ಮಂಗಳೂರು ಜೈಲ್‌ನಲ್ಲಿ ಮತ್ತೆ ಹೊಡೆದಾಟ, ಓರ್ವ ಗಂಭೀರ

mng--26 june Jail
Published on

ಮಂಗಳೂರು: ನಗರದ ಜಿಲ್ಲಾ ಕಾರಾಗೃಹದಲ್ಲಿ ಗುರುವಾರ ಮತ್ತೆ ಹೊಡೆದಾಟ ನಡೆದು ಓರ್ವ ವಿಚಾರಣಾಧೀನ ಕೈದಿ ಗಾಯಗೊಂಡಿದ್ದಾನೆ.

ಪುತ್ತೂರಿನ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ಆರೋಪಿ ಕೇಶವ ಎಂಬಾತನ ಮೇಲೆ ಇನ್ನೊಬ್ಬ ವಿಚಾರಣಾಧೀನ ಕೈದಿ ಉಳ್ಳಾಲದ ನಟೋರಿಯಸ್ ರೌಡಿ ಮುಖ್ತಾರ್ ಹಲ್ಲೆಗೈದಿದ್ದಾನೆ. ಪರಿಣಾಮ ಕೇಶವ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಪ್ರಕರಣ ವಿವರ: ಗುರುವಾರ ಬೆಳಗ್ಗೆ ಕ್ವಾರಂಟೈನ್ ವಿಭಾಗದಲ್ಲಿ ಕೇಶವ ಮತ್ತು ಮುಖ್ತಾರ್ ಓಡಾಟ ನಡೆಸುತ್ತಿದ್ದಾಗ ಅವರಿಬ್ಬರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ವಾಗ್ವಾದ ನಡೆದಿದೆ. ಈ ಸಂದರ್ಭ ಆರೋಪಿ ಮುಖ್ತಾರ್ ದೂರದಲ್ಲೇ ಇದ್ದ ರೀಪಿನಿಂದ ಕೇಶವನ ತಲೆಗೆ ಹಲ್ಲೆಗೈದಿದ್ದಾನೆ. ಇದರಿಂದ ಗಂಭೀರ ಗಾಯಗೊಂಡಿದ್ದು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ವಿಷಯ ಜೈಲಿನೊಳಗೆ ಉಳಿದ ಕೈದಿಗಳಿಗೆ ಗೊತ್ತಾಗಿ ಪರಸ್ಪರ ಕಲ್ಲುತೂರಾಟ, ಹೊಡೆದಾಟ ನಡೆದಿದೆ.

ಕೇಶವ 2023ರ ನ.6ರಂದು ನಡೆದಿದ್ದ ಪುತ್ತೂರಿನ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣದ ಆರೋಪಿ. ಮುಖ್ತಾರ್ ಉಳ್ಳಾಲ ಧರ್ಮನಗರ ನಿವಾಸಿ ಹಲವು ಪ್ರಕರಣದಲ್ಲಿ ಆರೋಪಿಯಾಗಿದ್ದು, 2022ರಲ್ಲಿ ಈತನ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಆಗಾಗ ವಿಚಾರಣಾಧಿನ ಕೈದಿಗಳ ನಡುವೆ ಗಲಾಟೆ ನಡೆಯುತ್ತಲೇ ಇದೆ. ಇತ್ತೀಚೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ ನೀಡಿದ್ದರು. ಗಲಾಟೆ ಮಾಡುವವರನ್ನು ಸ್ಥಳಾಂತರಿಸುವಂತೆ ಸೂಚನೆ ನೀಡಿದ್ದರು. ಜೈಲರ್‌ಗಳು ಹೊರ ಜಿಲ್ಲೆಯವರೇ ಇರುವುದರಿಂದ ಕೈದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಯಂತ್ರಣಕ್ಕೆ ತರುವಲ್ಲಿ ವಿಫಲರಾಗಿರುವುದೇ ನಿರಂತರವಾಗಿ ಗಲಾಟೆ ನಡೆಯಲು ಕಾರಣ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net