ಸನಾತನ ಧರ್ಮದಲ್ಲಿನ ಅಧ್ಯಾತ್ಮದಲ್ಲಿ ಪ್ರಾಯೋಗಿಕ ವಿಜ್ಞಾನ

Column F
Published on
ಸಕಲ ಜೀವಿಗಳ ಸೃಷ್ಟಿ-ಸ್ಥಿತಿ-ಲಯಗಳಿಗೆ ‘ಆನಂದ’ವೇ ಮೂಲ. ಪ್ರತಿ ಜೀವಿಯೂ ಆನಂದಪಿಪಾಸುವೇ. ದುಃಖದಿಂದ ತಪ್ಪಿಸಿಕೊಂಡು ಸದಾಕಾಲ ಅನಂತ ಆನಂದವನ್ನು ಅನುಭವಿಸಬೇಕೆಂಬುದೇ ಎಲ್ಲ ಜೀವಿಗಳಿಗೆ ಪ್ರೇರಕಶಕ್ತಿ. ಆದ್ದರಿಂದ ‘ಆನಂದವೇ ಬ್ರಹ್ಮ’ ಎಂಬುದು ಶಾಶ್ವತ ಸತ್ಯ.

‘ವಿಜ್ಞಾನ’ ಎಂದೊಡನೆ ನಾವು ಸಾಮಾನ್ಯವಾಗಿ ಪ್ರಯೋಗ ಹಾಗೂ ಸಾಕ್ಷ್ಯಾಧಾರಿತ ಸತ್ಯಗಳ ಬಗ್ಗೆ ಯೋಚಿಸುತ್ತೇವೆ; ಹಾಗೆಯೇ ‘ಅಧ್ಯಾತ್ಮ’ ಎಂದೊಡನೆ ನಂಬಿಕೆ ಹಾಗೂ ವೈಯಕ್ತಿಕ ಅನುಭವಗಳ ಕುರಿತಾಗಿ ಯೋಚಿಸುತ್ತೇವೆ. ಆದರೆ ಸನಾತನ ಧರ್ಮದಲ್ಲಿ ಅಧ್ಯಾತ್ಮವು, ಅನೇಕ ಮತ-ಧರ್ಮಗಳಲ್ಲಿ ನಂಬಿರುವಂತೆ ಯಾವುದೇ ಒಬ್ಬ ವ್ಯಕ್ತಿಯ ಅನುಭವದ ಮೇಲೆ ಆಧಾರಿತವಾಗಿಲ್ಲ; ಬದಲಿಗೆ ಇಲ್ಲಿ ಅಧ್ಯಾತ್ಮವು ವೈಜ್ಞಾನಿಕವಾಗಿದ್ದು, ಅನೇಕ ವ್ಯಕ್ತಿಗಳ ವಿಶ್ಲೇಷಣಾತ್ಮಕ ಅನ್ವೇಷಣೆ ಹಾಗೂ ಪ್ರಯೋಗಾತ್ಮಕ ಸಂಶೋಧನೆಗಳಿಂದ ಕಂಡುಕೊಂಡ ಸತ್ಯವಾಗಿದೆ. ಈ ಸತ್ಯವು ಕಾಲಾತೀತವಾಗಿದ್ದು ಇಂದು ಕೂಡ ಯಾವುದೇ ಸ್ಥಳದಲ್ಲಿ, ಯಾವುದೇ ವ್ಯಕ್ತಿ ಅದೇ ರೀತಿಯ ವಿಶ್ಲೇಷಣೆ ಹಾಗೂ ಸಂಶೋಧನೆಗಳನ್ನು ಮಾಡಿ ಅದೇ ಸತ್ಯವನ್ನು ತನ್ನ ಸ್ವಂತ ಅನುಭವದ ಮೂಲಕ ಕಂಡುಕೊಳ್ಳಬಹುದಾಗಿದೆ. ಹೀಗೆ ಸನಾತನ ಧರ್ಮದಲ್ಲಿ ಅಧ್ಯಾತ್ಮವೆಂದರೆ ಒಂದು ವಿಜ್ಞಾನವೇ ಆಗಿದೆ. ವಿಜ್ಞಾನದಲ್ಲಿ ಸತ್ಯದ ಸಂಶೋಧನೆ ಮೊದಲು ತರ್ಕಾಧಾರಿತ ಊಹಾಕಲ್ಪನೆ (Hypothesis) ಯೊಂದಿಗೆ ಪ್ರಾರಂಭಗೊಳ್ಳುತ್ತದೆ. ನಂತರ ಇಂತಹ ಕಲ್ಪನೆ ಸತ್ಯವೋ ಅಥವಾ ಅಸತ್ಯವೋ ಎಂಬುದನ್ನು ಅರಿಯಲು ಪ್ರಯೋಗಗಳನ್ನು ಮಾಡಲಾಗುತ್ತದೆ. ಪ್ರಯೋಗಗಳ ಪರೀಕ್ಷೆಯಲ್ಲಿ ಗೆದ್ದರೆ ಮಾತ್ರ ಅದು ಸತ್ಯವೆಂದು ಪರಿಗಣಿಸಲ್ಪಡುತ್ತದೆ. ಅಲ್ಲದೆ, ಹಾಗೆ ಕಂಡುಕೊಂಡ ಸತ್ಯ ಭವಿಷ್ಯದಲ್ಲಿ ಯಾವುದೇ ಪರೀಕ್ಷೆಗಳನ್ನು ಎದುರಿಸಲು ಸಿದ್ಧವಾಗಿ ಇರಬೇಕಾಗುತ್ತದೆ. ಇವು ವೈಜ್ಞಾನಿಕ ಸಂಶೋಧನೆಯ ಸಾಮಾನ್ಯ ಮೂಲಸಿದ್ಧಾಂತಗಳಾಗಿದ್ದು, ಇವುಗಳನ್ನು ಯಾವುದೇ ಸಂದರ್ಭದಲ್ಲಿ ಯಾರು ಬೇಕಾದರೂ ಪುನಃ ಪ್ರಶ್ನಿಸಬಹುದು ಹಾಗೂ ಪ್ರಯೋಗಗಳಿಗೆ ಗುರಿಮಾಡಬಹುದು. ಈ ದೃಷ್ಟಿಯಿಂದ ಪ್ರಾಯೋಗಿಕ ವಿಜ್ಞಾನ ಹಾಗೂ ಸಂಶೋಧನೆಯ ಸೋಪಾನಗಳನ್ನು ಈ ಕೆಳಕಂಡಂತೆ ವಿಂಗಡಿಸಬಹುದು:

