

ಸಮಂಜಸ ನಿರ್ಧಾರ
ಪ್ರಧಾನಿ ನರೇಂದ್ರ ಮೋದಿ ದೇಶದ ಸ್ಥಿತಿಗೆ ಅನುಗುಣವಾಗಿ ಈಗ ಅನುಷ್ಠಾನದಲ್ಲಿ ಇರುವ ಲಾಕ್ಡೌನ್ ವಿಸ್ತರಿಸಿರುವುದು ಜನರಿಗೆ ಕಷ್ಟವಾದರೂ ಸಹ ಸಮಂಜಸವಾಗಿದೆ. ಜನರು ಅದನ್ನು ಅರಿತು ನಡೆದರೆ ಎಲ್ಲರಿಗೂ ಒಳ್ಳೆಯದು. ‘ಜೀವ ಇದ್ದರೆ ತಾನೇ ಜೀವನ’ ಎಂಬುದನ್ನು ನೆನಪಿಸಿಕೊಳ್ಳುತ್ತ ಈಗ ಅಲ್ಪಕಾಲಕ್ಕೆ ತೊಂದರೆಯಾದರೂ ಸಹಿಸಿಕೊಂಡು ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ, ಈ ಮಹಾಮಾರಿಯನ್ನು ಬಗ್ಗು ಬಡಿದು ನಿರಾಳವಾಗಬಹುದು. ಅಷ್ಟರಲ್ಲಿ, ರಾಜ್ಯ ಸರ್ಕಾರವು ಅವಸರಪಟ್ಟು ಬಾರ್, ಬೇಕರಿ ಇತ್ಯಾದಿಗಳನ್ನು ತೆರೆಯುವುದು ಬೇಡ. ಕುಡುಕರಿಗೆ ಕೂಡ ಆ ಕೆಟ್ಟಚಟದಿಂದ ಹೊರಬರಲು ಇದೊಂದು ಸದವಕಾಶ ಎಂಬುದನ್ನು ಅರಿಯಲಿ.
| ವಿ.ವಿಜಯೇಂದ್ರ ರಾವ್ ಬೆಂಗಳೂರು
ನೆಮ್ಮದಿ ನಮಗಷ್ಟೇ ಸಾಕೆ?
ಕಣ್ಣಗೆ ಕಾಣದ ಕರೊನಾ ಕುಣಿಯುತ್ತಲಿದೆ, ಕಾಲಿಗೆ ಸಿಕ್ಕವರ ತುಳಿಯುತ್ತಲಿದೆ. ಜಾತಿ, ಧರ್ಮವ ನೋಡದೆ, ಬಡವ ಬಲ್ಲಿದ ಎನ್ನದೆ ಕೈಗೆ ಸಿಕ್ಕವರನ್ನೆಲ್ಲ ಕೊಲ್ಲುತ್ತ, ಕೇಕೆ ಹಾಕಿ ನಗುತ್ತಲಿದೆ. ಅಮೆರಿಕದ ಅಟ್ಟಹಾಸವನ್ನು ಮಟ್ಟಹಾಕಿ, ಚೀನಿಯರ ಪರಾಕ್ರಮವ ಮೆಟ್ಟನಿಂತು, ಯುರೋಪ್, ಅರಬ್, ಭಾರತ ಎನ್ನದೇ ಎಲ್ಲರ ಎದೆಯನ್ನು ನಡುಗಿಸುತ್ತ ಸಾವಿನ ಮನೆಗೆ ಕರೆದೊಯ್ಯುತ್ತಿದೆ. ಪಾಶ್ಚಿಮಾತ್ಯರ ಜೀವನಶೈಲಿಯನ್ನು ರೂಢಿಸಿಕೊಳ್ಳುತ್ತಿದ್ದ ನಮ್ಮ ಹಲವಾರು ಭಾರತೀಯರಿಗೂ ಕೆಲವು ಪಾಠ ಕಲಿಸುತ್ತಿದೆ. ಮುದುಕರು, ಮಕ್ಕಳು, ಗಂಡಸರು, ಹುಡುಗರು ಎಲ್ಲರನ್ನೂ ನಾಲ್ಕುಗೋಡೆ ಮಧ್ಯೆ ಬಂಧಿಯಾಗಿಸಿದೆ. ಸ್ವಚ್ಛಂದ, ಸ್ವಾತಂತ್ರ್ಯ ಎಂದರೆ ಏನು ಎಂಬುದನ್ನು ತಿಳಿಸುತ್ತಿದೆ. ಆದರೂ ನಾವು ನಮ್ಮ ಮನರಂಜನೆಗೆ ಕೆಲವು ಪ್ರಾಣಿಪಕ್ಷಿಗಳನ್ನು ಮನೆಯಲ್ಲಿ ಪಂಜರದೊಳಿಟ್ಟು ಅದರ ಸ್ವಾತಂತ್ರ್ಯ ಕಸಿದುಕೊಂಡು ಅದರ ಜೀವನವನ್ನು ನರಕವಾಗಿಸಿದ್ದೇವೆ. ಈ ದಿಗ್ಬಂಧನ ನಮಗೆ ಸ್ವಾತಂತ್ರ್ಯ ಎಂದರೆ ಏನು ಎಂಬುದನ್ನು ತೋರಿಸಿಕೊಟ್ಟಿದೆ. ಕರೊನಾದಿಂದ ನಮಗೆ ಪಂಜರದ ಕಷ್ಟದ ಬದುಕು ಎಂದರೆ ಏನು ಎಂಬುದು ತಿಳಿದಿದೆ. ಕೆಲ ವಾರಗಳ ದಿಗ್ಬಂಧನಕ್ಕೆ ನಾವು ಇಷ್ಟೊಂದು ಕಷ್ಟಪಡುವಾಗ ಪಾಪ ಆ ಪಕ್ಷಿಗಳು ತಾವು ಮಾಡದ ತಪ್ಪಿಗೆ ಏಕೆ ಬಂಧಿಯಾಗಬೇಕು ಅಲ್ಲವೇ? ಇನ್ನಾದರೂ ನಾವು ಪಕ್ಷಿಗಳನ್ನು ಪಂಜರದಲ್ಲಿ ಇಡುವ ಬದಲು ಅವುಗಳಿಗೆ ಸ್ವತಂತ್ರವಾಗಿ ಹಾರಲು ಬಿಡೋಣ. ಮಾನವರಾಗೋಣ.
| ಮಂಜುನಾಥ ಉಮೇಶ ನಾಯ್ಕ ಮುರ್ಡೆಶ್ವರ