ಸುತ್ತೂರಿನ ದಿವ್ಯಾಕಾಶದ ಧ್ರುವತಾರೆ: ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜಯಂತಿ ಇಂದು

Suttur Shree
Published on

| ಕೆ.ಸಿ. ಶಿವಪ್ಪ

ಒಂದು ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿರುವ ಸುತ್ತೂರು ಶ್ರೀಮಠ ಜ್ಞಾನಾನ್ನದಾಸೋಹದ ಮೂಲಕ ಸಮಾಜಮುಖಿ ಕಾಳಜಿಯಿಂದ ಜನಜೀವನವನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಸಾರ್ಥಕತೆ ಮೆರೆದಿದೆ. ಕಪಿಲಾ ತೀರದ ಈ ಸುಕ್ಷೇತ್ರದ ಭವ್ಯಾಕಾಶದಲ್ಲಿ ಜಾಜ್ವಲ್ಯಮಾನವಾಗಿ ಬೆಳಗುವ ಧ್ರುವತಾರೆ ಎಂದರೆ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ. ಶ್ರೀಗಳವರು ಈ ಮಠದ ಸಂತಪರಂಪರೆಯ 23ನೇ ಪೀಠಾಧಿಪತಿಗಳು.

1916ರ ಆಗಸ್ಟ್ 29ರಂದು ಜನಿಸಿದ ರಾಜೇಂದ್ರರಿಗೆ 1928ರಲ್ಲಿ ಪೀಠಾರೋಹಣವಾದಾಗ ಅವರ ವಯಸ್ಸು ಕೇವಲ 12. ಅನಂತರ ಸಂಸ್ಕೃತ ಕಲಿಕೆಗಾಗಿ ಮೈಸೂರಿನಲ್ಲಿ ವಾಸ್ತವ್ಯ. ಆ ಹೊತ್ತಿಗೆ ಮೈಸೂರಿನ ಗವಿಮಠದ ಶ್ರೀ ಗೌರಿಶಂಕರ ಸ್ವಾಮೀಜಿ ಕಾಶಿಯಲ್ಲಿ ನೆಲೆಸಿದ್ದರು. ಇವರ ಪಾಂಡಿತ್ಯ ಆಗಲೇ ನಾಡಿನಲ್ಲಿ ಜನಜನಿತವಾಗಿತ್ತು. ತಾನೂ ಅವರಂತಾಗಬೇಕೆಂಬ ಉತ್ಕಟ ಹಂಬಲದಿಂದ ತರುಣ ರಾಜೇಂದ್ರರು ಯಾರಿಗೂ ಹೇಳದೆ ಕೇಳದೆ ರೈಲು ಹತ್ತಿ ಕಾಶಿಯತ್ತ ಪಯಣಿಸಿದರು. ಅಲ್ಲಿ ಗೌರಿಶಂಕರ ಸ್ವಾಮೀಜಿಯವರ ಹಿತವಚನ ಹೀಗಿತ್ತು; ‘ನೀವೇನೋ ಕಾಶಿಯಲ್ಲಿದ್ದುಕೊಂಡು ಘನವಿದ್ವಾಂಸರಾಗಬಹುದು. ಆದರೆ, ಸಾವಿರಾರು ಜನರಿಗೆ ನೆರವಾಗಬಲ್ಲ ಅಂತಶ್ಶಕ್ತಿ ಹಾಗೂ ಸಮಾಜವನ್ನು ಉತ್ತಮಪಡಿಸಬಲ್ಲ ಸಾಮರ್ಥ್ಯ ನಿಮ್ಮಲ್ಲಿದೆ. ಈ ದಿಕ್ಕಿನಲ್ಲಿ ನೀವು ಹೆಜ್ಜೆ ಇಡುವುದು ಒಳ್ಳೆಯದು’. ಅವರ ಈ ಮಾತಿಗೆ ಮಣಿದು ರಾಜೇಂದ್ರರು ಮೈಸೂರಿಗೆ ಹಿಂತಿರುಗಿದರು.

