

ಉದ್ಯಮೇನ ಹಿ ಸಿದ್ಧ್ಯಂತಿ ಕಾರ್ಯಾಣಿ ನ ಮನೋರಥೈಃ|
ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾಃ ||
ಪ್ರಯತ್ನದಿಂದ ಕಾರ್ಯಗಳು ಸಿದ್ಧಿಸುತ್ತವೆಯೇ ವಿನಃ ಬರಿಯ ಬಯಕೆಗಳಿಂದಲ್ಲ. ನಿದ್ರಿಸುತ್ತಿರುವ ಸಿಂಹದ ಬಾಯಲ್ಲಿ ಮೃಗಗಳು ಬಂದು ತಾವಾಗಿ ಪ್ರವೇಶಿಸುವುದಿಲ್ಲ...
ಪ್ರತಿಯೊಂದಕ್ಕೆ ಪ್ರಯತ್ನ ಮಾಡಬೇಕು. ಎಲ್ಲ ಕೆಲಸದಲ್ಲಿಯೂ ಶೇಕಡ 90 ನಮ್ಮ ಶ್ರಮ ಇರಬೇಕು. ಉಳಿದ ಶೇ.10 ಅದೃಷ್ಟವನ್ನು ನಂಬಿರಬೇಕಷ್ಟೇ. ಕರ್ಮಯೋಗಿ ತಾನೇ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾನೆ. ನಾವು ಎಲ್ಲಿದ್ದೇವೆ, ಆ ಸ್ಥಾನದಲ್ಲೇ ಶೇ.100 ಶ್ರಮ ವಹಿಸಿದರೆ ಖಂಡಿತ ಸಾಧನೆ ಮಾಡಬಹುದು. ಇದರಿಂದ ಆತ್ಮತೃಪ್ತಿ ಸಿಗುತ್ತದೆ. ಸಮಾಜ ಸಹ ಗುರುತಿಸುತ್ತದೆ.
ಜೀವನದಲ್ಲಿ ಛಲ ಇರಬೇಕು. ಕೇವಲ ಹಣ, ಆಸ್ತಿ ಸಂಪಾದನೆ ಮತ್ತು ಮಕ್ಕಳು, ಕುಟುಂಬಕ್ಕೆ ಸೀಮಿತವಾಗಿರಬಾರದು. ಯುವಸಮಾಜ ದೊಡ್ಡ ಗುರಿ ಇಟ್ಟುಕೊಳ್ಳಬೇಕು. ಪ್ರತಿಯೊಬ್ಬ ಯುವಕರು ತಾವಿರುವ ಕ್ಷೇತ್ರದಲ್ಲಿ ಸಮರ್ಪಕವಾಗಿ ದುಡಿಯಬೇಕು. ಒಳ್ಳೆಯ ಉದ್ದೇಶ ಇರಬೇಕು. ದೊಡ್ಡ ಸ್ಥಾನದಲ್ಲಿ ಕುಳಿತುಕೊಂಡರೆ ಮಾತ್ರ ದೇಶಕ್ಕೆ ಸೇವೆ ಸಲ್ಲಿಸಬಹುದು ಎನ್ನುವುದು ಸರಿಯಲ್ಲ.
ಮನುಷ್ಯನ ಬದುಕು ಅಸಾಧಾರಣವಾಗಿರಬೇಕು. ಬದುಕು ಮೀರಿ ಸಾಧನೆ ಮಾತನಾಡಬೇಕು. ದೇಶನಿರ್ವಣ ಪ್ರಕ್ರಿಯೆಯಲ್ಲಿ ಯುವಕರು ಅಡಿಪಾಯ ಆಗಬೇಕು. ಯುವಸಮೂಹ ಶಕ್ತಿಶಾಲಿಯಾಗಿ ಬೆಳೆದರೆ ಮಾತ್ರ ಬಲಿಷ್ಠ ದೇಶದ ನಿರ್ಮಾಣ ಸಾಧ್ಯ. ಪ್ರತಿಯೊಬ್ಬರು ದೇಶಕ್ಕೆ ತಮ್ಮಿಂದಾದ ಕೊಡುಗೆ ನೀಡಬೇಕು. ಶಿಸ್ತುಬದ್ಧ ಜೀವನ, ದುಡಿಮೆ, ದೇಶಸೇವೆ- ಈ ಮೂರು ಸಂಗತಿಗಳನ್ನು ಜೀವನದ ಸೂತ್ರವಾಗಿಸಿಕೊಂಡರೆ ನಾವೂ ನೆಮ್ಮದಿಯಾಗಿರುತ್ತೇವೆ, ದೇಶದ ಭವಿಷ್ಯವೂ ಉತ್ತಮವಾಗಿರುತ್ತದೆ. ಸೀಮಿತ ಯೋಚನೆ, ಸಂಕುಚಿತತೆ, ಸ್ವಾರ್ಥದ ಬೇಲಿಯಿಂದ ಹೊರಬರಬೇಕು.
