

ಉಡುಪಿ: ದೇವರ ಮೇಲೆ ವಿಶ್ವಾಸವಿಟ್ಟು ಸೇವೆ ಮಾಡಿದರೆ ನಮ್ಮ ಕೆಲಸಗಳು ಸಾರ್ಥಕವಾಗುವುದರಲ್ಲಿ ಸಂಶಯವಿಲ್ಲ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.
ಬುಧವಾರ ಕುಕ್ಕಿಕಟ್ಟೆ ಬಾಲನಿಕೇತನ ವಾರ್ಷಿಕೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ವಿಶ್ವೇಶತೀರ್ಥ ಸೇವಾಧಾಮ ಮತ್ತು ಶ್ರೀಕೃಷ್ಣ ಸೇವಾಧಾಮ ಟ್ರಸ್ಟ್ ವತಿಯಿಂದ ಸಂತೆಕಟ್ಟೆ ಕೃಷ್ಣಾನುಗ್ರಹ ಸಂಸ್ಥೆ ಮುಖ್ಯಸ್ಥ ಡಾ. ಉಮೇಶ್ ಪ್ರಭು ಅವರಿಗೆ ಬಾಲ್ಯ ವಾತ್ಸಲ್ಯ ಸಿಂಧು ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಉಮೇಶ್ ಪ್ರಭು, ಶಿಕ್ಷಣದ ಜತೆಗೆ ಮೌಲ್ಯ ಮತ್ತು ಸಂಸ್ಕಾರ ಕಲಿಸಿಕೊಡಬೇಕು. ಇದರಿಂದ ಸಮಾಜದಲ್ಲಿ ಅನಾಥಾಶ್ರಮ ಹಾಗೂ ವೃದ್ಧಾಶ್ರಮ ಸಂಖ್ಯೆ ಇಳಿಮುಖವಾಗುತ್ತದೆ ಎಂದು ಹೇಳಿದರು.
60ರ ಸಂಭ್ರಮದಲ್ಲಿರುವ ಪೇಜಾವರ ಸ್ವಾಮೀಜಿಯವರನ್ನು ಬಾಲನಿಕೇತನ ಟ್ರಸ್ಟ್ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬಾಲನಿಕೇತನದಲ್ಲಿ 16 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಶಕುಂತಲಾ ಅವರಿಗೆ ಮನೆ ನಿರ್ಮಿಸಿಕೊಡುವ ಯೋಜನೆ ಪ್ರಕಟಿಸಲಾಯಿತು.
ಮಣಿಪಾಲ ಡಾಟ್ ನೆಟ್ ಸಿಇಒ ಡಾ. ನರಸಿಂಹ ಭಟ್ ಉಪಸ್ಥಿತರಿದ್ದರು. ಬಿ. ಕೆ.ನಾರಾಯಣ್ ಪ್ರಶಸ್ತಿ ಪುರಸ್ಕತರನ್ನು ಪರಿಚಯಿಸಿದರು. ಬಾಲನಿಕೇತನ ಆಡಳಿತ ಮಂಡಳಿ ಉಪಾಧ್ಯಕ್ಷ ಪ್ರೊ. ಕಮಲಾಕ್ಷ ಸ್ವಾಗತಿಸಿ, ಕಾರ್ಯದರ್ಶಿ ರಾಮಚಂದ್ರ ಉಪಾಧ್ಯ ಪ್ರಸ್ತಾವನೆಗೈದರು. ಗುರುರಾಜ್ ಭಟ್ ನಿರೂಪಿಸಿದರು. ಕೆ. ಸುಬ್ರಹ್ಮಣ್ಯ ಕಾರಂತ್ ವಂದಿಸಿದರು.