ಗೌರಿಶಂಕರ ಸ್ವಾಮೀಜಿಯವರ ಮಾನವೀಯ ಅಂತಃಕರಣದ ಆ ನಲ್ನುಡಿ ರಾಜೇಂದ್ರರಿಗೆ ದೀಕ್ಷಾಮಂತ್ರವಾಗಿ ಪರಿಣಮಿಸಿತು. ಸ್ಪಷ್ಟ ಕಾರ್ಯಾಚರಣೆಯತ್ತ ದಿಕ್ಸೂಚಿಯಾಯಿತು. ತದನಂತರ ಆದದ್ದೆಲ್ಲ ಚರಿತ್ರೆಯ ಮರೆಯಲಾಗದ ಅಧ್ಯಾಯ.

ವಿದ್ಯಾರ್ಥಿನಿಲಯಗಳ ಸ್ಥಾಪನೆ: ಮೈಸೂರು ಜಿಲ್ಲೆ (ಇಂದಿನ ಚಾಮರಾಜನಗರ ಜಿಲ್ಲೆಯೂ ಸೇರಿದಂತೆ) ಕಳೆದ ಶತಮಾನದ ಪ್ರಾರಂಭದ ದಶಕಗಳಲ್ಲಿ ಬಡವಿದ್ಯಾರ್ಥಿಗಳಿಗೆ ಅಷ್ಟೇನೂ ಆಶಾದಾಯಕ ತಾಣವಾಗಿರಲಿಲ್ಲ. ಪ್ರಾಥಮಿಕ ಶಿಕ್ಷಣವೂ ಕೈಗೆಟುಕದ ಗಗನಕುಸುಮವಾಗಿತ್ತು. ಉನ್ನತ ವಿದ್ಯಾಭ್ಯಾಸವಂತೂ ಮೋಹಕ ಕನಸೇ ಆಗಿತ್ತು. ಅಂಥ ಹೊತ್ತಿನಲ್ಲಿ ಶಾಲೆಗಳನ್ನು, ಉಚಿತ ವಿದ್ಯಾರ್ಥಿನಿಲಯ ತೆರೆಯುವ ಮೂಲಕ ಶ್ರೀಗಳು ಶಿಕ್ಷಣ ಕ್ರಾಂತಿಯ ಹರಿಕಾರರಾದರು.

1940ರ ದಶಕದಲ್ಲಿ 12 ವಿದ್ಯಾರ್ಥಿಗಳಿಗಾಗಿ ಬಾಡಿಗೆ ಮನೆಯೊಂದರಲ್ಲಿ ಶ್ರೀಗಳು ವಿದ್ಯಾರ್ಥಿನಿಲಯ ಪ್ರಾರಂಭಿಸಿದರು. ಅವರ ಶುಭೇಚ್ಛೆಯ ಫಲವಾಗಿ ಮೈಸೂರು ನಗರದಾಚೆಗಿನ ಯಳಂದೂರು, ಚಾಮರಾಜನಗರ, ತಿ.ನರಸೀಪುರ ಮೊದಲಾದ ಸ್ಥಳಗಳಲ್ಲಿ ವಿದ್ಯಾರ್ಥಿನಿಲಯಗಳು ತಲೆಎತ್ತಿದವು.

ಜ್ಞಾನತೃಷೆಯಿಂದ ಬಳಲಿದವರಿಗೆ ಪೂಜ್ಯರು ಅರಿವಿನರವಟ್ಟಿಗೆ ತೆರೆದರು. ಬಡತನದ ಬೇಗೆಧಗೆಯಿಂದ ತಪ್ತರಾದವರಿಗೆ ವಿಪುಲಾಶ್ರಮವನೀವ ಸುಮಭರಿತ ಪಾದಪದಂತೆ ತಂಪಿನ ನೆರಳನ್ನಿತ್ತರು. ಅವರು ಮುಂದಿಟ್ಟ ದಿಟ್ಟಹೆಜ್ಜೆ ನಿರ್ಗತಿಕ ವಿದ್ಯಾರ್ಥಿಗಳ ಪಾಲಿಗೆ ವರದಾನವಾಯಿತು. ಹೀಗೆ ಪೂಜ್ಯರು ಗ್ರಾಮೀಣ ಜನತೆಯನ್ನು ಅಕ್ಷರಸಂಸ್ಕೃತಿಯತ್ತ ಆಕರ್ಷಿಸಿದ ತಾಯಿಹೃದಯದ ಕರುಣಾಮಯಿ.

