

‘ಅಯ್ಯೋ, ಒಳ್ಳೆ ಕತೆ ನಿಮ್ದು, ಇಷ್ಟು ರೇಟು ಬಂದಿದೆ ಎಂದಾಕ್ಷಣ ಎಲ್ಲ ರೈತರಿಗೂ ಇಷ್ಟು ಬೆಲೆಯಲ್ಲಿಯೇ ಬೆಳೆ ಮಾರಾಟವಾಗಿದೆ ಅಂದುಕೊಳ್ಳಬೇಡಿ. ಈಗ ಎಷ್ಟು ರೈತರ ಕೈಲಿ ಅಡಕೆ ಸ್ಟಾಕ್ ಇದೆ ಹೇಳಿ. ಉತ್ತಮ ದರ ಬರುತ್ತದೆ ಎಂದು ಬೆಳೆ ಇಟ್ಟುಕೊಂಡು ಕಾಯುವ ಶಕ್ತಿ ಎಷ್ಟು ರೈತರಿಗಿರುತ್ತದೆ? ಸೊಸೈಟಿ ಸಾಲ, ಕೈಸಾಲ ಅದುಇದು ಎಂದು ಹಣ ನಿಲ್ಲಬೇಕಲ್ಲ? ಹೀಗಾಗಿ ಇಂಥವರು ಬೆಳೆ ಮನೆಗೆ ಬಂದ ಕೂಡಲೇ ಮಾರಬೇಕಾದ್ದು ಅನಿವಾರ್ಯ. ಅದಲ್ಲದೆ, ವೆಚ್ಚ ವಿಪರೀತವಾಗಿರುವ ಈಗಿನ ಕಾಲದಲ್ಲಿ ಕೃಷಿ ಮಾಡುವುದು ಸುಲಭವಾ?’
ಈ ಎರಡು ವಾದಗಳು ಕೃಷಿಯ ಇಂದಿನ ಸ್ಥಿತಿಗತಿಯನ್ನು ಸ್ಥೂಲವಾಗಿ ಸಂಕೇತಿಸುತ್ತವೆ ಎನ್ನಬಹುದು. ಅಡಕೆ ಎಂದಲ್ಲ, ಯಾವ ಬೆಳೆ ತೆಗೆದುಕೊಂಡರೂ ಇದೇ ಚಿತ್ರಣ. ಕೃಷಿ ಮಾಡಲು ಕೂಲಿಗೆ ಜನ ಸಿಗುತ್ತಿಲ್ಲ; ವೆಚ್ಚ ವಿಪರೀತವಾಗಿ ಹೆಚ್ಚಿದೆ; ಕಷ್ಟಪಟ್ಟು ಕೃಷಿ ಮಾಡಿದರೂ ಕೊನೆಗೆ ಉಳಿಯುವುದು ಏನೂ ಇಲ್ಲ; ಒಂದು ಸರ್ಕಾರಿ ಕ್ಲರ್ಕ್ ನೌಕರಿ ಇದ್ದಿದ್ದರೂ ಇದಕ್ಕಿಂತ ಆರಾಮಾಗಿ ಜೀವನ ನಡೆಸಬಹುದಿತ್ತು ಎಂಬಂಥ ಮಾತುಗಳು ಕೃಷಿ ವಲಯದಲ್ಲಿ ಕೇಳಿಬರುತ್ತವೆ. ಅದರ ಜತೆಯಲ್ಲೇ, ಹೊಸ ಹೊಸ ಬೆಳೆಗಳ ಪ್ರಯೋಗ ನಡೆಸುವ, ಎಕರೆಗೆ ಲಕ್ಷಾಂತರ ಗಳಿಸುವ ರೈತರ ಯಶೋಗಾಥೆಗಳೂ ಸದ್ದುಮಾಡುತ್ತವೆ. ಒಟ್ಟಿನಲ್ಲಿ ದೂರದಲ್ಲಿ ನಿಂತು ನೋಡುವವರಿಗೆ ಕೃಷಿ ಒಂದು ಸುಂದರ ಬದುಕು. ಆದರೆ ಅದನ್ನೇ ಮಾಡುತ್ತಿರುವವರನ್ನು ಕೇಳಿದರೆ, ನಿಟ್ಟುಸಿರುಬಿಡುತ್ತಲೇ ವಾಸ್ತವ ಸನ್ನಿವೇಶ ತೆರೆದಿಡುತ್ತಾರೆ. ‘ಕೃಷಿ ಎಂದರೆ ಕೇವಲ ಉದ್ಯೋಗವಲ್ಲ, ಅದು ಜೀವನವಿಧಾನ’ಎಂದು ಹೇಳುವುದು ಇದಕ್ಕೇ ಇರಬೇಕು.