‘ದೇಶ ನಮಗೆ ಏನು ಕೊಟ್ಟಿದೆ ಎಂದು ಪ್ರಶ್ನಿಸುವ ಬದಲು. ನಾವು ದೇಶಕ್ಕೆ ಏನು ಕೊಟ್ಟಿದ್ದೇವೆ ಎಂದು ಪ್ರಶ್ನೆ ಮಾಡಿಕೊಳ್ಳಬೇಕು’ ಎಂದಿದ್ದರು ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿ. ಇಂದಿನ ದಿನಗಳಲ್ಲಿ ಈ ವಿಚಾರ ಹೆಚ್ಚು ಪ್ರಸ್ತುತ. ಸಮಾಜಕ್ಕೆ, ದೇಶಕ್ಕೆ ಏನು ಕೊಟ್ಟಿದ್ದೇವೆ, ನಮ್ಮ ಕೊಡುಗೆ ಏನು ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕು. ಪ್ರತಿಯೊಬ್ಬರಲ್ಲೂ ಸಾಮರ್ಥ್ಯವಿದೆ. ಆದರೆ, ಛಲದಿಂದ ದುಡಿಯುವುದು ಅಗತ್ಯ. ಈ ನಿಟ್ಟಿನಲ್ಲಿ ಯುವಸಮೂಹ ಕೆಲಸ ಮಾಡಬೇಕು. ಯುವಸಮೂಹ ಪವರ್ಹೌಸ್ ಆಗಬೇಕು. ಯುವಕರದ್ದು ಬಿಸಿರಕ್ತ, ದಣಿವಿಲ್ಲದ ಶಕ್ತಿ ಎಂಬುದೇನೋ ನಿಜ, ಅದನ್ನು ಉತ್ತಮ ನಿಟ್ಟಿನಲ್ಲಿ ಬಳಸಿಕೊಳ್ಳುವುದು ಬಹಳ ಮುಖ್ಯ.
ಆರೋಗ್ಯವೇ ಸಂಪತ್ತು: ಇದೆಲ್ಲ ಸಾಧ್ಯವಾಗಬೇಕಾದರೆ, ಮೊದಲು ನಾವು ಆರೋಗ್ಯವಂತರಾಗಿರಬೇಕು. ಆರೋಗ್ಯ ಎಲ್ಲರಿಗೂ ಮುಖ್ಯ. ಆರೋಗ್ಯದ ಬಗ್ಗೆ ಸೂಕ್ತ ಕಾಳಜಿ ಇರಬೇಕು. ಯುವಕರಾಗಿದ್ದ ಸಮಯದಲ್ಲಿ ಹೆಚ್ಚು ಕಾಳಜಿ ವಹಿಸಿದರೆ ಒಳ್ಳೆಯದು. ಜಗತ್ತನ್ನೇ ಕಾಡಿದ ಕೋವಿಡ್ಗೆ ಯುವಕರೇ ಹೆಚ್ಚು ಬಲಿಯಾದ ನೋವಿನ ಸಂಗತಿ ಎಲ್ಲರಿಗೂ ತಿಳಿದಿದೆ. ಮೊದಲು ಹೃದಯದ ಸಮಸ್ಯೆ 42 ಪ್ಲಸ್ ವಯಸ್ಸಿನವರಿಗೆ ಮಾತ್ರ ಬರುತ್ತಿತ್ತು. ಆದರೀಗ 32 ವಯಸ್ಸು ಮೀರಿದವರಿಗೆ ಕಾಡುತ್ತಿದೆ. ಜೀವನಶೈಲಿ ಬದಲಾಗಿರುವುದು ಇದಕ್ಕೆ ಪ್ರಮುಖ ಕಾರಣ. ಕೌಟುಂಬಿಕ ಜಂಜಾಟ, ಕೆಲಸದ ಅತಿಯಾದ ಒತ್ತಡ, ಆಹಾರಶೈಲಿ, ಶಿಸ್ತು ಇಲ್ಲದ ಜೀವನಶೈಲಿಯಿಂದ ರಕ್ತದೊತ್ತಡ, ಮಾನಸಿಕ ಒತ್ತಡ ಹೆಚ್ಚಾಗುತ್ತಿದೆ. ಇದನ್ನು ಎದುರಿಸಲು ಯುವಸಮೂಹ ಸಿದ್ಧರಾಗಬೇಕು. ಕೇವಲ ದೈಹಿಕವಾಗಿ ಶಕ್ತಿವಂತರಾದರೆ ಸಾಲದು. ಮಾನಸಿಕವಾಗಿಯೂ ಸಮರ್ಥವಾಗಿದ್ದರೆ ಬಲಿಷ್ಠ ವ್ಯಕ್ತಿತ್ವ ಬೆಳೆಸಿಕೊಳ್ಳಬಹುದು. ವೀಕ್ ಮೈಂಡ್ ಇದ್ದರೆ ಅಂಥವರು ಗಟ್ಟಿತನ ಬೆಳೆಸಿಕೊಳ್ಳಬೇಕು. ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬೇಕು. ಜೀವನದಲ್ಲಿ ಪೈಪೋಟಿ ಇದ್ದೇ ಇರುತ್ತದೆ. ಸ್ಪರ್ಧೆ ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ಆದರೆ, ಅದು ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು.
ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಕೆಲವರು ವಾಕಿಂಗ್, ರನ್ನಿಂಗ್, ಯೋಗ, ಕ್ರೀಡೆ, ಈಜುವುದರಲ್ಲಿ ತೊಡಗಿಸಿಕೊಳ್ಳುತ್ತಾರೆ. ಇನ್ನು ಕೆಲವರು ಜಿಮ್ ಮಾಡುತ್ತಾರೆ. ಪವರ್ ಪ್ಯಾಕ್ ವ್ಯಾಯಾಮ ಮಾಡಬೇಕು. ಪ್ರಾಣಾಯಾಮ ಮತ್ತು ಬಸ್ತ್ರಿಕ ಕಪಾಲಭಾತಿ ಮಾಡಿದರೆ ಹೃದಯ ಮತ್ತು ಶ್ವಾಸಕೋಶಕ್ಕೆ ಒಳ್ಳೆಯದು. ರನ್ನಿಂಗ್ ಮಾಡುವುದು ಹೃದಯ ಮತ್ತು ಶ್ವಾಸಕೋಶ ಆರೋಗ್ಯಕ್ಕೆ ಪೂರಕ. ಪ್ರತಿಯೊಬ್ಬರು ಯಾವುದಾದರೂ ವ್ಯಾಯಾಮವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜಿಮ್ ಒಂದನ್ನೇ ಮಾಡಿದರೆ ದೇಹ ಸುಂದರವಾಗಬಹುದು, ಬಲಿಷ್ಠತೆ ಇರುವುದಿಲ್ಲ. ದೈಹಿಕವಾಗಿ ಅಸಮತೋಲನ ಕಾಡಬಹುದು. ಸಮತೋಲಿತ ವ್ಯಾಯಾಮ ಅಳವಡಿಸಿಕೊಂಡರೆ ಒಳಿತು. ನಾನು ಪ್ರತಿನಿತ್ಯದ ದಿನಚರಿಯಲ್ಲಿ ಟೆನ್ನಿಸ್, ಜಿಮ್ ಮತ್ತು ಯೋಗ, ಕೆಲವೊಮ್ಮೆ ವಾಕಿಂಗ್, ಜಿಮ್ ಮತ್ತು ಯೋಗ ಅಳವಡಿಸಿಕೊಂಡಿದ್ದೇನೆ. ಇದರಿಂದ ದೈಹಿಕ ಮತ್ತು ಮಾನಸಿಕ ಒತ್ತಡದಿಂದ ಹೊರಬರಲು ಅನುಕೂಲವಾಗಿದೆ.