ಹೋರಾಟದ ಬದುಕು: ಪ್ರಾರಂಭದ ದಿನಗಳಲ್ಲಿ ಈ ಕಾರ್ಯ ಹೂವಿನ ಹಾದಿಯಾಗಿರಲಿಲ್ಲ. ಅದು ನಿರಂತರ ಹೋರಾಟದ ಬದುಕು. ಕೆಲಸದ ಒತ್ತಡದಲ್ಲಿ ಎಷ್ಟೋ ಸಲ ಶ್ರೀಗಳು ಪ್ರಸಾದವಿಲ್ಲದೆ ಮಲಗಿದ ದಿನಗಳು ಅಪರೂಪವೇನಾಗಿರಲಿಲ್ಲ. ತಮ್ಮ ಆರೋಗ್ಯವನ್ನೂ ಕಡೆಗಣಿಸಿ ವಿದ್ಯಾರ್ಥಿವೃಂದದ ಏಳಿಗೆಗಾಗಿ ಇಡೀ ಸಮಯವನ್ನು ಸ್ವಾಮೀಜಿ ಧಾರೆ ಎರೆದರು. ಆ ದಿನಗಳಲ್ಲಿ ದವಸ ಧಾನ್ಯಗಳ ಅಭಾವ ಕಾಡುತ್ತಿತ್ತು. ಶ್ರೀಗಳು ಹಳ್ಳಿಗಳಿಗೆ ಹೋಗಿ ಧಾನ್ಯ ಸಂಗ್ರಹ ಕಾರ್ಯದಲ್ಲಿ ತೊಡಗಿದರು. ಭಿಕ್ಷೆ ಬೇಡಿದರು. ತಮಗಾಗಿ ಅಲ್ಲ, ಪ್ರಸಾದ ನಿಲಯಗಳಲ್ಲಿ ಮಕ್ಕಳ ಉದರಪೋಷಣೆಗಾಗಿ. ಒಂದು ಹಂತದಲ್ಲಿ ಪೀಠಾರೋಹಣ ಸಂದರ್ಭದಲ್ಲಿ ತಮಗೆ ಉಡುಗೊರೆಯಾಗಿ ಬಂದಿದ್ದ ಚಿನ್ನದ ರುದ್ರಾಕ್ಷಿಯನ್ನೊಳಗೊಂಡ ಕರಡಿಗೆಯನ್ನೂ ಮಾರಿದರು. ಸಾಲಸೋಲಗಳಿಗೆ ಅಂಜದೆ ಧೈರ್ಯದಿಂದ ಹೋರಾಡಿದರು.

ಮೊದಮೊದಲಿಗೆ ಮಣ್ಣಿನ ಮಡಕೆ ಖರೀದಿಸಿ ವಿದ್ಯಾರ್ಥಿನಿಲಯ ಆರಂಭಿಸಿದ ಆ ಕತೆಯನ್ನು ನೆನೆದಾಗ ಅವರು ಕೈಗೊಂಡ ಅಂದಿನ ಆ ನೈಜ ಘಟನೆಗಳು ಮುಂದೊಂದು ದಿನ ಪವಾಡದಂತೆ ತೋರಿದರೆ ಅಚ್ಚರಿಯೇನಲ್ಲ. ಕಷ್ಟದ ಸನ್ನಿವೇಶಗಳಲ್ಲಿ ‘ನೀ ನಿನ್ನ ಅಂತರಂಗವನ್ನೇ ಅರಸು’ ಎಂಬುದು ಅವರ ಆತ್ಮೋದ್ಧಾರದ ಧ್ಯೇಯಸೂತ್ರವಾಗಿತ್ತು. ‘ನಹಿ ಜ್ಞಾನೇನ ಸದೃಶಂ’ ಉಕ್ತಿ ಪೂಜ್ಯರ ಸೇವಾದರ್ಶದಲ್ಲಿ ಹೀಗೆ ಅಭಿವ್ಯಕ್ತಿ ಪಡೆಯಿತು.