1. ಪ್ರಶ್ನೆಯ ನಿರೂಪಣೆ

2. ಅವಲೋಕನದ ಆಧಾರದಲ್ಲಿ ಮೇಲಿನ ಪ್ರಶ್ನೆಯ ಕುರಿತಾಗಿ ಮಾಹಿತಿ ಹಾಗೂ ಮೂಲಾಧಾರಗಳನ್ನು ಸಂಗ್ರಹಿಸುವುದು.

3. ಸಂಗ್ರಹಿಸಲ್ಪಟ್ಟ ಮಾಹಿತಿಯ ಆಧಾರದಲ್ಲಿ ಪ್ರಶ್ನೆಗೆ ಉತ್ತರವಾಗಿ ಒಂದು ವಿಶ್ಲೇಷಣಾತ್ಮಕ ಊಹಾಕಲ್ಪನೆ (Hypothesis)ಯನ್ನು ರೂಪಿಸುವುದು.

4. ಪ್ರಯೋಗಗಳ ಮೂಲಕ ಮೇಲಿನ ಊಹಾಕಲ್ಪನೆಯನ್ನು ಪರೀಕ್ಷಿಸಿ, ಅವುಗಳಿಂದ ಹೊರಬಂದ ದತ್ತಾಂಶ (Data)ಗಳನ್ನು ಸಂಗ್ರಹಿಸುವುದು.

5. ಮೇಲಿನ ದತ್ತಾಂಶಗಳ ಕೂಲಂಕುಷ ವಿಶ್ಲೇಷಣೆ.

6. ಮೇಲಿನ ದತ್ತಾಂಶಗಳನ್ನು ವ್ಯಾಖ್ಯಾನಿಸಿ, ಅದರ ಆಧಾರದಲ್ಲಿ ನಿರ್ದಿಷ್ಟ ಫಲಿತಾಂಶ (Results)ಗಳನ್ನು ನಿರ್ಣಯಿಸುವುದು.

