ಬಿಗಿ ಆಗ್ಬೇಕು ಕಾನೂನು: ಅನುತ್ಪಾದಕ ಸಾಲ ವಸೂಲಿಗೆ ಅಡೆತಡೆ..

Vittavani
Published on

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ಅತಿವೃಷ್ಟಿ, ಕರೊನಾ, ಮಾರುಕಟ್ಟೆಯಲ್ಲಿನ ವ್ಯತ್ಯಾಸಗಳು, ಕೀಟ ಬಾಧೆ, ರಾಜಕೀಯ ನಾಯಕರ ಸಾಲಮನ್ನಾ ಹೇಳಿಕೆ ಹೀಗೆ ವಿವಿಧ ಕಾರಣಗಳಿಂದ ರಾಜ್ಯದಲ್ಲಿ ಕೃಷಿ ಸಂಬಂಧಿ ಸಾಲಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ. ಹಾಗೆಯೇ ಅನುತ್ಪಾದಕ ಸಾಲ ವಿಪರೀತ ಹೆಚ್ಚುತ್ತಿದ್ದು, ಅದನ್ನು ವಸೂಲಿ ಮಾಡುವುದು ಬ್ಯಾಂಕ್​ಗಳಿಗೆ ತಲೆನೋವಾಗಿ ಪರಿಣಮಿಸುತ್ತಿದೆ.