‘ಶ್ರೀಗಳವರು ಎಲ್ಲರಿಗೂ ಸಲ್ಲುವ ವಿದ್ಯೆ ಕಲಿಸಿದರು. ಕೂಡಬೇಕಾದ್ದನ್ನು ಕೂಡಲು, ಕಳೆಯಬೇಕಾದ್ದನ್ನು ಕಳೆಯಲು ಕಲಿಸಿದರು. ಒಬ್ಬರಿಗೊಬ್ಬರು ಹಂಚಿ ತಿನ್ನುವ ಭಾಗಾಕಾರವನ್ನೂ, ಗುಣಕ್ಕೆ ಗುಣಕೊಳ್ಳಿರೆಂದು ಗುಣಾಕಾರವನ್ನೂ ಹಾಕಿಕೊಟ್ಟರು. ಧರ್ಮ-ಅರ್ಥ- ಕಾಮವೆಂದು ತ್ರೈರಾಶಿಯನ್ನೂ, ಕೂಡಿ ಬದುಕಲು ಬೇಕಾದ ಗಣಿತವನ್ನೆಲ್ಲ ಅವರು ತಿಳಿಸಿಕೊಟ್ಟರು’ ಎನ್ನುತ್ತಾರೆ ಹಿರಿಯ ವಿದ್ವಾಂಸ ಡಾ. ಎಲ್.ಬಸವರಾಜು.

