

ಸದ್ಯದ ಇಂಥ ಕರಾಳ ಕಾಲಘಟ್ಟದಲ್ಲಿ, ಕರಾಳ ಪ್ರಭುತ್ವದಡಿಯಲ್ಲಿ, ತಾನೇ ವಿಧಿಸಿಕೊಂಡ ದಿಗ್ಬಂಧನದಲ್ಲಿ, ನರಳುತ್ತಿರುವ ಚೀನಾದಲ್ಲಿಯ ಧಾರ್ವಿುಕ(!) ನಾಯಕನೊಬ್ಬ ಹೊರದೇಶದ ತನ್ನ ಆತ್ಮೀಯರಿಗೆ ಕಳಿಸಿದ ಸಂದೇಶ ಎಂದು ಬಂದಿರುವ ಬರಹವೊಂದು ಕಣ್ಣು ತೆರೆಸುವಂತಿದೆ. ಅದರಲ್ಲಿಯ ಅನೇಕ ಅಂಶಗಳು ನಮಗೂ ಅನ್ವಯವಾಗುತ್ತಿರುವುದರಿಂದ ಅದನ್ನು ರ್ಚಚಿಸಲೇಬೇಕಾಗಿದೆ.
ಸಂದೇಶ ಹೀಗಿದೆ: ‘‘ಚೀನಾದ ಗಡಿಬಿಡಿ ಮತ್ತು ಉದ್ವೇಗದ ಜೀವನ ಕಡೆಗೂ ಸ್ತಬ್ಧವಾಗಿದೆ, ಪ್ರಕ್ಷುಬ್ಧ ಸಮಾಜವು ಅಂತಿಮವಾಗಿ ಶಾಂತವಾಗಿದೆ, ಮತ್ತು ಅಶಾಂತ ಚೀನಾದ ಜನರು ಕ್ರಮೇಣ ಶಾಂತಗೊಂಡಿದ್ದಾರೆ. ಒಂದು ಕಾಲದಲ್ಲಿ ಮಾನವರು ಪಂಜರಗಳಲ್ಲಿ ಹಿಡಿದಿದ್ದ ಕಾಡುಪ್ರಾಣಿಗಳು ಅಂತಿಮವಾಗಿ ಮನುಷ್ಯರನ್ನು ‘ಪಂಜರಗಳಲ್ಲಿ’ ಇರಿಸುವಲ್ಲಿ ಯಶಸ್ವಿಯಾಗಿವೆ. ಮಾನವರು ಅಂತಿಮವಾಗಿ ತಮ್ಮ ಅಹಂಕಾರದ ತಲೆಯನ್ನು ಕೆಳಕ್ಕೆ ಇಳಿಸಿ ಸದ್ದಿಲ್ಲದೆ ಯೋಚಿಸಲು ಪ್ರಾರಂಭಿಸಿದ್ದಾರೆ: ‘ನಾವು ಇನ್ನೂ ಭೂಮಿಯ ರಾಜರಾ?’
ಈ ವೈರಸ್ ದುರಾಸೆಯ ಹೃದಯವನ್ನು ಶುದ್ಧೀಕರಿಸುತ್ತಿದೆ. ಮತ್ತು ಎಲ್ಲವನ್ನೂ ತಿನ್ನಲು ಹಪಹಪಿಸುವ ನಾಲಿಗೆಯನ್ನು ಶಿಕ್ಷಿಸುತ್ತಿದೆ. ದಿನವಿಡೀ ಕಣ್ಣು ಕುಕ್ಕುವ ಕೆಂಪು ಮತ್ತು ಹಸಿರು ದೀಪಗಳ ಅಬ್ಬರದ ಸ್ಥಳಗಳಲ್ಲಿ ಮೈ ಮರೆಯುವ ಜನರನ್ನು ಈ ಸೋಂಕು ಮನೆಗೆ ಓಡಿಸುತ್ತಿದೆ, ‘ನೆಟ್ಟಗೆ ಮನೆಗೆ ಹೋಗಿ’ ಎಂಬ ಕಟ್ಟಪ್ಪಣೆಯಿಂದ.
