

ಕೊವಿಡ್-19 ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸುವುದೇ, ಬಿಡುವುದೇ ಎಂಬ ಜಿಜ್ಞಾಸೆ ಎಲ್ಲೆಡೆ ಪ್ರಾರಂಭವಾಗಿದೆ. ಈ ಅಪಾಯಕಾರಿ ಸಾಂಕ್ರಾಮಿಕ ರೋಗದಿಂದ ಪಾರಾಗಲು ವಿಶ್ವವೇ ಹೆಣಗಾಡುತ್ತಿರುವುದು ಸರ್ವವೇದ್ಯ, ಹೀಗಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಹಲವಾರು ಉಪಕ್ರಮ ಕೈಗೊಳ್ಳಲಾಗಿದೆ. ಪ್ರಾಥಮಿಕ ಶಾಲೆಯ ಎಲ್ಲ ತರಗತಿಗಳ ಹಾಗೂ ಪ್ರೌಢಶಾಲೆಗಳ ಎಂಟು ಮತ್ತು ಒಂಬತ್ತನೇ ತರಗತಿ ಮಕ್ಕಳನ್ನು ಕ್ರಮವಾಗಿ ಎಸ್.ಎ-1, ಎಸ್.ಎ-2 ಎಸ್.ಎ-3 ಮತ್ತು ಎಸ್.ಎ-4 (ಮತ್ತಿತರೆ ಮಾರ್ಗಗಳಿಂದ) ಗಳ ಮೌಲ್ಯಾಧಾರಿತ ಕ್ರಮಗಳಿಂದ ಉತ್ತೀರ್ಣಗೊಳಿಸಿ ಮುಂದಿನ ತರಗತಿಗಳಿಗೆ ವರ್ಗಾಯಿಸಿದ್ದಾಗಿದೆ. ಆದರೀಗ ಎಸ್ಸೆಸ್ಸೆಲ್ಸಿ ಪರೀಕ್ಷೆಯದ್ದೇ ಗೊಂದಲವಾಗಿದೆ. ಏಕೆಂದರೆ ಇದು ವಿದ್ಯಾರ್ಥಿ ಜೀವನದ ಮುಖ್ಯಘಟ್ಟ. ಹೀಗಿರುವಾಗ ಪರೀಕ್ಷೆ ನಡೆಸುವುದು ಅತ್ಯಗತ್ಯ. ಆದರೆ ಹಿಂದಿನಂಥಲ್ಲ, ಹೀಗೆ ಪರೀಕ್ಷೆ ನಡೆಸಬಹುದಲ್ಲವೇ?
* ಪ್ರತಿ ಶಾಲೆಯನ್ನು ಪರೀಕ್ಷಾ ಕೇಂದ್ರವಾಗಿ ಗುರುತಿಸುವುದು, ಆಯಾ ಶಾಲೆಯ ಕೋಡ್ಗಳನ್ನು ಬಳಸಿ. * ಪ್ರತಿ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿಯೇ ಪರೀಕ್ಷಾ ಸಿಬ್ಬಂದಿ. * ಪ್ರತಿ ಶಾಲೆಗೆ ದಿನದ ಪರೀಕ್ಷಾ ಅವಧಿ ಮುಗಿಯುವವರೆಗೆ ಇತರ ಇಲಾಖಾ ಮುಖ್ಯಸ್ಥರನ್ನು ಪರ್ಯಾಯವಾಗಿ ಬದಲಿಸುತ್ತ ಪರೀಕ್ಷಾ ಅವ್ಯವಹಾರ ತಡೆಯಬಹುದು. * ಶಿಕ್ಷಣ ಇಲಾಖೆಯ ಮುಖ್ಯಸ್ಥರು/ಅಧಿಕಾರಿಗಳು ನಿಯಮಿತವಾಗಿ ಭೇಟಿ ಕೊಡಬಹುದು, ಈಗಾಗಲೇ ಇರುವ ಪದ್ಧತಿಗಳಂತೆ. *ಪ್ರಶ್ನೆಪತ್ರಿಕೆಗಳನ್ನು ಎಲ್ಲ ಶಾಲಾ ಪರೀಕ್ಷಾ ಕೇಂದ್ರಗಳಿಗೆ ಇಲಾಖೆಯೇ ಸೂಕ್ತ ಸಮಯಕ್ಕೆ ತಲುಪಿಸಬೇಕು. * ದೈಹಿಕ ಅಂತರದ ನಿಯಮಾನುಸಾರ ಪ್ರತಿ ಕೊಠಡಿಗೆ ವಿದ್ಯಾರ್ಥಿಗಳನ್ನು ಹಂಚಿಕೆ ಮಾಡಬೇಕು. ಕೊಠಡಿ ಅಥವಾ ಪರೀಕ್ಷಾ ಸಿಬ್ಬಂದಿ ಕೊರತೆಯಾದರೆ ಸ್ಥಳೀಯ ಪ್ರಾಥಮಿಕ ಶಾಲಾ ಕೊಠಡಿಗಳು ಮತ್ತು ಬೋಧಕ, ಬೋಧಕೇತರ (ಡಿ ಗ್ರೂಪ್ ಕೆಲಸಗಳಿಗೆ) ಸಿಬ್ಬಂದಿ ಬಳಸಿಕೊಳ್ಳಬಹುದು. * ತಾಲೂಕು ಮಟ್ಟದ ವಿಷಯ ಬೋಧನಾ ಶಿಕ್ಷಕರಿಂದಲೇ ಮೌಲ್ಯಮಾಪನ ಮಾಡಿಸಬಹುದು.
