ತೇಜ್ ಪ್ರತಾಪ್ ಗೆಳತಿ ಲಾಲು ಕುಟುಂಬದಲ್ಲೇ ಒಂದು ನಿಗೂಢ! ಯಾರು ಈ ಅನುಷ್ಕಾ ಯಾದವ್? Anushka Yadav

Anushka Yadav
Published on

Anushka Yadav : ಒಂದೇ ಒಂದು ಫೇಸ್‌ಬುಕ್ ಪೋಸ್ಟ್ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಕುಟುಂಬದಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ. ತಮ್ಮ ಹಿರಿಯ ಪುತ್ರ ತೇಜ್​ ಪ್ರತಾಪ್​ ಯಾದವ್​ ಅವರನ್ನು ಪಕ್ಷದಿಂದ ಲಾಲು ಪ್ರಸಾದ್ ಅಮಾನತು ಮಾಡಿದ್ದಾರೆ. ಆರು ವರ್ಷಗಳ ಕಾಲ ಆರ್‌ಜೆಡಿಯಿಂದ ಹೊರಹಾಕಲಾಗಿದೆ. ಇದಲ್ಲದೆ, ತಮ್ಮ ಕುಟುಂಬದಿಂದಲೂ ಮಗನನ್ನು ಹೊರಹಾಕಿದ್ದಾರೆ. ಇದೆಲ್ಲದಕ್ಕೂ ಕಾರಣ ಹುಡುಗಿಯೊಂದಿಗಿನ ಸಂಬಂಧ ಎಂದು ಹೇಳಲಾಗಿದೆ.

ಮಾಜಿ ಸಚಿವ ಹಾಗೂ ರಾಷ್ಟ್ರೀಯ ಜನತಾ ದಳದ ಶಾಸಕ ತೇಜ್ ಪ್ರತಾಪ್ ಯಾದವ್ ತಮ್ಮ ಫೇಸ್‌ಬುಕ್‌ನಲ್ಲಿ 12 ವರ್ಷಗಳಿಂದ ಓರ್ವ ಹುಡುಗಿಯ ಜೊತೆ ಸಂಬಂಧ ಹೊಂದಿರುವುದಾಗಿ ಪೋಸ್ಟ್ ಹಾಕಿದ್ದಾರೆ. ಆ ಹುಡುಗಿ ಜೊತೆಗಿರುವ ಫೋಟೋವನ್ನೂ ಪೋಸ್ಟ್ ಮಾಡಿದ್ದಾರೆ. ಇದೇ ಪೋಸ್ಟ್​ನಿಂದ ದೊಡ್ಡ ರಾಜಕೀಯ ಕೋಲಾಹಲ ಭುಗಿಲೆದ್ದಿತು. ಕೆಲವೇ ಸೆಕೆಂಡುಗಳಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಸಹ ನಡೆದವು. ಈ ಅನಿರೀಕ್ಷಿತ ಬೆಳವಣಿಗೆಯಿಂದ ತೇಜ್ ಪ್ರತಾಪ್ ಯಾದವ್ ಅವರ ತಂದೆ ಲಾಲು ಪ್ರಸಾದ್ ಯಾದವ್ ಕೋಪಗೊಂಡರು. ತಮ್ಮ ಮಗ ಅಂತಾನೂ ಪರಿಗಣಿಸದೆ, ಪಕ್ಷ ಮತ್ತು ಕುಟುಂಬದಿಂದ ಹೊರಹಾಕಿದ್ದಾರೆ.

ಈ ಬೆಳವಣಿಗೆ ಬಳಿಕ ಈಗ ಎಲ್ಲರ ಕಣ್ಣುಗಳು ಆ ಹುಡುಗಿಯ ಮೇಲೆ ನೆಟ್ಟಿವೆ. ಎಲ್ಲರೂ ಅವಳ ಬಗ್ಗೆ ಚರ್ಚಿಸುತ್ತಿದ್ದಾರೆ. ಅವಳ ಯಾರು ಎಂದು ಕೇಳುತ್ತಿದ್ದಾರೆ. ಹಾಗಾದರೆ, ಆ ಹುಡುಗಿ ಯಾರು ಎಂಬುದನ್ನು ತಿಳಿದುಕೊಳ್ಳೋಣ.

