ಸಾಮುದಾಯಿಕ ಹೊಣೆಗಾರಿಕೆ ಅಗತ್ಯ

Janamata
Published on

ಮನುಕುಲಕ್ಕೆ ಸವಾಲೊಡ್ಡಿ ಇಡೀ ಜಗತ್ತನ್ನೇ ಅಲ್ಲೋಲ- ಕಲ್ಲೋಲಗೊಳಿಸಿರುವ ಕರೊನಾ ಮಹಾಮಾರಿ ಬಗ್ಗೆ ಜನ ಜಾಗೃತರಾಗ ಬೇಕಿದ್ದು, ನಿರ್ಲಕ್ಷ್ಯ ಮನೋಭಾವ ಬಿಡಬೇಕಿದೆ. ವಿಶ್ವದಾದ್ಯಂತ ಸಾವು-ನೋವು ಸೃಷ್ಟಿಸಿರುವ ಕರೊನಾ ತನ್ನ ಕಬಂಧ ಬಾಹುಗಳನ್ನು ಚಾಚುತ್ತಲೇ ಇದೆಯಾದರೂ ಜನ ಇನ್ನೂ ಎಚ್ಚರಗೊಂಡಿಲ್ಲ. ಮಾಸ್ಕ್ ಧರಿಸುವುದನ್ನು ರೂಢಿಸಿಕೊಂಡಿಲ್ಲ. ಸಾಮಾಜಿಕ ಅಂತರ ಎಂಬುದು ಮರೀಚಿಕೆಯಾಗಿದೆ. ಸತತ ಎರಡು ತಿಂಗಳಿಂದ ಜಾರಿಯಲ್ಲಿದ್ದ ಲಾಕ್​ಡೌನ್ ಬಡಜನರ ಬದುಕನ್ನು ಬರ್ಬರಗೊಳಿಸಿದ್ದು, ಜನ ಮುಂದೇನು ಎಂಬ ಬಗ್ಗೆ ಚಿಂತಿತರಾಗುವಂತೆ ಮಾಡಿದೆ. ಸಾಕಷ್ಟು ಮುಂಜಾಗ್ರತೆ ನಡುವೆಯೂ ದೇಶದಲ್ಲಿ ಕರೊನಾ ಸೋಂಕು ಅಂಕೆ ಮೀರಿ ಹೆಚ್ಚಳಗೊಂಡಿದ್ದು, ಜನ ಇನ್ನಾದರೂ ಜಾಗೃತರಾಗಬೇಕಿದೆ. ಸೋಮವಾರದಿಂದ ಧಾರ್ವಿುಕ ಕೇಂದ್ರಗಳು ಆರಂಭಗೊಂಡಿದ್ದು, ಭಕ್ತಿಯ ಉನ್ಮಾದಕ್ಕೆ ಒಳಗಾಗದೆ ಜನ ಶಾಂತರೀತಿಯಲ್ಲಿ ವರ್ತಿಸಬೇಕಿದೆ. ನಮಗಾಗಿ ಹಗಲು ಇರುಳು ಎನ್ನದೆ ಸಾಕಷ್ಟು ಕರೊನಾ ವಾರಿಯರ್​ಗಳು ದುಡಿದಿದ್ದು, ಇಂಥ ನಿರ್ಣಾಯಕ ಘಟ್ಟದಲ್ಲಿ ನಾವು ಎಚ್ಚರ ತಪ್ಪಿದರೆ ಅವರ ಶ್ರಮವೂ ವ್ಯರ್ಥವಾಗುತ್ತದೆ. ಅಲ್ಲದೆ ಸರ್ಕಾರ ಕಾಲಕಾಲಕ್ಕೆ ನೀಡುವ ಸಲಹೆ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಿದರೆ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಸಾಮುದಾಯಿಕ ಹೊಣೆಗಾರಿಕೆಯಿಂದ ಮಾತ್ರ ಕರೊನಾ ನಿಯಂತ್ರಣ ಸಾಧ್ಯ ಎಂಬುದನ್ನು ಅರ್ಥ ಮಾಡಿಕೊಂಡು ಮುನ್ನಡೆಯಬೇಕಿದೆ.

| ಶಿವರಾಜ್ ಎಂ. ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net