ಮರಳಿನ ಸಮಾಧಿಯಲ್ಲಿ ವಿಭಜನೆಯ ನೆನಪು; ಹಿಂದಿ ಲೇಖಕಿಗೆ ಬೂಕರ್ ಪ್ರಶಸ್ತಿ

VV
Published on

| ಜೆಬಿ

ಎಂಬತ್ತು ವರ್ಷದ ಮಹಿಳೆಯೊಬ್ಬರು ತನ್ನ ಪತಿಯ ನಿಧನದ ನಂತರ ಖಿನ್ನತೆಗೆ ಒಳಗಾಗುತ್ತಾರೆ. ಹಿಜಡಾ (ತೃತೀಯ ಲಿಂಗಿ) ಒಬ್ಬನ ಜತೆ ಸ್ನೇಹ ಬೆಳೆಸಿದ ನಂತರ ಹಾಗೂ ದೇಶ ವಿಭಜನೆ ಸಂದರ್ಭದಲ್ಲಿನ ಹದಿಹರೆಯದ ಅನುಭವಗಳನ್ನು ಮುಖಾಮುಖಿಯಾಗಿಸಲು ಪಾಕಿಸ್ತಾನಕ್ಕೆ ಪ್ರಯಾಣಿಸಿದ ಮೇಲೆ ಆಕೆ ಜೀವನದಲ್ಲಿ ಹೊಸ ಚೈತನ್ಯವನ್ನು ಪಡೆಯುತ್ತಾರೆ. ಪಾಕಿಸ್ತಾನದ ಈ ಪಯಣದಲ್ಲಿನ ಅನುಭವಗಳು ಒಬ್ಬ ತಾಯಿ, ಮಗಳು ಮತ್ತು ಒಬ್ಬ ಸ್ತ್ರೀವಾದಿಗೆ ಏನು ಅರ್ಥ ಕಲ್ಪಿಸಿಕೊಡುತ್ತವೆ ಎಂಬುದನ್ನು ಮರುಮೌಲ್ಯಮಾಪನ ಮಾಡುವ ಚಿತ್ರಣವನ್ನು ಒಳಗೊಂಡಿದೆ ಗೀತಾಂಜಲಿ ಶ್ರೀ ಅವರ ಕಾದಂಬರಿ ‘ರೇತ್ ಸಮಾಧಿ’ (ಮರಳಿನ ಸಮಾಧಿ).

ಗೀತಾಂಜಲಿ ಶ್ರೀ. ಈ ಹೆಸರು ಈಗ ಜಾಗತಿಕ ಲೇಖಕರ ಸಾಲಿನಲ್ಲಿ ಮುಂಚೂಣಿಗೆ ಬಂದಿದೆ. ದೆಹಲಿ ನಿವಾಸಿಯಾಗಿರುವ ಈ ಹಿಂದಿ ಲೇಖಕಿಯ ‘ರೇತ್ ಸಮಾಧಿ’ ಕಾದಂಬರಿಗೆ ಪ್ರತಿಷ್ಠಿತ ‘ಅಂತಾರಾಷ್ಟ್ರೀಯ ಬೂಕರ್’ ಪ್ರಶಸ್ತಿ ಒಲಿದುಬಂದಿದೆ. ಈ ಕಾದಂಬರಿಯು ಉತ್ತರ ಭಾರತದಲ್ಲಿನ ಕೌಟುಂಬಿಕ ಕಥೆಯಾಗಿದೆ. ಈ ಮೂಲಕ ಈ ಅಂತಾರಾಷ್ಟ್ರೀಯ ಪುರಸ್ಕಾರ ಸಂದ ಮೊಟ್ಟಮೊದಲ ಭಾರತೀಯ ಭಾಷಾ ಲೇಖಕರಾಗಿ ಗೀತಾಂಜಲಿ ಇತಿಹಾಸ ಸೃಷ್ಟಿಸಿದ್ದಾರೆ. ‘ಇಂಗ್ಲಿಷ್ ಪೆನ್’ ಅನುವಾದ ಪ್ರಶಸ್ತಿಗೂ ಈ ಕೃತಿ ಭಾಜನವಾಗಿದೆ. ( ಈ ಹಿಂದೆ ಆರುಂಧತಿ ರಾಯ್ ಹಾಗೂ ಅರವಿಂದ ಅಡಿಗ ಅವರಿಗೆ ಈ ಪುರಸ್ಕಾರ ಸಂದಿದ್ದರೂ ಅವರದು ಇಂಗ್ಲಿಷ್ ಕೃತಿಗಳಾಗಿದ್ದವು).

