

ವೈದ್ಯಕೀಯ ಕ್ಷೇತ್ರದಲ್ಲೂ ಸಾಕ್ಷ್ಯಗಳಿಗೆ ಅತ್ಯುನ್ನತ ಮನ್ನಣೆಯಿದೆ. ‘ಸಾಕ್ಷಿ ಆಧಾರಿತ’ ಎಂಬ ಪದಪುಂಜವನ್ನು ಮೊದಲಬಾರಿಗೆ ಬಳಸಿದ್ದು 1990ರಲ್ಲಿ ಅಮೇರಿಕದ ಡಾ. ಡೇವಿಡ್ ಎಮ್ ಎಡ್ಡಿ ಎಂಬುದಾಗಿ ವೈದ್ಯಕೀಯ ಇತಿಹಾಸ ಹೇಳುತ್ತದೆ. ತದನಂತರ, 1992ರಲ್ಲಿ ಸಾಕ್ಷಿ ಆಧಾರಿತ ಔಷಧಿ ಎಂಬುದನ್ನು ಪ್ರಥಮಬಾರಿಗೆ ವೈದ್ಯಕೀಯ ಸಾಹಿತ್ಯದಲ್ಲಿ ಬಳಸಿದ ಗೌರವವನ್ನು ಡಾ. ಗಾರ್ಡೆನ್ ಗಯಟ್ ಹಾಗೂ ತಂಡ ಪಡೆದಿದೆ. 1996ರಲ್ಲಿ ಕೆನಡಾದ ಡಾ. ಡೇವಿಡ್ ಲಾರೆನ್ಸ್ ಸಾಕೆಟ್ ಎಂಬ ವೈದ್ಯನ ನೇತೃತ್ವದ ಬಳಗ ಈ ಕುರಿತು ಇತಿಹಾಸದ ಮೈಲಿಗಲ್ಲು ಎನಿಸಿದ ಲೇಖನವನ್ನು ಪ್ರಕಟಿಸಿತು. ಡಾ. ಡೇವಿಡ್ ಸಾಕೆಟ್ನನ್ನು ಸಾಕ್ಷಿ ಆಧಾರಿತ ಔಷಧಿಗಳ ಪಿತಾಮಹ ಎಂದು ಕೊಂಡಾಡಲಾಗುತ್ತಿದೆ. 1940ರ ಸಮಯದಲ್ಲಿ ಯುನೈಟೆಡ್ ಕಿಂಗ್ಡಮ್ಲ್ಲಿ ಆಧುನಿಕ ಜಗತ್ತಿನ ಮೊದಲ ಚಿಕಿತ್ಸಾ ಪ್ರಯೋಗ ನಡೆಯಿತೆಂದು ಇತಿಹಾಸ ಹೇಳುತ್ತದೆ. ಇದಕ್ಕೂ ಮೊದಲು ಕ್ರಿಸ್ತಶಕ 1747ರಲ್ಲಿ ಡಾ. ಜೇಮ್್ಸ ಲಿಂಡ್ ಎಂಬ ನೌಕಾಪಡೆಯ ಶಸ್ತ್ರಚಿಕಿತ್ಸಕ, 1836ರಲ್ಲಿ ಡಾ. ಪೀರ್ ಚಾರ್ಲ್ಸ್ ಅಲೆಕ್ಸಾಂಡರ್ ಲೂಯಿಸ್ ಎಂಬ ಫ್ರೆಂಚ್ ವೈದ್ಯ, 1846ರಲ್ಲಿ ವೀಯೆನ್ನಾದಲ್ಲಿ ಡಾ. ಇಗ್ನಸ್ ಸಮೆಲ್ವಿಸ್ ಎನ್ನುವ ಪ್ರಸೂತಿ ತಜ್ಞ- ಈ ಮೂವರೂ ಸಣ್ಣಪ್ರಮಾಣದಲ್ಲಿ ಚಿಕಿತ್ಸಾ ಪ್ರಯೋಗ ನಡೆಸಿದ್ದು, ಮುಂದೆ ಅದು ಮೂರ್ತರೂಪ ಪಡೆಯಿತೆಂದೂ ವಿಶ್ಲೇಷಿಸಲಾಗಿದೆ. ಹಾಗಿದ್ದರೆ ಅದಕ್ಕೂ ಮೊದಲು ಜಗತ್ತಿನಲ್ಲಿ ಇದ್ದುದೆಲ್ಲಾ ದಾಖಲೆ ಇಲ್ಲದ, ಆಧಾರ ರಹಿತ ಚಿಕಿತ್ಸೆಯೇ ಎಂಬ ಪ್ರಶ್ನೆ ಸಹಜ. ವಿಶ್ವದ ಆದಿಯಿಂದಲೂ ಮಾನವನೊಂದಿಗೆ ಇರುವ ಆಯುರ್ವೆದ ಚಿಕಿತ್ಸೆಗೂ ಸಾಕ್ಷ್ಯಾಧಾರಗಳೇ ಇಲ್ಲವೇ ಎಂಬ ಗೊಂದಲ ಎದುರಾಗುತ್ತದೆ. ಇದಕ್ಕೆ ಒಗ್ಗರಣೆ ಹಾಕಿದಂತೆ ಕೆಲವರು ಆಯುರ್ವೆದ ಸಾಕ್ಷಿ ಆಧಾರಿತ ಔಷಧ ಪದ್ಧತಿಯಲ್ಲ ಎಂದೂ ಮತ್ತೆ ಕೆಲವರು ಆಯುರ್ವೆದ ಎಂದರೆ ಅವೈಜ್ಞಾನಿಕ ವಿಷಯಗಳ ಸಂಕಲನ ಎಂದೂ ಉಪೇಕ್ಷಿಸುತ್ತಾರೆ.
