ಭಾರತ ಇತ್ತ, ಚೀನಾ ಅತ್ತ, ಚಾಣಾಕ್ಷ ಪುತಿನ್ ಚಿತ್ತ ಎತ್ತ?

Column F
Published on

ಇತ್ತ ಭಾರತದ ಗಡಿಯಲ್ಲಿ ಚೀನಾ ವ್ಯಾಪಕ ಪ್ರಮಾಣದಲ್ಲಿ ಯುದ್ಧಸಿದ್ಧತೆಯಲ್ಲಿ ತೊಡಗಿದೆ, ಅತ್ತ ಜಪಾನ್ ಸಮುದ್ರದಲ್ಲಿ ಚೀನೀ ನೌಕಾದಳದ ಜತೆ ರಷ್ಯನ್ ನೌಕಾದಳ ಕಸರತ್ತು ನಡೆಸಿದೆ; ಇತ್ತ ಚೀನಾ ವಿರುದ್ಧ ಭಾರತದ ಶಕ್ತಿಯನ್ನು ಗಣನೀಯವಾಗಿ ವೃದ್ಧಿಸಬಲ್ಲ ರಷ್ಯನ್ ಎಸ್-400 ಮಿಸೈಲ್​ಗಳು ಭಾರತಕ್ಕೆ ಬರಲಾರಂಭಿಸಿವೆ, ಅತ್ತ ಅದಕ್ಕಿಂತಲೂ ಮುಂದುವರಿದ ಎಸ್-500 ಮಿಸೈಲ್​ಗಳನ್ನು ರಷ್ಯಾದಿಂದ ಪಡೆದುಕೊಳ್ಳಲು ಚೀನಾ ಪ್ರಯತ್ನ ಆರಂಭಿಸಿದೆ; ಇತ್ತ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನೀ ಹಕ್ಕುಗಳನ್ನು ರಷ್ಯಾ ಮಾನ್ಯ ಮಾಡುತ್ತಿಲ್ಲ. ಅತ್ತ ಯೂಕ್ರೇನ್​ಗೆ ಸೇರಿದ ಕ್ರಿಮಿಯಾ ಪರ್ಯಾಯದ್ವೀಪವನ್ನು 2014ರಲ್ಲಿ ರಷ್ಯಾ ಆಕ್ರಮಿಸಿಕೊಂಡದ್ದನ್ನು ಚೀನಾ ಇದುವರೆಗೂ ಸಮರ್ಥಿಸಿಲ್ಲ; ಅತ್ತ ಕಳೆದ ವಾರವಿಡೀ ಯುಕ್ರೇನ್ ಮೇಲೆ ಆಕ್ರಮಣವೆಸಗಲು ಗಡಿಯಲ್ಲಿ ರಷ್ಯಾ ಒಂದು ಲಕ್ಷ ಸೈನಿಕರನ್ನು ತಯಾರಾಗಿ ನಿಲ್ಲಿಸಿದೆ ಎಂದು ಅಮೆರಿಕ ಮತ್ತು ಯೂರೋಪಿಯನ್ ಯೂನಿಯನ್ ಆಪಾದಿಸಿವೆ, ಇತ್ತ ರಷ್ಯಾ ತಾನೇನೂ ಹಾಗೆ ಮಾಡುತ್ತಿಲ್ಲವೆಂದೂ, ತನ್ನ ಮೇಲೆ ಆಕ್ರಮಣವೆಸಗಲು ಅಮೆರಿಕ ಮತ್ತದರ ಸಹಯೋಗಿಗಳು ನೆಪ ಹುಡುಕುತ್ತಿದ್ದಾವೆಂದೂ, ಹಾಗೇನಾದರೂ ಆದರೆ ತನ್ನ ಪರವಾಗಿ ನಿಲ್ಲಬೇಕೆಂದೂ ಚೀನಾವನ್ನು ರಷ್ಯಾ ಕೇಳಿಕೊಂಡಿದೆ. ಇಂತಹ ತರ್ಕಕ್ಕೇ ನಿಲುಕದ ಅಂತಾರಾಷ್ಟ್ರೀಯ ವಿದ್ಯಮಾನಗಳ ನಡುವೆ ರಷ್ಯನ್ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಇದೇ ಡಿಸೆಂಬರ್ 6ರಂದು ಭಾರತಕ್ಕೆ ಬರುತ್ತಿದ್ದಾರೆ. ಈ ಭೇಟಿಯನ್ನು ಅತೀವ ಕುತೂಹಲದಿಂದ, ತುಸು ಆತಂಕದಿಂದ ಗಮನಿಸುವವರು ನವದೆಹಲಿಗಿಂತಲೂ ವಾಷಿಂಗ್ಟನ್ ಮತ್ತು ಬೀಜಿಂಗ್​ಗಳಲ್ಲಿ ಹೆಚ್ಚಾಗಿದ್ದಾರೆ ಎನ್ನುವುದು ವಿರೋಧಾಭಾಸದ ಸರಣಿಯನ್ನು ಇಂದು ‘ಜಗದಗಲ’ಕ್ಕೆ ಎಳೆದು ತಂದಿದೆ.