ಉತ್ತಮ ಹವ್ಯಾಸ ಇರಲಿ: ಮಾನಸಿಕ ಆರೋಗ್ಯಕ್ಕೆ ಒಳ್ಳೆಯ ಹವ್ಯಾಸ ಇರಬೇಕು. ಪುಸ್ತಕ ಓದುವುದು, ಪೇಂಟಿಂಗ್, ಹಾಡುಗಾರಿಕೆ, ಫೋಟೋಗ್ರಫಿ... ಹೀಗೆ ಒಳ್ಳೆಯ ಅಭಿರುಚಿ ಇರಬೇಕು. ಇದೆಲ್ಲವೂ ಯುವಸಮೂಹಕ್ಕೆ ಅವಶ್ಯಕ. ಶಿಸ್ತುಬದ್ಧ ಜೀವನಶೈಲಿ ಇರಬೇಕು. ಊಟ, ಮಲಗುವುದು, ಸಮಯಪಾಲನೆ ಪ್ರತಿಯೊಂದರಲ್ಲಿಯೂ ಶಿಸ್ತು ಇರಬೇಕು. ಆಧುನಿಕ ಜೀವನದಲ್ಲಿ ಬೆಳಗಿನ ಜಾವ 3 ಗಂಟೆಗೆ ಮಲಗಿ ಮಧ್ಯಾಹ್ನ 3 ಗಂಟೆಗೆ ನಿದ್ದೆಯಿಂದ ಎಚ್ಚರಗೊಂಡು ತಿಂಡಿ ತಿನ್ನುವುದು, ರಾತ್ರಿ ಡಿನ್ನರ್ ಸಮಯಕ್ಕೆ ಊಟ, ಬೆಳಗಿನ ಜಾವದವರೆಗೂ ಪಾರ್ಟಿ ಮಾಡುವುದು ಸರಿಯಲ್ಲ. ರಾತ್ರಿ 10 ರಿಂದ 11 ಗಂಟೆ ಒಳಗೆ ಮಲಗಬೇಕು. ಬೆಳಗಿನ ಜಾವ 6 ರಿಂದ 7 ಗಂಟೆಯೊಳಗೆ ಎದ್ದು, ನಿತ್ಯಕ್ರಿಯೆ ಮುಗಿಸಿ ವ್ಯಾಯಾಮದಲ್ಲಿ ತೊಡಗಬೇಕು. ಇದು ಕಾಟಾಚಾರಕ್ಕೆ ಹೇಳುವ ಮಾತಲ್ಲ. ಬೆಳಗಿನ ಜಾವ ಎದ್ದು ಸೂರ್ಯನಿಗೆ ನಮಸ್ಕಾರ ಮಾಡಬೇಕೆಂದು ಹೇಳುತ್ತಾರೆ. ಇದರ ಹಿಂದೆ ವೈಜ್ಞಾನಿಕ ಕಾರಣವೂ ಇವೆ. ಬೆಳಗಿನ ಜಾವ ಸೂರ್ಯನ ಕಿರಣ ದೇಹದ ಮೇಲೆ ಬಿದ್ದರೆ ವಿಟಮಿನ್ ಡಿ ಲಭಿಸುತ್ತದೆ. ಸೂರ್ಯ ನೆತ್ತಿ ಮೇಲೆ ಬರುತ್ತಿದಂತೆ ಕ್ಷ ಕಿರಣಗಳು ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಕೋವಿಡ್ ಸಮಯದಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚಾಗಿ ಕಾಡಿತು. ಇದು ಸೂರ್ಯನ ಕಿರಣದಿಂದ ಸಿಗುವುದು ಎಂಬುದು ಎಲ್ಲರಿಗೂ ಗೊತ್ತಲ್ಲವೇ?