ಗೀತಾಂಜಲಿಯವರ ‘ರೇತ್ ಸಮಾಧಿ’ (ಮರಳಿನ ಸಮಾಧಿ) ಎಂಬ ಕಾದಂಬರಿಯನ್ನು ‘ಟೊಂಬ್ ಆಫ್ ಸ್ಯಾಂಡ್’ ಎಂಬ ಹೆಸರಿನಲ್ಲಿ ಅಮೆರಿಕದ ಡೈಸಿ ರಾಕ್​ವೆಲ್ ಇಂಗ್ಲಿಷ್​ಗೆ ಅನುವಾದ ಮಾಡಿದ್ದಾರೆ. ಹೀಗಾಗಿ, ಗೀತಾಂಜಲಿ ಹಾಗೂ ಡೈಸಿ ಇಬ್ಬರೂ ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಪುರಸ್ಕಾರದ ನಗದು ಮೊತ್ತದಲ್ಲಿ ಕೂಡ ಇಬ್ಬರಿಗೂ ಸಮಾನ ಹಂಚಿಕೆಯಾಗಿದೆ (ಪ್ರಶಸ್ತಿ ಮೊತ್ತ- 50 ಸಾವಿರ ಪೌಂಡ್. ಅಂದಾಜು 49 ಲಕ್ಷ ರೂಪಾಯಿ )