ಉಚಿತ ಕೊಡುಗೆ ಅಪಾಯ: ಕೃಷಿಗಾಗಿ ಸರ್ಕಾರಗಳು ಏನೂ ಮಾಡಿಲ್ಲ; ರಾಜಕಾರಣಿಗಳಿಗೆ ರೈತರ ಬಗ್ಗೆ ಕಾಳಜಿಯೇ ಇಲ್ಲ ಎಂದೆಲ್ಲ ಷರಾ ಬರೆದರೆ ಅದು ಒಮ್ಮುಖ ಹೇಳಿಕೆಯಾಗುತ್ತದೆ. ಸರ್ಕಾರಗಳು ಕೃಷಿ ಏಳಿಗೆಗೆ ಇನ್ನಷ್ಟು ಮುತುವರ್ಜಿಯಿಂದ ಕೆಲಸಮಾಡಬಹುದಿತ್ತು ಎಂಬುದನ್ನು ಒಪ್ಪಬಹುದು. ಸರ್ಕಾರಗಳು ಹಲವು ಯೋಜನೆಗಳನ್ನು ತರುತ್ತವೆ. ಆದರೆ ಎಲ್ಲವೂ ಎಲ್ಲರನ್ನೂ ತಲುಪುವುದಿಲ್ಲ. ಅದೇ ಸಮಸ್ಯೆ. ಸವಲತ್ತು ಪಡೆಯಲು ನಿರ್ಬಂಧಗಳ ಬೇಲಿ ಬೇರೆ. ಕೃಷಿ ಸಾಲಮನ್ನಾ ಯೋಜನೆಯನ್ನೇ ತೆಗೆದುಕೊಂಡರೆ ಎಷ್ಟೋ ರೈತರು ಇದರ ವ್ಯಾಪ್ತಿಗೆ ಬರುವುದೇ ಇಲ್ಲ. ಆದರೆ ಸರ್ಕಾರಗಳು ಉಚಿತ ಕೊಡುಗೆಗಳ ಸರಣಿಯನ್ನು ಮುಂದುವರಿಸಿದಷ್ಟು ಜನರಲ್ಲಿ ದುಡಿಯುವ ಮನೋಭಾವ ಕಡಿಮೆಯಾಗುತ್ತದೆ ಎಂದು ಕೆಲ ಸಾಮಾಜಿಕ ತಜ್ಞರು ಹೇಳುತ್ತಲೇ ಬಂದಿದ್ದಾರೆ. ಇದರ ಪರಿಣಾಮ ಈಗಾಗಲೇ ಕಂಡುಬಂದಿದ್ದು, ಕೃಷಿಗೆ ಕಾರ್ವಿುಕರ ಕೊರತೆ ಆಗಿದೆ ಎಂಬುದನ್ನು ಇವರು ಗುರುತಿಸುತ್ತಾರೆ. ಆದರೆ ಇಂಥದನ್ನು ಬೆಂಬಲಿಸುವ ರಾಜಕಾರಣಿಗಳ ವಾದವೇ ಬೇರೆ. ‘ಹಸಿದವನಿಗೆ ಮೀನು ಹಿಡಿಯುವುದನ್ನು ಕಲಿಸಬೇಕೇ ವಿನಾ ಮೀನನ್ನೇ ಕೊಡುವುದಲ್ಲ’ ಎಂಬ ಮಾತಿನ ಅಂತರಾರ್ಥ ಅವರಿಗೆ ಗಮನಕ್ಕೆ ಬರುವುದೇ ಇಲ್ಲ; ಒಂದೊಮ್ಮೆ ತಿಳಿದರೂ ಅಲ್ಪಕಾಲೀನ ಲಾಭಕ್ಕಾಗಿ ಜಾಣಕುರುಡು ತೋರುತ್ತಾರೆ. ಹೀಗಾಗಿಯೇ, ವರ್ಗ ಅಸಮಾನತೆ ಇತ್ಯಾದಿ ವಿಷಯ ಪ್ರಸ್ತಾಪಿಸಿ ಚರ್ಚೆಯನ್ನು ಬೇರೆಡೆಗೆ ತಿರುಗಿಸಿಬಿಡುತ್ತಾರೆ. ನಿಜವಾಗಿ ಸಂಕಷ್ಟದಲ್ಲಿರುವವರಿಗೆ ಸರ್ಕಾರದ ನೆರವು ದೊರೆಯಬೇಕು ಎನ್ನುವುದರ ಬಗ್ಗೆ ಯಾರದ್ದೂ ತಕರಾರಿಲ್ಲ. ಆದರೆ ಇಂಥ ನೆರವಿನ ಸ್ವರೂಪ ಹೇಗಿರಬೇಕೆಂಬುದೇ ಜಿಜ್ಞಾಸೆಯ ಸಂಗತಿ. ಈಗಿನದೇ ಉದಾಹರಣೆ ನೀಡುವುದಾದರೆ- ಕರೊನಾ ಕಾರಣದಿಂದಾಗಿ ವಿವಿಧ ಜನವರ್ಗಗಳು ಕಷ್ಟಕ್ಕೆ ಸಿಲುಕಿದಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ಯಾಕೇಜ್ ಘೋಷಿಸಿದವು. ಯಾರೂ ಇದಕ್ಕೆ ವಿರೋಧಿಸಲಿಲ್ಲ. ಹಾಗೆನೋಡಿದರೆ, ಸರ್ಕಾರಗಳ ನರೇಗಾ ಯೋಜನೆಯಲ್ಲಿ ಕೊಡುವ ದಿನಗೂಲಿಗಿಂತ ಹೆಚ್ಚಿನ ಹಣವನ್ನು ಕೃಷಿಯಲ್ಲಿ ಕಾರ್ವಿುಕರಿಗೆ ನೀಡಲಾಗುತ್ತದೆ. ‘ನೀವು ಆಹಾರ ಸೇವಿಸುತ್ತೀರಿ ತಾನೆ? ಹಾಗಿದ್ದರೆ ಒಂದಲ್ಲ ಒಂದು ರೀತಿಯಲ್ಲಿ ನೀವೂ ಕೃಷಿ ಚಟುವಟಿಕೆಯಲ್ಲಿ ಪಾಲುದಾರರೇ’ಎಂದು ಹೇಳುವ ಮೂಲಕ ಅಮೆರಿಕನ್ ಸಾಹಿತಿ, ಸ್ವತಃ ರೈತರಾದ ವೆಂಡೆಲ್ ಬೆರ್ರಿ ಕೃಷಿಯ ವ್ಯಾಖ್ಯೆಯನ್ನು ಬಹುವಿಸ್ತಾರಕ್ಕೆ ಹಿಗ್ಗಿಸುತ್ತಾರೆ.