ಇಲ್ಲಿ ಹಲವಾರು ವೈಚಾರಿಕ ಪ್ರಶ್ನೆಗಳು ಏಳುತ್ತವೆ. ನೀರು ಮೊದಲಿನಿಂದಲೂ ಇತ್ತು. ನೀರು ಕುಡಿದರೆ ಬಾಯಾರಿಕೆ ಕಡಿಮೆಯಾಗುತ್ತದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರ. ಇದನ್ನು ಸಾಕ್ಷೀಕರಿಸುವ ಅವಶ್ಯಕತೆ ಇದೆಯೇ? ಹೊಸತೊಂದು ಕೋಲಾವೋ, ಪಾನೀಯವೋ ಬಂದಾಗ ಅದರಿಂದ ಬಾಯಾರಿಕೆ ಕಡಿಮೆ ಆಗುತ್ತದೆ ಎನ್ನಲು ಸಾಕ್ಷ್ಯಾಧಾರಗಳು ಬೇಕೆನ್ನುವುದರಲ್ಲಿ ಅರ್ಥವಿದೆ. ದೋಸೆ ತಿಂದರೆ ಹಸಿವು ನೀಗುತ್ತದೆ ಎಂಬುದು ಪರಂಪರೆಯಿಂದ ತಿಳಿದಿದೆ. ಉದರ ಸರಿಯಿಲ್ಲದವರು ಉದ್ದಿನ ದೋಸೆ ತಿಂದರೆ ಹೊಟ್ಟೆ ಉಬ್ಬರಿಸುತ್ತದೆ ಎನ್ನುವುದೂ ಗೊತ್ತಿದೆ. ಇದಕ್ಕೆ ಪುರಾವೆ ಅಗತ್ಯವಿದೆಯೇ? ವಿದೇಶದಿಂದ ಪಿಜ್ಜಾ ಬಂದು ದೇಶೀತಟ್ಟೆಯಲ್ಲಿ ಕುಳಿತುಕೊಳ್ಳುತ್ತದೆ. ಅದನ್ನು ತಿಂದರೆ ಏನೇನಾಗುತ್ತದೆ ಎನ್ನಲು ಸಾಕ್ಷಿ ಆಧಾರವನ್ನು ನೀಡಬೇಕೆಂದರೆ ಸರಿ, ಏಕೆಂದರೆ ಅದು ಇಂದಿನದು. ಹಾಲು ಮಜ್ಜಿಗೆ ಗುಣಗಳನ್ನು ತಿಳಿದು ಸಾವಿರಾರು ವರ್ಷಗಳಿಂದ ಬಳಸುತ್ತಿರುವಾಗ ಆ ಗುಣಲಕ್ಷಣಗಳು ಇದೆಯೆಂದು ಹೇಳಲು ಸಾಕ್ಷ್ಯಾಧಾರಗಳು ಮತ್ತೆ ಬೇಕೇ? ತುಪ್ಪವೆಂದರೆ ಏನೆಂದೇ ಗೊತ್ತಿಲ್ಲದ ದೇಶಗಳಿಗೆ ಆಯುರ್ವೆದ ಹೇಳಿದ ತುಪ್ಪದ ಗುಣಗಳ ಸಮರ್ಥನೆಗೆ ಸಂಶೋಧನೆಯ ಸಾಕ್ಷ್ಯಾಧಾರ ಅಗತ್ಯವಿದೆಯೇ!? ಆಯುರ್ವೆದದಲ್ಲಿ ಸಾವಿರಾರು ವರ್ಷಗಳ ಹಿಂದೆ ಹೇಳಿದ ನೂರಾರು ಔಷಧೀಯ ಸಸ್ಯಗಳ ಲಕ್ಷಾಧಿಕ ಕ್ರಿಯಾಗುಣಗಳನ್ನು ಮತ್ತೆ ಪುರಾವೆ ನೀಡಿ ರುಜುವಾತು ಪಡಿಸುವುದು ಅನಿವಾರ್ಯವೇ? ಸಹಸ್ರಾರು ವರ್ಷಗಳಿಂದ ಕೋಟ್ಯಂತರ ಭಾರತೀಯರು ಉಪಯೋಗಿಸಿ ಆರೊಗ್ಯ ಹಾಗೂ ಸ್ವಾಸ್ಥ್ಯ ಪಡೆದುಕೊಂಡಿರುವ ಔಷಧಿಗಳನ್ನು ಮತ್ತೆ ಪರೀಕ್ಷಿಸಿ ಪ್ರಮಾಣೀಕರಿಸಬೇಕಾದ ತುರ್ತು ಆಯುರ್ವೆದಕ್ಕಿದೆಯೇ? ಹೀಗಿರುವ ಪ್ರಶ್ನೆಗಳು ಹಲವಾರು. ಆಯುರ್ವೆದ ಸಾಕ್ಷಿ ಆಧಾರಿತ ಔಷಧಿ ಹಾಗೂ ಚಿಕಿತ್ಸೆ ಎಂಬುದಕ್ಕೆ ಉತ್ತರಗಳಿವೆ ನೂರಾರು!