ಗುರುವಾರ ಲಂಡನ್​ನಲ್ಲಿ ಜರುಗಿದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ಗೀತಾಂಜಲಿ ಶ್ರೀ, ‘ನಾನು ಬೂಕರ್ ಪ್ರಶಸ್ತಿಯ ಬಗೆಗೆ ಎಂದೂ ಕನಸು ಕಂಡಿರಲಿಲ್ಲ. ಎಂತಹ ಬೃಹತ್ ಮನ್ನಣೆ ಇದು. ನನಗೆ ಅಚ್ಚರಿಯಾಗಿದೆ. ತುಂಬಾ ಸಂತಸವಾಗಿದೆ. ವಿನಮ್ರಳಾಗಿದ್ದೇನೆ’ ಎಂದು ಭಾವುಕರಾದರು. ‘ನನ್ನ ಮತ್ತು ಈ ಪುಸ್ತಕದ ಹಿಂದೆ ಹಿಂದಿ ಹಾಗೂ ಏಷ್ಯಾದ ಇತರ ಭಾಷೆಗಳಲ್ಲಿನ ಶ್ರೀಮಂತ ಹಾಗೂ ಪ್ರವರ್ಧಮಾನಕ್ಕೆ ಬರುತ್ತಿರುವ ಸಾಹಿತ್ಯಿಕ ಸಂಪ್ರದಾಯವಿದೆ. ಈ ಭಾಷೆಗಳಲ್ಲಿನ ಅತ್ಯುತ್ತಮ ಬರಹಗಾರರನ್ನು ತಿಳಿದುಕೊಳ್ಳುವ ಮೂಲಕ ವಿಶ್ವ ಸಾಹಿತ್ಯವು ಇನ್ನಷ್ಟು ಶ್ರೀಮಂತವಾಗುತ್ತದೆ. ಇಂತಹ ಸಂವಾದದಿಂದ ಜೀವನದ ಶಬ್ದಕೋಶವು ಇನ್ನಷ್ಟು ವಿಸ್ತಾರವಾಗುತ್ತದೆ’ ಎಂದು ಗೀತಾಂಜಲಿ ಶ್ರೀ ಹೇಳಿದರು. ಪ್ರಶಸ್ತಿ ಹಂಚಿಕೊಳ್ಳಲು ವೇದಿಕೆ ಮೇಲಿದ್ದ ಅನುವಾದಕಿ ಡೈಸಿ ರಾಕ್​ವೆಲ್ ಅವರು ಈ ಸಂದರ್ಭವನ್ನು ‘ಹಿಂದಿ ಭಾಷೆಗೆ ಪ್ರೇಮಪತ್ರ’ ಎಂದು ವರ್ಣಿಸಿದರು. ‘ಗೀತಾಂಜಲಿ ಶ್ರೀ ಅವರ ಬಹುಸ್ವರ ಲಕ್ಷಣದ ಈ ಕಾದಂಬರಿಯಲ್ಲಿನ ಶಕ್ತಿ, ತಮಾಷೆ ಹಾಗೂ ಡೈಸಿ ರಾಕ್​ವೆಲ್ ಅವರ ಮಿಂಚಿನಂತಹ ಅನುವಾದ ನಮ್ಮನ್ನು ಸೆಳೆಯುತ್ತದೆ’ ಎಂದು ಬೂಕರ್ ಪ್ರಶಸ್ತಿ ತೀರ್ಪಗಾರ ಸಮಿತಿಯ ಅಧ್ಯಕ್ಷ ಫ್ರಾ ್ಯಕ್ ವೈನ್ ಶ್ಲಾಘಿಸಿದ್ದಾರೆ. ‘ಇದು ಭಾರತ ವಿಭಜನೆಯ ಪ್ರಕಾಶಮಾನವಾದ ಕಾದಂಬರಿಯಾಗಿದೆ. ಲೇಖಕರ ಶಬ್ದಸಂಪತ್ತು ಮತ್ತು ತೀವ್ರತರನಾದ ಸಹಾನುಭೂತಿಯು ಯುವಕರು, ಕುಟುಂಬ ಮತ್ತು ದೇಶವನ್ನು ಒಟ್ಟಾರೆಯಾಗಿ ಬಹುವರ್ಣಗಳಲ್ಲಿ ಬೆಸೆಯುತ್ತದೆ’ ಎಂದೂ ಫ್ರಾ ್ಯಕ್ ಬಣ್ಣಿಸಿದ್ದಾರೆ. ವಿಭಜನೆಯ ದುರಂತಕ್ಕೆ ಗಂಭೀರವಾಗಿ ಪ್ರತಿಕ್ರಿಯಿಸುವ ಬದಲು, ಲೇಖಕಿಯ ಲವಲವಿಕೆಯ ಧ್ವನಿ ಮತ್ತು ಉತ್ಕಟ ಪದಗಳ ಆಟದಿಂದಾಗಿ ಈ ಕೃತಿಯು ‘ಆಕರ್ಷಕ, ನೈಜವಾದ ರೂಪದ್ದಾಗಿದೆ’ ಎಂದಿದ್ದಾರೆ ತೀರ್ಪಗಾರರು.