ಬೀದಿಯಲ್ಲಿ ಜನ ದಿನ ದಿನಕ್ಕೆ ಕಡಿಮೆಯಾಗುತ್ತಿದ್ದಾರೆ ಮತ್ತು ರಸ್ತೆಗಳಲ್ಲಿ ಕಾರುಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಗಾಳಿ ಪ್ರತಿದಿನ ಹೊಸ ತಾಜಾತನ ಪಡೆಯುತ್ತಿದೆ, ವಾತಾವರಣದ ಮಂಕು ಮರೆಯಾಗುತ್ತಿದೆ, ಆಕಾಶದ ನೀಲವರ್ಣ ಶುಭ್ರವಾಗುತ್ತಿದೆ, ಸೂರ್ಯನು ಪ್ರಕಾಶಮಾನವಾಗುತ್ತಿದ್ದಾನೆ. ಕುಟುಂಬ ಜೀವನಗಳು ಹೆಚ್ಚು ಆಪ್ತವಾಗಿ, ಮಧುರವಾಗಿ ಬೆಸೆದುಕೊಳ್ಳುತ್ತಿವೆ. ಮತ್ತು ಜನರ ಹೃದಯಗಳು ಹೆಚ್ಚು ಪ್ರಶಾಂತತೆಯನ್ನು ಅನುಭವಿಸುತ್ತಿವೆ. ಅನೇಕ ವರ್ಷಗಳಿಂದ ಏನೂ ಓದದ ಜನರು ಮನೆಯಲ್ಲಿ ಪುಸ್ತಕಗಳನ್ನು ಎತ್ತಿಕೊಂಡಿದ್ದಾರೆ. ಮಕ್ಕಳೊಂದಿಗೆ ಮಾತು ನಿಲ್ಲಿಸಿದ್ದ ಪಾಲಕರು, ವರ್ಷಕ್ಕೆ ಒಂದೆರಡು ಸಲವಾದರೂ ಜತೆಯಾಗಿ ಕೂತು ಮಾತನಾಡಲು ಪುರುಸೊತ್ತಿಲ್ಲದ ದಂಪತಿಗಳು, ಹರಟೆಯನ್ನು ಆರಂಭಿಸಿದ್ದಾರೆ. ಹಿರಿಯರನ್ನು ಹೇಗೆ ಗೌರವಿಸಬೇಕು ಎಂದು ತಿಳಿದಿಲ್ಲದ ಮಕ್ಕಳೂ ಪ್ರೀತಿ, ಗೌರವದ ಪಾಠ ಕಲಿಯತೊಡಗಿದ್ದಾರೆ. ಈ ಸೋಂಕು ಮಾನವರಿಗೆ ಸುಸ್ಪಷ್ಟ ಮತ್ತು ಸಶಕ್ತವಾದ ಪಾಠವನ್ನು ಕಲಿಸಿತು. ಇದು ನಮಗೆ ದಿಗ್ಭ›ಮೆಯ ನಿಜ ಅನುಭವ ನೀಡಿತು. ‘ಒಳ್ಳೆಯ ಕಾಲ’ದ ಮಹಿಮೆಯನ್ನು ನಮಗೆ ತಿಳಿಸಿ ಹೇಳಿತು. ಭೂಮಿಯ ಮೇಲೆ ನಿಜವಾದ ಪ್ರೀತಿಯನ್ನು ನಾವು ಅನುಭವಿಸುವಂತೆ ಮಾಡಿತು. ನಮ್ಮ ಮುಂದಿನ ದಾರಿಯಲ್ಲಿ ಪ್ರೀತಿಯನ್ನು ಅನುಸರಿಸುವಂತೆ ಮಾಡಿತು. ಇಷ್ಟೆಲ್ಲ ನೋಡಿದಾಗ, ಈ ಶತ್ರುವಿಗೆ ನಾವು ನಿಜವಾಗಿಯೂ ಕೃತಜ್ಞರಾಗಿರಬೇಕು.
ಈ ಸೋಂಕು ಅಷ್ಟು ಬೇಗ ನಮ್ಮನ್ನು ಬಿಡುವುದಿಲ್ಲ, ಅದು ಮನುಷ್ಯ ಒಳ್ಳೆಯ ಅಭ್ಯಾಸವನ್ನು ಬೆಳೆಸಿಕೊಂಡಿದ್ದನ್ನು ನೋಡಿಯೇ ಹೋಗುತ್ತದೆ. ಮತ್ತು ಆ ಬಳಿಕ ಈ ವೈರಸ್ ತನ್ನ ಕುಚೇಷ್ಟೆ ಮುಂದುವರಿಸುವುದಿಲ್ಲ, ಏಕೆಂದರೆ ಮನುಷ್ಯನಲ್ಲಿ ಅಂತರ್ಗತವಾದ ಪ್ರೀತಿ ಇನ್ನೂ ಹೆಚ್ಚಿನ ಶಕ್ತಿಯನ್ನು ಸಂಗ್ರಹಿಸಿ ಈ ಸೋಂಕನ್ನು ದೂರವಿಡಲು ಹೋರಾಡುತ್ತದೆ. ಕಾಲವು ನಮಗೆ ಎಲ್ಲ ಪಾಠಗಳನ್ನೂ ಕಲಿಸುತ್ತದೆ. ಅದರೊಂದಿಗೇ ಯಾವುದು ಸರಿ, ಯಾವುದು ತಪ್ಪು ಎಂಬುದನ್ನೂ ಸಾಬೀತುಪಡಿಸುತ್ತದೆ.
