ಮನಸಿನ ಭಾರ ಕಳೆಯುತ್ತೆ ಕ್ಷಮಾಗುಣ: ಮನೋಲ್ಲಾಸ

Manollasa
Published on
| ನಾರಾಯಣ ರಾಯಚೂರು

ಕೋಪ ಬಂದಾಗ ಸಾಮಾನ್ಯವಾಗಿ ‘ಒಂದರಿಂದ ಹತ್ತನ್ನು ಎಣಿಸು...’ ಎಂದು ಹೇಳುವುದೂ ಉಂಟು. ಅಂದರೆ ಕೋಪದ ಕಿಡಿಯನ್ನು ಕಡಿಮೆ ಮಾಡಲು ಈ ವಿಷಯಾಂತರ ಸಹಾಯಕವಾದೀತು ಎಂಬ ಆಶಯ. ‘ಸಿಟ್ಟು ಬಂದಾಗ ಹಿಟ್ಟು ಮುಕ್ಕು’ ಎಂಬುದು ಹಳೆಯ ಗಾದೆ. ‘ಸಿಟ್ಟಿನ ಕೈಗೆ ಬುದ್ಧಿಕೊಡಬೇಡ’ ಎಂಬ ಎಚ್ಚರಿಕೆಯ ಮಾತು ಇದೇ ಉದ್ದೇಶ ಹೊಂದಿರುವಂಥದು. ಕೋಪದ ಕಿಚ್ಚು, ಹೊಟ್ಟೆಕಿಚ್ಚು ಇವೆಲ್ಲ ಧಾರಕನಿಗೇ ಮಾರಕವಾಗಿರುವಂಥವು. ಆದಷ್ಟು ಅಂಥವುಗಳನ್ನು ಚಿಗುರುವ ಹಂತದಲ್ಲೇ ಚಿವುಟಿ ಬಿಡುವುದು ಚಿರಕಾಲ ಉತ್ತಮ.

ನಾವು ಇತರರಲ್ಲಿ ಕಾಣುವ ದೋಷಗಳು ನಿಜವಾಗಿ ನಮ್ಮ ದೋಷಗಳದ್ದೇ ಪ್ರತಿಬಿಂಬಗಳು. ಆದ್ದರಿಂದ ನಮ್ಮ ಕೋಪವನ್ನು ನಮ್ಮ ಮೇಲೆಯೇ ಪ್ರಯೋಗಿಸಿಕೊಳ್ಳುವುದು ಉತ್ತಮ. ಕೋಪಶಮನಕ್ಕೆ ಹತ್ತೆಣಿಸುವುದು ಒಂದು ಲೆಕ್ಕಾಚಾರವಾದರೆ, ಕೋಪ ಬಂದಾಗ ಸ್ಥಳಾಂತರ ಮಾಡುವುದು ಅಥವಾ ಒಂದು ಲೋಟ ನೀರು ಕುಡಿಯುವುದು ಅಪಾಯ ತಪ್ಪಿಸುವ ಕ್ರಮವಾಗಿ ಬಳಸಲಾಗುತ್ತದೆ. ಆದರೆ ಇವೆಲ್ಲಕ್ಕಿಂತ ಸೂಕ್ತ, ಸಮಂಜಸ ನಿವಾರಣೋಪಾಯ ಕ್ಷಮೆಯ ಮಾರ್ಗ. ಹೌದು, ಕ್ಷಮಾಗುಣವನ್ನು ಮೈಗೂಡಿಸಿಕೊಂಡು ಬಿಟ್ಟರೆ ಕೋಪವನ್ನು ಗೆದ್ದಂತೆಯೇ. ‘ಕ್ಷಮಿಸಿದಾಂವ- ಗೆದ್ದಾಂವ’ ಎಂದು ನೆಮ್ಮದಿಯ ನಿಟ್ಟುಸಿರು ಬಿಡಬಹುದು.