ಇಲ್ಲೊಂದು ಘಟನೆ ನೆನಪಾಗುತ್ತದೆ. ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ ಅಮೆರಿಕದ ಅಧ್ಯಕ್ಷರಾಗಿದ್ದಾಗಿನ ಸಮಯ. 1930ರ ದಶಕದ ಆರಂಭದಲ್ಲಿ ಮಹಾ ಆರ್ಥಿಕ ಹಿಂಜರಿತ ಸಂಭವಿಸಿತು (ಗ್ರೇಟ್ ಡಿಪ್ರೆಶನ್). ನಿರುದ್ಯೋಗ ವಿಪರೀತ ಹೆಚ್ಚಿ ಜನರು ನಿತ್ಯಜೀವನಕ್ಕೆ ಪರದಾಡಬೇಕಾಗಿ ಬಂತು. ಆಗ, ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೀನ್ ಅವರ ಸಲಹೆಯಂತೆ, ರೂಸ್ವೆಲ್ಟ್ ಹೊಸ ರೀತಿಯ ಕ್ರಮಕ್ಕೆ ಮುಂದಾದರು. ಜನರ ಕೈಲಿ ನೂರಾರು ಅಣೆಕಟ್ಟುಗಳು, ರಸ್ತೆಗಳು, ಸೇತುವೆಗಳು ಇತ್ಯಾದಿ ನಿರ್ವಣಗಳನ್ನು ಮಾಡಿಸಿದರು. ಇದರಿಂದ ಸರ್ಕಾರಕ್ಕೆ ಆಸ್ತಿ ಸೃಜನೆಯಾದರೆ, ಜನರಿಗೆ ಹಣ ದೊರೆತು ಅವರು ಅದನ್ನು ಖರೀದಿಗೆ ಬಳಸಿದ್ದರಿಂದ, ಕೈಗಾರಿಕಾ ಉತ್ಪನ್ನಗಳಿಗೆ ಬೇಡಿಕೆ ಬಂದು ಮತ್ತೆ ಉತ್ಪಾದನೆ ಶುರುವಾಗಿ ಆರ್ಥಿಕಚಕ್ರ ತಿರುಗತೊಡಗಿತು. ಇಂಥ ದೂರಗಾಮಿ ಆಲೋಚನೆಗಳನ್ನು ನಮ್ಮವರೂ ಮಾಡಲೆಂಬುದು ಅಪೇಕ್ಷೆ.
ಬೇರಿನತ್ತ ಮರಳುವ ತವಕ: ಏನೇ ತೊಂದರೆತೊಡಕುಗಳು ಇದ್ದರೂ ಕೃಷಿ ಮೇಲಿನ ವ್ಯಾಮೋಹ-ಪ್ರೀತಿ ಸುಲಭಕ್ಕೆ ಹೋಗುವಂಥದಲ್ಲ. ಮೂರು ದಶಕದ ಹಿಂದೆ ಸಿವಿಲ್ ಇಂಜಿನಿಯರಿಂಗ್ ಪದವಿ ನಂತರ ಉದ್ಯೋಗ ಅರಸಿ ಪುಣೆಗೆ ಹೊರಟು