ಜನಮತ | ಬ್ಯಾಂಕಿಂಗ್ ರಂಗದಲ್ಲಿ ಬೇಕು ಸುಧಾರಣೆ

Janamatha1
Published on

ವಿಶ್ವಬ್ಯಾಂಕ್ ಪ್ರಕಟಿಸುವ ಈಸ್ ಆಫ್ ಡೂಯಿಂಗ್ ಬಿಜಿನೆಸ್ ಯಾದಿಯಲ್ಲಿ ಭಾರತದ ಸ್ಥಾನವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಅನೇಕ ಉದ್ಯೋಗಸ್ನೇಹಿ ಸುಧಾರಾಣಾತ್ಮಕ ಕ್ರಮ ಕೈಗೊಳ್ಳುತ್ತ ಬಂದಿದೆ. ಆ ಹಿನ್ನೆಲೆಯಲ್ಲಿ ಸಮಗ್ರ ಆರ್ಥಿಕ ಚಟುವಟಿಕೆಯ ಆಧಾರಸ್ಥಂಭ ಎನಿಸಿದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಈಸ್ ಆಫ್ ಡೂಯಿಂಗ್ ಯಾವ ಮಟ್ಟದಲ್ಲಿ ಇದೆ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಅಗತ್ಯ. ಬ್ಯಾಂಕುಗಳಲ್ಲಿ ಶ್ರೀಸಾಮಾನ್ಯ ಗ್ರಾಹಕಸ್ನೇಹಿ ವಾತಾವರಣವಿದ್ದರೆ ಮಾತ್ರ ಸರ್ಕಾರದ ಆರ್ಥಿಕ ಪ್ರಗತಿ ಮತ್ತು ಆರ್ಥಿಕ ಸೇರ್ಪಡೆ (Financial inclusion) ಕಾರ್ಯಸೂಚಿ ಸಾಫಲ್ಯ ಕಾಣಬಹುದು.

ಬ್ಯಾಂಕ್ ರಾಷ್ಟ್ರೀಕರಣ, ಜನಧನ್ ಖಾತೆಗಳ ಮೂಲಕ ಶ್ರೀಸಾಮಾನ್ಯರಿಗೆ ಬ್ಯಾಂಕ್​ಗಳ ಬಾಗಿಲನ್ನು ತೆರೆದ ಸರ್ಕಾರ ಗ್ರಾಮೀಣ ಕ್ಷೇತ್ರದ ಕಡಿಮೆ ಶಿಕ್ಷಿತ ಜನಸಾಮಾನ್ಯರಿಗೆ ಸುಲಲಿತವಾಗಿ ಬ್ಯಾಂಕಿಂಗ್ ಸೇವೆ ಸಿಗುವಂತೆ ಮಾಡಬೇಕಾಗಿದೆ. ಆಯಾ ಪ್ರಾದೇಶಿಕ ಭಾಷೆಯಲ್ಲಿ ವ್ಯವಹಾರ ಮಾಡುವ ಅನುಕೂಲಕರ ವಾತಾವರಣವಿಲ್ಲದೇ ಗ್ರಾಮೀಣ ಮಹಿಳೆಯರು ಮತ್ತು ಕಡಿಮೆ ಶಿಕ್ಷಿತ ವರ್ಗದ ಜನರು ಬ್ಯಾಂಕಿಂಗ್ ಸೇವೆ ಪಡೆಯಲು ಮುಂದೆ ಬರಲಾರರು. ಸರ್ಕಾರದ ಪ್ರತಿಷ್ಠಿತ ಯೋಜನೆಗಳಾದ ‘ಪ್ರಧಾನಮಂತ್ರಿ ಮುದ್ರಾ ಸಾಲ’, ‘ಉದ್ಯೋಗ ಸೃಜನ ಕಾರ್ಯಕ್ರಮ’ (PMEGP) ಮೊದಲಾದ ಸಾಲ ಯೋಜನೆಗಳು, ಸಾಮಾಜಿಕ ಸುರಕ್ಷತಾ ಯೋಜನೆಗಳಾದ ಪ್ರಧಾನಮಂತ್ರಿ ಜೀವನ್​ಜ್ಯೋತಿ ವಿಮಾ ಯೋಜನೆ (PMJBY), ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ (PMSBY), ಅಟಲ್ ಪೆನ್ಷನ್ ಯೋಜನೆಗಳು ಜನಸಾಮಾನ್ಯರಿಗೆ ತಲುಪಿಸಬೇಕಾದ ಬ್ಯಾಂಕ್​ಗಳು ಪ್ರಾದೇಶಿಕ ಭಾಷೆಯಲ್ಲಿ ವ್ಯವಹರಿಸುವಂತಾಗಬೇಕು. ಈ ನಿಟ್ಟಿನಲ್ಲಿ ಬ್ಯಾಂಕಿಂಗ್ ನೇಮಕಾತಿ ವ್ಯವಸ್ಥೆಯಲ್ಲಿ ಪ್ರಾದೇಶಿಕ ಭಾಷಾಜ್ಞಾನಕ್ಕೆ ಒತ್ತು ಸಿಗುವಂತೆ ಸೂಕ್ತ ಬದಲಾವಣೆ ತುರ್ತಾಗಿ ಜಾರಿಯಾಗಬೇಕಿದೆ.