ಲೇಖಕಿಯರ ಪರಿಚಯ

65 ವರ್ಷದ ಲೇಖಕಿ ಗೀತಾಂಜಲಿ ಶ್ರೀ ಅವರು ಅನೇಕ ಕಾದಂಬರಿ ಹಾಗೂ ಕಥಾ ಸಂಕಲನಗಳನ್ನು ರಚಿಸಿದ್ದಾರೆ. ಇವರ ಕೃತಿಗಳು ಇಂಗ್ಲಿಷ್, ಫ್ರೆಂಚ್, ಜರ್ಮನಿ, ಸರ್ಬಿಯಾ, ಕೊರಿಯಾ ಭಾಷೆಗಳಿಗೆ ಅನುವಾದಗೊಂಡಿವೆ. ಈಗ ಬೂಕರ್ ಪ್ರಶಸ್ತಿಗೆ ಪಾತ್ರವಾಗಿರುವ ’ರೇತ್ ಸಮಾಧಿ’ ಕಾದಂಬರಿಯು 2018ರಲ್ಲಿ ಹಿಂದಿಯಲ್ಲಿ ಪ್ರಕಟಗೊಂಡಿತ್ತು. ನಂತರ ಇಂಗ್ಲಿಷ್​ಗೆ ಅನುವಾದಗೊಂಡು, 2021ರಲ್ಲಿ ಟಿಲ್ಟೆಡ್ ಆಕ್ಸಿಸ್ ಪ್ರೆಸ್ ಪ್ರಕಾಶನದಿಂದ ಮೊದಲ ಪುಸ್ತಕವಾಗಿ ಪ್ರಕಟಗೊಂಡಿತ್ತು. ಗೀತಾಂಜಲಿ ಅವರ ತಂದೆ ಸರ್ಕಾರಿ ಸೇವೆಯಲ್ಲಿದ್ದು, ಉತ್ತರಪ್ರದೇಶದಲ್ಲಿಯೇ ಬಾಲ್ಯದ ದಿನಗಳನ್ನು ಕಳೆದಿದ್ದಾರೆ. ಅಂದು ಮಕ್ಕಳಿಗೆ ಇಂಗ್ಲಿಷ್ ಪುಸ್ತಕಗಳ ಕೊರತೆ ಇದ್ದುದರಿಂದ ಸಹಜವಾಗಿಯೇ ಅವರಿಗೆ ಹಿಂದಿ ಭಾಷೆಯೊಂದಿಗೆ ಹೆಚ್ಚಿನ ಒಡನಾಟ ಮೂಡಿತು. ಅನುವಾದಕಿ ಡೈಸಿ ರಾಕ್​ವೆಲ್ ಅವರು ಅವರು ಅಮೆರಿಕದ ವೆರ್ವೆಂಟ್ ನಿವಾಸಿ. ಅಮೆರಿಕದ ಷಿಕಾಗೋ ವಿಶ್ವವಿದ್ಯಾಲಯದಿಂದ ದಕ್ಷಿಣ ಏಷ್ಯಾ ಸಾಹಿತ್ಯದಲ್ಲಿ ಪಿಎಚ್.ಡಿ ಪಡೆದಿದ್ದಾರೆ. 90ರ ದಶಕದ ಆರಂಭದಿಂದಲೂ ಹಿಂದಿ ಹಾಗೂ ಉರ್ದು ಸಾಹಿತ್ಯವನ್ನು ಅಧ್ಯಯನ ಮಾಡುತ್ತಿದ್ದಾರೆ.

ಗೀತಾಂಜಲಿ ಅವರ ವಿಶಿಷ್ಟ ಶೈಲಿ ಹಾಗೂ ಪದಪ್ರಯೋಗ ದಿಂದಾಗಿ ಈ ಪುಸ್ತಕವು ಅನುವಾದಿಸಲು ಸುಲಭವಾಗಿರಲಿಲ್ಲ. | ಡೈಸಿ ರಾಕ್​ವೆಲ್ ‘ಪ್ರಶಸ್ತಿ ಬರುವುದರಲ್ಲಿ ಒಂದು ವಿಷಣ್ಣತೆಯ ಸಂತೃಪ್ತಿ ಇದೆ. ರೇತ್ ಸಮಾಧಿಯು ವಿಶ್ವದಲ್ಲಿ ವಾಸಿಸುವವರಿಗೆ ಒಂದು ಸೊಗಸು. ಇದು ಮುಂಬರುವ ವಿನಾಶದ ಮುಖದಲ್ಲಿ ಭರವಸೆ ಉಳಿಸಿಕೊಳ್ಳುವ ಶಾಶ್ವತ ಶಕ್ತಿಯಾಗಿದೆ. ಬೂಕರ್ ಪ್ರಶಸ್ತಿಯು ಖಂಡಿತವಾಗಿಯೂ ಈ ಕೃತಿಯನ್ನು ಹೆಚ್ಚಿನ ಜನರಿಗೆ ತಲುಪಿಸುತ್ತದೆ. | ಗೀತಾಂಜಲಿ ಶ್ರೀ

