ಇಸ್ರೋದಲ್ಲಿ ಉದ್ಯೋಗ; ಅರ್ಜಿ ಸಲ್ಲಿಕೆಗೆ ಮಾ.01 ಕೊನೆ ದಿನ

ISRO
Published on

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಕೇಂದ್ರ ಸರ್ಕಾರದ ಬಾಹ್ಯಾಕಾಶ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯಾಗಿದ್ದು, 1969 ಆ.15ರಂದು ಸ್ಥಾಪನೆ ಮಾಡಲಾಯಿತು. ಬೆಂಗಳೂರಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಂಸ್ಥೆ ಬಾಹ್ಯಾಕಾಶ ವಿಜ್ಞಾನ, ಇಂಜಿನಿಯರಿಂಗ್ ಮತ್ತು ತಾಂತ್ರಿಕ ಪ್ರಗತಿಗೆ ಪ್ರಾಥಮಿಕ ಒತ್ತು ನೀಡುತ್ತದೆ.

ಬಾಹ್ಯಾಕಾಶ ನೌಕೆಯ ಪರಿಕಲ್ಪನೆ, ವಿನ್ಯಾಸ, ಅಭಿವೃದ್ಧಿ, ತಯಾರಿಕೆ, ಪರೀಕ್ಷೆ, ಉಡಾವಣೆ ಮತ್ತು ಕಕ್ಷೆಯೊಳಗಿನ ನಿರ್ವಹಣೆ ಹಾಗೂ ಬಾಹ್ಯಾಕಾಶ ನೌಕೆ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದೆ. ಚಂದ್ರಯಾನ-1, ಆದಿತ್ಯ-ಎಲ್1 ಸೇರಿ ಹಲವಾರು ಮಿಷನ್‌ಗಳನ್ನು ಯಶಸ್ವಿಗೊಳಿಸಿದ್ದು, ಭವಿಷ್ಯದ ಇತರ ಗುರಿಗಳನ್ನು ಸಾಧಿಸಲು ಅವಶ್ಯವಿರುವ ನೇಮಕಾತಿಗೆ ಮುಂದಾಗಿದೆ.

ಕರ್ನಾಟಕದಲ್ಲಿ ನೆಲೆಗೊಂಡಿರುವ ಯುಆರ್ ರಾವ್ ಉಪಗ್ರಹ ಕೇಂದ್ರ (URSC) ಹಾಗೂ ಇಸ್ರೋದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದ್ದು, ಬೆಂಗಳೂರಲ್ಲಿ ಕೆಲಸ ಮಾಡಲು ಇಚ್ಛಿಸುವ ಅರ್ಹ ಹಾಗೂ ಆಸಕ್ತ ಉದ್ಯೋಗಾಂಕ್ಷಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು.

ಒಟ್ಟು ಹುದ್ದೆಗಳು-265

ಹುದ್ದೆಯ ವಿವರ
ವಿಜ್ಞಾನಿ/ಇಂಜಿನಿಯರ್ 05
ತಾಂತ್ರಿಕ ಸಹಾಯಕ 55
ಸೈಂಟಿಫಿಕ್ ಅಸಿಸ್ಟೆಂಟ್ 06
ಗ್ರಂಥಾಲಯ ಸಹಾಯಕ 01
ಟೆಕ್ನೀಷಿಯನ್-ಬಿ 119
ಡ್ರಾಫ್ಸ್ಟ್​ಮನ್ ಬಿ 23
ಫೈರ್‌ಮನ್-ಎ 03
ಕುಕ್ 04
ಲಘು ವಾಹನ ಚಾಲಕ 06
ಭಾರಿ ವಾಹನ ಚಾಲಕ 02

ವಿದ್ಯಾರ್ಹತೆ 
ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಶೈಕ್ಷಣಿಕ ವಿದ್ಯಾಸಂಸ್ಥೆಯಿಂದ ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಎಸ್‌ಎಸ್‌ಎಲ್‌ಸಿ, ಐಟಿಐ, ಡಿಪ್ಲೊಮಾ, ಬಿ.ಎಸ್‌ಸಿ, ಬಿಇ, ಬಿ.ಟೆಕ್, ಎಂಎಸ್, ಎಇ, ಎಂ.ಟೆಕ್ ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.

