

ಅದೊಂದು ಸುತ್ತಲೂ ಸಮುದ್ರದಿಂದ ಆವೃತವಾದ ದ್ವೀಪ ಗ್ರಾಮ. ಅಲ್ಲಿ ಎಲ್ಲಿ ಬಾವಿ ತೋಡಿದರೂ ಚಿಮ್ಮುವುದು ಉಪ್ಪುನೀರು. ದ್ವೀಪದ ತುಂಬಾ ಹರಡಿಕೊಂಡಿದ್ದ ಜನರು, ಪ್ರಾಣಿಪಕ್ಷಿಗಳು ಮಳೆಯನ್ನೇ ಆಶ್ರಯಿಸಿದ್ದು ಬೇಸಿಗೆಯಲ್ಲಿ ನೀರಿಗಾಗಿ ತುಂಬಾ ಕಷ್ಟಪಡುತ್ತಿದ್ದರು. ಒಂದು ದಿನ ಸಮುದ್ರದಲ್ಲಿ ಸಾಗುತ್ತಿದ್ದ ಆ ದ್ವೀಪದ ಮೀನುಗಾರನಿಗೆ ದೂರದಲ್ಲಿ ಇನ್ನೊಂದು ದ್ವೀಪ ಕಾಣಿಸಿತು. ಹಸುರಿನಿಂದ ಕೂಡಿದ ಆ ದ್ವೀಪ ಸಮೃದ್ಧಿ ಸೂಚಕವಾಗಿತ್ತು. ಅದು ವಾಸಯೋಗ್ಯವಾಗಿದೆ ಎಂದು ಅವನಿಗೆ ಬಲವಾಗಿ ಅನ್ನಿಸಿತು. ಊರಿನವರ ಬಳಿ ವಿಷಯ ಪ್ರಸ್ತಾಪಿಸಿದ. ಊರಿನ ಮುಖಂಡರು ಕುತೂಹಲದಿಂದ ಮಾರನೆಯ ದಿನ ಆ ಕಡೆ ಹೊರಟರು. ದ್ವೀಪದ ಹತ್ತಿರ ಏಳುವ ಅಲೆಗಳ ಆರ್ಭಟಕ್ಕೆ ಹೆದರಿ, ಆ ದ್ವೀಪದ ವಾಸ ಕನಸಿನ ಮಾತು ಎಂದು ವಾಪಸಾದರು. ಆ ಯುವಕನಿಗೆ ಮಾತ್ರ ನಿತ್ಯ ಆ ದ್ವೀಪದ್ದೇ ಜಪ. ಹಗಲಿರುಳು ಅದರತ್ತಲೇ ಲಕ್ಷ್ಯ. ಒಂದು ದಿನ ದೊಡ್ಡ ದೋಣಿಯೊಂದನ್ನು ಕಟ್ಟಿಕೊಂಡು ತನ್ನ ಕುಟುಂಬ, ಸಕಲ ಸಾಮಗ್ರಿಗಳೊಡನೆ ಹೊರಡಲು ತಯಾರಾದ.