ಇಂದು ಭಾರತ ಸಿಲುಕಿಕೊಂಡಿರುವ ವಿಷಮ ಸನ್ನಿವೇಶ ಮತ್ತು ಅದನ್ನು ಪರಿಹರಿಸುವಲ್ಲಿ ರಷ್ಯಾ ವಹಿಸಬಹುದಾದ ಪಾತ್ರವನ್ನು ಅರಿಯಬೇಕಾದರೆ ಇದುವರೆಗೆ ರಷ್ಯಾ ಅಥವಾ ಹಿಂದಿನ ಸೋವಿಯತ್ ಯೂನಿಯನ್ ಭಾರತಕ್ಕೆ ಏನೇನು ಮಾಡಿದೆ ಎನ್ನುವುದರ ಸೂಕ್ಷ್ಮ ಪರಿಚಯ ಅಗತ್ಯವಾಗುತ್ತದೆ. ಅದರ ಆಧಾರದ ಮೇಲೆ ಪುತಿನ್ ಭೇಟಿಯ ವಸ್ತುನಿಷ್ಠ ಚಿತ್ರಣ ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ.

ಫೇಬಿಯನ್ ಸೋಶಿಯಲಿಸ್ಟ್ ಆಗಿದ್ದ ಅಂದರೆ ಶಾಂತಿಯುತ ಹಾಗೂ ಸಾಂವಿಧಾನಿಕ ಮಾರ್ಗದಲ್ಲಿ ಸಮಾಜವಾದೀ ವ್ಯವಸ್ಥೆಯನ್ನು ನಿರ್ವಿುಸಬಹುದೆಂದು ನಂಬಿದ್ದ, ಸಾಮ್ರಾಜ್ಯಶಾಹಿಯ ವಿರೋಧಿಯಾಗಿದ್ದ ಜವಾಹರ್​ಲಾಲ್ ನೆಹರು ಸಹಜವಾಗಿಯೇ ರಾಜತಾಂತ್ರಿಕ ಕ್ಷೇತ್ರದಲ್ಲಿ ಸೋವಿಯತ್ ಯೂನಿಯನ್ ಜತೆ ನಿಕಟ ಸಹಯೋಗ ಬಯಸಿ ಅದಕ್ಕಾಗಿ ಮೊದಲ ದಿನದಿಂದಲೇ ಪ್ರಯತ್ನ ಆರಂಭಿಸಿದ್ದರು. ಆದರೆ ನೆಹರು ಸೋವಿಯತ್ ಯೂನಿಯನ್​ಗೆ ನೀಡಿದಷ್ಟು ಪ್ರಾಮುಖ್ಯವನ್ನು ಆ ಕಮ್ಯೂನಿಸ್ಟ್ ದೈತ್ಯ ಭಾರತಕ್ಕೆ ನೀಡಲಿಲ್ಲ. ಭಾರತ ಸ್ವತಂತ್ರವಾದಾಗ ಆ ಸುದ್ದಿ ಸೋವಿಯತ್ ಪತ್ರಿಕೆಗಳ ಒಳಪುಟಗಳಲ್ಲೂ ಕಾಣಿಸಿಕೊಳ್ಳಲಿಲ್ಲ. ಅಲ್ಲದೆ ನೆಹರುರನ್ನು ಸಮಾಜವಾದಿ ಎಂದು ಒಪ್ಪಿಕೊಳ್ಳಲು ಸೋವಿಯತ್ ಸರ್ವಾಧಿಕಾರಿ ಸ್ಟಾಲಿನ್ ತಯಾರಾಗಿರಲೇ ಇಲ್ಲ. ನೆಹರುಗೆ ಆತ ಉಪಯೋಗಿಸುತ್ತಿದ್ದ ಬೈಗುಳವೆಂದರೆ ‘ಸಾಮ್ರಾಜ್ಯಶಾಹಿಗಳ ನೌಕರ’ ಎಂದು! ಸಾಮ್ರಾಜ್ಯಶಾಹಿಯ ಬದ್ಧವಿರೋಧಿಗೆ ಎಂಥ ಹಣೆಪಟ್ಟಿ! ಅದು ಸರಿಯೇ ಇರಬಹುದು. ಭಾರತದ ಬಗ್ಗೆ, ಕಾಂಗ್ರೆಸ್ ಬಗ್ಗೆ, ನೆಹರು ಬಗ್ಗೆ ಭಾರತೀಯರಿಗೇ ಗೊತ್ತಿಲ್ಲದ ಅದೆಷ್ಟೋ ಮಾಹಿತಿಗಳನ್ನು ಸೋವಿಯತ್ ಗುಪ್ತಚರ ಸಂಸ್ಥೆ ಕೆಜಿಬಿ ಕರಾರುವಾಕ್ಕಾಗಿ ಸಂಗ್ರಹಿಸಿ ನಿಯಮಿತವಾಗಿ ಕ್ರೆಮ್ಲಿನ್ ಮುಂದೆ ಇಡುತ್ತಿತ್ತು!