ಅಂತಿಮ ಸುತ್ತಿಗೆ 6 ಕೃತಿ: ಈ ಬಾರಿ ಬೂಕರ್ ಪ್ರಶಸ್ತಿಗೆ 135 ಪುಸ್ತಕಗಳನ್ನು ಪರಿಗಣಿಸಲಾಗಿತ್ತು. ಇವುಗಳ ಪೈಕಿ 6 ಕೃತಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಯಿತು. ಟೊಂಬ್ ಆಫ್ ಸ್ಯಾಂಡ್, ಕರ್ಸ್​ಡ್ ಬನ್ನಿ, ಎ ನ್ಯೂ ನೇಮ್ ಹೆವನ್ ಬೈ ಮೀಕೊ ಕವಾಕಾಮಿ, ಎಲೆನಾ ನೋಸ್ ಮತ್ತು ದ ಬುಕ್ಸ್ ಆಫ್ ಜಾಕೊಬ್ ಕೃತಿಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು. ಈ ಬಾರಿಯ ವಿಶೇಷವೆಂದರೆ, ಅಂತಿಮ ಸುತ್ತಿಗೆ ಆಯ್ಕೆಯಾದ ಎಲ್ಲ ಪುಸ್ತಕಗಳಿಗೆ ತಲಾ 2500 ಪೌಂಡ್ ನಗದು ಬಹುಮಾನ ನೀಡಿರುವುದು. ಹಿಂದಿನ ವರ್ಷದವರೆಗೆ ಈ ನಗದು ಬಹುಮಾನದ ಮೊತ್ತವು 1000 ಪೌಂಡ್ ಆಗಿತ್ತು.

ಅಂತಾರಾಷ್ಟ್ರೀಯ ಪುರಸ್ಕಾರ: ಇಂಗ್ಲಿಷ್​ನಲ್ಲಿ ಅನುವಾದಗೊಂಡ ಹಾಗೂ ಇಂಗ್ಲೆಂಡ್ ಅಥವಾ ಐರ್ಲೆಂಡ್​ನಲ್ಲಿ ಪ್ರಕಟಗೊಂಡ ಕಾಲ್ಪನಿಕ ಕಾದಂಬರಿ ಅಥವಾ ಕಥೆಗಳಿಗೆ ಬೂಕರ್ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುತ್ತದೆ. 1968ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಬೂಕರ್ ಮೆಕ್​ಕನೆಲ್ ಪ್ರಶಸ್ತಿ ಎಂದು ಈ ಮೊದಲು ಹೆಸರಿಸಲಾಗಿತ್ತು. ಆರಂಭದಲ್ಲಿ ಇಂಗ್ಲೆಂಡ್, ಐರ್ಲೆಂಡ್ ಹಾಗೂ ಕಾಮನ್​ವೆಲ್ತ್ ರಾಷ್ಟ್ರಗಳ ಇಂಗ್ಲಿಷ್ ಭಾಷೆಯ ಲೇಖಕರಿಗೆ ಮಾತ್ರ ಪ್ರಶಸ್ತಿ ನೀಡಲಾಗುತ್ತಿತ್ತು. 2014ರಿಂದ ಎಲ್ಲ ದೇಶಗಳ ಇಂಗ್ಲಿಷ್ ಲೇಖಕರಿಗೆ ಈ ಪ್ರಶಸ್ತಿಯನ್ನು ಮುಕ್ತವಾಗಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net