7. ಕಂಡುಕೊಂಡ ಫಲಿತಾಂಶಗಳ ಪ್ರಕಟಣೆ.

8. ಈ ಫಲಿತಾಂಶಗಳನ್ನು ಅನ್ಯ ವ್ಯಕ್ತಿಗಳು ಅನ್ಯ ಸಂದರ್ಭಗಳಲ್ಲಿ ಪುನಃ ಪುನಃ ಪರೀಕ್ಷಿಸಬಹುದಾಗಿದೆ.

ಈ ಮೇಲಿನ ವೈಜ್ಞಾನಿಕ ಸಂಶೋಧನಾ ವಿಧಾನಕ್ಕೂ ಸನಾತನ ಧರ್ಮಕ್ಕೂ ಯಾವ ಸಂಬಂಧವಿದೆಯೆಂದು ನೀವು ಆಶ್ಚರ್ಯ ಪಡುತ್ತಿರಬಹುದಲ್ಲವೇ? ಸಾಮಾನ್ಯವಾಗಿ ಧರ್ಮ ಅಥವಾ ಅಧ್ಯಾತ್ಮವೆಂದರೆ ನಮ್ಮ ಆಧುನಿಕ ಕಾಲದಲ್ಲಿ ಅದು ಅವೈಜ್ಞಾನಿಕ ಮೂಢನಂಬಿಕೆಯೆಂದು ತಿರಸ್ಕರಿಸುವುದನ್ನೇ ನಾವು ಕಾಣಬಹುದು. ಆದರೆ ಸನಾತನ ಧರ್ಮದಲ್ಲಿ ಅಧ್ಯಾತ್ಮವೆಂದರೆ ಈ ಮೇಲಿನ ರೀತಿಯ ವಿಶ್ಲೇಷಣಾತ್ಮಕ ಹಾಗೂ ಪ್ರಯೋಗಾತ್ಮಕ ಸಂಶೋಧನೆಯಾಗಿದೆ. ಆದರೆ ವಿಜ್ಞಾನವೆಂದರೆ ಬಾಹ್ಯ ವಸ್ತು-ವಿಷಯಗಳ ಸಂಶೋಧನೆಗೆ ಸೀಮಿತಗೊಳಿಸಬಾರದು. ಅಧ್ಯಾತ್ಮವು ಅಂತರಂಗ ಸಂಶೋಧನೆಗೆ ಸಂಬಂಧಿಸಿದ ವಿಜ್ಞಾನವಾಗಿದೆ. ಇದನ್ನು ನಾವು ಕೆಳಗೆ ವಿವರಿಸಿರುವಂತೆ, ತೈತ್ತಿರೀಯ ಉಪನಿಷತ್ತಿನ ಭೃಗುವಲ್ಲಿಯಲ್ಲಿನ ಒಂದು ಘಟನೆಯಿಂದ ಕಂಡುಕೊಳ್ಳಬಹುದು.

ವಿಶ್ವದ ಹಾಗೂ ತನ್ನ ಮೂಲದ ಸತ್ಯಾನ್ವೇಷಣೆಯಲ್ಲಿ ತೊಡಗಿದ ಯುವಕನಾದ ಭೃಗುವು ತನ್ನ ತಂದೆ ವಾರುಣಿಯ ಬಳಿಗೆ ಬಂದು ಈ ಬಗ್ಗೆ ಪ್ರಶ್ನೆಯನ್ನು ಕೇಳಿದ. ತಂದೆ ಉತ್ತರ ಹೇಳುವ ಬದಲು ಮಗನನ್ನು ವೈಜ್ಞಾನಿಕ ಸಂಶೋಧನೆಯ ಪಥಕ್ಕೆ ದೂಡಿದ. ‘ನೀನು ಸುತ್ತಮುತ್ತಲಿನ ಜೀವಿಗಳನ್ನು ಅವಲೋಕಿಸಿ ವಿಶ್ಲೇಷಿಸು. ಈ ಜೀವಿಗಳಿಗೆ ಆಧಾರವೇನು? ಅವುಗಳು ಎಲ್ಲಿಂದ ಉಗಮವಾಗಿವೆ? ಯಾವುದರ ಆಧಾರದಲ್ಲಿ ಬದುಕುತ್ತಿವೆ? ಕೊನೆಗೆ ಯಾವುದರಲ್ಲಿ ಲಯವಾಗುತ್ತವೆ? ಈ ಪ್ರಶ್ನೆಗಳಿಗೆ ಉತ್ತರವಾಗಿ ಲಭ್ಯವಾಗುವುದೇ ಸತ್ಯ, ಅದೇ ಬ್ರಹ್ಮ ಅಥವಾ ಭಗವಂತ. (ಯತೋ ವಾ ಇಮಾನಿ ಭೂತಾನಿ ಜಾಯಂತೇ| ಯೇನ ಜಾತಾನಿ ಜೀವಂತಿ| ಯತ್ ಪ್ರಯಂತ್ಯಭಿಸಂವಿಶಂತಿ| ತದ್ ವಿಜಿಜ್ಞಾಸಸ್ವ| ತದ್ ಬ್ರಹ್ಮೇತಿ|| - ತೈತ್ತಿರೀಯೋಪನಿಷತ್ತು).’