ಇರಲಿ, ಅದೆಲ್ಲ ನೆಹರು ಬಗ್ಗೆ ಮಾತ್ರ ಎಂದುಕೊಂಡರೂ ಒಂದು ದೇಶವಾಗಿ ಭಾರತದ ಬಗ್ಗೆ ಸ್ಟಾಲಿನ್ ಮತ್ತವರ ಉತ್ತರಾಧಿಕಾರಿಗಳು ಋಣಾತ್ಮಕ ನಿಲುವು ತಳೆದು, ಈ ದೇಶದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸಿದ ಉದಾಹರಣೆಗಳ ಸರಣಿ ಇತಿಹಾಸವೇ ಇದೆ. 1948-53ರ ನಡುವೆ ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ಬಗ್ಗೆ ನಡೆದ ಚರ್ಚೆಗಳಲ್ಲಿ ಸೋವಿಯತ್ ರಾಯಭಾರಿ ಬಾಯಿ ತೆರೆದದ್ದು ಮೂರೇಮೂರು ಬಾರಿ ಮತ್ತು ಪ್ರತಿಬಾರಿಯೂ ಆತ ಮೂರು ವಾಕ್ಯಗಳಿಗಿಂತ ಒಂದು ಪದವನ್ನೂ ಹೆಚ್ಚಿಗೆ ಮಾತಾಡಲಿಲ್ಲ! ನಂತರ ಹೊರಬಂದ ಮಾಹಿತಿಗಳ ಪ್ರಕಾರ ಕಾಶ್ಮೀರವನ್ನು ಸ್ವತಂತ್ರ ರಾಷ್ಟ್ರವನ್ನಾಗಿಸುವ ಉದ್ದೇಶ ಸ್ಟಾಲಿನ್​ಗಿತ್ತು ಮತ್ತು ಆ ನಿಟ್ಟಿನಲ್ಲಿ ಆತ ಕಾರ್ಯಯೋಜನೆಗಳನ್ನೂ ರೂಪಿಸತೊಡಗಿದ್ದ. 1953ರಲ್ಲಿ ಸ್ಟಾಲಿನ್ ಮರಣಾನಂತರ ಬುಲ್ಗಾನಿನ್, ಮಲೆಂಕೋವ್ ಮತ್ತು ನಿಕಿತಾ ಕೃಶ್ಚೇವ್ ಮತ್ತು ಪ್ರಾರಂಭದಲ್ಲಿ ಲಿಯೋಜಿದ್ ಬ್ರೆಝೆ್ನೕವ್ ಮತ್ತು ಅಲೆಕ್ಸೀ ಕೊಸಿಗಿನ್ ಜೋಡಿ ಭಾರತದ ಬಗ್ಗೆ ಆಸಕ್ತಿ ತೋರಲಾರಂಭಿಸಿದರೂ ವಿದೇಶನೀತಿಯಲ್ಲಿ ಭಾರತಕ್ಕೆ ಅನುಕೂಲವಾಗುವಂಥ ಮಾರ್ಪಾಡುಗಳನ್ನೇನೂ ಮಾಡಲಿಲ್ಲ. 1956ರಲ್ಲಿ ಹಂಗೆರಿಯಲ್ಲಿ ಸೋವಿಯತ್ ಸೇನೆ ಪ್ರಜಾಪ್ರಭುತ್ವವಾದಿಗಳ ಮಾರಣಹೋಮಗೈದಾಗ ಸುಮ್ಮನಿದ್ದ ನೆಹರು 1961ರಲ್ಲಿ ಅಮೆರಿಕದ ಸಿಐಎ ಕ್ಯೂಬದಲ್ಲಿ ಕಮ್ಯೂನಿಸ್ಟ್-ವಿರೋಧಿ ಕ್ರಾಂತಿಗೆ ಪ್ರಯತ್ನಿಸಿದಾಗ ಗಟ್ಟಿಗಂಟಲಿನಲ್ಲಿ ಖಂಡನೆಗೆ ತೊಡಗಿದರು. ಇಷ್ಟಾಗಿಯೂ, 1962ರ ಭಾರತ-ಚೀನಾ ಯುದ್ಧದಲ್ಲಿ ಮಾಸ್ಕೋ ಚೀನಾದ ಪರ ನಿಂತಿತು.

