

ಮಡಿಕೇರಿ: ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ವಾರ್ಷಿಕೋತ್ಸವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಲೋಕೇಶ್‌ರವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.
ಕಾರ್ಯಕ್ರಮದ ಪ್ರಯುಕ್ತ ಇಂದಿರಾಗಾಂಧಿ ವೃತ್ತ, ಅಜ್ಜಮಾಡ ದೇವಯ್ಯ ವೃತ್ತ, ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಗಾಂಧಿ ಮೈದಾನದವರೆಗೆ ಸಾಂಕೇತಿಕ ಪಾದಯಾತ್ರೆ ನಡೆಸಿದರು.
ನಂತರ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಎಂ.ಲೋಕೇಶ್, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ೧೫೦ ದಿನಗಳ ಕಾಲ ನಡೆದ ಈ ಯಾತ್ರೆ ಕರ್ನಾಟಕದಲ್ಲಿ ಹಾದು ಹೋದ ಪರಿಣಾಮ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತ್ಯಧಿಕ ಬಹುಮತ ಪಡೆಯಲು ಸಾಧ್ಯವಾಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರ ಕಾಂಗ್ರೆಸ್ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ ಮಾತನಾಡಿ, ಭಾರತ್ ಜೋಡೋ ಯಾತ್ರೆಯ ಮೂಲಕ ದೇಶದಲ್ಲೆಡೆ ರಾಹುಲ್‌ಗಾಂಧಿಯವರು ಕಾಂಗ್ರೆಸ್ ಪಕ್ಷಕೆ ಹೊಸ ಚೈತನ್ಯ ನೀಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜೀವ್‌ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಮಾತನಾಡಿ, ಭಾರತವು ಭೌಗೋಳಿಕವಾಗಿ ಒಂದಾಗಿದ್ದರೂ ಸಾಮಾಜಿಕವಾಗಿ, ಮತೀಯವಾಗಿ, ಜನರ ಮನಸ್ಸುಗಳು ದೂರವಾಗಿದ್ದವು. ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಮೂಲಕ ಈ ಒಡೆದ ಮನಸ್ಸುಗಳನ್ನು ಒಂದು ಮಾಡಿ ಅದ್ವಿತೀಯ ಸಾಧನೆ ಮಾಡಿದರು ಎಂದು ಬಣ್ಣಿಸಿದರು.
ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಕೋಮುವಾದದ ಭಾರತ ದುರ್ಬಲ ಭಾರತವಾಗಿದ್ದು, ಜಾತ್ಯಾತೀತ ಭಾರತ ಬಲಿಷ್ಠ ಭಾರತವಾಗಿದೆ. ಈ ನಿಟ್ಟಿನಲ್ಲಿ ಭಾರತ್ ಜೋಡೋ ಯಾತ್ರೆಯ ಮೂಲಕ ರಾಹುಲ್ ಗಾಂಧಿ ಭಾರತವನ್ನು ಸುಭದ್ರಗೊಳಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೊಕ್ಕಲೆರ ಸುಜು ತಿಮ್ಮಯ್ಯ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ.ಹಂಸ, ಕೆಪಿಸಿಸಿ ಮುಖಂಡರಾದ ಕೆ.ಪಿ.ಚಂದ್ರಕಲಾ, ಟಿ.ಪಿ.ರಮೇಶ್, ಎಚ್.ಎಂ.ನಂದಕುಮಾರ್, ಮಂಜುನಾಥ್ ಗುಂಡೂ ರಾವ್, ಬೇಕಲ್ ರಮಾನಾಥ್ ಸೇರಿದಂತೆ ನೂರಾರು ಪ್ರಮುಖರು ಕಾರ್ಯಕರ್ತರು ಭಾಗವಹಿಸಿದ್ದರು.