ಅಂದಹಾಗೆ, ಆ ಹುಡುಗಿಯ ಹೆಸರು ಅನುಷ್ಕಾ ಯಾದವ್. ಈಕೆ ಓರ್ವ ಖಾಸಗಿ ವ್ಯಕ್ತಿ. ಹೀಗಾಗಿ ಆಕೆಯ ಬಗ್ಗೆ ಸಾರ್ವಜನಿಕರಿಗೆ ಬಹಳ ಸೀಮಿತ ಮಾಹಿತಿ ಲಭ್ಯವಿದೆ. ತೇಜ್ ಪ್ರತಾಪ್ ಇತ್ತೀಚೆಗೆ ಫೇಸ್​ಬುಕ್​ ಪೋಸ್ಟ್​ ಹಾಕುವವರೆಗೂ ಅವರ ಹೆಸರು ಮಾಧ್ಯಮ ವರದಿಗಳಲ್ಲಿ ಅಥವಾ ರಾಜಕೀಯ ಚರ್ಚೆಗಳಲ್ಲಿ ವಿರಳವಾಗಿ ಕಾಣಿಸಿಕೊಂಡಿತು. ಯಾವಾಗ ಹುಡುಗಿ ಜತೆ ಇರುವ ಫೋಟೋ ಪೋಸ್ಟ್​ ಮಾಡಿದರೂ ಮಾಧ್ಯಮಗಳಲ್ಲಿ ತೇಜ್​ ಪ್ರತಾಪ್​ ಅವರದ್ದೇ ಸುದ್ದಿಯಾಗಿದೆ. ತೇಜ್​​ ಪ್ರತಾಪ್​ ಜತೆಗಿರುವ ಅನುಷ್ಕಾ ಯಾದವ್, ಬಿಹಾರದವರು ಎಂದು ನಂಬಲಾಗಿದೆ. ಇಬ್ಬರೂ ಸುಮಾರು ಹತ್ತು ವರ್ಷಗಳ ಹಿಂದೆ ಭೇಟಿಯಾಗಿದರು ಎಂದು ಹೇಳಲಾಗುತ್ತದೆ.

ಅನುಷ್ಕಾ ಯಾದವ್ ಅವರ ಶೈಕ್ಷಣಿಕ ಹಿನ್ನೆಲೆ ಅಥವಾ ವೃತ್ತಿಪರ ಚಟುವಟಿಕೆಗಳ ಬಗ್ಗೆ ಬಹಳ ಕಡಿಮೆ ಮಾಹಿತಿ ಲಭ್ಯವಿದೆ. ತೇಜ್ ಪ್ರತಾಪ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಅವರನ್ನು ತಮ್ಮ ಜೀವನದ ಪ್ರಮುಖ ವ್ಯಕ್ತಿ ಎಂದು ಉಲ್ಲೇಖಿಸಿದ್ದಾರೆ. ಅನುಷ್ಕಾ ಯಾದವ್ ತೇಜ್ ಪ್ರತಾಪ್ ಅವರ ಆಪ್ತ ಸ್ನೇಹಿತನ ಸಹೋದರಿ ಎಂದು ಹೇಳಲಾಗುತ್ತಿದೆ. ತೇಜ್ ಅವರ ಸ್ನೇಹಿತ ಆರ್‌ಜೆಡಿ ತೊರೆದು ಬೇರೆ ರಾಜಕೀಯ ಪಕ್ಷ ಸೇರಿದ್ದಾರೆ ಎಂದು ವರದಿಯಾಗಿದೆ.

ವಾಸ್ತವವಾಗಿ, ತೇಜ್ ಪ್ರತಾಪ್ ಯಾದವ್ ಬಿಹಾರದ ಮಾಜಿ ಮುಖ್ಯಮಂತ್ರಿ ದರೋಗಾ ರಾಯ್ ಅವರ ಮೊಮ್ಮಗಳು ಐಶ್ವರ್ಯಾ ರೈ ಅವರನ್ನು ವಿವಾಹವಾದರು. 2018ರಲ್ಲಿ ನಡೆದ ಈ ದಂಪತಿಯ ವಿವಾಹವು ಬಹಳ ಹೈಪ್ರೊಫೈಲ್ ಆಗಿತ್ತು. ಆದಾಗ್ಯೂ, ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ತೇಜ್ ಪ್ರತಾಪ್ ಮತ್ತು ಅವರ ಕುಟುಂಬವು ತನ್ನನ್ನು ಚೆನ್ನಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ಐಶ್ವರ್ಯಾ ಮನೆಯಿಂದ ಹೊರಬಂದರು. ಅದರ ನಂತರ ಕಾನೂನು ಹೋರಾಟ ನಡೆಯಿತು. ಇಬ್ಬರ ನಡುವೆ ಆರೋಪ ಮತ್ತು ಪ್ರತ್ಯಾರೋಪಗಳು ಇದ್ದವು. ಅವರ ವಿಚ್ಛೇದನ ಪ್ರಕರಣ ಇನ್ನೂ ಪಾಟ್ನಾ ಕುಟುಂಬ ನ್ಯಾಯಾಲಯದಲ್ಲಿ ಬಾಕಿ ಇದೆ.