ಈ ಮೂರು ವೈಜ್ಞಾನಿಕ ಪ್ರಶ್ನೆಗಳ ಕುರಿತಾಗಿ ವಿಶ್ಲೇಷಣೆ ಮೂಲಕ ಸಂಶೋಧಿಸಲು ತಂದೆ ಮಗನಿಗೆ ತಿಳಿಸಿದ. ಸತ್ಯವನ್ನು ಅರಿಯಲು ಭೃಗುವು ಸುತ್ತಮುತ್ತಲಿನ ಸೃಷ್ಟಿಯನ್ನು ಅವಲೋಕಿಸಿ, ವಿಶ್ಲೇಷಣೆ ಹಾಗೂ ಚಿಂತನೆಗಳ ಮೂಲಕ ಮೇಲಿನ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯಲು ಪ್ರಯತ್ನಿಸಿದ. ಇದನ್ನು ನಾವು ವೈಜ್ಞಾನಿಕ ಸಂಶೋಧನಾ ಪದ್ಧತಿಯೆಂದು ಕರೆಯಬಹುದು. ಹೀಗೆ ಭೃಗುವು ಸತ್ಯವನ್ನು ಕಂಡುಕೊಳ್ಳುವ ಪಥದಲ್ಲಿ, ಅವಲೋಕನ ಹಾಗೂ ವಿಶ್ಲೇಷಣೆಗಳ ಆಧಾರದಲ್ಲಿ ಊಹಾಕಲ್ಪನೆಯನ್ನು ರೂಪಿಸಿದ; ‘ಅನ್ನ’ (ಆಹಾರ)ವೇ ಸೃಷ್ಟಿಯಲ್ಲಿರುವ ಸಮಸ್ತ ಜೀವಿಗಳಿಗೆ ಆಧಾರವೆಂಬ ತೀರ್ವನಕ್ಕೆ ಬಂದ. ವೈಜ್ಞಾನಿಕವಾಗಿ ನೋಡುವುದಾದರೆ, ಅವನು ಈ ನಿರ್ಣಯಕ್ಕೆ ಬರಲು ಮೇಲೆ ಹೇಳಿರುವ ಸಂಶೋಧನಾ ಸೋಪಾನಗಳನ್ನು ಅವಲಂಬಿಸಿದ. ಅವನು ಈ ನಿರ್ಣಯಕ್ಕೆ ಬರಲು ಕಾರಣವೇನೆಂದರೆ, ಅನ್ನವಿಲ್ಲದಿದ್ದರೆ ಯಾವ ಜೀವಿಗಳೂ ಬದುಕಿರಲು ಸಾಧ್ಯವಿಲ್ಲ, ಸಂತಾನೋತ್ಪತ್ತಿಯೂ ಸಾಧ್ಯವಿಲ್ಲ ಅಥವಾ ಜೀವಿಗಳ ಉಗಮವೂ ಸಾಧ್ಯವಿಲ್ಲ. ಆಹಾರ ಸರಪಳಿ (Food Cycle) ಯಲ್ಲಿಯೂ ಆಹಾರವೇ ಸಕಲ ಜೀವರಾಶಿಗಳ ಜೀವನಾಧಾರ ಹಾಗೂ ಈ ಸರಪಳಿಯ ಅಂತ್ಯದಲ್ಲಿ ಎಲ್ಲ ಜೀವಿಗಳೂ ಮರಣವನ್ನು ಹೊಂದಿ ಬೇರೊಂದು ಜೀವಿಗೆ ಆಹಾರವಾಗುತ್ತವೆ. ಹೀಗೆ ‘ಅನ್ನವೇ ಬ್ರಹ್ಮ’ (ಅನ್ನಂ ಬ್ರಹ್ಮೇತಿ ವ್ಯಜನಾತ್) ಎಂಬ ಸಂಶೋಧನೆಯೊಂದಿಗೆ ಭೃಗುವು ತನ್ನ ತಂದೆ ಹಾಗೂ ಗುರು ವಾರುಣಿಯ ಬಳಿಗೆ ಬಂದು ಅದನ್ನು