

2023ರಲ್ಲಿ ಎಐಎಡಿಎಂಕೆ ಮತ್ತು ಬಿಜೆಪಿ ನಡುವಿನ ಮೈತ್ರಿ ಮುರಿದು ಬೀಳಲು ಅಣ್ಣಾಮಲೈ ಕಾರಣ ಎಂಬುದು ಎಐಎಡಿಎಂಕೆ ಪಕ್ಷದ ಅಸಮಾಧಾನಕ್ಕೆ ಪ್ರಮುಖ ಕಾರಣವಾಗಿದೆ. ಅಲ್ಲದೇ ಜಾತಿ ಸಮೀಕರಣಗಳ ಕಾರಣದಿಂದಲೂ ಅಣ್ಣಾಮಲೈ ಅವರ ರಾಜೀನಾಮೆಗೆ ಬಿಜೆಪಿ ಒತ್ತಾಯಿಸುವ ಸಾಧ್ಯತೆಗಳು ಹೆಚ್ಚಾಗಿವೆ.
Bjp | ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಅಣ್ಣಾಮಲೈ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹೇಳಲಾಗ್ತಾ ಇದೆ. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಐಎಡಿಎಂಕೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಕುರ್ಚಿಗೆ ಮುಳುವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಣ್ಣಾಮಲೈ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದು, ಈ ಸಂದರ್ಭದಲ್ಲಿ, ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಅವರನ್ನು ಕೆಳಗಿಳಿಸುವ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ತಮಿಳುನಾಡಿನಲ್ಲಿ ಪಕ್ಷದ ತಂತ್ರವನ್ನು ಅನುಸರಿಸುವಂತೆ ಅಮಿತ್ ಶಾ ಅವರು ಅಣ್ಣಾಮಲೈ ಅವರಿಗೆ ಸೂಚನೆ ನೀಡಿದ್ದು, ಇದರ ಅನುಸಾರವಾಗಿ ಅಣ್ಣಾಮಲೈ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟವನ್ನು ಕಳೆದುಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇನ್ನೂ ಇದೇ ವಿಚಾರವಾಗಿ ಅಣ್ಣಾಮಲೈ ಪ್ರತಿಕ್ರಿಯಿಸಿದ್ದು, ತಮಿಳುನಾಡಿನ ರಾಜಕೀಯ ಪರಿಸ್ಥಿತಿಯ ಬಗ್ಗೆ ಹೈಕಮಾಂಡ್‌ಗೆ ವರದಿಯನ್ನು ಸಲ್ಲಿಸಿದ್ದೇನೆ. ರಾಜ್ಯದ ಪರಿಸ್ಥಿತಿ ಮತ್ತು ಮುಂದಿನ ಕಾರ್ಯತಂತ್ರದ ಬಗ್ಗೆ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದಿದ್ದಾರೆ.
ಅಣ್ಣಾಮಲೈ ಅವರ ಬದಲಿಗೆ ಬಿಜೆಪಿ ಶಾಸಕ ನೈನಾರ್ ನಾಗೇಂದ್ರನ್ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಬಿಟ್ಟುಕೊಡುವ ಸಾಧ್ಯತೆ ಇದೆ. ಆದರೆ ಅಣ್ಣಾಮಲೈ ಅವರ ಸೇವೆಯನ್ನು ನೆನಪಿನಲ್ಲಿಟ್ಟುಕೊಂಡಿರುವ ಬಿಜೆಪಿ, ಅವರಿಗೆ ರಾಷ್ಟ್ರೀಯ ಜವಾಬ್ದಾರಿ ಅಥವಾ ಬೇರೆ ರಾಜ್ಯಗಳ ಉಸ್ತುವಾರಿ ಜವಾಬ್ದಾರಿಯನ್ನು ನೀಡುವ ಸಾಧ್ಯತೆ ಹೆಚ್ಚಾಗಿದೆ.