ಹಾಗೆಯೇ 1960ರ ದಶಕದುದ್ದಕ್ಕೂ ಸೋವಿಯತ್ ಯೂನಿಯನ್ ಪಾಕಿಸ್ತಾನದ ಜತೆ ಮೈತ್ರಿಗಾಗಿ ತಹತಹಿಸಿದ್ದುದನ್ನೂ ನೋಡುತ್ತೇವೆ. ಪಾಕಿಸ್ತಾನವನ್ನು ಅಮೆರಿಕದಿಂದ ವಿಮುಖಗೊಳಿಸಿ ತನ್ನತ್ತ ಸೆಳೆದುಕೊಳ್ಳುವ ಉದ್ದೇಶದಿಂದ ಆ ದೇಶಕ್ಕೆ ಶಸ್ತ್ರಾಸ್ತ್ರಗಳು ಹಾಗೂ ಆರ್ಥಿಕ ನೆರವನ್ನಲ್ಲದೆ ಅಣುಶಕ್ತಿ ತಂತ್ರಜ್ಞಾನವನ್ನೂ ನೀಡಲು ಮುಂದಾಗಿತ್ತು. ಮಾಸ್ಕೋವನ್ನು ‘ಪ್ರಾಮಾಣಿಕ ಮಧ್ಯವರ್ತಿ’ ಎಂದು ಬಗೆದು 1966ರ ಜನವರಿಯಲ್ಲಿ ತಾಷ್ಕೆಂಟ್ ಸಮಾವೇಶಕ್ಕೆ ಹೋದ ಪ್ರಧಾನಿ ಲಾಲ್​ಬಹಾದುರ್ ಶಾಸ್ತ್ರಿಯವರ ಮೇಲೆ ಸೋವಿಯತ್ ಪ್ರಧಾನಿ ಕೊಸಿಗಿನ್ ಅಪರಿಮಿತ ಒತ್ತಡ ಹೇರಿ ಅವರು ಭಾರತದ ಹಿತಾಸಕ್ತಿಗಳಿಗೆ ಮಾರಕವಾಗುವಂಥ, ಪಾಕಿಸ್ತಾನಕ್ಕೆ ಅನುಕೂಲವಾಗುವಂಥ ಒಪ್ಪಂದಕ್ಕೆ ಸಹಿ ಹಾಕುವಂತೆ ಮಾಡಿದ್ದರು. ಈ ಒತ್ತಡವೇ ಶಾಸ್ತ್ರಿಯವರ ಹೃದಯಾಘಾತಕ್ಕೆ ಕಾರಣವಾಯಿತು ಎಂದೂ ಹೇಳಲಾಗುತ್ತಿದೆ.

ಆದರೆ ಪಾಕಿಸ್ತಾನವನ್ನು ಸೆಳೆದುಕೊಳ್ಳುವ ಸೋವಿಯತ್ ನೇತಾರರ ಇನ್ನಿಲ್ಲದ ಆಟಗಳಿಗೆ ಸೊಪು್ಪ ಹಾಕದ ಆ ದೇಶ ಅಮೆರಿಕಕ್ಕೇ ಅಂಟಿಕೊಂಡು ಕೂತದ್ದಲ್ಲದೇ 1971ರಲ್ಲಿ ಚೀನಾವನ್ನೂ ಅಮೆರಿಕಕ್ಕೆ ಹತ್ತಿರವಾಗಿಸಿತು. ಆಗ ಸೋವಿಯತ್ ನಾಯಕರು ವಿಧಿಯಿಲ್ಲದೆ ಭಾರತದತ್ತ ತಿರುಗಿದರು. ಅದೇ ಸಮಯದಲ್ಲಿ ಬಾಂಗ್ಲಾ ವಿಮೋಚನೆಗಾಗಿ ಪಾಕಿಸ್ತಾನದ ವಿರುದ್ಧ ಯುದ್ಧ ತಯಾರಿಯಲ್ಲಿದ್ದ ಪ್ರಧಾನಿ ಇಂದಿರಾ ಭಾರತದ ವಿರುದ್ಧ ವಾಷಿಂಗ್ಟನ್-ಬೀಜಿಂಗ್-ಇಸ್ಲಾಮಾಬಾದ್​ಗಳು ಸೇರಿದ ದುಷ್ಟಕೂಟ ರೂಪುಗೊಂಡಿದ್ದನ್ನು ಕಂಡು ಮಾಸ್ಕೋಗೆ ಮಣೆ ಹಾಕುವ ನಿರ್ಧಾರ ಕೈಗೊಂಡರು. ಎರಡೂ ದೇಶಗಳು 1971ರ ಆಗಸ್ಟ್​ನಲ್ಲಿ ಶಾಂತಿ ಮತ್ತು ಸೌಹಾರ್ದದ ಒಪ್ಪಂದಕ್ಕೆ ಸಹಿ ಹಾಕಿದವು. ಪಾಕಿಸ್ತಾನದ ಜತೆಗಿನ ತನ್ನ ಯುದ್ಧದಲ್ಲಿ ಅಮೆರಿಕ ಮತ್ತು ಚೀನಾಗಳು ಪ್ರವೇಶಿಸದಂತೆ ತಡೆಯಲು ಇಂದಿರಾ ರೂಪಿಸಿದ ತಂತ್ರ ಇದು.