ನಿಂತ ಬನವಾಸಿ ಸನಿಹದ ಕಲ್ಗುಂಡಿಕೊಪ್ಪದ ಶಂಕರನಾರಾಯಣ ಹೆಗಡೆ ಅವರಿಗೆ ಸಣ್ಣದೊಂದು ಅಳುಕು, ಭವಿಷ್ಯ ಹೇಗೋ ಏನೋ ಎಂದು. ಆಗ ಅವರ ಅಣ್ಣ ಒಂದು ಗಣಪತಿ ವಿಗ್ರಹ ನೀಡಿ, ‘ನಿತ್ಯ ಇದನ್ನು ಪೂಜಿಸು ಒಳ್ಳೆಯದಾಗುತ್ತದೆ’ ಎಂದು ಭರವಸೆ ತುಂಬಿದರಂತೆ. ಆ ನಂಬಿಕೆಯಿಂದಲೇ ಇವರೂ ಗಣಪನ ಪೂಜೆಯಲ್ಲಿ ತೊಡಗಿ, ಅಪಾರ ಶ್ರದ್ಧೆ, ಭಕ್ತಿ ಬೆಳೆಸಿಕೊಂಡರು. ಕ್ರಮೇಣ ಗಣೇಶ ಮೂರ್ತಿ ಸಂಗ್ರಹದ ಹವ್ಯಾಸ ಇವರಲ್ಲಿ ಬಲಿಯಿತು. ಹೋದಲ್ಲಿ ಬಂದಲ್ಲಿ ಗಣೇಶ ವಿಗ್ರಹಗಳ ಸಂಗ್ರಹ ಶುರುವಾಯಿತು. ಈಗ ಇವರ ಮನೆಯೇ ಒಂದು ಗಣೇಶ ಮ್ಯೂಸಿಯಂ ರೀತಿ ಆಗಿದೆ. 1600ಕ್ಕೂ ಹೆಚ್ಚು ವೈವಿಧ್ಯಮಯ ಗಣೇಶ ಮೂರ್ತಿಗಳು ಇವರ ಮನೆಯನ್ನು ಅಲಂಕರಿಸಿವೆ. ಈಚೆಗೆ ಮನೆಯನ್ನೂ ವಿಶಿಷ್ಟವಾಗಿ ಕಟ್ಟಿಸಿದ್ದು, ಪೋರ್ಟಿಕೊ ದಾಟಿ ಒಳಹೋದೊಡದೆ ವಿಶಾಲವಾದ ಜಗುಲಿಯಲ್ಲಿ ಗಣಪತಿ ಸಂಗ್ರಹಾಲಯ ಗೋಚರಿಸುತ್ತದೆ. ಲೋಹ, ಮಣ್ಣು, ತೆಂಗು, ಟೆರ›ಕೋಟಾ, ಕಾಂಕ್ರೀಟ್, ಅಮೃತಶಿಲೆ ಹೀಗೆ ವಿವಿಧ ವಸ್ತುಗಳಿಂದ ತಯಾರಿಸಿದ ಮೂರ್ತಿಗಳು ಈ ಸಂಗ್ರಹದಲ್ಲಿ ಪವಡಿಸಿವೆ. ಮನೆಯ ಗೋಡೆಯಲ್ಲಿ ಜಾಗವಿರುವಲ್ಲೆಲ್ಲ ಗಣೇಶ ಚಿತ್ರಗಳೇ ತುಂಬಿವೆ. ಇವರು ಚಿತ್ರಕಲೆಯನ್ನೂ ಅಭ್ಯಾಸ ಮಾಡಿದ್ದು, ಕೆಲ ಪೇಂಟಿಂಗ್ಗಳನ್ನು ಸಹ ಮಾಡಿದ್ದಾರೆ.