ಜೆಎಸ್​ಎಸ್ ಮಹಾವಿದ್ಯಾಪೀಠ: ಶೈಕ್ಷಣಿಕ-ಸಾಂಸ್ಕೃತಿಕ ಸಂಸ್ಥೆಗಳ ನಿರ್ವಹಣೆಗಾಗಿ ರಾಜೇಂದ್ರ ಶ್ರೀಗಳು 1954ರಲ್ಲಿ ಮೈಸೂರಿನಲ್ಲಿ ಜೆಎಸ್​ಎಸ್ ಮಹಾವಿದ್ಯಾಪೀಠವನ್ನು ಸಂಸ್ಥಾಪಿಸಿದರು. ಶಿಶುವಿಹಾರಗಳು, ಪ್ರಾಥಮಿಕ-ಪ್ರೌಢಶಾಲೆಗಳು, ಪದವಿ-ಸ್ನಾತಕೋತ್ತರ ಕಾಲೇಜುಗಳಲ್ಲದೆ ಇಂಜಿನಿಯರಿಂಗ್, ವೈದ್ಯಕೀಯ, ಔಷಧೀಯ, ದಂತವೈದ್ಯ, ಕಾನೂನು ಕಾಲೇಜುಗಳು ಹಾಗೂ ಮತ್ತಿತರ ಸಂಸ್ಥೆಗಳನ್ನು ಶ್ರೀಗಳವರು ಪ್ರಾರಂಭಿಸಿದರು. ತಮಿಳುನಾಡಿನ ಊಟಿಯಲ್ಲೂ ವಿದ್ಯಾಕೇಂದ್ರಗಳನ್ನು ಹುಟ್ಟುಹಾಕಿದರು. ಬಡವರ ಕಿಸೆಗೆ ಎಟುಕುವಂತಹ ಆಸ್ಪತ್ರೆಯನ್ನು ತೆರೆದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಶಿವರಾತ್ರೀಶ್ವರ ಧಾರ್ವಿುಕ ದತ್ತಿ, ಜೆಎಸ್​ಎಸ್ ಗ್ರಂಥಮಾಲೆ, ಜೆಎಸ್​ಎಸ್ ಸಂಗೀತ ಸಭಾ ಮುಂತಾದ ಸಂಸ್ಥೆಗಳನ್ನು ಪ್ರಾರಂಭಿಸಿದ ದ್ರಷ್ಟಾರರು ಇವರು. ಈ ತೆರನಾದ ಸೇವಾಕೈಂಕರ್ಯದಿಂದ ಜೆಎಸ್​ಎಸ್ ಇಂದು ಚಿರಪರಿಚಿತ ಹೆಸರಾಗಿದೆ. ಸಂಸ್ಥೆಯ ಉತ್ತರೋತ್ತರ ಪ್ರಗತಿಗೆ ಆಧಾರದ ಅಡಿಗಲ್ಲೆಂದರೆ ಅದರ ಮೇಲ್ವಿಚಾರದ ನಾಯಕತ್ವ. ಆಧ್ಯಾತ್ಮಿಕ ತತ್ವಾನುಸಂಧಾನದ ಜತೆಗೆ ಆಡಳಿತಾತ್ಮಕ ಕುಶಲತೆಯ ತರಬೇತಿ ಮುಂತಾದ ವಿವರವನ್ನು ತಮ್ಮ ಉತ್ತರಾಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟದ್ದು ರಾಜೇಂದ್ರ ಶ್ರೀಗಳವರ ಮುಂದಾಲೋಚನೆಗೆ ಸಾಕ್ಷಿ. ಇಂತಹ ಔದಾರ್ಯಪೂರ್ಣ ಮಾರ್ಗದರ್ಶನದ ಫಲವಾಗಿ ಸುತ್ತೂರು ಮಠದ ಇಂದಿನ ಪೀಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶ್ರೀಮಠದ ಕೀರ್ತಿಪತಾಕೆ ಹಾರಿಸಿದ್ದಾರೆ. ಸೇವಾಕಾರ್ಯ ಭೌಗೋಳಿಕ ಎಲ್ಲೆಕಟ್ಟುಗಳನ್ನು ಮೀರಿ ಹಿರಿದಾಗಿ ಬೆಳೆದಿದೆ. ಅಂದು ನೆಟ್ಟ ಸಸಿ ಇಂದು ಹೆಮ್ಮರ. ಇದು ಭುವನದ ಭಾಗ್ಯ.