ತಿಳಿಸಿದ. ಆದರೆ ವಾರುಣಿಯು ಇದರಿಂದ ಸಂತೃಪ್ತನಾಗಲಿಲ್ಲ; ಭೃಗುವನ್ನು ಇನ್ನೂ ಆಳಕ್ಕೆ ಹೋಗಿ ಪರಿಶೀಲಿಸಲು ಆಜ್ಞಾಪಿಸಿದ. ಅಂದರೆ ಇದು ಮೊದಲಿನ ಊಹಾಕಲ್ಪನೆಯನ್ನು ಪುನರ್ಪರಿಶೀಲಿಸುವುದಾಗಿದೆ. ಹೀಗೆ ಭೃಗುವು ಮತ್ತಷ್ಟು ಆಳವಾದ ಅಧ್ಯಯನ ಹಾಗೂ ವಿಶ್ಲೇಷಣೆ ಮಾಡಿದ. ಇದನ್ನೇ ಅಂತರಂಗವಿಜ್ಞಾನಿ (Inner Scientists) ಗಳಾದ ನಮ್ಮ ಋಷಿ-ಮುನಿಗಳು ‘ತಪಸ್ಸು’ ಎಂದು ಕರೆದರು. ಮುಂದಿನ ಹಂತದಲ್ಲಿ ಭೃಗುವು ಕಂಡುಕೊಂಡದ್ದೇನೆಂದರೆ, ಅನ್ನಕ್ಕಿಂತ ಮುಖ್ಯವಾಗಿ ಬೇಕಾಗಿರುವುದು ‘ಪ್ರಾಣ’ ಅಂದರೆ ಪ್ರಾಣವೇ ಜೀವಿಯ ಉಗಮ-ಅಸ್ತಿತ್ವ-ಲಯಗಳಿಗೆ ಕಾರಣ. ಏಕೆಂದರೆ, ಒಬ್ಬ ವ್ಯಕ್ತಿ ತನ್ನ ವೃದ್ಧಾಪ್ಯ ಅಥವಾ ಅನಾರೋಗ್ಯದಲ್ಲಿ, ಆಹಾರವಿದ್ದರೂ ಪ್ರಾಣಶಕ್ತಿಯಿಲ್ಲದಿದ್ದರೆ ಅದನ್ನು ತಿನ್ನಲಾಗುವುದಿಲ್ಲ. ಹಾಗಾಗಿ ಪ್ರಾಣವೇ ಬ್ರಹ್ಮ (ಪ್ರಾಣೋ ಬ್ರಹ್ಮೇತಿ ವ್ಯಜಾನಾತ್) ಎಂಬ ಹೊಸ ಊಹಾಕಲ್ಪನೆಯೊಂದಿಗೆ ತಂದೆಯ ಬಳಿಗೆ ಬಂದ. ಆದರೆ ಇದರಿಂದಲೂ ತೃಪ್ತನಾಗದ ವಾರುಣಿ ಭೃಗುವನ್ನು ಮರಳಿ ತಪಸ್ಸನ್ನಾಚರಿಸಲು ಕಳುಹಿಸಿದ. ಭೃಗುವು ಇನ್ನೂ ಆಳವಾದ ತಪಸ್ಸಿನ ಮೂಲಕ ಮನಸ್ಸೇ ಅನ್ನ ಹಾಗೂ ಪ್ರಾಣಗಳಿಗಿಂತ ಹೆಚ್ಚು ಪ್ರಧಾನವೆಂಬುದನ್ನು ಅರಿತ. ಏಕೆಂದರೆ, ವ್ಯಕ್ತಿ ತನ್ನ ಮನಸ್ಸಿನ ಆಸೆಯಿಂದ ಪ್ರೇರಿತನಾಗಿ ಸಂತಾನೋತ್ಪತ್ತಿ ಮಾಡುತ್ತಾನೆ; ಹಾಗೂ ತನ್ನನ್ನು ತಾನು ರಕ್ಷಿಸಿಕೊಂಡು, ಜೀವನ ಮುಂದುವರಿಸಲು ಸರ್ವಕರ್ಮಗಳನ್ನೂ ಮಾಡುತ್ತಾನೆ; ಜೀವನವನ್ನು ಮುಂದುವರಿಸಲು