ಪ್ರಾದೇಶಿಕ ಭಾಷಾಜ್ಞಾನವಿಲ್ಲದ ಅಧಿಕಾರಿಗಳು ಸಾಲ ವಿತರಣೆ ಮತ್ತು ವಸೂಲಿ ಪ್ರಕ್ರಿಯೆಯಲ್ಲಿ ಕೂಡ ನಿರೀಕ್ಷಿತ ಸಫಲತೆ ಕಾಣಲು ಸಾಧ್ಯವಿಲ್ಲ. ಹೊರರಾಜ್ಯಗಳ ನೌಕರರು ಆಗಾಗ್ಗೆ ದೀರ್ಘರಜೆಗೆ ತೆರಳುವುದರಿಂದ ಸಾಲ ವಿತರಣೆ ಮತ್ತು ಅನ್ಯ ಸಾಮಾನ್ಯ ವ್ಯವಹಾರ ಬಾಧಿತವಾಗುತ್ತವೆ. ಇಂಟರ್​ನೆಟ್ ಬ್ಯಾಂಕಿಂಗ್​ನಂಥ ಆಧುನಿಕ ತಂತ್ರಜ್ಞಾನಗಳನ್ನು ಬಳಸಲರಿಯದ, ಅಷ್ಟೇಕೆ ಎಟಿಎಮ್ಂದ ಹಣ ತೆಗೆಯಲು ಹರಸಾಹಸ ಪಡುವ ಕೃಷಿಕ, ಕೂಲಿಕಾರರ ದೊಡ್ಡವರ್ಗ ಗ್ರಾಮೀಣ ಕ್ಷೇತ್ರದಲ್ಲಿದೆ. ಪ್ರಾದೇಶಿಕ ಭಾಷಾಜ್ಞಾನವಿರುವ ಸಿಬ್ಬಂದಿಯಿಂದ ಸಿಗುವ ಸಹಾನುಭೂತಿ, ಸಹಾಯಹಸ್ತ, ಸಾಂತ್ವನ ಹೊರ ರಾಜ್ಯದಿಂದ ಬಂದ ನೌಕರವರ್ಗದಿಂದ ಅಪೇಕ್ಷಿಸಲು ಸಾಧ್ಯವಿಲ್ಲ ಎಂಬ ಗ್ರಾಹಕರ ಅಳಲಿಗೆ ಸರ್ಕಾರ ಸ್ಪಂದಿಸಬೇಕಾಗಿದೆ. ಕೌಂಟರ್​ಗಳಲ್ಲಿ ಗ್ರಾಹಕರೊಂದಿಗೆ ನೇರ ಸಂಪರ್ಕಕ್ಕೆ ಬರುವ ಹುದ್ದೆ ಗಳಿಗೆ ಕಡ್ಡಾಯವಾಗಿ ಆಯಾ ರಾಜ್ಯದ ನಿವಾಸಿಗಳಿಗೆ ಆದ್ಯತೆ ನೀಡುವವುದ ರಿಂದ ಈ ಸಮಸ್ಯೆಯನ್ನು ಕೊಂಚ ಮಟ್ಟಿಗೆ ಪರಿಹರಿಸಬಹುದು. ಆಡಳಿತಾತ್ಮಕ ಹುದ್ದೆಗಳನ್ನು ಹೊರತುಪಡಿಸಿ ಶಾಖಾಮಟ್ಟದ ಸಿಬ್ಬಂದಿ ಮತ್ತು ಅಧಿಕಾರಿಗಳು ಪ್ರಾದೇಶಿಕ ಭಾಷೆಯಲ್ಲಿ ಸುಲಭವಾಗಿ ವ್ಯವಹರಿಸುವಂಥ ವ್ಯವಸ್ಥೆ ಜಾರಿಯಾಗದೇ ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೆ ಬ್ಯಾಂಕಿಂಗ್ ಸೇವೆ ಒದಗಿಸುವ ಸರ್ಕಾರದ ಧ್ಯೇಯೋದ್ದೇಶ ಸಫಲವಾಗದು.

| ಚಂದ್ರಶೇಖರ ನಾವಡ ಬೈಂದೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net