ಆಗ ಸೋವಿಯತ್ ಯೂನಿಯನ್ ತನ್ನ ಹಿಂದಿನ ಎಲ್ಲ ದ್ವಂದ್ವಗಳಿಂದಲೂ ಹೊರಬಂದು ಸಂಪೂರ್ಣವಾಗಿ ಭಾರತದ ಪರ ನಿಂತಿತು. ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಅಮೆರಿಕ ಮತ್ತದರ ಸಹಯೋಗಿಗಳು ಹೂಡಹೊರಟ ಹುನ್ನಾರಗಳನ್ನು ವಿಫಲಗೊಳಿಸಿದ್ದಲ್ಲದೇ ವ್ಲಾದಿವೋಸ್ತಾಕ್​ನಿಂದ ಸೋವಿಯತ್ ನೌಕಾಸೇನೆಯನ್ನು ಕಳಿಸಿ ಭಾರತಕ್ಕೆ ಬೆದರಿಕೆಯೊಡ್ಡುತ್ತಿದ್ದ ಅಮೆರಿಕದ ಕೈಗಳನ್ನು ಕಟ್ಟಿಹಾಕಿತು. ಹಾಗೆ ಮಾಡದೇಹೋಗಿದ್ದರೆ ಭಾರತದ ಮೇಲೆ ಅಮೆರಿಕ ದಾಳಿಯೆಸಗುತ್ತಿದ್ದುದು ನಿಶ್ಚಿತ. ಆಗ ಪಾಕಿಸ್ತಾನವನ್ನು ಸೋಲಿಸುವುದೂ, ಬಾಂಗ್ಲಾದೇಶವನ್ನು ವಿಮೋಚನೆಗೊಳಿಸುವುದೂ ಭಾರತಕ್ಕೆ ಸಾಧ್ಯವಾಗುತ್ತಿರಲಿಲ್ಲ.

ಹೀಗೆ ಆರಂಭವಾದ ಭಾರತ-ಸೋವಿಯತ್ ಮೈತ್ರಿಯ ಸುವರ್ಣಯುಗ ಮುಂದಿನ ಹದಿನೈದು ವರ್ಷಗಳವರೆಗೆ ಅವ್ಯಾಹತವಾಗಿ ಮುಂದುವರಿಯಿತು. ಅಣ್ವಸ್ತ್ರ ನಿಷೇಧ ಒಪ್ಪಂದದ ಹೊರತಾಗಿ ಭಾರತಕ್ಕೆ ಸಂಬಂಧಿಸಿದ ಇತರೆಲ್ಲ ವಿವಾದಗಳಲ್ಲೂ ಮಾಸ್ಕೋ ಪೂರ್ಣವಾಗಿ ಭಾರತದ ಪರ ನಿಂತಿತು. ಆದರೆ ಅದಕ್ಕಾಗಿ ಭಾರತ ತೆತ್ತ ಬೆಲೆ ಅಪಾರ. ರೂಪಾಯಿ-ರೂಬಲ್ ವಿನಿಮಯ ದರವನ್ನು ತನಗೆ ಅನುಕೂಲವಾಗುವಂತೆ, ಅಂತಾರಾಷ್ಟ್ರೀಯ ವಿನಿಮಯ ದರದ ನಿಯಮಗಳಿಗೆ ವಿರುದ್ಧವಾಗಿ ನಿರ್ಣಯಿಸಿ, ಅದನ್ನು ನಮ್ಮ ಮೇಲೆ ಹೇರಿ ಆರ್ಥಿಕ ವ್ಯವಹಾರಗಳಲ್ಲಿ ಭಾರತವನ್ನು ಸೋವಿಯತ್ ಯೂನಿಯನ್ ಕೊಳ್ಳೆಹೊಡೆಯಿತು. ಈ ಲೂಟಿಯಿಂದ ದೇಶವನ್ನು ಪಾರುಮಾಡಲು ಜಾಣೆ, ಕುಶಾಗ್ರಮತಿ, ವ್ಯವಹಾರಚತುರೆ ಇಂದಿರಾಗೂ ಸಾಧ್ಯವಾಗಲಿಲ್ಲ.