ಮನಸ್ಸಿನಲ್ಲಿ ಆಸೆಯನ್ನು ಕಳೆದುಕೊಂಡಾಗ ದೇಹವನ್ನು ತ್ಯಜಿಸುತ್ತಾನೆ. ಹೀಗೆ ಅರಿತ ಭೃಗುವು ತನ್ನ ತಂದೆಯ ಬಳಿಗೆ ಹೋಗಿ ‘ಮನಸ್ಸೇ ಬ್ರಹ’ (ಮನೋ ಬ್ರಹ್ಮೇತಿ ವ್ಯಜಾನಾತ್) ವೆಂದು ಹೇಳಿದ. ಆದರೆ ಅದರಿಂದಲೂ ತೃಪ್ತನಾಗದ ವಾರುಣಿ ಮಗನನ್ನು ಪುನಃ ತಪಸ್ಸನ್ನಾಚರಿಸಲು ಕಳುಹಿಸಿದ. ನಿಜವಾದ ವೈಜ್ಞಾನಿಕ ಮನೋಭಾವನೆ ಹೊಂದಿದ್ದ ಭೃಗು ಇದರಿಂದ ಧೃತಿಗೆಡೆದೆ ಮರಳಿ ತಪಸ್ಸಿಗೆ ತೆರಳಿದ! ಧ್ಯಾನಸ್ಥನಾಗಿದ್ದ ಭೃಗುವಿಗೆ ಮನಸ್ಸೂ ಸ್ವತಂತ್ರವಲ್ಲವೆಂಬುದು ಥಟ್ಟನೆ ಹೊಳೆಯಿತು. ಕೊಂಬೆಯಿಂದ ಕೊಂಬೆಗೆ ಹಾರುವ ಮಂಗನಂತೆ ಚಂಚಲವಾದ ಮನಸ್ಸನ್ನು ನಿಯಂತ್ರಿಸುವುದು ‘ಬುದ್ಧಿ’. ಚಿಕ್ಕಜೀವಿಗಳಿಂದ ಹಿಡಿದು ಅತಿದೊಡ್ಡ ಜೀವಿಗಳವರೆಗೆ ಸಕಲಜೀವಿಗಳೂ ತಮಗೆ ಸಹಜವಾಗಿರುವ ಬುದ್ಧಿಶಕ್ತಿಯಿಂದಲೇ ಜೀವನಕ್ಕೆ ಅಗತ್ಯವಾದ ನಿರ್ಣಯ ಹಾಗೂ ಆಯ್ಕೆಗಳನ್ನು ಮಾಡುತ್ತವೆ. ಆದ್ದರಿಂದ ಭೃಗುವು ‘ವಿಜ್ಞಾನವೇ ಬ್ರಹ್ಮ’ (ವಿಜ್ಞಾನಂ ಬ್ರಹ್ಮೇತಿ ವ್ಯಜಾನಾತ್) ಎಂದು ತಿಳಿದು ತನ್ನ ತಂದೆಯನ್ನು ಸಮೀಪಿಸಿದ. ಆದರೆ ಭೃಗುವಿನ ಈ ಉತ್ತರದಿಂದಲೂ ವಾರುಣಿ ಸಂತೃಪ್ತನಾಗಲಿಲ್ಲ; ಮರಳಿ ತಪಸ್ಸಿಗೆ ಕಳುಹಿಸಿದ. ಛಲವನ್ನು ಬಿಡದ ನಿಜವಿಜ್ಞಾನಿ ಭೃಗುವು ಪುನಃ ಆಳವಾದ ವಿಶ್ಲೇಷಣೆ ಹಾಗೂ ಚಿಂತನೆಗಳಲ್ಲಿ ಮುಳುಗಿದ. ಆತನ ಶ್ರದ್ಧಾಭರಿತ ಅಂತರಂಗದಲ್ಲಿ ಸಕಲ ಜೀವಿಗಳ ಸೃಷ್ಟಿ-ಸ್ಥಿತಿ-ಲಯಗಳಿಗೆ ‘ಆನಂದ’ವೇ ಮೂಲವೆಂಬ ಸತ್ಯ ಗೋಚರವಾಯಿತು. ಪ್ರತಿ ಜೀವಿಯೂ ಆನಂದಪಿಪಾಸುವೇ. ದುಃಖದಿಂದ ತಪ್ಪಿಸಿಕೊಂಡು