ಬೆಳೆ ಸಾಲದ ಮೇಲಿನ ಮನ್ನಾ ಹೊರತಾಗಿಯೂ ರೈತರ ಮೇಲಿನ ಸಾಲದ ಭಾರ ಕಡಿಮೆಯಾದಂತೆ ಕಾಣಿಸುತ್ತಿಲ್ಲ. ಎನ್​ಪಿಎ ಪ್ರಮಾಣ ಹೆಚ್ಚುವುದು ಒಂದು ಕಡೆಯಾದರೆ, ಸಾಲ ವಸೂಲಿಗೆ ನಿಧಾನಗತಿಯ ಧೋರಣೆ ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರವೇ ನೋಡುವುದಾದರೆ, ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ 41 ಸಾವಿರಕ್ಕೂ ಮಿಕ್ಕಿದ ಎನ್​ಪಿಎ ಪ್ರಕರಣ ಬಗೆಹರಿಯುವ ಹಂತ ದಾಟದೇ ಬಾಕಿಯಾಗಿದೆ. ಅಂದರೆ ಸಾಲ ಮರುಪಾವತಿಯೂ ಆಗುತ್ತಿಲ್ಲ, ವರ್ಷದಿಂದ ವರ್ಷಕ್ಕೆ ಈ ಪಟ್ಟಿಗೆ ಸೇರುವ ಸಂಖ್ಯೆಯೂ ಹೆಚ್ಚಾಗುತ್ತಿದೆ, ಸಮಸ್ಯೆ ಪರಿಹರಿಸಬೇಕಾದ ಪಾಲುದಾರರಾದ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ. ಈ ಬೆಳವಣಿಗೆ ಹಣಕಾಸು ಸಂಸ್ಥೆಗಳನ್ನು ಕಂಗಾಲು ಮಾಡಿದ್ದು, ಸರ್ಕಾರದ ನೆರವು ಬಯಸಿವೆ. ಕಳೆದ ಆರ್ಥಿಕ ವರ್ಷವೊಂದರಲ್ಲೇ 15,949 ಪ್ರಕರಣ ಸರ್ಕಾರದ ಹಂತದಲ್ಲಿ ಬಾಕಿಯಾಗಿರುವುದು ಕಂಡುಬಂದಿದೆ. ಹಿಂದಿನ ಮೂರು ವರ್ಷಕ್ಕೆ ಹೋಲಿಸಿದರೆ 2020-21ರ ಒಂದೇ ವರ್ಷದಲ್ಲಿ ಬಾಕಿ ಸಂಖ್ಯೆ ಹೆಚ್ಚು ಎಂಬುದು ಗಮನಾರ್ಹ ಸಂಗತಿ. ಕೃಷಿ ಸಂಬಂಧಿ ಸಾಲಗಳು ಅನುತ್ಪಾದಕ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಸಾಲ ವಸೂಲಿಗೆ ಕಾನೂನಿನಲ್ಲಿ ಬಿಗಿ ಕ್ರಮದ ಅಗತ್ಯತೆಯನ್ನು ಬ್ಯಾಂಕ್​ಗಳು ಪ್ರತಿಪಾದಿಸಿದ್ದು ರಾಜ್ಯ ಸರ್ಕಾರದ ಮುಂದೆ ಪ್ರಸ್ತಾವನೆ ಮುಂದಿಟ್ಟಿವೆ. ಕೃಷಿ ಸಂಬಂಧಿತ ಸಾಲ ವಸೂಲಿ ವೇಳೆ ರೈತರಿಗೆ ರಕ್ಷಣೆ ನೀಡುವ ಉದ್ದೇಶದಿಂದ ರಾಜ್ಯದಲ್ಲಿ ಕಾನೂನು 46 ವರ್ಷಗಳಿಂದಲೂ ಜಾರಿಯಲ್ಲಿದೆ. ‘ಕರ್ನಾಟಕ ಕೃಷಿ ಸಾಲ ಕಾರ್ಯಾಚರಣೆಗಳು ಮತ್ತು ಇತರ ನಿಬಂಧನೆಗಳು 1974’ ಅಡಿಯಲ್ಲಿ ಬ್ಯಾಂಕ್​ಗಳ ಸಾಲ ವಸೂಲಾತಿ ನಡೆದುಕೊಂಡುಬಂದಿದೆ. ಅದರೆ, ಇದರಲ್ಲಿರುವ ನಿಯಮಗಳು ಸಾಲ ವಸೂಲಾತಿಯನ್ನು ಸಲೀಸು ಮಾಡುತ್ತಿಲ್ಲ, ಬ್ಯಾಂಕಿಂಗ್ ವ್ಯವಸ್ಥೆ ಹಾಳಾಗುತ್ತಿದೆ ಎಂಬುದು ಬ್ಯಾಂಕರ್​ಗಳ ಕಳವಳವಾಗಿದೆ. ರೈತನೊಬ್ಬ ಕೃಷಿ ಸಾಲ ಬಾಕಿ ಉಳಿಸಿಕೊಂಡು ಅನುತ್ಪಾದಕ ಪಟ್ಟಿಗೆ ಸೇರಿತೆಂದರೆ ಅದನ್ನು ಅಷ್ಟು ಸುಲಭವಾಗಿ ವಸೂಲು ಮಾಡುವ ಅವಕಾಶ ಈಗಿಲ್ಲ. ತನ್ನದೇ ಆದ ಪ್ರಕ್ರಿಯೆ ಇದೆ. ಬ್ಯಾಂಕ್​ಗಳು ಪ್ರಕ್ರಿಯೆಯಲ್ಲಿ ಕಷ್ಟಪಡುವಂತಾಗಿದೆ, ಇದೇ ಕಾರಣಕ್ಕೆ ಅನುತ್ಪಾದಕ ಸಾಲದ ಸಂಖ್ಯೆ ದೊಡ್ಡದಾಗುತ್ತಿದೆ ಎಂದು ರಾಜ್ಯ ಲೀಡ್ ಬ್ಯಾಂಕ್ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಮುಖ್ಯಾಂಶ