ವಯೋಮಿತಿ, ವೇತನ
2024 ಫೆ.16ಕ್ಕೆ ಅನ್ವಯವಾಗುವವಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ 35 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಅನ್ವಯವಾಗಲಿದೆ. ಅಂತಿಮವಾಗಿ ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ 19,900 ರೂ.ನಿಂದ 56,100 ರೂ. ಮಾಸಿಕ ವೇತನ ಪಾವತಿಸಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ 
ಇಸ್ರೋದ ಅಧಿಕೃತ isro.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಅಧಿಸೂಚನೆ ಜತೆಗೆ ನೇಮಕಾತಿ ಪ್ರಕ್ರಿಯೆ ನಿಯಮಗಳನ್ನು ಕೂಲಂಕುಷವಾಗಿ ಪರಿಶೀಲಿಸಬೇಕು. ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಲ್ಲಿಸಬೇಕು. ತಮ್ಮ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕ ಪಾವತಿಸಬೇಕು.

ಅರ್ಜಿ ಶುಲ್ಕ 
ವಿಜ್ಞಾನಿ, ಇಂಜಿನಿಯರ್, ಎಸ್‌ಸಿ, ಅಸಿಸ್ಟೆಂಟ್, ಹುದ್ದೆಗಳಿಗೆ 250 ರೂ. ಅರ್ಜಿಶುಲ್ಕದ ಜತೆಗೆ 750 ರೂ. ಪ್ರೊಸೆಸಿಂಗ್ ಫಿ ನಿಗದಿಪಡಿಸಲಾಗಿದ್ದು, ಟ್ನೆಕಿಷಿಯನ್-ಬಿ, ಡ್ರಾಟ್ಸ್‌ಮನ್-ಬಿ, ಕುಕ್, ಫೈರ್‌ಮನ್-ಎ ಹಾಗೂ ಚಾಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 100 ರೂ. ಅರ್ಜಿಶುಲ್ಕದ ಜತೆಗೆ 500 ರೂ. ಪ್ರೊಸೆಸಿಂಗ್ ಫಿ ಪಾವತಿಸಬೇಕು. ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಮಾತ್ರ ಪ್ರೊಸೆಸ್ಸಿಂಗ್ ಫಿಯನ್ನು ಮರುಪಾವತಿಸಲಾಗುತ್ತದೆ.

ಆಯ್ಕೆ ಪ್ರಕ್ರಿಯೆ 
ಅಭ್ಯರ್ಥಿಗಳ ಆಯ್ಕೆಯು ಲಿಖಿತ ಪರೀಕ್ಷೆ / ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಸಂದರ್ಶನ ನಡೆಸುವ ಮೂಲಕ ಆಧರಿಸಿದೆ.

ಪ್ರಮುಖ ಮಾಹಿತಿ
ಸಂವಹನ ಉದ್ದೇಶಕ್ಕಾಗಿ ಚಾಲ್ತಿಯಲ್ಲಿರುವ ಇಮೇಲ್ ಐಡಿ ಮತ್ತು ದೂರವಣಿ ಸಂಖ್ಯೆಯನ್ನು ಅರ್ಜಿಯಲ್ಲಿ ನಮೂದಿಸಬೇಕು. ವಯಸ್ಸು, ಶೈಕ್ಷಣಿಕ ಅರ್ಹತೆ ಹಾಗೂ ಕಾರ್ಯ ಅನುಭವವಿದ್ದರೆ ಅಂತಹ ದಾಖಲೆಗಳ ಜತೆಗೆ ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ ಸ್ಕಾೃನ್ ಮಾಡಿ ಅಪ್‌ಲೋಡ್ ಮಾಡಬೇಕು.

ಅರ್ಜಿ ಸಲ್ಲಿಸಲು ಕೊನೇ ದಿನ: 01-03-2024
ಹೆಚ್ಚಿನ ಮಾಹಿತಿಗಾಗಿ: http://isro.gov.in/

ಎನ್‌ಆರ್‌ಎಸ್‌ಸಿಯಿಂದ ಅರ್ಜಿ 
ಇಸ್ರೋದ ಪ್ರಮುಖ ಕೇಂದ್ರವಾಗಿರುವ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್‌ಆರ್‌ಎಸ್‌ಸಿ) 41 ಹುದ್ದೆಗಳ ಭರ್ತಿಗೆ ಮುಂದಾಗಿದ್ದು, ಇದರಲ್ಲಿ 35 ವಿಜ್ಞಾನಿ, ಇಂಜಿನಿಯರ್, ಒಂದು ಮೆಡಿಕಲ್ ಆಫೀಸರ್ ಹುದ್ದೆ, 2 ನರ್ಸ್ ‘ಬಿ’ ಶ್ರೇಣಿ, ಲೈಬ್ರರಿ ಅಸಿಸ್ಟೆಂಟ್ ‘ಎ’ ಹುದ್ದೆಗಳು ಸೇರಿವೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ www.nrsc.gov.in ವೆಬ್‌ಸೈಟ್ ಮೂಲಕ ಫೆ.12ರೊಳಗೆ ಅರ್ಜಿ ಸಲ್ಲಿಸಬಹುದು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net