಸಂತೋಷ ಸೂಚ್ಯಂಕದಲ್ಲಿ 140 ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 129ನೇ ಸ್ಥಾನದಲ್ಲಿದೆ. ಚೀನಾ ಮಾದರಿಯಲ್ಲಿ ‘ಒನ್ ಚೈಲ್ಡ್ ಪಾಲಿಸಿ’ ಅಳವಡಿಸಿಕೊಳ್ಳುವ ಅವಶ್ಯಕತೆ ಭಾರತದಲ್ಲಿದೆ.
ಕಳೆದ ವರ್ಷ ಬಿಜೆಪಿ ಸಂಸದ ರಾಕೇಶ್ ಸಿನ್ಹಾ ಜನಸಂಖ್ಯಾ ನಿಯಂತ್ರಣ ಕಾನೂನಿಗಾಗಿ ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸಿದರು. ಆದರೂ ಜನಸಂಖ್ಯಾ ನಿಯಂತ್ರಣಕ್ಕಾಗಿ ಯಾವುದೇ ನೀತಿಯನ್ನು ರೂಪಿಸಲಾಗಿಲ್ಲ. ಈ ನಿಟ್ಟಿನಲ್ಲಿ ಸೂಕ್ತ ಕಾನೂನು ತರಲು ಇದು ಸಕಾಲ.
| ಪ್ರೊ.ವಿವೇಕ್ ಸಿಂಗ್ ಮುಂಬೈ