ಶಿಬರೂರು ದೈವಸ್ಥಾನದಲ್ಲಿ ವಾರ್ಷಿಕ ನೇಮ

New Project (11)
Published on

ಕಿನ್ನಿಗೋಳಿ: ಮಂಗಳೂರಿನ ಸುರತ್ಕಲ್ ಸಮೀಪದ ಶಿಬರೂರು ಉಳ್ಳಾಯ ಮತ್ತು ಕೊಡಮಣಿತ್ತಾಯ ದೈವಸ್ಥಾನದಲ್ಲಿ ವಾರ್ಷಿಕ ನೇಮ ಭಾನುವಾರ ನಡೆಯಿತು.

ಸೋಮವಾರ ಉರುಳು ಸೇವೆ, ಕಂಚೀಲು ಸೇವೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ತುಳುವಿನಲ್ಲಿ ‘ತಿಗಲೆ ಇತ್ತಿನಾಯಗ್ ತಿಬಾರ್’ ಎಂಬ ಮಾತಿದೆ. ಯಾಕೆಂದರೆ ಶಿಬರೂರು ಅಂದರೆ ತಿಬಾರ್ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಿದ್ದಾರೆ. ಇಂತಹ ಜನ ಸಂದಣಿಯಲ್ಲಿ ಕ್ಷೇತ್ರಕ್ಕೆ ಭೇಟಿ ಕೊಡುವುದೆಂದರೆ ಅದೊಂದು ಸಾಹಸ ಎಂಬುದು ಹಿರಿಯರ ವಾತು. ಪ್ರತಿ ವರ್ಷ ಧನು ಸಂಕ್ರಮಣದಂದು ಧ್ವಜಾರೋಹಣಗೊಂಡು ಜಾತ್ರಾ ಮಹೋತ್ಸವ ನಡೆಯುತ್ತದೆ.

ಇಲ್ಲಿನ ತೀರ್ಥ ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಹಿಂದಿನ ಕಾಲದಲ್ಲಿ ಸೂರಿಂಜೆ ಗುತ್ತು ತ್ಯಾಂಪ ಶೆಟ್ಟಿ ಎಂಬುವರ ಬಳಿ ವಿಷವನ್ನು ಹೀರುವ ಕಲ್ಲು ಇದ್ದು ಅವರು ತಮ್ಮ ಅಂತಿಮ ಕಾಲದಲ್ಲಿ ಎಲ್ಲರಿಗೂ ಉಪಯೋಗವಾಗಲಿ ಎಂಬ ಕಾರಣಕ್ಕೆ ಆ ಕಲ್ಲನ್ನು ಶಿಬರೂರು ದೈವಸ್ಥಾನದ ಎದುರಿನ ಬಾವಿಗೆ ಹಾಕಿದ್ದು, ಆ ಬಳಿಕ ಬಾವಿಯ ನೀರು ವಿಷವನ್ನು ಹೀರುವ ಗುಣವನ್ನು ಪಡೆದಿದೆ ಎಂಬ ನಂಬಿಕೆ ಇದೆ. ಹಿಂದಿನ ಕಾಲದಲ್ಲಿ ವಿಷ ಜಂತುಗಳು ಕಚ್ಚಿದಲ್ಲಿ ಕ್ಷೇತ್ರದ ಮಣ್ಣು ಮತ್ತು ಇಲ್ಲಿನ ತೀರ್ಥ ಕುಡಿದರೆ, ವಿಷ ಕಡಿಮೆ ಆಗಿ ಸಮಸ್ಯೆ ಪರಿಹಾರವಾಗುತ್ತಿದ್ದ ಕ್ಷಣವನ್ನು ಕಣ್ಣಾರೆ ಕಂಡ ಹಿರಿಯರು ಈಗಲೂ ನೆನಪಿಸುತ್ತಾರೆ. ಅದಕ್ಕಾಗಿ ಇಂದಿಗೂ ಇಲ್ಲಿನ ತೀರ್ಥ ಮತ್ತು ಮಣ್ಣು ಭಕ್ತರು ತಮ್ಮ ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಇಲ್ಲಿನ ಈ ತೀರ್ಥ ಬಾವಿಗೆ ಕೊಡಪಾನ ಅಥವಾ ಪಂಪು ಮೂಲಕ ನೀರನ್ನು ಎತ್ತುವಂತಿಲ್ಲ. ಅದರ ಬದಲು ಏತದ ಮೂಲಕವೇ ನೀರನ್ನು ಎತ್ತುವುದು ಇಲ್ಲಿನ ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net