ಆತ್ಮಸಾಕ್ಷಿಯಿಂದ ಶಿಸ್ತು ಬೆಳೆಸಿಕೊಳ್ಳಿ: ಶಾಲಾ-ಕಾಲೇಜು, ಕಚೇರಿ ಯಾವುದೇ ಪರಿಸರದಲ್ಲಿ ಸಹ ಸಮಯಪ್ರಜ್ಞೆ, ಶಿಸ್ತು ಮುಖ್ಯ. ಆತ್ಮಸಾಕ್ಷಿಯಿಂದ ಶಿಸ್ತು ಬೆಳೆಸಿಕೊಳ್ಳಬೇಕೇ ಹೊರತು ಬೇರೆಯವರ ಒತ್ತಡದಿಂದ ಅಲ್ಲ. ಪೊಲೀಸರಿಗೆ ಮತ್ತು ಸೇನೆಗೆ ಮಾತ್ರ ಶಿಸ್ತು ಇರಬೇಕೆಂದು ಹೇಳುವುದಲ್ಲ. ಎಲ್ಲರಲ್ಲೂ ಇರಬೇಕು. ಇದು ಬದುಕಿನಲ್ಲಿ ಉತ್ತಮ ಸ್ಥಾನಕ್ಕೆ ಕರೆದೊಯ್ಯಲು ವೇದಿಕೆ ಆಗುತ್ತದೆ.
ಇತ್ತೀಚಿನ ಯುವಕ, ಯುವತಿಯರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಫೇಸ್ಬುಕ್, ವಾಟ್ಸ್ಆಪ್, ಟ್ವಿಟರ್ ಇನ್ನಿತರ ಜಾಲತಾಣದಲ್ಲಿ ಹೆಚ್ಚು ವ್ಯಸ್ತರಾಗಿ, ಅದನ್ನೇ ವ್ಯಸನವಾಗಿಸಿಕೊಂಡಿರುತ್ತಾರೆ. ಇದು ಖಂಡಿತವಾಗಿಯೂ ಒಳ್ಳೆಯ ಬೆಳವಣಿಗೆಯಲ್ಲ. ಜಾಲತಾಣ ಬಳಕೆ ಮೇಲೆ ಹಿಡಿತ ಸಾಧಿಸಬೇಕು. ನಿಗದಿತ ಸಮಯದಲ್ಲಿ ಫೇಸ್ಬುಕ್, ಟ್ವಿಟರ್, ವಾಟ್ಸ್ಆಪ್ ಬಳಸಬೇಕು. ಪ್ರತಿ ಕ್ಷಣವೂ ಮೊಬೈಲ್ನಲ್ಲಿ ಕೈಯಾಡಿಸುವುದು ಬಿಡಬೇಕು. ಇತ್ತೀಚೆಗೆ 6 ತಾಸು ಫೇಸ್ಬುಕ್ ಹಾಗೂ ವಾಟ್ಸ್ಆಪ್ ಡೌನ್ ಆದ ಸಮಯದಲ್ಲಿ ಬಹುತೇಕರು ಆತಂಕಕ್ಕೆ ಒಳಗಾಗಿದ್ದರು. ಓದು, ಕೆಲಸ, ಉದ್ಯಮ ಎಲ್ಲದರಲ್ಲೂ ಸಮತೋಲನ ಕಾಪಾಡಿಕೊಳ್ಳಬೇಕು. ನಮ್ಮ ಜೀವನಕ್ಕೆ ನಾವೇ ಮಾಸ್ಟರ್ ಆಗಿರಬೇಕು. ನಮ್ಮ ಭವಿಷ್ಯವನ್ನು ನಾವೇ ರೂಪಿಸಿಕೊಳ್ಳಬೇಕು. ಪ್ರಯತ್ನವೇ ಮಾಡದೆ ಅದೃಷ್ಟ ಇಲ್ಲ ಎನ್ನುವುದು ಸರಿಯಲ್ಲ. ಅದೃಷ್ಟ ಧೈರ್ಯವಂತರ ಪರವಾಗಿರುತ್ತದೆ. ಸತತ ಪ್ರಯತ್ನವಿದ್ದರೆ ಎಲ್ಲ ಕ್ಷೇತ್ರದಲ್ಲೂ ಸಾಧಿಸಬಹುದು. ಶ್ರಮವಹಿಸಿ ಕೆಲಸ ಮಾಡಿದರೆ ಫಲ ಸಿಗುವುದರಲ್ಲಿ ಅನುಮಾನವಿಲ್ಲ.
(ಲೇಖಕರು ಹಿರಿಯ ಐಪಿಎಸ್ ಅಧಿಕಾರಿ)