  • ರೆಕವರಿ ಸರ್ಟಿಫಿಕೇಟ್ ಬಾಕಿ (2021, ಸೆ.30ರವರೆಗೆ)- 41,951 ಸಾಲದ ಖಾತೆಗಳು 
  • ವ್ಯಾಜ್ಯ ಹೂಡಲು ಅವಕಾಶ ಸಿಗದೆ ಪ್ರಕ್ರಿಯೆ ಹಂತದಲ್ಲಿರುವ ಎನ್​ಪಿಎ- 1,04,966 ಕೋಟಿ ರೂ. ? ಕಳೆದ ಒಂದು ವರ್ಷದಲ್ಲಿ ಬಾಕಿಯಾಗಿರುವ ಪ್ರಕರಣ- 15,949
  • ಕಳೆದ ಮೂರು ವರ್ಷದಲ್ಲಿ ಬಾಕಿಯಾಗಿರುವ ಪ್ರಕರಣ- 12,612
  • 3ವರ್ಷಕ್ಕಿಂತ ಹೆಚ್ಚಿರುವ ಬಾಕಿ ಪ್ರಕರಣ- 13,390

ಯಾವ ಸಾಲಗಳು?: ಭೂಮಿ ಅಭಿವೃದ್ಧಿ, ಕೃಷಿ ಉಪಕರಣ ಖರೀದಿ, ವಾಹನ ಖರೀದಿ ಸೇರಿ ವಿವಿಧ ಉದ್ದೇಶಕ್ಕೆ ಪಡೆದ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲಗಳು.

ಸಾಲ ವಸೂಲಿಗೆ ಕೇರಳ ಮಾದರಿಯಲ್ಲಿ ಪರಿಣಾಮಕಾರಿ ವ್ಯವಸ್ಥೆ ಆಗಬೇಕಾಗಿದೆ. ಇಲ್ಲವಾದರೆ ಬ್ಯಾಂಕ್​ಗಳ ಮೇಲೆ ಹೊರೆ ಹೆಚ್ಚಾಗುತ್ತಾ ಹೋಗುತ್ತದೆ. ಕೊಟ್ಟ ಸಾಲದ ಹಣ ಕೂಡ ಜನರದ್ದೇ ಆಗಿರುತ್ತದೆ, ಅದರ ರಕ್ಷಣೆಯೂ ಆಗಬೇಕು.

| ಎಲ್​ಎಸ್​ಬಿಸಿ ಹಿರಿಯ ಅಧಿಕಾರಿ

ಯಾವುದೇ ರೈತ ಸಾಲ ಮರು ಪಾವತಿ ಮಾಡಬಾರದೆಂಬ ಮನಸ್ಥಿತಿಯಲ್ಲಿರಲ್ಲ. ಆದರೆ ರಾಜಕೀಯ ನಾಯಕರ ಸಾಲಮನ್ನಾ ಹೇಳಿಕೆಗಳು ಎನ್​ಪಿಎಗೆ ಹೆಚ್ಚು ಕಾರಣವಾಗುತ್ತಿವೆ.

| ಮನೋಹರ ಮಸ್ಕಿ ಸಹಕಾರಿ ಧುರೀಣ

ಪ್ರಸ್ತಾವನೆಯಲ್ಲಿ ಏನಿದೆ?

