

ಕವಿರತ್ನ ಕಾಳಿದಾಸ ಹೆಸರುವಾಸಿಯಾಗುತ್ತಿದ್ದಂತೆ ತಾನು ಮಹಾಕವಿ, ಜ್ಞಾನಿಯಾಗುತ್ತಿರುವ ಬಗ್ಗೆ ಕೊಂಚ ಜಂಭ ಅವನಲ್ಲಿ ಮನೆಮಾಡತೊಡಗಿತು. ಒಂದು ಬಾರಿ ಈತ ಪರ್ಯಟನೆ ಮಾಡುತ್ತ ಒಂದು ಊರಿಗೆ ಬಂದಾಗ ಅವನಿಗೆ ಬಹಳ ಬಾಯಾರಿಕೆ ಆಯಿತು. ಊರ ಹೊರಗಿನ ಬಾವಿಯ ಬಳಿ ವೃದ್ಧೆ ಬಾವಿಯಿಂದ ನೀರು ಸೇದುತ್ತಿದ್ದಳು. ಬಾಯಾರಿದ ಕಾಳಿದಾಸ, ‘ತಾಯಿ ನನಗೆ ತುಂಬ ಬಾಯಾರಿಕೆ ಆಗಿದೆ, ಕೊಂಚ ನೀರುಕೊಟ್ಟು ಕೃಪೆ ಮಾಡುವಿಯಾ?’ ಅಂತ ಕೇಳಿದ. ಉತ್ತರವಾಗಿ ಆ ವೃದ್ಧೆ, ‘ನನಗೆ ನಿನ್ನ ಪರಿಚಯವಿಲ್ಲ. ಮೊದಲು ನಿನ್ನ ಪರಿಚಯ ಹೇಳು. ಬಳಿಕ ಕುಡಿಯಲು ನೀರನ್ನು ನೀಡುವೆ’ ಎಂದಳು.
ಜಂಭದಿಂದ ಬೀಗುತ್ತಿದ್ದ ಕಾಳಿದಾಸ ‘ನಾನೊಬ್ಬ ಪ್ರವಾಸಿ’ ಎಂದ. ಅದಕ್ಕೆ ಆ ವೃದ್ಧೆ ಹೇಳಿದಳು, ‘ಲೋಕದಲ್ಲಿ ನಿತ್ಯನಿರಂತರ ಪ್ರವಾಸಿಗರು ಇಬ್ಬರೇ. ಒಬ್ಬನು ಸೂರ್ಯ, ಇನ್ನೊಬ್ಬನು ಚಂದ್ರ, ನಾವೆಲ್ಲ ನಿಲ್ದಾಣ ಬಂದಾಗ ಪ್ರವಾಸವನ್ನು ನಿಲ್ಲಿಸಬೇಕಾದವರೇ’. ಕಾಳಿದಾಸ ಹೇಳಿದ, ‘ನಾನೊಬ್ಬ ಅತಿಥಿ’. ಆಕೆ, ‘ಲೋಕದಲ್ಲಿ ಅತಿಥಿಗಳು ಇಬ್ಬರೇ, ಒಂದು ಸಿರಿಸಂಪತ್ತು; ಇನ್ನೊಂದು ಯೌವನ, ಎರಡೂ ಬಂದು ಹೊರಟುಹೋಗುತ್ತವೆ’. ಹಾಗಾದರೆ, ‘ನಾನೊಬ್ಬ ಸಹನ ಶೀಲವ್ಯಕ್ತಿ’. ‘ಲೋಕದಲ್ಲಿ ನಿಜವಾದ ಸಹನಶೀಲರು ಇಬ್ಬರೇ- ಒಂದು ಭೂಮಿ, ಇನ್ನೊಂದು ವೃಕ್ಷ. ಭೂಮಿತಾಯಿ ಪುಣ್ಯವಂತರೊಡನೆ ಪಾಪಿಷ್ಠರನ್ನು ಸಹಿಸಿಕೊಳ್ಳುತ್ತಾಳೆ. ಮರ, ತನಗೆ ಕಲ್ಲೆಸೆದವರಿಗೂ ಸಿಹಿಯಾದ ಹಣ್ಣನ್ನು ನೀಡುತ್ತದೆ. ಕಡಿದು ಕತ್ತರಿಸಿದರೂ ಮತ್ತೆ ಚಿಗುರಿ ನಮಗೆ ನೆರಳನ್ನು ನೀಡುತ್ತದೆ’. ‘ನಾನೊಬ್ಬ ಹಠಮಾರಿ ವ್ಯಕ್ತಿ. ಈಗಲಾದರೂ ನೀರು ನೀಡುವೆಯಾ?’ ಎಂದ. ‘ಲೋಕದಲ್ಲಿ ಹಠಮಾರಿಗಳು ಇಬ್ಬರೇ. ಒಂದು ನಮ್ಮ ಕೈ, ಕಾಲು ಬೆರಳುಗಳ ಉಗುರು, ಇನ್ನೊಂದು ನಮ್ಮ ಕೂದಲು. ಕತ್ತರಿಸಿದಷ್ಟು ಬೆಳೆಯುತ್ತಲೇ ಇರುತ್ತವೆ’. ಕಾಳಿದಾಸ ಬೇಸರದಿಂದ ಹೇಳಿದ, ‘ನಾನೊಬ್ಬ ಮೂರ್ಖ’. ‘ಲೋಕದಲ್ಲಿ ಮೂರ್ಖರು ಇಬ್ಬರೇ- ಒಬ್ಬ ಯೋಗ್ಯತೆ, ಅರ್ಹತೆ ಇಲ್ಲದಿದ್ದರೂ ರಾಜ್ಯಭಾರ ಮಾಡುವ ರಾಜ; ಇನ್ನೊಬ್ಬ ಆ ರಾಜನನ್ನು ಓಲೈಸಲು ಅವನನ್ನು ಮೆಚ್ಚಿಸಲು ಪ್ರತಿಭೆ ಪಾಂಡಿತ್ಯವಿಲ್ಲದಿದ್ದರೂ ತಾನೊಬ್ಬ ಆಸ್ಥಾನ ಪಂಡಿತನೆಂದು ಹೇಳಿಕೊಂಡು ತಿರುಗಾಡುವ ಕವಿ’.
ವೃದ್ಧೆಯ ಮಾತಿನ ಆರ್ಥವನ್ನು ತಿಳಿದುಕೊಂಡ ಕಾಳಿದಾಸ ಆಕೆಯ ಕಾಲಿಗೆ ಬಿದ್ದು ತನ್ನ ಅಹಂಕಾರದ ನುಡಿಗಳಿಗೂ ಕ್ಷಮೆ ಕೇಳಿದ. ಕಾಳಿದಾಸ ಎದ್ದು ನೋಡಲಾಗಿ ಆ ವೃದ್ಧೆಯ ಜಾಗದಲ್ಲಿ ಸಾಕ್ಷಾತ್ ಸರಸ್ವತಿ ದೇವಿಯೇ ಪ್ರತ್ಯಕ್ಷಳಾಗಿದ್ದಳು. ಆ ದೇವಿ ಹೇಳಿದಳು- ‘ವಿದ್ಯೆಯಿಂದ ಜ್ಞಾನಸಂಪಾದನೆ ಮಾತ್ರ ಆಗಬೇಕು. ಗರ್ವ, ಅಹಂಕಾರಗಳಲ್ಲ! ನಿನ್ನ ವಿದ್ಯೆ, ಪಾಂಡಿತ್ಯಕ್ಕೆ ದೊರೆತ ಮಾನ-ಸನ್ಮಾನಗಳನ್ನು ನೀನು ನಿನಗೆ ಎಂದು ಭಾವಿಸಿದೆ. ಆದುದರಿಂದ ನಿನ್ನ ಕಣ್ಣು ತೆರೆಸುವುದು ಅವಶ್ಯವಾಗಿತ್ತು. ತಗೋ ನೀರನ್ನು’ ಎಂದು ಹೇಳುತ್ತ ಮಾಯವಾದಳು.
ತಾತ್ಪರ್ಯ ಇಷ್ಟೆ: ತೆನೆಬಿಟ್ಟ ಪೈರು ಬಾಗುತ್ತದೆ. ಗೊನೆ ಬಿಟ್ಟ ಬಾಳೆ ಬಾಗುತ್ತದೆ; ಫಲ ಬಿಟ್ಟ ಗಿಡ ಬಾಗುತ್ತದೆ. ಆದರೆ, ಏನನ್ನೂ ಕೊಡದ ಮನುಷ್ಯ ಮಾತ್ರ ಜಂಭದಿಂದ ಬೀಗುತ್ತಾನೆ; ಬೀಗುವುದಲ್ಲ, ಜೀವನದಲ್ಲಿ ಬಾಗುವುದೇ ಸದ್ಗುಣ.
(ಲೇಖಕರು ಪ್ರಾಧ್ಯಾಪಕರು, ಸಾಹಿತಿ ಹಾಗೂ ವಾಗ್ಮಿ)