1990-91ರಲ್ಲಿ ಕಮ್ಯೂನಿಸ್ಟ್ ವ್ಯವಸ್ಥೆ ಕುಸಿದುಬಿದ್ದು ಸೋವಿಯತ್ ಯೂನಿಯನ್ ಛಿದ್ರವಾಯಿತಷ್ಟೇ. ರಷ್ಯಾದ ನವನಾಯಕ ಬೋರಿಸ್ ಎಲ್ತ್​ಸಿನ್ ಕಾಲದಲ್ಲಿ ಭಾರತ-ರಷ್ಯಾ ಸಂಬಂಧಗಳು ಇಳಿಮುಖವಾದವು. ಅಮೆರಿಕದ ಒತ್ತಡಕ್ಕೆ ಮಣಿದ ಯೆಲ್ತ್​ಸಿನ್ ಸರ್ಕಾರ ಭಾರತಕ್ಕೆ ಕ್ರಿಯೋಜೆನಿಕ್ ತಂತ್ರಜ್ಞಾನ ನೀಡಲು ನಿರಾಕರಿಸಿತು.

ಈ ಶತಮಾನದ ಎರಡು ದಶಕಗಳುದ್ದಕ್ಕೂ ಕ್ರೆಮ್ಲಿನ್​ನಲ್ಲಿ ಪಟ್ಟಾಗಿ ಕುಳಿತಿರುವುದು ವ್ಲಾದಿಮಿರ್ ಪುತಿನ್. ಇವರ ವಿದೇಶನೀತಿಯ ಲಕ್ಷಣವೆಂದರೆ ಯಾರೊಂದಿಗೂ ಪೂರ್ಣ ಮೈತ್ರಿಯನ್ನಾಗಲೀ, ಪೂರ್ಣ ವೈಮನಸ್ಯವನ್ನಾಗಲೀ ಅನುಸರಿಸದಿರುವುದು. ಭಾರತ ಒಂದು ದೊಡ್ಡ ಶಸ್ತ್ರಾಸ್ತ್ರ ಮಾರುಕಟ್ಟೆ ಎಂದರಿತಿರುವ ಅವರು ಈ ದೇಶವನ್ನು ತಮ್ಮ ದೊಡ್ಡ ಗಿರಾಕಿಯನ್ನಾಗಿಟ್ಟುಕೊಂಡೇ ಭಾರತ ರಕ್ಷಣಾತ್ಮಕವಾಗಿ ಬಲಹೀನಗೊಳ್ಳುವ ಸನ್ನಿವೇಶಗಳನ್ನೂ ಸೃಷ್ಟಿಸುತ್ತಿದ್ದಾರೆ. ಅವರ ಈ ನಡೆ ತೀವ್ರಗೊಂಡದ್ದು ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೇ ಎನ್ನುವುದು ಕುತೂಹಲಕರ.