‘ಕರ್ನಾಟಕ ಕೃಷಿ ಸಾಲ ಕಾರ್ಯಾಚರಣೆಗಳು ಮತ್ತು ಇತರ ನಿಬಂಧನೆಗಳು 1974’ನ ಪ್ರಕಾರ, ಸಾಲ ವಸೂಲಿಗೆ ಬ್ಯಾಂಕ್​ಗಳು ವ್ಯಾಜ್ಯ ಹೂಡುತ್ತಿವೆ. ಆದರೆ, ಹಾಲಿ ನಿಯಮ ಪರಿಣಾಮಕಾರಿಯಾಗಿಲ್ಲ. ನೆರೆಯ ಕೇರಳದಲ್ಲಿ ಪರಿಣಾಮಕಾರಿಯಾಗಿದೆ, ಪ್ರಕ್ರಿಯೆಗಳು ತಡವಾಗುತ್ತಿವೆ. ಪ್ರತಿ ಬ್ಯಾಂಕ್​ಗಳು ಪ್ರತಿ ಪ್ರಕರಣದಲ್ಲೂ ಸಹಕಾರ ಇಲಾಖೆ ಜಿಲ್ಲಾ ಉಪ ನಿಬಂಧಕರಿಗೆ ಅರ್ಜಿ ಸಲ್ಲಿಸಬೇಕು. ಅಲ್ಲಿಂದ ರೆಕವರಿ ಪ್ರಮಾಣ ಪತ್ರ ಸಿದ್ಧವಾದರೂ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಹಂತದಲ್ಲಿ ಒಪ್ಪಿಗೆ ಸಿಗಬೇಕು. ಇದು ಇನ್ನೊಂದಿಷ್ಟು ತಡವಾಗುತ್ತಿದೆ. ಹೀಗಾಗಿ ಬಾಕಿ ಉಳಿದ ಪ್ರಕರಣಗಳನ್ನು ಆದ್ಯತೆ ಮೇಲೆ ಬಗೆಹರಿಸಬೇಕಾಗಿದೆ. ಜತೆಗೆ ಈ ವಿಷಯದಲ್ಲಿ ಮುಕ್ತ ಚರ್ಚೆ ನಡೆಯಬೇಕೆಂದು ಮುಖ್ಯಕಾರ್ಯದರ್ಶಿಯವರ ಗಮನಕ್ಕೆ ತರಲಾಗಿದೆ.

ಅಪೇಕ್ಷೆ ಏನು?

ವಸೂಲಾಗದ ಸಾಲವನ್ನು ಬ್ಯಾಂಕಿಗೆ ಮತ್ತೆ ಪಡೆಯಲು ಕೃಷಿಕರು ಇಟ್ಟ ಅಡಮಾನಗಳನ್ನು ಹರಾಜು ಮಾಡಲು ಬ್ಯಾಂಕ್​ಗಳಿಗೆ ಅವಕಾಶ ಇರುತ್ತದೆ. ಆದರೆ, ನೇರ ಹರಾಜು ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಸಾಲ ಕಟ್ಟದವರ ವಿರುದ್ಧ ವ್ಯಾಜ್ಯ ಹೂಡಬೇಕಾಗುತ್ತದೆ. ನಿಗದಿತ ಕಾಲಮಿತಿಯಲ್ಲಿ ಸಾಲ ಮರುಪಾವತಿಸಿಲ್ಲ ಎಂಬುದು ವ್ಯಾಜ್ಯದ ಸಾರಾಂಶವಾಗಿರುತ್ತದೆ. ಆದರೆ ವ್ಯಾಜ್ಯ ಹೂಡುವ ಮುನ್ನ ಸಹಕಾರ ಇಲಾಖೆಯ ಅನುಮತಿ ಪಡೆಯಬೇಕು, ಸಹಕಾರ ಇಲಾಖೆ ಅನುಮತಿ ನೀಡಿದ ಬಳಿಕ ಅನುಷ್ಠಾನ ಮಾಡುವುದು ಜಿಲ್ಲಾಡಳಿತದ ಜವಾಬ್ದಾರಿ. ಈ ಎರಡೂ ಹಂತದಲ್ಲಿ ತಡವಾಗುತ್ತಿದೆ, ಕಡತ ಬಾಕಿಯಾಗುತ್ತಿದೆ ಎಂಬುದು ಬ್ಯಾಂಕ್​ಗಳ ಗೋಳಾಗಿದೆ. ಕಡತ ಬಾಕಿ ಇಡುತ್ತಾ ಹೋದರೆ ಪ್ರಕರಣ ಬಗೆಹರಿಯದೆ ಬ್ಯಾಂಕ್​ಗಳ ಹೊರೆ ಮತ್ತಷ್ಟು ಹೆಚ್ಚಾಗಲಿದೆ. ಹೀಗಾಗಿ ಪ್ರಕ್ರಿಯೆ ಸರಳವಾಗಬೇಕು ಮತ್ತು ಕಾನೂನು ಬಿಗಿಯಾಗಬೇಕು ಎಂದು ಅಧಿಕಾರಿಗಳು ವಿವರಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net