

ಉಳ್ಳಾಲ: ಉಳ್ಳಾಲ ಖಾಜಿಯಾಗಿ ಇಂಡಿಯನ್ ಗ್ರ್ಯಾಂಡ್ ಮುಪ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಸಯ್ಯದ್ ಫಜಲ್ ಕೋಯಮ್ಮ ತಂಙಳ್ ಕೂರತ್ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಆಯ್ಕೆ ನಡೆದಿದೆ. ಖಾಜಿ ಆಯ್ಕೆಗೆ ಸಂಬಂಧಿಸಿ ಉಳ್ಳಾಲ ದರ್ಗಾ ವಠಾರದ ಮದನಿ ಸಭಾಂಗಣದಲ್ಲಿ ಭಾನುವಾರ ಮಧ್ಯಾಹ್ನ ನಡೆದ ಮಹಾಸಭೆಯಲ್ಲಿ ಎ.ಪಿ.ಉಸ್ತಾದ್ ಅವರನ್ನು ಖಾಜಿಯಾಗಿ ನೇಮಕ ಮಾಡಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಈ ಮೂಲಕ ಉಳ್ಳಾಲದ ಮೂರನೇ ಖಾಜಿಯಾಗಿ ಎ.ಪಿ.ಉಸ್ತಾದ್ ಆಯ್ಕೆಯಾಗಿದ್ದು, ಆ.5ರಂದು ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ಮತ್ತು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
1978ರಿಂದ 2014 ಫೆ.1ರವರೆಗೆ ಶೇಖ್ ಅಸ್ಸಯ್ಯದ್ ಅಬ್ದುಲ್ ರಹ್ಮಾನ್ ಅಲ್ ಬುಖಾರಿ ತಂಙಳ್ ಖಾಜಿಯಾಗಿದ್ದರು. ನಂತರ ಅವರ ಪುತ್ರ ಸಯ್ಯದ್ ಫಜಲ್ ಕೋಯಮ್ಮ ತಂಙಳ್ ಖಾಜಿಯಾಗಿದ್ದರು. ಎ.ಪಿ.ಉಸ್ತಾದ್ ಮರ್ಕಜ್ ಸಂಸ್ಥೆಯ ಸ್ಥಾಪಕರಾಗಿದ್ದಾರೆ.