ಮಮತಾ ಮೂರ್ತಿ: ಈ ಕುಲ ಆ ಕುಲ ಎನ್ನದೆ, ಜಾತಿಮತದ ಪರಿಧಿಯನ್ನು ಮೀರಿ ಶ್ರೀಗಳು ಎಲ್ಲರನ್ನೂ ತಮ್ಮ ಬಾಂಧವ್ಯದ ತೆಕ್ಕೆಯಲ್ಲಿ ಸೇರಿಸಿಕೊಂಡರು. ಅವರ ಕಣ್ಣಿಗೆ ಕಂಡದ್ದು ಕೇವಲ ಹಸಿದ ಹೊಟ್ಟೆಗಳು, ವಿದ್ಯೆಗೆ ತುಡಿದ ಮನಸ್ಸುಗಳು. ಇದರಿಂದಾಗಿ ಅವರು ನಿಂತ ನೆಲ ಪವಿತ್ರ ಕ್ಷೇತ್ರವಾಯಿತು. ಕಂಡ ಕನಸು ದಿವ್ಯಾನುಭವವಾಯಿತು. ಇಂಥ ಅಚಲ ದೃಢನಿರ್ಧಾರ ಮತ್ತು ಸಂಕಲ್ಪಶಕ್ತಿಯಿಂದಾಗಿ ಅವರು ಮುಟ್ಟಿದ್ದೆಲ್ಲ ಅಕ್ಷಯಪಾತ್ರೆಯಾಯಿತು. ಶ್ರೀಗಳವರು ತೊಡುತ್ತಿದ್ದ ಕಾವಿಯ ಮೇಲಂಗಿ ಹರಿದು ಹೋಗಿತ್ತು. ಇದನ್ನವರು ಹೊಲಿದುಕೊಳ್ಳುತ್ತಿದ್ದರು. ಈ ದೃಶ್ಯವನ್ನು ನೋಡಿದ ಶಿಷ್ಯರೊಬ್ಬರು ಅದನ್ನು ಹೊಲಿದುಕೊಡುವುದಾಗಿ ಮುಂದಾದರು. ಅದಕ್ಕೆ ಶ್ರೀಗಳವರು ಒಪ್ಪಿಗೆ ಕೊಡದಿದ್ದಾಗ ಹೊಸದೊಂದನ್ನಾದರೂ ಹೊಲಿಸಿಕೊಳ್ಳಬಹುದಲ್ಲವೇ ಎಂದರು. ಅದಕ್ಕೆ ಶ್ರೀಗಳು ಕೊಟ್ಟ ಉತ್ತರ, ‘ನಿಮ್ಮಂಥವರು ಮುಂದೆ ಹರಿದ ಅಂಗಿಯನ್ನು ತೊಡುವಂತಾಗದಿರಲಿ ಎಂದೇ ನಾನೀಗ ಈ ಹರಿದ ಬಟ್ಟೆ ಹಾಕಿಕೊಳ್ಳುತ್ತಿರುವುದು’. ಈ ಬಗೆಯ ಅನುಕಂಪಶೀಲರು ನಮ್ಮ ಸ್ವಾಮೀಜಿ.

ಮಾನವತಾ ದೃಷ್ಟಿ: ರಾಜೇಂದ್ರ ಶ್ರೀಗಳವರು ಎಂದೂ ಅಹಂಕಾರದ ಅಲಗಿಗೆ ಸಿಲುಕಲಿಲ್ಲ. ಅವರದ್ದು ಧ್ಯಾನ-ಮೌನದಲ್ಲಿ ಚೈತನ್ಯ ಹುಣ್ಣಿಮೆಯ ಮಂದಹಾಸದ ತಂಪೆಲರು. ದೈವಾರಾಧನೆಯ ಅಚಲ ನಿಷ್ಠೆಯಿಂದ ಅನುದಿನದ ಏಕಾಗ್ರತೆಯ ಲಿಂಗಾರ್ಚನೆಯಿಂದ ಅವರ ಮಾನವತಾದೃಷ್ಟಿ ಜನಮಾನಸದಲ್ಲಿ ಕರ್ಪರದಂತೆ ಸಂತಸ ಸುಗಂಧ ಬೀರಿತು. ವಿಹ್ವಲತೆಗೆ ಹೊರಗಾದ ಈ ಮಹಾಲಿಂಗಪ್ರೇಮಿಯ ಸುಸಂಸ್ಕೃತ ಮನಸ್ಸು ಭಕ್ತಿ ಸುಭಾಷೆಯ ನುಡಿಯ ನುಡಿದು ಮೃದುವಚನದ ಸಿರಿಕಣಜವಾಯಿತು.

ಧರ್ಮಧರ್ಮಗಳ ನಡುವಿನ ತಿಕ್ಕಾಟ-ಇಕ್ಕಟ್ಟುಗಳು ಸಮಾಜದ ಶ್ರೇಯೋಭಿವೃದ್ಧಿಗೆ ಕಂಟಕವೆಂಬುದನ್ನು ಅರಿತಿದ್ದ ಪೂಜ್ಯರು ಎಲ್ಲ ಧರ್ಮದವರೊಡನೆ ಸೌಹಾರ್ದಪೂರ್ಣ ಮಧುರ ಬಾಂಧವ್ಯ ಹೊಂದಿದ್ದರು. ಪರಸ್ಪರ ಗೌರವ ಸಾಮರಸ್ಯಗಳ ಸಂಪರ್ಕ ಸೇತುವಾಗಿದ್ದರು.