ಸದಾಕಾಲ ಅನಂತ ಆನಂದವನ್ನು ಅನುಭವಿಸಬೇಕೆಂಬುದೇ ಎಲ್ಲ ಜೀವಿಗಳಿಗೆ ಪ್ರೇರಕಶಕ್ತಿ. ಆದ್ದರಿಂದ ‘ಆನಂದವೇ ಬ್ರಹ್ಮ’ (ಆನಂದೋ ಬ್ರಹ್ಮೇತಿ ವ್ಯಜಾನಾತ್) ಎಂದು ಕಂಡುಕೊಂಡ. ಭೃಗುವು ಆ ಆನಂದವನ್ನು ತನ್ನ ಅಂತರಂಗದಲ್ಲೇ ಕಂಡುಕೊಂಡು, ಅದರಲ್ಲಿಯೇ ಮೈಮರೆತ. ಆದ್ದರಿಂದ ಚರಮಸತ್ಯ ಅಥವಾ ಬ್ರಹ್ಮವೆಂದರೆ ಅಮರ ಅನಂತ ಆನಂದವೇ! ‘ಇದುವೇ ಭೃಗು-ವಾರುಣಿ ವಿದ್ಯಾ’ (ಭಾರ್ಗವೀ ವಾರುಣೀ ವಿದ್ಯಾ) ಎಂದು ಪ್ರಸಿದ್ಧವಾಗಿದೆ. ಈ ತಂದೆ-ಮಗನನ್ನು ನಾವು ಜಂಟಿ-ಸಂಶೋಧಕರೆಂದು ಕರೆಯಬಹುದು. ಹಲವು ಸಹಸ್ರ ವರ್ಷಗಳ ಹಿಂದೆ ಉಗಮವಾದ ಈ ರೀತಿಯ ವೈಜ್ಞಾನಿಕ ಸಂಶೋಧನಾ ವಿಧಾನ, ಇಂದಿನ ಆಧುನಿಕ ವೈಜ್ಞಾನಿಕ ಸಮುದಾಯದ ಕಲ್ಪನೆಗೂ ಮೀರಿದುದಾಗಿದೆ! ಈಗ ನಾವು ಕಾಣುವ ಆಧುನಿಕ ವೈಜ್ಞಾನಿಕ ಪದ್ಧತಿಗಳು ಹೆಚ್ಚೆಂದರೆ ಕಳೆದ ಮೂರು ಶತಮಾನಗಳಲ್ಲಿ ಕಂಡುಕೊಂಡವುಗಳಾಗಿವೆ. ಆದರೆ ಸನಾತನ ಧರ್ಮದ ಆಧ್ಯಾತ್ಮಿಕ ವಿಜ್ಞಾನಿಗಳು ಈ ಆಧುನಿಕ ವೈಜ್ಞಾನಿಕ ವಿಧಾನಗಳಲ್ಲಿ ಪ್ರಾಚೀನ ಕಾಲದಲ್ಲೇ ಅನ್ವೇಷಣೆ-ಸಂಶೋಧನೆಗಳನ್ನು ಮಾಡಿದ್ದರು. ಅಷ್ಟು ಮಾತ್ರವಲ್ಲದೆ, ಈ ಮೇಲಿನ ಮೂರು ಪ್ರಶ್ನೆಗಳಿಗೆ ಉತ್ತರವಾಗಿ ಲಭ್ಯವಾಗುವ ಸತ್ಯವನ್ನು ಈಗಲೂ ಯಾರಾದರೂ ಪರೀಕ್ಷಿಸಬಹುದು. ಅದು ತ್ರಿಕಾಲಾಬಾಧಿತ ಸತ್ಯ. ಆದ್ದರಿಂದಲೇ, ಸನಾತನ ಧರ್ಮವೂ ತ್ರಿಕಾಲಾಬಾಧಿತವೇ! ಸತ್ಯವನ್ನು ಸಾರುವ ಉಪನಿಷತ್ತುಗಳು ಋಷಿ-ಮುನಿಗಳ ಅಂತರಂಗ ವಿಜ್ಞಾನಸಂಶೋಧನಾ ಗ್ರಂಥಗಳು; ಋಷಿ-ಮುನಿಗಳೇ ವಿಜ್ಞಾನಿಗಳು.

ಸನಾತನ ಧರ್ಮದ ಮೂಲಗ್ರಂಥಗಳಾದ ಉಪನಿಷತ್ತುಗಳಲ್ಲಿ ಋಷಿ-ಮುನಿಗಳು ಕಂಡುಕೊಂಡ ಸತ್ಯವನ್ನು ಎಲ್ಲರಿಗೂ ಸುಲಭವಾಗುವಂತೆ ಮಂತ್ರ-ಸೂತ್ರ-ಶ್ಲೋಕಗಳ ರೂಪದಲ್ಲಿ ಅವರು ಪ್ರಕಟಿಸಿದರು. ಇದನ್ನು ನೋಡಿ ಕೆಲವರು ಇದು ಹೇಗೆ ವೈಜ್ಞಾನಿಕವಾಗಿದೆಯೆಂದು ಪ್ರಶ್ನಿಸಬಹುದು. ಆದರೆ, ಈಗಲೂ ಯಾರಾದರೂ, ಯಾವುದಾದರೂ ಮಂತ್ರವನ್ನು ಆರಿಸಿಕೊಂಡು, ಅದನ್ನು ಆಳವಾಗಿ ಮನನ ಮಾಡಿ, ಧ್ಯಾನಿಸಿದರೆ ಸಹಸ್ರಾರು ವರ್ಷಗಳ ಹಿಂದೆಯೇ ಋಷಿ-ಮುನಿಗಳು ಸಾರಿದ ಅದೇ ಸತ್ಯವೇ ಗೋಚರವಾಗುತ್ತದೆ. ಉದಾಹರಣೆಗೆ, ಐತರೇಯ ಉಪನಿಷತ್ತಿನಲ್ಲಿ ವಿವರಿಸಿರುವ ಸೃಷ್ಟಿಯ ಉಗಮದ ಪ್ರಕ್ರಿಯೆ ಇಂದು ವಿಜ್ಞಾನಿಗಳು ಕಂಡುಕೊಳ್ಳುತ್ತಿರುವ ಸೃಷ್ಟಿಯ ಸಿದ್ಧಾಂತ (Theory of Creation) ಕ್ಕೆ ಅನುಸಾರವಾಗಿದೆ. ಸಮಸ್ತ ಸೃಷ್ಟಿಗೆ ‘ಪ್ರಜ್ಞಾನ’ವೇ ಆಧಾರವೆಂಬ (ಪ್ರಜ್ಞಾನಂ ಬ್ರಹ್ಮ) ಎಂಬ ಈ ಉಪನಿಷತ್ತಿನ ಸತ್ಯವನ್ನು ಆಧುನಿಕ ವಿಜ್ಞಾನಿಗಳು ‘ಏಕೀಕೃತ ಕ್ಷೇತ್ರ ಸಿದ್ಧಾಂತ’ (Unified Field Theory)ದ ಪರಿಕಲ್ಪನೆಯ ಮೂಲಕ ಅಂಗೀಕರಿಸುತ್ತಿದ್ದಾರೆ!

ಸನಾತನ ಧರ್ಮದಲ್ಲಿ ಬಹಿರಂಗ-ಅಂತರಂಗ ವಿಜ್ಞಾನಗಳ ಸುಂದರ ಸಮ್ಮಿಲನವಾಗಿದೆ!

(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net