ಜನಮತ: ನೇರ ನೇಮಕಾತಿ ಆರಂಭಿಸಿ

Janamata
Published on

ತಾಲೂಕು ಮಟ್ಟದಲ್ಲಿ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ರಕ್ಷಣೆಯ ಕಾರ್ಯವನ್ನು ಆಯಾ ತಾಲೂಕಿನಲ್ಲಿರುವ ಶಿಶು ಅಭಿವೃಧಿ ಯೋಜನಾಧಿಕಾರಿ ಗಳಿಗೆ (ಸಿ.ಡಿ.ಪಿ.ಓ) ಹೆಚ್ಚುವರಿ ಕಾರ್ಯನಿರ್ವಹಣೆಯ ಮೂಲಕ ಹೊರಿಸಲಾ ಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಜೂನ್ 2ರಂದು ಆದೇಶ ಹೊರಡಿಸಿದೆ. ವಾಸ್ತವವಾಗಿ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ರಕ್ಷಣೆಯ ಕಾರ್ಯವನ್ನು ನಿರ್ವಹಿಸಲು ಜಿಲ್ಲಾಮಟ್ಟದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗೂ ತಾಲೂಕು ಮಟ್ಟದಲ್ಲಿ ತಾಲೂಕು ಮಕ್ಕಳ ರಕ್ಷಣಾಧಿಕಾರಿಗಳ ಹುದ್ದೆಗಳನ್ನು ಆದ್ಯತೆಯ ಮೇರೆಗೆ ಸರ್ಕಾರ ಬಹು ಹಿಂದೆಯೇ ಸೃಜಿಸಬೇಕಿತ್ತು. 2009ರಲ್ಲಿ ಜಾರಿಗೆ ಬಂದ ‘ಸಮಗ್ರ ಮಕ್ಕಳ ರಕ್ಷಣಾ ಯೋಜನೆ’ ಅಡಿಯಲ್ಲಿ ರಾಷ್ಟ್ರ, ರಾಜ್ಯ ಮತ್ತು ಜಿಲ್ಲಾ ಹಂತಗಳಲ್ಲಿ ಮಕ್ಕಳ ರಕ್ಷಣಾ ಸಂಸ್ಥೆಗಳನ್ನು ಸ್ಥಾಪಿಸಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಹಾಗೂ ಅವರ ಹಕ್ಕುಗಳ ರಕ್ಷಣೆಗೆ ಒತ್ತನ್ನು ನೀಡಲಾಗಿತ್ತು. ದುರದೃಷ್ಟವೆಂದರೆ, ಯೋಜನೆ ಜಾರಿಗೆ ಬಂದು ದಶಕವೇ ಕಳೆದರೂ ರಾಜ್ಯದಲ್ಲಿ ಸಿಬ್ಬಂದಿ ನೇಮಕಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಿರುವಾಗ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ 26 ಹುದ್ದೆಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಿವೃತ್ತರಾಗುವ ಪತ್ರಾಂಕಿತ ಅಧಿಕಾರಿಗಳನ್ನು ಕೆಲವು ಷರತ್ತಿಗೊಳಪಟ್ಟು ನೇಮಕಾತಿ ಮಾಡಲು ಆದೇಶಿಸಲಾಗಿದೆ. ಎಂ.ಎಸ್.ಡಬ್ಲ್ಯೂ ಪದವಿ ಪಡೆದ ಸಾವಿರಾರು ಪದವೀಧರರು ಈ ಇಲಾಖೆಗಳಲ್ಲಿ ಅರೆಕಾಲಿಕ ಗುತ್ತಿಗೆ ಆಧಾರದ ಮೇಲೆ ಅನೇಕ ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನೂ ಅನೇಕರು ನಿರುದ್ಯೋಗಿಗಳಾಗಿಯೇ ಉಳಿದಿದ್ದಾರೆ. ನಿವೃತ್ತರಾದವರಿಗೆ ಮತ್ತು ಸಿ.ಡಿ.ಪಿ.ಓ.ಗಳಿಗೆ ಹೆಚ್ಚುವರಿಯಾಗಿ ಮಕ್ಕಳ ರಕ್ಷಣಾಧಿಕಾರಿ ಹುದ್ದೆಗಳನ್ನು ವಹಿಸಿಕೊಡುವುದರ ಬದಲಿಗೆ ಸರ್ಕಾರ ಕೂಡಲೇ ಈ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿ ನಿರುದ್ಯೋಗಿ ಎಂ.ಎಸ್.ಡಬ್ಲ್ಯೂ ಪದವೀಧರರಿಗೆ ನ್ಯಾಯ ಒದಗಿಸಬೇಕು.

| ಪ್ರಶಾಂತ ಎಚ್.ವೈ. ಸಹಾಯಕ ಪ್ರಾಧ್ಯಾಪಕರು, ಹಾವೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net