ಇದೆಲ್ಲದರ ಜತೆಗೆ, ಇವರೊಬ್ಬ ಅದಮ್ಯ ಕೃಷಿ ಆಸಕ್ತ. ಈ ಕೃಷಿಪ್ರೀತಿ ಎಷ್ಟರಮಟ್ಟಿಗೆಂದರೆ, 2000ರಲ್ಲಿ ಉದ್ಯೋಗದಿಂದ ಸ್ವಯಂ ನಿವೃತ್ತಿ ಪಡೆದು, ಪುಣೆಯಲ್ಲಿನ ಆಸ್ತಿ ಮಾರಿ ಕೊರ್ಲಕಟ್ಟಾ ಸನಿಹದ ಹಲಗದ್ದೆ ಎಂಬಲ್ಲಿ ಹತ್ತು ಎಕರೆ ಭೂಮಿ ಖರೀದಿಸಿದರು. ಅದರಲ್ಲಿ ಐದು ಎಕರೆಯಲ್ಲಿ ಅಡಕೆ ತೋಟ ಮಾಡಿದ್ದಾರೆ. ತೋಟದಲ್ಲಿ ಕಾಳುಮೆಣಸನ್ನು ಸಹ ಚೆನ್ನಾಗಿ ಬೆಳೆಸಿದ್ದಾರೆ. ‘ನನಗೆ ಮೊದಲಿಂದಲೂ ಕೃಷಿಯಲ್ಲಿ ಆಸಕ್ತಿ ಇತ್ತು. ಆದರೆ ಜೀವನೋಪಾಯಕ್ಕಾಗಿ ನೌಕರಿಗೆ ಹೋದೆ. ಆದರೆ ಒಂದು ಹಂತದ ನಂತರ, ಜೀವನಸಾರ್ಥಕತೆಯ ಕುರಿತ ಪ್ರಶ್ನೆಗಳು ಮೂಡಲಾರಂಭಿಸಿವು. ಹಸಿರು ಸೆಳೆತ ಹೆಚ್ಚಾಯಿತು. ಆ ಕೃಷಿ ಆಕರ್ಷಣೆಯನ್ನು ಮೀರಲಾಗದೆ ವಾಪಸ್ ಬಂದು ಕೃಷಿಯಲ್ಲಿ ತೊಡಗಿಸಿಕೊಂಡೆ. ಆಗ ಅನೇಕರು, ಬಹುತೇಕ ಮಂದಿ ಕೃಷಿ ಭೂಮಿ ಮಾರಿ ಪೇಟೆಯತ್ತ ನಡೆದರೆ, ಇವನು ಪೇಟೆಯಲ್ಲಿನ ಆಸ್ತಿ ಮಾರಿ ಜಮೀನು ಕೊಳ್ಳುತ್ತಿದ್ದಾನಲ್ಲ ಎಂದಿದ್ದರು’ ಎಂದು ವಿವರಿಸುತ್ತಾರೆ, ಶಂಕರನಾರಾಯಣ ಹೆಗಡೆ. ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆದುದರಿಂದ ಯಾವುದೇ ವಿಷಯದ ನಿರ್ದಿಷ್ಟ ಪ್ಲಾನ್, ಮ್ಯಾನ್ ಮ್ಯಾನೇಜ್ವೆುಂಟ್ ಮುಂತಾದ ಸಂಗತಿಗಳು ಕೃಷಿಯಲ್ಲಿ ಸಹ ಉಪಯೋಗಕ್ಕೆ ಬಂದವು ಎಂದು ಅವರು ಹೇಳುತ್ತಾರೆ.
ಇವರ ಹಾಗೆ ಊರಲ್ಲಿ ಕೃಷಿ ಜಮೀನು ಖರೀದಿ ಮಾಡುವುದು ಈಗ ಒಂದು ರೀತಿಯ ಟ್ರೆಂಡ್ನ ಹಾಗೇ ಆಗಿದೆ. ಕೆಲವರ ವಿಷಯದಲ್ಲಿ ಮೂಲಬೇರಿನ ಅನ್ವೇಷಣೆಯೂ ಇರಬಹುದೇನೋ? ಹೊರಗಡೆ ಹೋಗಿ ಚೆನ್ನಾಗಿ ದುಡಿದವರು ಜಮೀನಿನ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಅದರಲ್ಲೂ ಲಾಕ್ಡೌನ್ ನಂತರದಲ್ಲಿ ಈ ಪ್ರವೃತ್ತಿ ಮತ್ತಷ್ಟು ಹೆಚ್ಚಿದೆ ಎಂದು ಉತ್ತರ ಕನ್ನಡದ ಕೆಲ ಕೃಷಿಕರು