| ವೆಂಕಟಸ್ವಾಮಿ ರೆಡ್ಡಿ ನಿವೃತ್ತ ಶಿಕ್ಷಕರು
ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯವಾಗಲಿ
ಕರೊನಾ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಸರ್ಕಾರ ಕೆಲ ನಿಯಮಾವಳಿ ರೂಪಿಸಿದೆ. 65 ವರ್ಷ ಮೀರಿದ ಹಿರಿಯ ನಾಗರಿಕರು, 10 ವರ್ಷಕ್ಕಿಂತ ಕೆಳಗಿನ ಮಕ್ಕಳು ಮನೆಯಿಂದ ಹೊರಬರಬಾರದು. ಅವರು ರೈಲು, ವಿಮಾನದಲ್ಲಿ ಸಂಚರಿಸುವಂತಿಲ್ಲ. ಹೋಟೆಲ್, ದೇವಾಲಯ ಹಾಗೂ ಪಾರ್ಕ್ ಪ್ರವೇಶಿಸುವಂತಿಲ್ಲ ಎಂದು ಸೂಚಿಸಿದೆ. ಇದರಿಂದ ಮಕ್ಕಳು ಹಾಗೂ ಇಳಿವಯಸ್ಸಿನ ತಂದೆ-ತಾಯಿಯನ್ನು ಮನೆಯಲ್ಲೇ ಬಿಟ್ಟು, ಕುಟುಂಬಸ್ಥರು ಪ್ರಯಾಣ ಮಾಡಬೇಕಾದ ಪ್ರಸಂಗ ಬಂದೊದಗಿದೆ. ಆದರೆ, ಮಕ್ಕಳಿಗೆ ಹೆತ್ತವರನ್ನು ಬಿಟ್ಟು ದೂರ ಇರಲು ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ, ಹಿರಿಯ ಜೀವಗಳನ್ನು ಮನೆಯಲ್ಲಿ ಬಿಟ್ಟು ಮದುವೆ ಮತ್ತು ಕೌಟುಂಬಿಕ ಸಮಾರಂಭಕ್ಕೆ ಹೋಗಲು ಅವರ ಮಕ್ಕಳಿಗೂ ಇಷ್ಟವಾಗುತ್ತಿಲ್ಲ.
ಇನ್ನು ತಂದೆ-ತಾಯಿ ಆರೋಗ್ಯ ಸ್ಥಿತಿ ಗಂಭೀರವಾಗಿ, ಅವರನ್ನೇ ಬೆಂಗಳೂರು ಅಥವಾ ಬೇರ್ಯಾವ ಮಹಾನಗರಕ್ಕೆ ಕರೆದೊಯ್ಯಬೇಕಾಗಿ ಬಂದರೆ ಪರಿಸ್ಥಿತಿ ಹೇಗೋ ಎನ್ನುವ ಆತಂಕ ಹಲವರನ್ನು ಕಾಡುತ್ತಿದೆ. ಸಮಾಜದಲ್ಲಿ ಇಂಥ ಹತ್ತು-ಹಲವು ಪ್ರಶ್ನೆಗಳು ತಲೆದೋರುತ್ತಿವೆ. ಹಾಗಾಗಿ, 65 ವರ್ಷ ಮೀರಿದ್ದರೂ ಸದೃಢ ಆರೋಗ್ಯ ಹೊಂದಿರುವ ಹಿರಿಯ ನಾಗರಿಕರಿಗೂ ಎಲ್ಲೆಡೆ ಸುತ್ತಾಡುವ ಸ್ವಾತಂತ್ರ್ಯ ನೀಡಬೇಕು. ಒಂದುವೇಳೆ ಈ ನಿಯಮ ಸಡಿಲಿಕೆ ಮಾಡದಿದ್ದರೆ, 65 ವರ್ಷ ಮೀರಿದವರು ಹೊರಗೆ ಸುತ್ತಾಡುವಂತಿಲ್ಲ ಎನ್ನುವ ನಿಯಮವನ್ನು ಜನಪ್ರತಿನಿಧಿಗಳಿಗೂ ಅನ್ವಯಿಸಬೇಕು. ಎಲ್ಲರಿಗೂ ಸಮಾನವಾಗಿ ಕಾನೂನು ಅನ್ವಯವಾಗಬೇಕು.
| ಬಿ.ಎಸ್. ಗವಿಮಠ ಹಿರಿಯ ಸಾಹಿತಿ, ಬೆಳಗಾವಿ