ಮಹಿಳೆಗೆ ಖಾಲಿ ಸಿರಿಂಜ್​ ಇಂಜೆಕ್ಟ್​ ಮಾಡಿ ಕೊಲೆಗೆ ಯತ್ನಿಸಿದ ನರ್ಸ್​​: ತನಿಖೆಯಲ್ಲಿ ಕಾಲೇಜು ದಿನಗಳ ರಹಸ್ಯ ಬಯಲು

Anusha Sneha
Published on

ಕೊಚ್ಚಿ: ನರ್ಸ್ ವೇಷದಲ್ಲಿ ಮಹಿಳೆಯೊಬ್ಬಳನ್ನು ಕೊಲ್ಲಲು ಯತ್ನಿಸಿದ ಘಟನೆ ಕೇರಳದಲ್ಲಿ ನಡೆದಿದೆ. ಖಾಸಗಿ ಆಸ್ಪತ್ರೆಯೊಂದರಲ್ಲಿ ಪ್ರಸವನಂತರದ ಚಿಕಿತ್ಸೆ ಪಡೆಯುವಾಗ ಕೊಲ್ಲುವ ಯತ್ನ ನಡೆದಿದೆ. ಕಾರಣ ಏನೆಂದು ತಿಳಿದುಕೊಳ್ಳಲು ತನಿಖೆ ನಡೆಸಿದಾಗ ಸ್ಫೋಟಕ ಸಂಗತಿ ಬೆಳಕಿಗೆ ಬಂದಿದೆ.

ಆಲಪ್ಪುಳ ಜಿಲ್ಲೆಯ ಕಾಯಂಕುಲಂ ಪುಲ್ಲುಕುಲಂಗರ ಮೂಲದ ಅನುಷಾ (27) ಸರ್ಸ್​ ವೇಷದಲ್ಲಿ ಕಾಯಂಕುಲಂನ ಕರಿಯಿಲಕುಳಂಗರ ಮೂಲದ ಸ್ನೇಹಾ (25) ಎಂಬಾಕೆಯನ್ನು ಕೊಲ್ಲಲು ಯತ್ನಿಸಿ ಸಿಕ್ಕಿಬಿದ್ದಿದ್ದಾಳೆ.

ಮೆಡಿಸಿನ್​ ಇಲ್ಲದ ಸಿರಿಂಜ್​ ಮೂಲಕ ಅಪಧಮನಿಗಳಿಗೆ ಗಾಳಿಯನ್ನು ತುಂಬಿ ಕೊಲೆ ಮಾಡಲು ಯತ್ನಿಸಿದ್ದಾಳೆ. ಮೂರು ಬಾರಿ ಸಿರಿಂಜ್​ ಅನ್ನು ಅನುಷಾ ಇಂಜೆಕ್ಟ್​ ಮಾಡಿದ್ದಾಳೆ. ನರ್ಸ್​ ಯೂನಿಫಾರ್ಮ್​, ವೇಲ್​ ಮತ್ತು ಮಾಸ್ಕ್​ ಧರಿಸಿ ಬಂದು ಅನುಷಾ ಈ ಕೃತ್ಯವನ್ನು ಎಸಗಿದ್ದಾಳೆ.

ಕೃತ್ಯಕ್ಕೆ ಕಾರಣವೇನು?

ಅಂದಹಾಗೆ ಅನುಷಾ ಈ ಕೃತ್ಯ ಎಸಗಲು ಕಾರಣ ಏನೆಂದರೆ, ಸ್ನೇಹಾಳ ಪತಿ ಅರುಣ್​ ಮೇಲಿನ ಪ್ರೀತಿ. ಅರುಣ್​ ಮತ್ತು ಅನುಷಾ ಕಾಲೇಜು ದಿನಗಳಿಂದಲೂ ಲವ್​ ಮಾಡುತ್ತಿದ್ದರು ಎಂಬ ರಹಸ್ಯ ತನಿಖೆಯಲ್ಲಿ ಬಯಲಾಗಿದೆ. ಸ್ನೇಹಾಳನ್ನು ಕೊಂದು ಅರುಣ್​ನನ್ನು ಪಡೆದುಕೊಳ್ಳುವುದು ಆಕೆಯ ದುರುದ್ದೇಶವಾಗಿತ್ತು. ಹೀಗಾಗಿ ಅರುಣ್​ ಆಸ್ಪತ್ರೆಯಲ್ಲಿ ಇಲ್ಲದ ಸಮಯ ನೋಡಿ ಕೊಲೆ ಮಾಡಲು ಯತ್ನಿಸಿದ್ದಾಳೆ. ಅನುಷಾ ಬಂದಾಗ ವಾರ್ಡ್​ನಲ್ಲಿ ಸ್ನೇಹಾ ಮತ್ತು ಆಕೆಯ ತಾಯಿ ಮಾತ್ರ ಇದ್ದರು ಎಂದು ಸ್ನೇಹಾ ಸಂಬಂಧಿಕರು ತಿಳಿಸಿದ್ದಾರೆ.

ಎರಡು ಮದುವೆ ಆಗಿದ್ದಾಳೆ

ಅನುಷಾ ಮಾಡಿದ ಕೃತ್ಯದಿಂದ ಸ್ನೇಹಾ ಹೃದಯಾಘಾತದಿಂದ ಬಳಲಿದ್ದಾಳೆ. ಆದರೆ, ಸೂಕ್ತ ಸಮಯದಲ್ಲಿ ವೈದ್ಯರಿಗೆ ತಿಳಿಸಿದ್ದಕ್ಕೆ ಸ್ನೇಹಾಳ ಆರೋಗ್ಯ ಸ್ಥಿತಿ ಈಗ ಸಮಾಧಾನಕರವಾಗಿದೆ. ಅಚ್ಚರಿಯ ಸಂಗತಿಯೇನೆಂದರೆ, ಆರೋಪಿ ಅನುಷಾ ಈಗಾಗಲೇ ಎರಡು ಮದುವೆ ಆಗಿದ್ದಾಳೆ. ಆಕೆಯ ಎರಡನೇ ಪತಿ ವಿದೇಶದಲ್ಲಿದ್ದಾನೆ. ಆಕೆ ಫಾರ್ಮಾಸಿಸ್ಟ್​ ಕೋರ್ಸ್​ ಮುಗಿಸುವುದರಿಂದ ಆಕೆ ಸಂಚು ಮಾಡಿ ಕೊಲೆ ಪ್ರಯತ್ನ ನಡೆಸಿದ್ದಾಳೆ. ಆಕೆಯನ್ನು ಬಂಧಿಸಿರುವ ಕೇರಳ ಪೊಲೀಸರು ಆಕೆಯನ್ನು ಕೋರ್ಟ್​ ಮುಂದೆ ಇಂದು ಹಾಜರುಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net