

ನವದೆಹಲಿ: ಯೋಗಗುರು ರಾಮ್‌ದೇವ್(Ramdev) ತಮ್ಮ ಸ್ಥಳೀಯ ಉತ್ಪನ್ನಗಳ ಜತೆಗೆ ಫಿಟ್‌ನೆಸ್‌ಗೆ ಹೆಸರುವಾಸಿಯಾಗಿದ್ದಾರೆ. ಇದಲ್ಲದೆ ರಾಮದೇವ್ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿರುತ್ತಾರೆ. ಅವರ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ರಾಮದೇವ್ ಕತ್ತೆ ಹಾಲು ಕುಡಿಯುವುದನ್ನು, ಕುದುರೆ ಸವಾರಿ ಮಾಡಿರುವ ವಿಡಿಯೋವನ್ನು ನೋಡಿರುತ್ತೀರಿ.
ಇತ್ತೀಚೆಗೆ ರಾಮ್‌ದೇವ್ ಅವರ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲಿ ರಾಮ್‌ದೇವ್ ಅವರು ಕುದುರೆಯ ಪಕ್ಕದಲ್ಲಿ ಓಡುವುದನ್ನು ನೋಡಬಹುದು. ಅಲ್ಲದೆ ಕೊನೆಯಲ್ಲಿ ಕುದುರೆಗಿಂತ ವೇಗವಾಗಿ ಓಡಿ ಗೆಲ್ಲುತ್ತಾರೆ. ಈ ವಿಡಿಯೋವನ್ನು ಜಾಲತಾಣದಲ್ಲಿ ಹಂಚಿಕೊಳ್ಳುವಾಗ, ಶಿಲಾಜಿತ್ ತೆಗೆದುಕೊಂಡಿರುವುದರಿಂದ ಇದನ್ನು ಮಾಡಲು ಸಾಧ್ಯವಾಗುತ್ತದೆ. ಕುದುರೆಯಂತೆ ವೇಗವಾಗಿ ಓಡುವ ಶಕ್ತಿ, ಬಲವಾದ ರೋಗನಿರೋಧಕ ಶಕ್ತಿ, ವಯಸ್ಸಾಗುವುದನ್ನು ತಡೆಯುವುದು ಮತ್ತು ಶಕ್ತಿ ಬೇಕಾದರೆ ಸ್ವರ್ಣ ಶಿಲಾಜಿತ್ ಮತ್ತು ಇಮ್ಯುನೊಗ್ರಿಟ್ ಗೋಲ್ಡ್ ಅನ್ನು ಸೇವಿಸಿ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಈ ವಿಡಿಯೋಗೆ ಜಾಲತಾಣದಲ್ಲಿ ಅಮೆರಿಕದ ಉದ್ಯಮಿ, ಮಿಲಿಯನೇರ್ ಬ್ರಿಯಾನ್ ಜಾನ್ಸನ್ ಪ್ರತಿಕ್ರಿಯಿಸಿದ್ದಾರೆ. ಹರಿದ್ವಾರದಲ್ಲಿರುವ ಪತಂಜಲಿ ಪ್ರಧಾನ ಕಚೇರಿಯಲ್ಲಿ ಗಾಳಿಯ ಗುಣಮಟ್ಟ ತುಂಬಾ ಕೆಟ್ಟದಾಗಿದ್ದು, ನಗರದಲ್ಲಿ ಉಸಿರಾಡುವುದರಿಂದ ಹೃದಯ ಮತ್ತು ಶ್ವಾಸಕೋಶದ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ. ಹರಿದ್ವಾರದಲ್ಲಿ ಪ್ರಸ್ತುತ ಗಾಳಿಯ ಗುಣಮಟ್ಟ PM 2.5 36 µg/m³ ಆಗಿದ್ದು, ಇದು ದಿನಕ್ಕೆ 1.6 ಸಿಗರೇಟ್ ಸೇದುವುದಕ್ಕೆ ಸಮನಾಗಿರುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಇದು ಹೃದ್ರೋಗದ ಅಪಾಯವನ್ನು 40-50%, ಶ್ವಾಸಕೋಶದ ಕ್ಯಾನ್ಸರ್ 3x, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ ಮತ್ತು ಅಕಾಲಿಕ ಮರಣ (5-7 ವರ್ಷಗಳ ನಷ್ಟ) ಹೆಚ್ಚಿಸುತ್ತದೆ ಎಂದು ಹೇಳಿ ನೆಟ್ಟಿಗರ ಗಮನ ಸೆಳೆದಿದ್ದಾರೆ. ಅದೇ ಸ್ವಲ್ಪ ಸಮಯದ ನಂತರ ಜಾನ್ಸನ್ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಮತ್ತೊಂದು ಪೋಸ್ಟ್‌ನಲ್ಲಿ ರಾಮ್‌ದೇವ್ ತಮ್ಮನ್ನು ಬ್ಲಾಕ್ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಅಂದ್ಹಾಗೆ ಭಾರತದ ಗಾಳಿಯ ಗುಣಮಟ್ಟದ ಬಗ್ಗೆ ಜಾನ್ಸನ್ ಅವರು ಪ್ರತಿಕ್ರಿಯಿಸುತ್ತಿರುವುದು ಇದೇ ಮೊದಲೆನಲ್ಲ. ಕಳೆದ ವರ್ಷವಷ್ಟೇ ಅವರು ಮಾಲಿನ್ಯವನ್ನು ದೂಷಿಸುತ್ತಾ ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರ ಪಾಡ್‌ಕ್ಯಾಸ್ಟ್ ಅನ್ನು ಅರ್ಧಕ್ಕೆ ಬಿಟ್ಟಿದ್ದರು. ಅಂದಿನಿಂದ ಕಳಪೆ ಗಾಳಿಯ ಗುಣಮಟ್ಟ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸುವ ಹಲವಾರು ಪೋಸ್ಟ್‌ಗಳನ್ನು ಬ್ರಿಯಾನ್ ಜಾನ್ಸನ್ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)