ಚಿಗುರುತ್ತಿದೆ ಚಿತ್ರ ಜಗತ್ತು; ಕರೊನಾ ಕರಿನೆರಳಿನಿಂದ ಬಿಡಿಸಿಕೊಳ್ಳುವ ಯತ್ನದಲ್ಲಿ ಗ್ಯಾಲರಿಗಳು

Art F
Published on

ಕರೊನಾ ಕರಿನೆರಳಿನಿಂದ ಕಷ್ಟ ಅನುಭವಿಸದ ಕ್ಷೇತ್ರಗಳಿಲ್ಲ. ಸದಾ ಕಲಾವಿದರು-ಕಲಾಸಕ್ತರ ಕಲರವದಿಂದ ಕೂಡಿರುತ್ತಿದ್ದ ಚಿತ್ರಜಗತ್ತೂ ಇದಕ್ಕೆ ಹೊರತಲ್ಲ. ಎರಡನೇ ಅಲೆಯ ನಂತರ ಜನಜೀವನದ ವಿವಿಧ ಚಟುವಟಿಕೆಗಳು ಗರಿಗೆದರಿವೆಯಾದರೂ ಕಲಾಜಗತ್ತು ಸ್ವಲ್ಪ ನಿಧಾನವಾಗಿಯೇ ತೆರೆದುಕೊಳ್ಳುತ್ತಿದೆ. ಕೋವಿಡ್ ನಿಯಮಾವಳಿಗಳು ಸಡಿಲವಾಗಿ ಒಂದು ತಿಂಗಳಿಗೂ ಹೆಚ್ಚು ಕಾಲವಾದರೂ ಈಗ 15 ದಿನದಿಂದೀಚೆಗೆ ಚಿತ್ರಜಗತ್ತಿನಲ್ಲಿ ಚಲನೆ ಆರಂಭವಾಗಿದೆ. ಈ ಬಗ್ಗೆ ಒಂದು ಅವಲೋಕನ.

| ರಮೇಶ ದೊಡ್ಡಪುರ

ಅಕಾಡೆಮಿಯಿಂದ ಸಾಂತ್ವನ

ಕರ್ನಾಟಕ ಲಲಿತಕಲಾ ಅಕಾಡೆಮಿಯೊಂದಿಗೆ ರಾಜ್ಯಾದ್ಯಂತ ಕಲಾವಿದರು ಸಂಪರ್ಕ ಹೊಂದಿದ್ದಾರೆ. ಕರೊನಾ ಕಾರಣಕ್ಕೆ ಮೊದಲ ಲಾಕ್​ಡೌನ್ ಆದಾಗ ಅನೇಕ ಕಲಾವಿದರಲ್ಲಿ ಆತಂಕ ಮೂಡಿತ್ತು. ಸಾಮೂಹಿಕ, ವೈಯಕ್ತಿಕ ಚಿತ್ರ ಶಿಬಿರಗಳು ಇದ್ದಕ್ಕಿದ್ದಂತೆ ರದ್ದಾದವು. ಚಿತ್ರ ಮಾರಾಟ ಮಾಡುವ ಅಂಗಡಿಗಳೂ ಮುಚ್ಚಿದವು. ಈ ಸಂದರ್ಭದಲ್ಲಿ ಅಲ್ಪಮಟ್ಟಿಗಾದರೂ ಸಹಕರಿಸುವ ಕಾರ್ಯಕ್ಕೆ ಅಕಾಡೆಮಿ ಮುಂದಾಯಿತು. ಅಕಾಡೆಮಿ ಅಧ್ಯಕ್ಷ ಡಿ. ಮಹೇಂದ್ರ ಅವರ ಮಾತಿನಲ್ಲೇ ಹೇಳುವುದಾದರೆ, ‘ಕರೊನಾ ಅವಧಿಯಲ್ಲಿ, ಹೆಸರುವಾಸಿಯಾಗಿದ್ದ ಕಲಾವಿದರು ಬಹು ಮಟ್ಟಿಗೆ ಸಂಕಷ್ಟವನ್ನು ಸಹಿಸಿಕೊಂಡರು. ಆದರೆ ಮಧ್ಯಮ ಹಾಗೂ ಹೊಸ ಕಲಾವಿದರಿಗೆ ಆಕಾಶವೇ ಕಳಚಿಬಿದ್ದಂತಾಗಿತ್ತು. ಇದೇ ಕಾರಣಕ್ಕೆ ವರ್ಚುವಲ್ ಕಲಾಶಿಬಿರಗಳನ್ನು ಅಕಾಡೆಮಿಯಿಂದ ಆಯೋಜಿಸಲಾಯಿತು. ಸಾಮಾನ್ಯವಾಗಿ ನಡೆಸುವುದಕ್ಕಿಂತಲೂ ಹೆಚ್ಚಿನ ಕಲಾವಿದರಿಗೆ ಅವಕಾಶ ನೀಡಲಾಯಿತು. ಶಿಬಿರದಲ್ಲಿ ರಚನೆಯಾದ ಕಲಾಕೃತಿಗಳನ್ನು ಅಕಾಡೆಮಿಯೇ ಖರೀದಿಸುವ ಕಾರಣಕ್ಕೆ ತಕ್ಕ ಮಟ್ಟಿಗೆ ಹಣ ಲಭಿಸಿತು’.