ಕರೊನಾ ಸೋಂಕು ನಮಗೆ ಪ್ರಕೃತಿಯ ಶಕ್ತಿಯ ಅಗಾಧತೆಯನ್ನು ನೆನಪಿಸುತ್ತದೆ. ತನ್ನೊಂದಿಗೆ ಮನುಷ್ಯನ ವರ್ತನೆಗಳ ಆಧಾರಗಳ ಮೇಲೆ ತನ್ನ ವರ್ತನೆಗಳನ್ನು ನಿರ್ಧರಿಸುವ ತನ್ನ ಸರ್ವಶಕ್ತತೆಯನ್ನು ಮತ್ತು ತನ್ನೆದುರು ನಾವೆಲ್ಲರೂ ಶರಣಾಗಲೇಬೇಕು ಎಂಬ ಸಂದೇಶವನ್ನು ಪ್ರಕೃತಿ ನಮಗೆ ನೀಡುತ್ತಿದೆ’’.
ಚೀನೀಯರಂತೆ ನಾವು ಸಿಕ್ಕ ಎಲ್ಲ ಪ್ರಾಣಿ, ಪಕ್ಷಿ, ಕೀಟ, ಹುಳು, ಹುಪ್ಪಟೆಗಳನ್ನೆಲ್ಲ ತಿನ್ನುವವರಲ್ಲ (ಎಲೊ್ಲೕ ಒಂದೆರಡು ಜನಾಂಗಗಳ ಅಪವಾದಗಳನ್ನು ಹೊರತುಪಡಿಸಿದರೆ) ಎಂಬುದನ್ನು ಬಿಟ್ಟು ಈ ಸಂದೇಶ ಬಹುಪಾಲು ನಮಗೂ ಅನ್ವಯಿಸುತ್ತದೆ. ನಾವೂ ಅವರಂತೆ ‘ಯಾವುದಕ್ಕೂ ಪುರುಸೊತ್ತಿಲ್ಲ’ ಅನ್ನುತ್ತ ಅನ್ನ ದುಡಿಯುವ ಅವಸರದಲಿ ಮೈಮೇಲೆ ಅವಾಹಿಸಿಕೊಂಡ ಒತ್ತಡ, ಗಡಿಬಿಡಿ, ಉದ್ವೇಗಗಳ ಮಧ್ಯೆ ‘ನಾವು ಇದೆಲ್ಲ ಮಾಡುತ್ತಿರುವುದ್ಯಾಕೆ’ ಅಂತ ನಮ್ಮನ್ನು ನಾವೇ ಕೇಳಿಕೊಳ್ಳುವುದನ್ನೂ ಮರೆತಿದ್ದೇವೆ. ಏಕೆಂದರೆ ನಮಗೆ ಅದಕ್ಕೂ ಪುರುಸೊತ್ತಿಲ್ಲ.