ಬೊಟ್ಟುಮಾಡುತ್ತಾರೆ. ಕರೊನಾ ನಿಯಂತ್ರಣಕ್ಕೆ ವಿಧಿಸಲಾದ ಲಾಕ್ಡೌನ್ ಅನೇಕರಲ್ಲಿ ಉದ್ಯೋಗ ಅಭದ್ರತೆಯ ಭಾವನೆಯನ್ನು ಸೃಷ್ಟಿಸಿತು. ಹೀಗಾಗಿ ಕೈಲಿ ದುಡ್ಡಿದ್ದವರು ಯಾವುದಕ್ಕೂ ಒಂದು ಭದ್ರತೆ ಇರಲಿ ಎಂದು ಜಮೀನು ಖರೀದಿಸುವ ಪರಿಪಾಠ ಹೆಚ್ಚಿದೆ ಎಂದು ಇವರು ಹೇಳುತ್ತಾರೆ. ಇದು ಒಂದುರೀತಿಯಲ್ಲಿ ಒಳ್ಳೆಯದೇ. ಹೇಗೆಂದರೆ, ರಾಜಕೀಯ ರಂಗ ಸುಧಾರಿಸಬೇಕೆಂದರೆ ಬೇರೆ ಬೇರೆ ಕ್ಷೇತ್ರಗಳವರೂ ರಾಜಕಾರಣಕ್ಕೆ ಇಳಿಯಬೇಕು ಎಂಬ ವಾದ ಇದ್ದ ಹಾಗೆ ಇದು ಕೂಡಾ. ಕೃಷಿ ಮುಂದುವರಿಯಬೇಕೆಂದರೆ ಹೊಸಬರು ಕೃಷಿಯಲ್ಲಿ ತೊಡಗಿಕೊಳ್ಳುವಂತಾಗಬೇಕು ಎಂಬುದು ಸ್ವಾಗತಾರ್ಹವೇ. ಇದರಿಂದ ಕೃಷಿಗೂ ನವಚೈತನ್ಯ ಬರುತ್ತದೆ; ಹೊಸ ನೀರು ಬಂದಂತಾಗುತ್ತದೆ. ಆದರೆ ಈ ಪ್ರವೃತ್ತಿಯಿಂದಾಗಿ ಜಮೀನಿನ ಬೆಲೆಯಲ್ಲಿ ಅನೂಹ್ಯ ಎಂಬಂಥ ರೀತಿಯಲ್ಲಿ ಹೆಚ್ಚಳವಾಗಿದೆ. ಅಡಕೆ ತೋಟವನ್ನೇ ತೆಗೆದುಕೊಂಡರೆ, ಎಕರೆಗೆ 30-40 ಲಕ್ಷ ರೂ.ವರೆಗೆ ಹೋದದ್ದೂ ಇದೆ. ಕೃಷಿ ಭವಿಷ್ಯದ ದೃಷ್ಟಿಯಿಂದ ಇಷ್ಟು ವಾಣಿಜ್ಯೀಕರಣ ಒಳ್ಳೆಯದಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ. ಇದರ ಜತೆಗೆ, ಕೃಷಿಯ ಗಂಧಗಾಳಿ ಗೊತ್ತಿಲ್ಲದವರು, ಕೃಷಿ ಸಂಸ್ಕೃತಿಯ ಬಗ್ಗೆ ಗೌರವವಿಲ್ಲದವರು ಬೇರಾವುದೋ ಉದ್ದೇಶ ಇಟ್ಟುಕೊಂಡು ಕೃಷಿ ಭೂಮಿ ಖರೀದಿಸಿದರೆ ಅವರಿಂದ ಕೃಷಿಗೆ ಯಾವ ಬಗೆಯ ಉಪಯೋಗವಾದೀತು ಎಂಬ ಪ್ರಶ್ನೆಯನ್ನೂ ಕೆಲವರು ಮುಂದಿಡುತ್ತಾರೆ. ಈಗಂತೂ, ಕೃಷಿ ಭೂಮಿ ಖರೀದಿ ಕಾನೂನನ್ನು ಸಹ ಸಡಿಲಿಸಲಾಗಿದೆ. ಮೊದಲಿದ್ದ ಮಿತಿಯಲ್ಲಿ ಹೆಚ್ಚಳವಾಗಿದೆ. ಇದರಿಂದಾಗಿ ಕೃಷಿ ಭೂಮಿ ಮಾರಾಟ-ಖರೀದಿ ವ್ಯವಹಾರ ಹೆಚ್ಚಿ ಜಮೀನು ಪ್ರಮಾಣ ಮತ್ತಷ್ಟು ಕುಗ್ಗಬಹುದು ಎಂಬ ಕಳವಳವೂ ಇದೆ. ಉದ್ಯಮಿಗಳೂ ಬಂದು ವಾತಾವರಣವೇ ಬದಲಾಗಬಹುದು ಎಂಬುದು ಇನ್ನು ಕೆಲವರ ಆತಂಕ.
