

| ಆರ್.ಶ್ರೀನಿವಾಸ್ ಉಳ್ಳಾವಳ್ಳಿ ಚನ್ನರಾಯಪಟ್ಟಣ
ಹಲವು ವರ್ಷಗಳಿಂದ ಉಳುಮೆ ಕಾಣದೆ ಮಂಟಿಕಲ್ಲು ಹಾಗೂ ಕಾರೆ ಮುಳ್ಳಿನ ಗುಚ್ಚಿಯಿಂದ ಕೂಡಿ ಪಾಳು ಬಿದ್ದಿದ್ದ ಜಮೀನಿನಲ್ಲಿ ಉದ್ಯಮಿಯೊಬ್ಬರು ಕೃಷಿ ಮಾಡಿ ಯಶಸ್ಸಿಯಾಗಿರುವುದಲ್ಲದೆ, ಇತರರಿಗೆ ಮಾದರಿ ಎನಿಸಿದ್ದಾರೆ. ಚನ್ನರಾಯಪಟ್ಟಣ ತಾಲೂಕು ಹಿರೀಸಾವೆ ಹೋಬಳಿ ನಾಗನಹಳ್ಳಿ ಗ್ರಾಮದ ಸಿ.ಮಂಜೇಗೌಡ, ಪಾಳು ಬಿದ್ದಿದ್ದ ತಮ್ಮ 15 ಎಕರೆ ಪ್ರದೇಶದಲ್ಲಿ ಅರಣ್ಯಕೃಷಿಗೂ ಆದ್ಯತೆ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಇವರು, ಹಿರೀಸಾವೆ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯರಾಗಿದ್ದರು. ಸದಸ್ಯತ್ವ ಅವಧಿ ಮುಗಿದ ಮೇಲೆ ಕೃಷಿಯತ್ತ ಮುಖ ಮಾಡಿದ್ದು, ಪರಿಸರ ಅಭಿವೃದ್ಧಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.
15 ಎಕರೆ ಪೈಕಿ 5-6 ಎಕರೆ ಜಾಗದಲ್ಲಿ ಶುಂಠಿ ಬೆಳೆ ಅಳವಡಿಸಿದರೆ, ಒಂದಷ್ಟು ಭಾಗದಲ್ಲಿ ನೂರಾರು ತೆಂಗು, ಅಡಕೆ ಹಾಗೂ ಬಾಳೆ ನೆಟ್ಟಿದ್ದಾರೆ. ಉಳಿದ ಜಮೀನಿನಲ್ಲಿ ಮಾವು, ಹಲಸು, ದಾಳಿಂಬೆ, ಚಕ್ಕೆ, ಗಸಗಸೆ, ಏಲಕ್ಕಿ, ಸಪೋಟ, ಸೀತಾಫಲ, ಲಕ್ಷ್ಮಣಫಲ, ಚಕ್ಕೋತ, ನೇರಳೆ, ನಿಂಬೆ, ಯಳ್ಳಿ, ಚೆರ್ರಿ, ಬೆಟ್ಟದ ನೆಲ್ಲಿ, ಸೀಬೆ, ಪಪ್ಪಾಯಿ, ರಾಮಫಲ, ಕಿತ್ತಳೆ, ಹುಣಸೆ, ಮೂಸಂಬಿ, ಬಾದಾಮಿ, ಬಟರ್ ಫೂ›ಟ್ ಸೇರಿ ವಿವಿಧ ಬಗೆಯ ನೂರಾರು ಹಣ್ಣಿನ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದಾರೆ.