ಕ್ಷಮಾಗುಣವು ಸಾಕಷ್ಟು ತಾಳ್ಮೆ ಮತ್ತು ಸಹನೆಯನ್ನು ಬೇಡುವಂಥದ್ದು. ಅದನ್ನೇ ಡಿವಿಜಿ ಅವರು ಹೇಳಿರುವುದು, ‘ಸಹನೆ ವಜ್ರದ ಕವಚ, ಮಂಕುತಿಮ್ಮ’ ಅಂತ. ಪ್ರತಿದಿನ ಮಲಗುವ ಮುಂಚೆಯೊಮ್ಮೆ ನೆನಪಿಸಿಕೊಳ್ಳೋಣ; ಯಾರಾದರೂ ನಮಗೆ ಮೋಸ ಅಥವಾ ಅನ್ಯಾಯ ಮಾಡಿದ್ದಾರೆಯೇ, ಅವಮಾನ ಮಾಡಿದ್ದಾರೆಯೇ, ಅಪವಾದ ಹೊರಿಸಿದ್ದಾರೆಯೇ? ಹೌದು, ಎಂದಾದಲ್ಲಿ ಅವರ ಹೆಸರನ್ನೊಮ್ಮೆ ಹೇಳಿ, ಶಾಂತವಾದ ಮುಖಭಾವದಿಂದ- ‘ಇಗೋ ನಾನು ನಿಮ್ಮನ್ನು ಕ್ಷಮಿಸಿದ್ದೇನೆ, ಈ ಘಟನೆಯನ್ನು ನನ್ನ ಸ್ಮೃತಿಪಟಲದಿಂದ ಅಳಿಸಿದ್ದೇನೆ’ ಎಂದು ಹೇಳಿಕೊಳ್ಳಿ. ನಮ್ಮ ವಾಟ್ಸ್​ಆಪ್​ಗಳಿಂದ, ಕಂಪ್ಯೂಟರ್​ಗಳಿಂದ ಬೇಡದ್ದನ್ನು ಡಿಲೀಟ್ ಮಾಡುತ್ತೇವಲ್ಲ ಹಾಗೆಯೇ ಕೆಟ್ಟ ಸಂಗತಿ, ನೆನಪುಗಳನ್ನು ನಮ್ಮ ಸ್ಮೃತಿಪಟಲದಿಂದ ಅಳಿಸಿ ಹಾಕಬೇಕು. ಆಗ ನೋಡಿ ನಮಗೆಂಥ ಸುಖನಿದ್ದೆ ಆವರಿಸಿಕೊಳ್ಳುತ್ತದೆಯೆಂದು! ನಿರಾಳ, ಸುಖ-ನಿದ್ದೆಯ ಸವಿ ನಮ್ಮ ಪಾಲಿನದಾಗುವುದು ಶತಃಸಿದ್ಧ. ಅದಕ್ಕೇ ದಾಸವರೇಣ್ಯ ಪುರಂದರ ದಾಸರು ‘ಧರ್ಮವೇ ಜಯವೆಂಬ ದಿವ್ಯಮಂತ್ರ’ ಕೀರ್ತನೆಯಲ್ಲಿ ‘ವಿಷವಿಕ್ಕಿದವಗೆ ಷಡ್ರಸವನುಣಿಸಲೇ ಬೇಕು; ಮೋಸಗಾರನ ಹೆಸರ ಮಗನಿಗಿಡಬೇಕು’ ಎನ್ನುವಷ್ಟರಮಟ್ಟಿಗಿನ ಕ್ಷಮಾಗುಣವನ್ನು ಬೆಳೆಸಿಕೊಳ್ಳಲು ಹೇಳಿರುವುದು. ಗೆಳೆಯನೊಬ್ಬನಿಂದ ಕೆಟ್ಟದಾಗಿ ನಡೆಯಿಸಿಕೊಂಡಿದ್ದವನೊಬ್ಬ ಗಾಂಧೀಜಿ ಬಳಿ ಬಂದು ಆತಂಕ ತೋಡಿಕೊಂಡ. ಬಾಪು ಹೇಳಿದರು- ‘ನಿನ್ನ ಒಡಲ ಕೋಪವನ್ನೆಲ್ಲ ತಿಳಿಸುವ ಪತ್ರವೊಂದನ್ನು ಬರೆದುಕೊಂಡು ಬಾ’ ಎಂದು. ಎರಡು ದಿನ ಕಳೆದ ಮೇಲೆ ಬಂದ ಆತ ‘ನಾನು ಪತ್ರ ಬರೆದು ತಂದಿರುವೆ, ಅಂಚೆಗೆ ಹಾಕಲೇ?’ ಎಂದು ಕೇಳಿದ. ಗಾಂಧೀಜಿ ಹೇಳಿದರು-‘ಅಗತ್ಯವಿಲ್ಲ, ನೀನೀಗ ನಿರಾಳನಾಗಿರುವಂತೆ ಕಾಣುತ್ತಿದ್ದಿ. ಈ ಕಾಗದ ಅಂಚೆಡಬ್ಬಿಗಲ್ಲ- ಕಸದಬುಟ್ಟಿಗೆ ಹಾಕಬೇಕು’ ಎಂದರು. ಕೋಪ ತಾನೇ ತಾನಾಗಿ ಶಮನವಾಗಿ ಬಿಟ್ಟಿತು!

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net