ದುಡುಕು ಅನರ್ಥಕ್ಕೆ ಕಾರಣ: ಮನೋಲ್ಲಾಸ

Manollasa
Published on
| ರಾಮ ಸುಬ್ರಾಯಶೇಟ್

ಪ್ರಾಚೀನ ಕನ್ನಡ ಸಾರಸ್ವತಲೋಕದಲ್ಲಿ ಮಹಾಕವಿ ಭಾರವಿಯ ಕಿರಾತಾರ್ಜುನೀಯ ಅತ್ಯಂತ ಪ್ರಸಿದ್ಧಿ ಪಡೆದಿದೆ. ತಪಸ್ಸಿನಿಂದ ಪರಶಿವನನ್ನು ಒಲಿಸಿ ಪಾಶುಪತಾಸ್ತ್ರ ಪಡೆಯಲು ಪ್ರಯತ್ನಿಸಿದ ಪಾರ್ಥನ ಸಾಧನೆಯನ್ನು ಅತ್ಯಂತ ಮನೋಜ್ಞವಾಗಿ ಕಟ್ಟಿಕೊಟ್ಟ ಭಾರವಿ, ಪಾರ್ಥನು ಒಮ್ಮೆ ತಾಳ್ಮೆಗೆಟ್ಟು ಪರಶಿವನನ್ನೇ ಕಿರಾತನೆಂದು ತಿಳಿದು ಕೊಲ್ಲಲು ಹೋದಂತೆ ಭಾರವಿಯ ಜೀವನದಲ್ಲಿ ಬಾಲ್ಯದಲ್ಲಿ ನಡೆದ ಒಂದು ಘಟನೆ. ಚಿಕ್ಕವನಾಗಿದ್ದಾಗ ತರಗತಿಯಲ್ಲಿ ಓದು, ಸಾಂಸ್ಕತಿಕ ಕಾರ್ಯಕ್ರಮಗಳ ಸ್ಪರ್ಧೆ ಮುಂತಾದುವುಗಳಲ್ಲಿ ಮಂಚೂಣಿಯಲ್ಲಿರುತ್ತಿದ್ದ. ಆದರೆ, ಆತನ ತಂದೆ ಭಾರವಿಯ ಬಗ್ಗೆ ಯಾವತ್ತೂ ಮೆಚ್ಚುಗೆಯ ನುಡಿಯನ್ನು ಆಡುತ್ತಿರಲಿಲ್ಲ. ಪ್ರತಿಯಾಗಿ ಇನ್ನಷ್ಟು ಪ್ರಗತಿ ಸಾಧಿಸು ಎನ್ನುತ್ತಲೇ ಇರುತ್ತಿದ್ದನು. ಒಮ್ಮೊಮ್ಮೆ ತನಗಿಂತ ಕಡಿಮೆ ಸಾಧನೆ ಮಾಡಿದವರನ್ನು ಅವರ ಪೋಷಕರು ಹೊಗಳುವುದು, ಮೆಚ್ಚುಗೆ ವ್ಯಕ್ತಪಡಿಸುವುದನ್ನು ಕಂಡಾಗ ತನ್ನ ತಂದೆಯ ಬಗ್ಗೆ ಅತೀವ ಬೇಸರ ಉಂಟಾಗುತ್ತಿತ್ತು. ಅದಕ್ಕೆ ತಕ್ಕಂತೆ ಮಿತ್ರರಿಂದ ಸೇಡಿನ ಮಾತುಗಳು ಕೇಳಿಬಂದವು. ಒಂದು ದಿನ ಮಿತ್ರರ ಸಲಹೆಯಂತೆ, ಒಂದು ಕಲ್ಲನ್ನು ಮಹಡಿಯ ಮೇಲಿಟ್ಟು ರಾತ್ರಿ ಮಲಗಿದಾಗ ಅಪ್ಪನ ಮೇಲೆ ಎತ್ತಿಹಾಕಲು ಹೊಂಚಿಹಾಕಿ ಕುಳಿತನು. ರಾತ್ರಿ ತಂದೆ- ತಾಯಂದಿರು ಮಲಗಿಕೊಂಡು ಮಾತನಾಡುತ್ತಿದ್ದರು. ‘ಅಲ್ಲಾ, ನಮ್ಮ ಭಾರವಿ ಎಲ್ಲರಿಗಿಂತ ಮುಂದಿದ್ದಾನೆ. ನೀವು ಒಂದೂ ಮೆಚ್ಚುಗೆಯ ಮಾತನ್ನಾಡುತ್ತಿಲ್ಲ. ಅವನ ಗೆಳೆಯರೂ ಬೇಸರ ಮಾಡಿಕೊಳ್ಳುತ್ತಿದ್ದಾರೆ. ಮಗನೂ ನೊಂದುಕೊಳ್ಳುತ್ತಿದ್ದಾನೆ. ಹೀಗೇಕೆ ಮಾಡುತ್ತಿದ್ದೀರಿ?’ ಎಂದು ತಾಯಿ ಕೇಳಿದಾಗ ತಂದೆ ಹೇಳಿದ, ‘ನೋಡು, ನನ್ನ ಮಗನ ಪ್ರತಿಭೆ ನಿನಗಿಂತ ನನಗೇ ಹೆಚ್ಚು ತಿಳಿದಿದೆ. ಆದರೆ, ಹೊಗಳಿಕೆ ಹೊನ್ನಶೂಲ! ಆತನಿಗೆ ಮನಸ್ಸಿನಲ್ಲಿ ಅಹಂಕಾರ ಮೂಡುತ್ತದೆ. ತಾನು ಪರಿಪೂರ್ಣನೆಂಬ ಭಾವನೆ ಉಂಟಾಗುತ್ತದೆ. ಪ್ರಗತಿ ಅಲ್ಲಿಗೇ ಕುಂಠಿತವಾಗುತ್ತದೆ. ಆತನನ್ನು ಪ್ರಶಂಶಿಸದೇ ಪ್ರೋತ್ಸಾಹಿಸುತ್ತಿದ್ದರೆ ಅವನಿಂದ ಅಸಾಧ್ಯ ಸಾಧನೆ ಸಾಧ್ಯ. ಒಂದಷ್ಟು ಕಲಿತೊಡನೆ ಜನರೆದುರು ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳುವುದು ಸರಿಯಾದ ಕ್ರಮವಲ್ಲ. ನನ್ನ ಮಗನು ನನ್ನನ್ನೂ ಮೀರಿ ಬೆಳೆಯಬೇಕೆಂಬುದು ನನ್ನ ಮಹದಾಸೆ’ ಎಂದಾಗ ಪತ್ನಿ ಮೆಚ್ಚುಗೆ ಸೂಚಿಸಿ ತಾನು ತಪ್ಪು ತಿಳಿದುಕೊಂಡಿದ್ದಕ್ಕೆ ಮರುಗಿದಳು. ಇದನ್ನು ಆಲಿಸಿದ ಭಾರವಿ, ಕಣ್ಣೀರು ಸುರಿಸುತ್ತಾ ತಂದೆಯ ಪಾದಗಳಿಗೆ ಉರುಳಿ ಸತ್ಯವನ್ನು ಹೇಳಿ ತನಗೆ ಶಿಕ್ಷೆ ವಿಧಿಸಲು ಕೇಳಿಕೊಂಡ. ತಂದೆ ಹೇಳಿದ, ‘ನಿನಗಾದ ಪಶ್ಚಾತ್ತಾಪವೇ ಶಿಕ್ಷೆ. ಉನ್ನತ ಸಾಧನೆಯೊಂದಿಗೆ ಲೋಕಕಲ್ಯಾಣಕ್ಕಾಗಿ ಶ್ರಮಿಸು’ ಎಂದು.