ತೇಜ್ ಪ್ರತಾಪ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಏನಿದೆ?

ನಾನು ತೇಜ್ ಪ್ರತಾಪ್ ಯಾದವ್. ಈ ಫೋಟೋದಲ್ಲಿ ನನ್ನ ಜೊತೆ ಇರುವ ವ್ಯಕ್ತಿ ಅನುಷ್ಕಾ ಯಾದವ್. ನಾವು 12 ವರ್ಷಗಳಿಂದ ಒಬ್ಬರಿಗೊಬ್ಬರು ತಿಳಿದಿದ್ದೇವೆ. ನಾವು ಪರಸ್ಪರ ಪ್ರೀತಿಸುತ್ತೇವೆ. ನಾವು ಹಲವು ವರ್ಷಗಳಿಂದ ಸಂಬಂಧದಲ್ಲಿದ್ದೇವೆ. ಇದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾನು ಬಹಳ ದಿನಗಳಿಂದ ಬಯಸಿದ್ದೆ. ಆದರೆ, ಅದನ್ನು ಹೇಗೆ ವ್ಯಕ್ತಪಡಿಸಬೇಕೆಂದು ನನಗೆ ತಿಳಿದಿರಲಿಲ್ಲ. ಇಂದು, ಈ ಪೋಸ್ಟ್ ಮೂಲಕ, ನಾನು ನಿಮ್ಮೆಲ್ಲರಿಗೂ ನನ್ನ ಹೃದಯವನ್ನು ತೆರೆಯುತ್ತಿದ್ದೇನೆ. ನೀವು ನನ್ನನ್ನು ಅರ್ಥಮಾಡಿಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ತೇಜ್​ ಪ್ರತಾಪ್​ ಬರೆದಿದ್ದರು.

ಈ ಪೋಸ್ಟ್ ವೈರಲ್ ಆಗಿ ರಾಜಕೀಯ ವಲಯದಲ್ಲಿ ಹಾಗೂ ಜನರಲ್ಲಿ ಚರ್ಚೆಗೆ ಕಾರಣವಾಯಿತು. ತೇಜ್ ಅವರನ್ನು ತೀವ್ರವಾಗಿ ಟೀಕಿಸಲಾಯಿತು. ತೇಜ್ ಸಂಬಂಧದಲ್ಲಿದ್ದರೂ ಐಶ್ವರ್ಯಾ ಅವರನ್ನು ಏಕೆ ಮದುವೆಯಾದರು ಎಂದು ಪ್ರಶ್ನಿಸಲಾಗುತ್ತಿದೆ. ಈ ಬಗ್ಗೆ ಗದ್ದಲದ ನಂತರ ತೇಜ್ ಪ್ರತಾಪ್ ಯಾದವ್ ಪ್ರತಿಕ್ರಿಯಿಸಬೇಕಾಯಿತು. ಯಾರೋ ತಮ್ಮ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಿ, ಅದರಲ್ಲಿ ಎಡಿಟ್ ಮಾಡಿದ ಫೋಟೋಗಳನ್ನು ಹಾಕಿದ್ದಾರೆ ಮತ್ತು ಯಾರೋ ತಮ್ಮ ಕುಟುಂಬದ ಗೌರವಕ್ಕೆ ಧಕ್ಕೆ ತರಲು ಉದ್ದೇಶಪೂರ್ವಕವಾಗಿ ಇದನ್ನೆಲ್ಲ ಮಾಡಿದ್ದಾರೆ ಎಂದು ಆರೋಪಿಸಿದರು. ಇಂತಹ ವದಂತಿಗಳನ್ನು ನಂಬಬೇಡಿ ಎಂದು ಜನರನ್ನು ಕೇಳಿಕೊಂಡರು. ಇದರ ಬಗ್ಗೆ ಗದ್ದಲದ ನಂತರ, ಲಾಲು ಪ್ರಸಾದ್ ಯಾದವ್ ಒಂದು ಸಂಚಲನಾತ್ಮಕ ನಿರ್ಧಾರವನ್ನು ತೆಗೆದುಕೊಂಡರು. ಅವರು ತಮ್ಮ ಮಗನನ್ನು ಪಕ್ಷದಿಂದ ಅಮಾನತುಗೊಳಿಸಿದರು. ನನಗೆ ಕುಟುಂಬಕ್ಕಿಂತ ಪಕ್ಷವೇ ಮುಖ್ಯ ಎಂದು ಲಾಲು ಪ್ರಸಾದ್​ ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net