ಹಿಂದೂ ಮಹಾಸಾಗರದಲ್ಲಿ ಭಾರತದ ಹಿತಾಸಕ್ತಿಗಳ ವಿರುದ್ಧ ಚೀನಾ ಎಸಗುತ್ತಿರುವ ಕಾರ್ಯಯೋಜನೆಗಳು ಮುಂದುವರಿದಲ್ಲಿ ಅಮೆರಿಕ, ಆಸ್ಟ್ರೇಲಿಯಾ, ವಿಯೆಟ್ನಾಂ ಮತ್ತು ಜಪಾನ್ ಜತೆ ಸೇರಿ ಇಂಡೋ-ಪೆಸಿಫಿಕ್ ವಲಯದಲ್ಲಿ ತಾನು ಚೀನಾದ ಹಿತಾಸಕ್ತಿಗಳ ವಿರುದ್ಧ ಕಾರ್ಯಯೋಜನೆ ರೂಪಿಸುವ ಬೆದರಿಕೆಯನ್ನು ತನ್ನ ನಡೆಗಳ ಮೂಲಕ ಮೋದಿ ಸರ್ಕಾರ ಪ್ರಾರಂಭದಿಂದಲೇ ಚೀನಾಗೆ ನೀಡತೊಡಗಿತು. ಈ ಸಂಬಂಧದಲ್ಲಿ ಚೀನೀ ಚಿಂತೆಗಳಿಗೆ ಸ್ಪಂದಿಸಿದ ಪುತಿನ್ ಹಿಂದೆ ಭಾರತಕ್ಕೆ ನೀಡಿರುವ ಸುಕೋಯ್-35 ಯುದ್ಧವಿಮಾನಗಳು ಹಾಗೂ ಭಾರತ ಮತ್ತು ರಷ್ಯಾಗಳು ಜಂಟಿಯಾಗಿ ನಿರ್ವಿುಸುತ್ತಿರುವ ಬ್ರಹ್ಮೋಸ್ ಕ್ಷಿಪಣಿಗಳ ತಂತ್ರಜ್ಞಾನವನ್ನು ಚೀನಾಗೆ ನೀಡಿದ್ದಾರೆ. ಅಷ್ಟೇ ಅಲ್ಲ, ಭಾರತಕ್ಕೆ ನೀಡಿರುವ ಬಹುತೇಕ ಎಲ್ಲ ಯುದ್ಧೋಪಕರಣಗಳ ತಂತ್ರಜ್ಞಾನವನ್ನು ಪಾಕಿಸ್ತಾನಕ್ಕೂ ನೀಡಿದ್ದಾರೆ, ಪಾಕ್ ಸೇನೆಯೊಡನೆ ರಷ್ಯನ್ ಸೇನೆ ಜಂಟಿ ಕಸರತ್ತು ನಡೆಸಲೂ ವ್ಯವಸ್ಥೆ ಮಾಡಿದ್ದಾರೆ.

ಪುತಿನ್ ತಮ್ಮ ಕುಟಿಲ ನಡೆಯನ್ನು ಯಾವ ಹಿಂಜರಿಕೆಯೂ ಇಲ್ಲದೇ ಬಹಿರಂಗವಾಗಿ ಪ್ರದರ್ಶಿಸಿದ್ದು ಭಾರತದ ನೆಲದಲ್ಲೇ! 2016ರ ಅಕ್ಟೋಬರ್​ನಲ್ಲಿ ಗೋವಾದಲ್ಲಿ ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ, ಸೌತ್ ಅಫ್ರಿಕಾಗಳ ‘ಬ್ರಿಕ್ಸ್’ ಸಮ್ಮೇಳನ ನಡೆದದ್ದು ನೆನಪಿದೆಯೇ? ಸಮ್ಮೇಳನಕ್ಕೆ ಮೊದಲು ಪೂತಿನ್ ಹೇಳಿದ್ದು ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾದ ಯಾವುದೇ ನಿಲುವನ್ನು ರಷ್ಯಾ ತೆಗೆದುಕೊಳ್ಳುವುದಿಲ್ಲ ಎಂದು. ಆದರೆ ಮರುದಿನ ಸಮ್ಮೇಳನ ಮುಗಿದು ಬ್ರಿಕ್ಸ್ ಘೊಷಣೆ ಹೊರಬಿದ್ದಾಗ ಅದರಲ್ಲಿನ 109ನೇ ಪ್ಯಾರಾಗ್ರಾಫ್​ಗಳಲ್ಲಿ ಭಾರತ ತನ್ನ ಹಿತಕ್ಕೆ ಬಲುಮುಖ್ಯವೆಂದು ಪ್ರತಿಕ್ಷಣವೂ ಹೇಳುತ್ತಿದ್ದ ವಿಷಯಗಳಿಗೆ ಸ್ಥಾನವಿರಲಿಲ್ಲ. ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳೆಂದು ವಿಶ್ವಸಂಸ್ಥೆ ಹೆಸರಿಸಿರುವ ಸಂಘಟನೆಗಳ ಪಟ್ಟಿಯಲ್ಲಿ ಪಶ್ಚಿಮ ಏಷ್ಯಾದಲ್ಲಿ ಕ್ರಿಯಾಶೀಲವಾಗಿರುವ ಜಬಾತ್-ಅಲ್-ನುಸ್ರಾ ಮತ್ತು ಪಾಕಿಸ್ತಾನೀ ಮೂಲದ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೋಯ್ಬಾಗಳೂ ಇವೆ. ಆದರೆ ಬ್ರಿಕ್ಸ್ ಘೊಷಣೆ ರಷ್ಯಾ ತನ್ನ ಚೆಚೆನ್ಯಾ ಪ್ರದೇಶದಲ್ಲಿ ತನಗೆ ಅಪಾಯವೊಡ್ಡುತ್ತದೆ ಎಂದು ‘ನಂಬಿರುವ’ ಅಲ್-ನುಸ್ರಾವನ್ನು ಹೆಸರಿಸಿ ಖಂಡಿಸಿದರೆ ಭಾರತದ ವಿರುದ್ಧ ನಿಜವಾಗಿಯೂ ಕ್ರಿಯಾಶೀಲವಾಗಿರುವ ಲಷ್ಕರ್ ಮತ್ತು ಜೈಶ್ ಬಗ್ಗೆ ಮೌನವಾಗಿ ಉಳಿಯಿತು.