ಇವೆಲ್ಲದರ ನಡುವೆ ಸಾವಿರಾರು ಹೆಬ್ಬೇವು, ತೇಗ, ಹೊಂಗೆ, ಸಿಲ್ವರ್, ಮಹಾಘನಿ, ಕಾಡು ಗೋಡಂಬಿ ಹಾಗೂ ಇನ್ನಿತರ ಗಿಡಗಳನ್ನು ನೆಟ್ಟು ಅರಣ್ಯ ಕೃಷಿ ಅಭಿವೃದ್ಧಿಗೂ ಸಾಕಷ್ಟು ಆದ್ಯತೆ ನೀಡಲಾಗಿದೆ. ಜತೆಗೆ ಔಷಧ ಗುಣ ಹೊಂದಿರುವ ನೂರಾರು ಬಗೆಯ ಗಿಡಗಳನ್ನು ಬೆಳೆಸುತ್ತಿದ್ದಾರೆ. ಎಲ್ಲ ಸಸಿಗಳಿಗೂ ಹನಿ ನೀರಾವರಿ ಪದ್ಧತಿಯಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಹಸು, ಕುರಿ ಹಾಗೂ ಕೋಳಿ ಸಾಕಣೆಗೂ ಆದ್ಯತೆ ನೀಡಿದ್ದಾರೆ. ನಾಗನಹಳ್ಳಿ, ಪಿ.ಹೊಸಹಳ್ಳಿ ಗ್ರಾಮದ ತೋಪು ಹಾಗೂ ನಿಂಬೇಹಳ್ಳಿ ಗ್ರಾಮದ ರಸ್ತೆ ಬದಿ 2500ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಹನಿ ನೀರಾವರಿ ಪದ್ಧತಿ ಅಳವಡಿಸಿ ಪೋಷಣೆ ಮಾಡುವ ಮೂಲಕ ಸಿ.ಮಂಜೇಗೌಡ ಪರಿಸರ ಅಭಿವೃದ್ಧಿಗೂ ಆದ್ಯತೆ ನೀಡಿದ್ದಾರೆ.
ನನಗೆ ಚಿಕ್ಕಂದಿನಿಂದಲೂ ಕೃಷಿ ಚಟುವಟಿಕೆ, ಪರಿಸರ ಅಭಿವೃದ್ಧಿ ಬಗ್ಗೆ ಆಸಕ್ತಿ ಇತ್ತು. ಆದರೆ ಸದಾ ಉದ್ಯಮದಲ್ಲಿ ತೊಡಗುತ್ತಿದ್ದರಿಂದ ಸರಿಯಾಗಿ ಅವಕಾಶ ಸಿಕ್ಕಿರಲಿಲ್ಲ. ಈಗ ಪಾಳು ಬಿದ್ದಿದ್ದ ಜಮೀನನ್ನು ಹದಗೊಳಿಸಿ ಕೃಷಿಗೆ ಒತ್ತು ನೀಡುತ್ತಿದ್ದೇನೆ. ಅದರಲ್ಲಿಯೂ ಕಾಡು ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. | ಸಿ.ಮಂಜೇಗೌಡ ನಾಗನಹಳ್ಳಿ
ನೂರೆಂಟು ಬಗೆಯ ಸಸಿಗಳನ್ನು ನೆಟ್ಟು ಪೋಷಣೆ ಮಾಡುತ್ತಿರುವ ಮಂಜೇಗೌಡ ಇತರರಿಗೂ ಮಾರ್ಗದರ್ಶಕರಾಗಿದ್ದಾರೆ. ನೀರನ್ನು ಮಿತವಾಗಿ ಬಳಸುವ ಸಲುವಾಗಿ ಹನಿ ನೀರಾವರಿ ಪದ್ಧತಿ ಅಳವಡಿಸಿದ್ದು ಅರಣ್ಯ ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ. | ಶಿವೇಗೌಡ ಅರಣ್ಯ ಪ್ರೇರಕ, ಡಿ.ತುಮಕೂರು
ಮಳೆ ನೀರು ಸಂಗ್ರಹಕ್ಕೆ ಕೃಷಿ ಹೊಂಡ: ಮಳೆ ನೀರು ಸಂಗ್ರಹಿಸುವ ಸಲುವಾಗಿ 100 ಅಡಿ ಉದ್ದ, 70 ಅಡಿ ಅಗಲವಾದ ಕೃಷಿ ಹೊಂಡ ನಿರ್ವಿುಸಲಾಗಿದೆ. ಹೊಂಡಕ್ಕೆ ಪಂಪ್ಸೆಟ್ ಅಳವಡಿಸಿದ್ದು. ಪೈಪ್ಲೈನ್ ಮೂಲಕ ಗಿಡ, ಮರಗಳಿಗೆ ಹನಿ ನೀರಾವರಿ ಪದ್ಧತಿಯೊಂದಿಗೆ ನೀರು ಪೂರೈಕೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಕೃಷಿ ಹೊಂಡದಲ್ಲಿ ಹೆಚ್ಚು ನೀರು ಸಂಗ್ರಹಗೊಂಡಿದ್ದು ಅಂತರ್ಜಲ ಚೇತರಿಕೆಯೊಂದಿಗೆ ಕೊಳವೆಬಾವಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಲಭ್ಯವಾಗುತ್ತಿದೆ ಎನ್ನುತ್ತಾರೆ ಮಂಜೇಗೌಡ.