ಪೋಷಕರ ಕಟುನುಡಿ, ಶಿಕ್ಷಕರ ಬುದ್ಧಿಮಾತು ಕೆಲವರಿಗೆ ಸಹಿಸಲು ಸಾಧ್ಯವಾಗದೇ ಇದ್ದೀತು. ಪಾಲಕರ ಮೇಲೆ, ಬೋಧಕರ ಮೇಲೆ ಸೇಡು ತೀರಿಸಿಕೊಂಡ ಉದಾಹರಣೆಗಳು ಇಂದು ಸಾಕಷ್ಟು ಇವೆ. ಹಿಂಸೆಗೂ ಹೇಸದ ಹತ್ಯೆಗೂ ಹಿಂಜರಿಯದ ಕೆಲ ಮಕ್ಕಳನ್ನು ಕಾಣುತಿದ್ದೇವೆ. ಅನಂತರ ಅವರು ಕಂಬಿ ಎಣಿಸಿ ಮರುಕಪಡುವ ದುಃಸ್ಥಿತಿ. ಹಾಗಾಗಿ ಗುರು-ಹಿರಿಯರು ಬೈದುಹೇಳಿದ್ದು ತಮ್ಮ ಒಳಿತಿಗೇ ಎಂದು ತಿಳಿದು ವಿವೇಚನೆಯಿಂದ ಜೀವನವನ್ನು ಸಾರ್ಥಕಪಡಿಸಿ ಕೊಳ್ಳಬೇಕು. ಪಾಲಿಸಬೇಕಾದ ಪಾಲಕರನ್ನೇ ದೂರೀಕರಿಸಿದರೆ, ಗೌರವಿಸಬೇಕಾದ ಗುರುಗಳನ್ನೇ ತುಚ್ಛೀಕರಿಸುವ ನೀಚಕತ್ಯಕ್ಕೆ ಇಳಿದರೆ? ಎಂತಹ ಕ್ಲಿಷ್ಟ ಸಂದರ್ಭದಲ್ಲೂ ವಿವೇಚನೆ ಕಳೆದುಕೊಳ್ಳದೇ, ಅವರಿವರ ಸಲಹೆಗೆ ಕಿವಿಗೊಡದೇ ಸಮಾಧಾನದಿಂದ, ತಾಳ್ಮೆಯಿಂದ ಅಂತಮುಖಿಯಾಗಿ ಯೋಚಿಸಿ, ತಪ್ಪನ್ನು ತಿದ್ದಿಕೊಂಡು ಸನ್ಮಾರ್ಗದಲ್ಲಿ ಪ್ರಗತಿ ಸಾಧಿಸಲು ಸತತವಾಗಿ ಪ್ರಯತ್ನಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net