ಅಂಗಲಿಂಗ ಸಾಮರಸ್ಯದ ಶಿವಯೋಗಸಾಧನೆ ಪೂಜ್ಯರ ಗುಪ್ತಕಾಯಕವಾಗಿತ್ತು. ಮುಕ್ತಿಪಥದ ತೋರುಬೆರಳಾಗಿತ್ತು. ಈ ತೆರದ ಉತ್ಕಟ ಭಾವತೀವ್ರತೆ, ಭೋಗತ್ಯಾಗದ ತನ್ಮಯತೆ, ಮಮಕಾರನಿರಸನ, ನಿಸ್ಸಂಗತ್ವ, ಭಗವಂತನ ಸಹಾಯಹಸ್ತದಲ್ಲಿ ಅಚಲ ವಿಶ್ವಾಸ- ಈ ಸದ್ಗುಣಗಳು ಅವರನ್ನು ಕೈಹಿಡಿದು ನಡೆಸಿದವು. ಶಿವಪ್ರೇಮದ ಅಂಜನ ಹಚ್ಚಿಕೊಂಡು ಭಕ್ತಿಪಥದಲ್ಲಿ ಸಾಗಿದ ಈ ವಿರಾಗಿ ದಂತಕತೆಗೆ ವಸ್ತುವಾಗುವಂತಹ ಮನುಜಕುಲದಭ್ಯುದಯದ ಸಾಧನಾ ಶಿಖರವೇರಿದರು.

ಪೂಜ್ಯರ ವ್ಯಕ್ತಿತ್ವದ ಪ್ರಭಾವಳಿಯಲ್ಲಿ ಬಂದವರ ಸಂಖ್ಯೆ ಅಗಣಿತ. ಸಾಹಿತಿ- ಕಲಾವಿದರು, ತತ್ವಜ್ಞಾನಿಗಳು, ರಾಜಕೀಯ ಮುತ್ಸದ್ಧಿಗಳು, ಪ್ರಸಿದ್ಧರು-ಅಪ್ರಸಿದ್ಧರು ಮುಂತಾದವರೆಲ್ಲ ಈ ವಲಯದಲ್ಲಿ ಸೇರಿದ್ದಾರೆ. ಪೂಜ್ಯರ ಸಾಮಾಜಿಕ ಕಳಕಳಿ, ಮಾನವೀಯ ಪ್ರತಿಸ್ಪಂದನೆ, ವೈಯಕ್ತಿಕ ಆತ್ಮೀಯತೆ, ಬಂದವರೊಡನೆ ಕುಶಲೋಪರಿ ಸಂವಾದ- ಹೀಗೆ ಅವರ ಈ ಅತಿಶಯದ ಗುಣಾಧಿಕ್ಯ ಚುಂಬಕಶಕ್ತಿಯಂತೆ ಎಲ್ಲರನ್ನೂ ಆಕರ್ಷಿಸಿತು. ಒಂದರ್ಥದಲ್ಲಿ ಸಾಮಾಜಿಕ ಸಾಮರಸ್ಯದ ದಿಸೆಯಲ್ಲಿ ಇದೊಂದು ಅಪರೂಪದ ಪ್ರೀತಿಗಾಥೆ.