ಪ್ರಸಕ್ತ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಗ್ಗೆ ಇಡೀ ವಿಶ್ವ ಗಂಭೀರವಾಗಿದ್ದರೆ ಪುತಿನ್ ಅದರೊಂದಿಗೆ ವ್ಯವಹಾರ ಕುದುರಿಸಲು ನೋಡುತ್ತಿದ್ದಾರೆ. ಕಾಬೂಲ್​ನಲ್ಲಿ ರಾಯಭಾರ ಕಚೇರಿಗಳನ್ನು ತೆರವುಗೊಳಿಸದ ಮೂರೇ ಮೂರು ದೇಶಗಳಲ್ಲಿ ರಷ್ಯಾ ಒಂದು. ಇನ್ನೆರಡು ಚೀನಾ ಮತ್ತು ಪಾಕಿಸ್ತಾನ. ಪುತಿನ್ ಯಾರ ಪರವಾಗೂ ಇಲ್ಲ, ಯಾರ ವಿರುದ್ಧವಾಗೂ ಇಲ್ಲ ಎಂದು ಮೇಲ್ನೋಟಕ್ಕೆ ಅನಿಸಬಹುದು. ಆದರೆ ಯಾರ ಪರವಾಗಿಯೂ ಇಲ್ಲದವರು ಕಷ್ಟಕ್ಕೆ ಸಿಲುಕಿಕೊಂಡರೆ ಅವರ ಪರವಾಗಿಯೂ ಯಾರೂ ಇರುವುದಿಲ್ಲ ಎನ್ನುವ ಸತ್ಯವನ್ನು ತನ್ನನ್ನು ತಾನು ಚಾಣಾಕ್ಷ ಎಂದು ತಿಳಿದಿರುವ ಪುತಿನ್ ತಿಳಿಯುವ ಅಗತ್ಯವಿದೆ. ಇಂದೇನಾದರೂ ಜಾಗತಿಕ ಸಂಘರ್ಷ ಆರಂಭವಾದರೆ ಅಮೆರಿಕ, ಜಪಾನ್, ಭಾರತಗಳು ಒಂಟಿಯಾಗಿರುವುದಿಲ್ಲ. ಚೀನಾಗೂ ಒಂಟಿತನ ಕಾಡದು. ಆದರೆ ಪುತಿನ್​ರ ರಷ್ಯಾಗೆ ಅದು ಕಟ್ಟಿಟ್ಟ ಬುತ್ತಿ. ಈ ಸತ್ಯ ಈಗ ಯೂಕ್ರೇನ್-ರಷ್ಯಾ ವಿಷಯದಲ್ಲೇ ಸಾಬೀತಾಗುತ್ತಿದೆ.

ಈ ಸನ್ನಿವೇಶದಲ್ಲಿ ಭಾರತಕ್ಕಿರುವ ಮಾರ್ಗವೆಂದರೆ ಅಮೆರಿಕ ಜತೆ ಘನಿಷ್ಠ ಸಂಬಂಧಗಳನ್ನು ಉಳಿಸಿಕೊಂಡೇ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಪೂರೈಕೆದಾರನಾದ ರಷ್ಯಾದಿಂದ ತನಗೆ ಬೇಕಾದ್ದೆಲ್ಲವನ್ನೂ ಪಡೆದುಕೊಳ್ಳುವುದು. ಪ್ರಧಾನಿ ಮೋದಿ ಆ ಪ್ರಯತ್ನವನ್ನು ಕಳೆದ ಆರು ವರ್ಷಗಳಿಂದಲೂ ಅನುಸರಿಸುತ್ತಲೇ ಇದ್ದಾರೆ. ಅದನ್ನು ಡಿಸೆಂಬರ್ 6ರಂದು ಮತ್ತೊಂದು ಮಜಲಿಗೊಯ್ಯುತ್ತಾರೆ ಎಂದು ನಿರೀಕ್ಷಿಸೋಣ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net