‘ನಾನು ನಿಮ್ಮನ್ನು ಸುರಕ್ಷಿತವಾಗಿ ಕರೆದೊಯ್ಯುತ್ತೇನೆ ಬನ್ನಿ’ ಎಂದು ಇತರರನ್ನೂ ಕರೆದ. ಒಂದೆರಡು ಕುಟುಂಬಗಳು ಇವನನ್ನು ಹಿಂಬಾಲಿಸಿದರಾದರೂ ಊರವರು ಒಪ್ಪಲಿಲ್ಲ. ‘ಇಲ್ಲಿ ಹೇಗೋ ಜೀವನವಾದರೂ ಇತ್ತು. ಮೀನು ಹಿಡಿದರೆ ಹೊಟ್ಟೆ ತುಂಬುತ್ತಿತ್ತು. ಇನ್ನು ಅವರ ಬದುಕು ಕಡಲು ಪಾಲು’ ಎಂದುಕೊಂಡರು. ಹೋದವರು ಏನಾದರು ಎಂಬ ಸುದ್ದಿ ಸಿಗಲಿಲ್ಲ. ಕಂಡು ಕೇಳರಿಯದ ದ್ವೀಪಕ್ಕೆ ತೆರಳಿ ಅಪಾಯ ತಂದುಕೊಂಡರು ಎಂದೇ ಎಲ್ಲರೂ ಭಾವಿಸಿದರು. ಕೆಲ ವರ್ಷಗಳು ಉರುಳಿದವು. ಹೀಗೆ ಒಂದು ದಿನ ಮೀನುಗಾರರ ದೋಣಿಗೆ ಆ ಯುವಕನ ದೋಣಿ ಎದುರಾಯಿತು. ಹತ್ತಿರ ಬಂದು ಮಾತನಾಡಿಸಿದಾಗ ಆತ ಸಂತೃಪ್ತ ಜೀವನ ನಡೆಸುತ್ತಿರುವುದು ಗಮನಕ್ಕೆ ಬಂದಿತು. ‘ನೀನು ಹೇಗೆ ಸುರಕ್ಷಿತವಾಗಿ ಆ ದ್ವೀಪ ತಲುಪಿದೆ..?’ ಎಂದು ಕೇಳಿದಾಗ, ಆತ ‘ನೀವು ಆವತ್ತು ದ್ವೀಪದ ಸುತ್ತ ಅಲೆಗಳೇಳುತ್ತಿರುವುದನ್ನು ಮಾತ್ರ ನೋಡಿದಿರಿ. ನಾನು ಸಾಗುವ ಇನ್ನೊಂದು ದಾರಿಯ ಬಗ್ಗೆ ಯೋಚಿಸುತ್ತಿದ್ದೆ. ದ್ವೀಪವನ್ನು ಪೂರ್ತಿ ಸುತ್ತುವರಿದು ನೋಡಿದಾಗ ತಲುಪಬಹುದಾದ ಸುರಕ್ಷಿತ ಸುಲಭಮಾರ್ಗ ಕಾಣಿಸಿತು. ನಾವು ಈಗ ಸುಖವಾಗಿದ್ದೇವೆ’ ಎಂದ.
ಮನಸ್ಸು ಧನಾತ್ಮಕವಾಗಿದ್ದರೆ ಕಷ್ಟದ ದಾರಿಗಳು ಸಹ ಇಷ್ಟವಾಗಿ ಬಿಡುತ್ತವೆ. ಆಗ ಜಟಿಲತೆಯನ್ನು ಸರಳಗೊಳಿಸುವತ್ತ ವಿಚಾರ ಮಾಡುತ್ತೇವೆಯೇ ವಿನಾ ಸಮಸ್ಯೆಯಿಂದ ಓಡಿಹೋಗುವುದಿಲ್ಲ. ಹಲವರಿಗೆ ಅಸಾಧ್ಯ ಅನ್ನಿಸಿದ್ದನ್ನು ಸಾಧಿಸಿಬಿಡುವ ಒಬ್ಬಿಬ್ಬರು ನಮ್ಮೆದುರು ಮಾದರಿಯಾಗಿ ನಿಲ್ಲುತ್ತಾರೆ. ಅದಮ್ಯ ಕನಸು, ಗುರಿ, ಸತತ ಪ್ರಯತ್ನ ಇದ್ದಾಗ ಮನೋಬಲದ ಜೊತೆಗೆ ದೈವಬಲವೂ ಕೈಹಿಡಿದಾಗ ಗುರಿ ಮುಟ್ಟಬಲ್ಲೆವು.
ಉರಿದು ಹೋಗುವೆನೆಂದು ದೀಪವು ಹೆದರದು
ಸುರಿದು ಹೋಗುವೆನೆಂದು ಮಳೆಯು ಬೆದರದು
ಹರಿದು ಹೋಗುವೆನೆಂದು ನದಿ ತಾನು ನಿಲ್ಲದು
ಅಳಿದು ಹೋಗುವೆನೆಂದು ಹೆದರೆ ಬಾಳು ಗೆಲ್ಲದು
(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)