ಜನಮತ: ಸರ್ಕಾರ ಕಾಳಸಂತೆಯನ್ನು ನಿಯಂತ್ರಿಸಲಿ

Janamata
Published on

ಲಾಕ್​ಡೌನ್ ಅವಧಿಯಲ್ಲಿ ಕೆಲವೊಂದು ವಸ್ತುಗಳನ್ನು ಕಳ್ಳಸಂತೆಯಲ್ಲಿ ಮಾರಿ ದಿಢೀರ್ ಶ್ರೀಮಂತರಾಗಲು ಕೆಲವರು ಹಾತೊರೆಯುತ್ತಿದ್ದಾರೆ. ಉದಾಹರಣೆಗೆ, ಮದ್ಯ ಹಾಗೂ ತಂಬಾಕಿನ ಉತ್ಪನ್ನಗಳನ್ನು ನಿಗದಿತ ಮುಖಬೆಲೆಯ ಹತ್ತಿಪ್ಪತ್ತು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಗಳಿಸಿಕೊಂಡಿರುವ ಕತೆ ಈಗ ಇತಿಹಾಸ! ಅದರಲ್ಲೂ ಎಂಆರ್​ಪಿ ಅಂದರೆ ‘ಗರಿಷ್ಠ ಮಾರಾಟ ಬೆಲೆ’ ಎಂಬ ಹಣೆಪಟ್ಟಿ ಅದಾಗಲೇ ಗ್ರಾಹಕರಿಂದ ಹೆಚ್ಚು ಹಣ ವಸೂಲಿಗೆ ಶ್ರೀರಕ್ಷೆಯಾಗಿದೆ. ಏಕೆಂದರೆ ವಸ್ತುವಿನ ನೈಜಬೆಲೆಯ ನಾಲ್ಕೈದು ಪಟ್ಟು ಬೆಲೆಯೇ ಎಂಆರ್​ಪಿಯಲ್ಲಿ ಅಡಗಿರುತ್ತದೆ ಎನ್ನುವುದು ಹಳೆಯ ಸಂಗತಿ. ಈಗಿನ ದಿನಗಳಲ್ಲಿ ಈ ಎಂಆರ್​ಪಿಗಿಂತಲೂ ಹತ್ತಿಪ್ಪತ್ತು ಪಟ್ಟು ಹೆಚ್ಚಿನ ಬೆಲೆಗೆ ಉತ್ಪನ್ನ/ವಸ್ತುಗಳನ್ನು ಮಾರಾಟ ಮಾಡಿ ಸಿರಿವಂತರಾಗುವ ಸುಲಭೋಪಾಯ ಕಂಡುಕೊಂಡಿದ್ದಾರೆ ಕೆಲವು ವ್ಯಾಪಾರಿಗಳು ಹಾಗೂ ಮಧ್ಯವರ್ತಿಗಳು. ಕೆಲವು ವ್ಯಾಪಾರಿಗಳನ್ನು ಈ ಬಗ್ಗೆ ಪ್ರಶ್ನಿಸಿದಾಗ ‘ಅಯ್ಯೋ ಈ ರೇಟಿಗೂ ಮಾಲು ಸಿಗೋಲ್ಲ, ಬೇಕಿದ್ದರೆ ತೊಗೊಳ್ಳಿ ಇಲ್ಲಾಂದ್ರೆ ಜಾಗ ಖಾಲಿ ಮಾಡಿ’ ಎಂಬ ಉಡಾಫೆಯ ಉತ್ತರ ನೀಡಿದರೆ, ಇನ್ನು ಕೆಲವರು, ‘ಅಯ್ಯೋ ನಮಗೆ ಇದರಲ್ಲಿ ಸಿಗೋದೇ ಎರಡು ರೂಪಾಯಿ’ ಎನ್ನುತ್ತಾರೆ. ಅದೇನಿದ್ದರೂ ಗ್ರಾಹಕರನ್ನು ಸುಲಿಯುವ ಕಾಳಸಂತೆಯ ದಂಧೆಕೋರತನವನ್ನು ನಿಯಂತ್ರಿಸುವಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹಗಲುದರೋಡೆ ನಿರಾತಂಕವಾಗಿ ನಡೆದು ಬಡಪಾಯಿ ಗ್ರಾಹಕ ತೊಂದರೆಗೆ ಒಳಗಾಗುತ್ತಾನೆ. ಹಾಗೂ ಸರ್ಕಾರದ ರಾಜಸ್ವಕ್ಕೆ ಧಕ್ಕೆ ಆಗುವುದರಲ್ಲಿ ಸಂಶಯವಿಲ್ಲ.

| ಚನ್ನಬಸವ ಪುತ್ತೂರು

ಮಹತ್ವದ ಸಂದೇಶ

ಕರೊನಾ ಸಂಕಷ್ಟಕಾಲವನ್ನೂ ಒಂದು ಅವಕಾಶವನ್ನಾಗಿ ಪರಿವರ್ತಿಸುವ ಬಗ್ಗೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ‘ಆತ್ಮನಿರ್ಭರ ಭಾರತ’ಕ್ಕೆ ಕರೆ ನೀಡಿದ್ದಾರೆ. ನಿಜಕ್ಕೂ, ಇದೊಂದು ಮಹತ್ವದ ಸಂದೇಶ. ಅಷ್ಟಕ್ಕೂ, ಸ್ವಾವಲಂಬನೆ ಎಂಬುದು ಭಾರತೀಯತ್ವದ ಗುರುತೇ ಆಗಿದೆ. ಹಿಂದೆಲ್ಲ ನಮ್ಮ ಹಳ್ಳಿಗಳು, ನಮ್ಮ ಆರ್ಥಿಕ ಸ್ವಾವಲಂಬಿಯೇ ಆಗಿದ್ದವು. ಅದರಿಂದಲೇ, ಸಮೃದ್ಧಿ, ಸಂತೃಪ್ತಿ ನೆಲೆಸಿತ್ತು ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಮತ್ತೊಮ್ಮೆ ಭಾರತವನ್ನು ಹೀಗೆ ಶಕ್ತಿಶಾಲಿಯಾಗಿ ನಿರ್ವಿುಸುವ ಅವಕಾಶ ಬಂದೊದಗಿದೆ. ನಮ್ಮಲ್ಲಿ ಇರುವ ಅಪಾರ ಮಾನವ ಸಂಪನ್ಮೂಲ, ಕೌಶಲ, ಜ್ಞಾನಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡರೆ ವಿಶ್ವದ ಯಾವುದೇ ರಾಷ್ಟ್ರಕ್ಕಿಂತ ಹೆಚ್ಚು ಸಮರ್ಥ ಮತ್ತು ಸ್ವಾವಲಂಬಿಯಾಗಿ ಭಾರತ ಎದ್ದುನಿಲ್ಲಬಲ್ಲದು. ಈ ಆಶಯ ಸಾಕಾರಗೊಳ್ಳಬೇಕಾದರೆ ನಮ್ಮಲ್ಲಿನ ಆಂತರಿಕ ವ್ಯತ್ಯಾಸಗಳು, ಎಲ್ಲದಕ್ಕೂ ರಾಜಕೀಯ ಎಳೆದು ತರುವ ಕೆಟ್ಟ ಪ್ರವೃತ್ತಿ, ವಿಳಂಬಧೋರಣೆಗಳು ಇಲ್ಲವಾಗಬೇಕು. ಯುವಸಮುದಾಯಕ್ಕೆ ಅವರ ಸಾಮರ್ಥ್ಯವನ್ನು ಮನದಟ್ಟು ಮಾಡಿಕೊಡಬೇಕು.

| ರವಿ ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net