ಈ ವಾದ-ಪ್ರತಿವಾದ, ಚಿಂತನ-ಮಂಥನಗಳ ನಡುವೆಯೇ ಕೃಷಿರಂಗದಲ್ಲಿ ಒಂದಷ್ಟು ಸಂಚಲನಗಳಂತೂ ನಡೆಯುತ್ತಿವೆ; ಹೊಸ ಹೊಸ ಪ್ರಯೋಗಗಳು ಚಾಲ್ತಿಯಲ್ಲಿವೆ. ಕೃಷಿ ಬೆಳೆಗೆ ಬೆಲೆಯಿಲ್ಲ ಎಂಬ ಬೇಸರದ ನಡುವೆಯೇ ಆಗೀಗ ಭರ್ಜರಿ ರೇಟು ಬಂದು ಕೃಷಿಕನ ಮುಖದಲ್ಲಿ ಮಂದಹಾಸ ಮೂಡಿ, ಭವಿಷ್ಯದ ಭರವಸೆ ಮೂಡುತ್ತದೆ. ಮಿಶ್ರ ಬೆಳೆ ಮೂಲಕ ಸಮೃದ್ಧ ಆದಾಯ ಪಡೆಯುವ ರೈತರು ಇತರರಿಗೆ ಪ್ರೇರಣೆಯಾಗುತ್ತಿದ್ದಾರೆ. ಜೈ ಜವಾನ್ ಜೈ ಕಿಸಾನ್! ‘ಕೃಷಿಯ ಆತ್ಯಂತಿಕ ಉದ್ದೇಶ ಕೇವಲ ಬೆಳೆ ತೆಗೆಯುವುದಲ್ಲ. ಇದು ವ್ಯಕ್ತಿಯನ್ನು ಪರಿಪೂರ್ಣನನ್ನಾಗಿಸುವ ಉಳುಮೆ’ಎನ್ನುವ ಮೂಲಕ ಕೃಷಿಯನ್ನು ಆಧ್ಯಾತ್ಮಿಕ ಆಯಾಮಕ್ಕೆ ಒಯ್ಯುತ್ತಾರೆ, ದಾರ್ಶನಿಕ ರೈತ, ಸಹಜಕೃಷಿ ಪ್ರತಿಪಾದಕ ಜಪಾನಿನ ಮಸನೊಬು ಫುಕುವೊಕ.
ಕೊನೇ ಮಾತು: ‘ಕೃಷಿಕನಿಗೆ ಹೆಣ್ಣು ಕೊಡುವುದಿಲ್ಲ’ ಎಂಬ ಮನಸ್ಥಿತಿ ಮಾಯವಾಗಿ, ‘ಕೃಷಿಕನಿಗೆ ಹೆಣ್ಣು ಕೊಡುತ್ತೇವೆ’ಎಂಬ ಮನೋಭಾವ ಬೆಳೆದಲ್ಲಿ ಎಷ್ಟು ಚೆನ್ನ ಅಲ್ಲವೆ!
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)