ಸುತ್ತಲಿನ ಪರಿಸರ ಎಲ್ಲವೂ ತನ್ನ ಉಪಭೋಗಕ್ಕಾಗಿಯೇ ಇರುವುದು, ತಾನದರ ಮಾಲೀಕ ಎಂಬ ಅಹಂಕಾರ, ಅದನ್ನು ಉಳಿಸಿ ಬೆಳೆಸಲು ತಾನು ಮಾಡಬೇಕಾದುದೇನು ಎಂಬ ಕನಿಷ್ಠ ಪ್ರಜ್ಞೆಯನ್ನು ಮರೆಸಿಹಾಕಿದೆ. ಜನದಟ್ಟಣೆ, ವಾಹನದಟ್ಟಣೆ, ಹೊಗೆ, ಮಾಲಿನ್ಯ, ಅನಿಯಮಿತ-ಅನಿಯಂತ್ರಿತ ಜೀವನಶೈಲಿ, ಇವೆಲ್ಲ ನಮ್ಮ ಅಭಿವೃದ್ಧಿಯ ಕುರುಹುಗಳೆಂದು ಬೀಗುತ್ತಿರುವವರಿಗೆಲ್ಲ, ‘ಇದೇ ನಿಮ್ಮ ಅವನತಿಯ ಕುರುಹೂ ಆಗಬಹುದು’ ಎಂಬುದನ್ನು ಈ ಘಟನಾವಳಿ ತೋರಿಸಿಕೊಟ್ಟಿದೆ. ಜೀವನವೆಂದರೆ ಕೆಲಸ, ಮೋಜು, ಮಸ್ತಿ ಮಾತ್ರ ಎಂದುಕೊಂಡವರಿಗೆ ನದಿಯಾಚೆಗೊಂದು ವಿಶಾಲ ಕಡಲಿದೆ ಎಂದು ನಿಸರ್ಗ ತೋರಿಸಿಕೊಟ್ಟಿದೆ.
ಮುನಿದ ಪ್ರಕೃತಿ ಎಲ್ಲ ಧರ್ಮಗಳ ವ್ಯಾಖ್ಯಾನಗಳಿಂದಲೂ ದೂರ ಎಂಬುದನ್ನು ಈ ವೈರಸ್ ಅಟ್ಟಹಾಸ ತೋರಿಸಿಕೊಟ್ಟಿದೆ. ಕಡು ಸಾಂಪ್ರದಾಯಿಕ ಮುಸ್ಲಿಂ ರಾಷ್ಟ್ರ ಇರಾನಿನಲ್ಲಿ ಅಂತ್ಯಸಂಸ್ಕಾರ ಇಸ್ಲಾಮಿಕ್ ವಿಧಿ ವಿಧಾನದಂತೆ ಆಗುತ್ತಿಲ್ಲ. ಶವಕ್ಕೆ ಸ್ನಾನ, ಸುಗಂಧದ್ರವ್ಯ ಲೇಪನ ಮಾಡಲು ಯಾರೂ ತಯಾರಿಲ್ಲ. ಈ ಸೋಂಕಿನಿಂದಾಗಿ ಎಲ್ಲ ದೇಶಗಳಲ್ಲಿ ಸಾವು ತನ್ನ ಘನತೆಯನ್ನು ಕಳೆದುಕೊಂಡದ್ದು, ಮಾನವೀಯ ಸಂವೇದನೆ ಮರೆಯಾಗಿದ್ದು ಅನಿವಾರ್ಯವಾಗಿಯೇ ಆದರೂ-ನಮ್ಮ ಕಾಲದ ಒಂದು ದೊಡ್ಡ ದುರಂತ. ಹೀಗಾಗಿ ಎಲ್ಲೆಡೆ ಶವವನ್ನು ಮೃತರ ಮಂಚದಿಂದ ನೇರವಾಗಿ ಸ್ಮಶಾನಕ್ಕೆ ಕೊಂಡೊಯ್ಯಲಾಗುತ್ತಿದೆ. ಯಾವ ಹಾರ ತುರಾಯಿಗಳ ಅಲಂಕಾರವಿಲ್ಲ. ಬಂಧು-ಮಿತ್ರ ಬಳಗದ ಶ್ರದ್ಧಾಂಜಲಿಯಿಲ್ಲ. ಇಟಲಿಯ ಪ್ರಜೆಯೊಬ್ಬ ಮನೆಯಲ್ಲಿ ಸೋದರಿಯ ಶವವನ್ನಿಟ್ಟುಕೊಂಡು ಅದರ ಅಂತ್ಯಸಂಸ್ಕಾರಕ್ಕೆ(!) ಸಹಾಯಕ್ಕೆ ಯಾರೂ ಮುಂದೆ ಬಾರದೆ ಹತಾಶನಾಗಿ ವಿಡಿಯೋದಲ್ಲಿ ಗೋಳಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಈ ಮಧ್ಯೆ ಹುಟ್ಟು ಕುರುಡರಿಗೆ ತಮ್ಮ ಪ್ರಾರ್ಥನೆಯ ಬಲದಿಂದಲೇ ಕಣ್ಣು ಬರಿಸಿದ, ಪೋಲಿಯೋ ಕಾಯಿಲೆಯಿಂದ ಹುಟ್ಟಿನಿಂದಲೇ ತಿರುಚಿಕೊಂಡ ಅಂಗಾಂಗಗಳನ್ನು ಅಲೌಕಿಕ ಸ್ಪರ್ಶದಿಂದಲೇ ಸರಿಪಡಿಸಿದ ಜಾಹೀರಾತುಗಳಿಂದ ಅಲಂಕೃತ ಪವಾಡ ಪುರುಷರೆಲ್ಲ ಪವಾಡದಂತೆ ಮಾಯವಾಗಿದ್ದಾರೆ. ಇನ್ನು ಸರ್ವ ರೋಗಗಳಿಗೂ ಗೋಮೂತ್ರದಲ್ಲಿಯೇ ಪರಿಹಾರವಿದೆ ಎಂದು ಬಲವಾಗಿ ನಂಬಿರುವವರು ಈ ಕರೊನಾಗೂ ಗೋಮೂತ್ರವೇ ಮದ್ದು ಎಂದು ಪ್ರಚಾರದಲ್ಲಿ ತೊಡಗಿದ್ದಾರೆ. ಕೆಲವರು ಈ ಪಿಡುಗಿನಿಂದ ಮುಕ್ತಿ ಪಡೆಯಲು ಮಂತ್ರಪಠಣವೇ ಮದ್ದು ಎಂದು ಮಹಾಮೃತ್ಯುಂಜಯ ಮಂತ್ರ, ಹನುಮಾನ್ ಚಾಲೀಸಾ, ವಿಷ್ಣು ಸಹಸ್ರನಾಮ ಇತ್ಯಾದಿಗಳ ಸಾಮೂಹಿಕ ಪಠಣಕ್ಕೆ ಕರೆ ನೀಡುತ್ತ ಮಹಾಮಾರಿಯನ್ನು ಓಡಿಸಲು ಕಣಕ್ಕಿಳಿದಿದ್ದಾರೆ.
ಕಡೆಯಲ್ಲಿ ಉದ್ಭವಿಸಿದ ಪ್ರಶ್ನೆ: ಹಿಂದೆಂದೋ ಓದಿದ ಕತೆಯಲ್ಲಿ, ಒಬ್ಬನಿಗೆ ದಿನಾ ತಾನು ಚಿಟ್ಟೆಯಾಗಿ ಬದಲಾಗಿದ್ದ ಕನಸು ಬೀಳುತ್ತಿತ್ತು. ಈ ಕನಸು ನಿರಂತರವಾದಾಗ ಅವನಿಗೆ ಕಡೆಯಲ್ಲಿ ಕಾಡಿದ ಪ್ರಶ್ನೆ, ನಿಜದಲ್ಲಿ ತಾನು ಯಾರು? ಎಂಬುದು. ತಾನೊಬ್ಬ ಮನುಷ್ಯನಾಗಿದ್ದು ರಾತ್ರಿಯಲ್ಲಿ ಕನಸಿನಲ್ಲಿ ಚಿಟ್ಟೆಯಾಗಿರುತ್ತೇನೋ, ಅಥವಾ ತಾನೊಂದು ಚಿಟ್ಟೆಯಾಗಿದ್ದು, ದಿನಾ ಹಗಲಿನಲಿ ಮನುಷ್ಯನಾಗಿರುತ್ತೇನೋ? ಅದರಂತೆ ಈ ನಿಸರ್ಗ ಮತ್ತು ಅದರೊಂದಿಗೆ ನಿರಂತರ ಸಂಘರ್ಷದಲ್ಲಿ ತೊಡಗಿರುವ ಮನುಷ್ಯನ ಮಧ್ಯೆ ನಿಜವಾಗಿ ಪ್ರಯೋಗ ನಡೆಸುತ್ತಿರುವವರಾರು, ಪ್ರಯೋಗಪಶುಗಳಾರು? ಮನುಷ್ಯನ ಪ್ರಯೋಗಾಲಯದಲ್ಲಿ ವೈರಸ್ ನಿಮೂಲನೆಯ ಪ್ರಯೋಗ ನಡೆಯುತ್ತಿದೆಯೋ ಅಥವಾ ನಿಸರ್ಗದ ಪ್ರಯೋಗಾಲಯದಲ್ಲಿ ಮನುಷ್ಯನೆಂಬ ವೈರಸ್ ನಿಮೂಲನೆಯ ಪ್ರಯೋಗ ನಡೆಯುತ್ತಿದೆಯೋ?
(ಲೇಖಕರು ಪ್ರಾಂಶುಪಾಲರು, ಹವ್ಯಾಸಿ ಬರಹಗಾರರು)