ಉದಾರಚರಿತರು: ಶ್ರೀಗಳವರದು ಸರಳತೆಯ ದ್ಯೋತಕನಾದ ಕಾವಿ ತೊಡುಗೆ. ತಲೆಯ ಮೇಲೆ ಅದೇ ಮುಸುಕು. ಕೊರಳಲ್ಲಿ ನಿರ್ಮಲ ರುದ್ರಾಕ್ಷಿ ಮಾಲೆ. ಹಣೆಯಲ್ಲಿ ವಿಭೂತಿ, ಕಾಲಿನಲ್ಲಿ ಮರದ ಹಾವುಗೆ. ಮಿನುಗುವ ತೇಜೋಮಯಕಾಂತಿ. ಮುಗ್ಧ ಮುಗುಳುನಗೆ. ಮೃದು ಮಧುರ ಮಾತುಕತೆ, ನಡೆನುಡಿಯಲ್ಲಿ ಏಕರೂಪತೆ, ಎಲ್ಲರಲ್ಲಿ ಆತ್ಮೀಯತೆ, ಹದತಪ್ಪದ ಸಮಚಿತ್ತತೆ, ಅಪರಿಮಿತ ತಾಳ್ಮೆ, ವಿನಯಶೀಲ ಪ್ರಸನ್ನತೆ, ಮಠವೊಂದರ ಜಗದ್ಗುರು ತಾವೆಂಬ ಸ್ವಲ್ಪವೂ ಬಿಂಕಬಿಗುಮಾನವಿರದ ನಿರಹಂಕಾರ ಮನೋಭಾವ. ಮರುಗದ ಗಿಡದಂತೆ ಕರುಣೆಯ ಪರಿಮಳ ಬೀರಿದ ಮಹಾಮಹಿಮರು.

ಸಾಮಾಜಿಕ ಉನ್ನತಿಯನ್ನೇ ತಮ್ಮ ಜೀವನಧ್ಯೇಯವೆಂದು ಮನಸಾರೆ ನಂಬಿದ್ದ ರಾಜೇಂದ್ರರ ಶ್ರೀಕಥನ ಮುಂದಿನ ಪೀಳಿಗೆಗೆ ಬೆಳಕಿಂಡಿ. 1985ರ ಡಿಸೆಂಬರ್ 6ರಂದು ಬಯಲಿನಲಿ ಬಯಲಾದರು. ಬೆರಗಿನ ನೀಲಾಂಬರದಲ್ಲಿ ಲೀನವಾದರು.

ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ಬದುಕು ಬಸವತತತ್ವದ ತಿರುಳು. ಈ ಸದಾಶಯದ ಸಂಕೇತವಾಗಿ ಸುತ್ತೂರಿನಲ್ಲಿರುವ ಅವರ ಸಮಾಧಿ ಕೃತಜ್ಞತೆಯ ಸಮರ್ಪಣಾಭಾವದ ತೀರ್ಥಕ್ಷೇತ್ರ.

ಯಾರ ನೆನದರೆ ಮನಸು ಹಿಮಗಿರಿಯಜಲದಂತೆ

ತಿಳಿಯಾಗಿ ಹಗುರಾಗಿ ಶಾಂತವಾಗುವುದೊ

ತಲೆಬಾಗು ಆ ಹಿರಿಯ ಚೇತನದ ಎದುರಲ್ಲಿ

ಭವ್ಯತೆಯೆ ಮೇರುಗುಣ ಮುದ್ದುರಾಮ

ಪೂಜ್ಯರು ಹಚ್ಚಿದ ಕಾರ್ತೀಕದೀಪ ಪ್ರಕಾಶಮಾನವಾಗಿ ಇಂದಿಗೂ ಬೆಳಗುತ್ತಿದೆ. ಜನಮನದ ಹೊಂಗಿರಣವಾದ ಜಗದ ಗುರುವಾದ ಈ ಶ್ರೀಗಳು ತೋರಿದ ದಾರಿ ಹಾಗೂ ಅವರು ನೀಡಿದ ಸ್ಪೂರ್ತಿ ಭರವಸೆಯ ದರ್ಪಣದ ವರ್ಣಬಿಂಬ. ಮತ್ತೆ ಇನ್ನೆಂದು ಮೂಡುವುದೊ ಇಂಥ ಕಾಮನಬಿಲ್ಲು!

(ಲೇಖಕರು ಕವಿ, ಸಂಸ್ಕೃತಿ ಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net