ಟೀಚರ್​ ಮೇಲಿನ ಕೋಪಕ್ಕೆ ಟಾಯ್ಲೆಟ್​ನಲ್ಲಿ ಬಾಂಬ್​ ತಯಾರಿಸಿ ಇಟ್ಟ ವಿದ್ಯಾರ್ಥಿಗಳು; ಮುಂದೆ ನಡೆದಿದ್ದು ಮಾತ್ರ…

Washroom
Published on

ರಾಯ್​ಪುರ: ಶಿಕ್ಷಕರೊಬ್ಬರ (Teacher) ವಿರುದ್ಧ ಸೇಡು ತೀರಿಸಿಕೊಳ್ಳಲು ವಾಶ್​ರೂಮ್​ನಲ್ಲಿ ಬಾಂಬ್​ ಬ್ಲಾಸ್ಟ್​ ಮಾಡಲು ಹೋಗಿ ಮೂವರು ಹುಡುಗಿಯರು ಸೇರಿದಂತೆ ಐದು ವಿದ್ಯಾರ್ಥಿಗಳು ಪೊಲೀಸರ ಅತಿಥಿಯಾಗಿರುವ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ.

ದುರ್ಘಟನೆಯಲ್ಲಿ 9 ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಇನ್ನೋರ್ವ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಘಟನೆ ಕುರಿತು ಮಾತನಾಡಿರುವ ಬಿಲಾಸ್​ಪುರ್​ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಜನೇಶ್ ಸಿಂಗ್​, ಘಟನೆ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೋರ್ವರಿಗಾಗಿ ಹುಡುಕಾಟ ಮುಂದುವರೆದಿದೆ. ಜಿಲ್ಲಾ ಶಿಕ್ಷಣಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ವಿದ್ಯಾರ್ಥಿಗಳು ಯಾವ ಕಾರಣಕ್ಕೆ ಈ ರೀತಿ ಮಾಡಿದರೆಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Blast

ಶಿಕ್ಷಕರೊಬ್ಬರ (Teacher) ನಡೆಯಿಂದ ತೀವ್ರವಾಗಿ ಬೇಸರಗೊಂಡಿದ್ದ ವಿದ್ಯಾರ್ಥಿಗಳು ಅವರಿಗೆ ಬುದ್ಧಿ ಕಲಿಸಬೇಕೆಂದು ಯೋಜನೆ ರೂಪಿಸಿದ್ದರು. ಅದರಂತೆ ಆನ್​ಲೈನ್​ನಲ್ಲಿ ಸೋಡಿಯಂ ತರಿಸಿಕೊಂಡ ವಿದ್ಯಾರ್ಥಿಗಳು ಸ್ಕೂಲ್​ ವಾಶ್​ರೂಮ್​ನಲ್ಲಿ ಅದನ್ನು ಇರಿಸಿ ಬ್ಲಾಸ್ಟ್​ ಮಾಡಲು ಮುಂದಾಗಿದ್ದರು. ಆದರೆ, ಶಿಕ್ಷಕಿಯ ಬದಲು 09 ವರ್ಷದ ವಿದ್ಯಾರ್ಥಿನಿ ಟಾಯ್ಲೆಟ್ ಬಳಸಿದ ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುವಿನ ಪೋಷಕರು ನೀಡಿದ ದೂರನ್ನು ಆಧರಿಸಿ ತನಿಖೆ ನಡೆಸಿದಾಗ ವಿದ್ಯಾರ್ಥಿಗಳ ಕೈವಾಡ ಇರುವುದು ಬೆಳಕಿಗೆ ಬಂದಿದೆ.

ಕೂಡಲೇ ಶಾಲೆಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದ್ದು, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನೋರ್ವ ಆರೋಪಿ ಸಂಬಂಧಿಕರೊಬ್ಬರ ಮನೆಗೆ ತೆರಳಿದ್ದು, ವಾಪಸ್​ ಬಂದ ಕೂಡಲೇ ಬಂಧಿಸಲಾಗುವುದು. ತನಿಖೆ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಜನೇಶ್ ಸಿಂಗ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net