ಆನ್​ಲೈನ್​ನಲ್ಲಿ ವಿವಿಧ ವಿಚಾರ ಸಂಕಿರಣ, ಕಲಾವಿದರ ಮಾತು ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಅಕಾಡೆಮಿ ಇದೀಗ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಸಂದರ್ಭದಲ್ಲಿ 50 ಕಲಾವಿದರ ಶಿಬಿರ ಆಯೋಜಿಸಲು ಮುಂದಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾತ್ರವಿರುವ ಕರ್ನಾಟಕದ ಸ್ಥಳಗಳನ್ನು ಗುರುತಿಸಲಾಗಿದ್ದು, ಅವುಗಳ ಕುರಿತು ಹಾಗೂ ಒಟ್ಟಾರೆ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಚಿತ್ರಗಳು ರಚನೆಯಾಗಲಿವೆ. 50 ಕಲಾವಿದರಿಂದ ಲಭಿಸಿದ 100 ಕಲಾಕೃತಿಗಳನ್ನು ಚಿತ್ರಕಲಾ ಪರಿಷತ್​ನಲ್ಲಿ ತಲಾ 10 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತದೆ. ಈ ಕಲಾಕೃತಿಗಳ ಮಾರಾಟದ ಸಂಪೂರ್ಣ ಹಣವನ್ನು ಕೋವಿಡ್ ಪರಿಹಾರ ಕಾರ್ಯಾಚರಣೆಗೇ ಬಳಕೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಿದ್ದೇವೆ ಎಂದು ಮಹೇಂದ್ರ ಹೇಳಿದ್ದಾರೆ.

ಎನ್​ಜಿಎಂಎ ಭಾಗಶಃ ತೆರೆದಿದೆ

ದೇಶಾದ್ಯಂತ ಕಲಾವಿದರನ್ನು ಬೆಸೆಯುವ ಸಂಸ್ಥೆ ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯ (ಎನ್​ಜಿಎಂಎ). ಪ್ಯಾಲೇಸ್ ರಸ್ತೆಯಲ್ಲಿ ಮೂರೂವರೆ ಎಕರೆಯಷ್ಟು ಬೃಹತ್ ಪ್ರದೇಶದಲ್ಲಿ ಪ್ರಾಚೀನ ಕಟ್ಟಡದಲ್ಲಿ ಎನ್​ಜಿಎಂಎ 2009ರಿಂದ ಕಾರ್ಯನಿರ್ವಹಿಸುತ್ತಿದೆ. ಅದಾಗಲೇ ಪುರಾತತ್ವ ಕಟ್ಟಡದಲ್ಲಿ ಸ್ಥಾಪನೆಯಾಗಿದ್ದ 1,551 ಚದರ ಮೀಟರ್ ಗ್ಯಾಲರಿ ಜತೆಗೆ ಹೊಸದಾಗಿ ನಿರ್ವಿುಸಿದ 1,260 ಚದರ ಮೀಟರ್ ವಿಸ್ತೀರ್ಣದ ಬೃಹತ್ ಗ್ಯಾಲರಿಗಳಿವೆ. 2020ರ ಮಾರ್ಚ್​ನಲ್ಲಿ ಎನ್​ಜಿಎಂಎ ಆವರಣವನ್ನು ಬಂದ್ ಮಾಡಲಾಯಿತು. ಮೊದಲನೆಯ ಅಲೆಯ ನಂತರ ಕೆಲ ಸಮಯ ತೆರೆಯಲಾಗಿತ್ತಾದರೂ ಚಿತ್ರಪ್ರದರ್ಶನ ನಡೆದಿಲ್ಲ. ಎರಡನೇ ಅಲೆ ನಿಯಂತ್ರಣಕ್ಕೆ ಬಂದ ನಂತರ ಆಗಸ್ಟ್ 16ರಿಂದ ಒಟ್ಟಾರೆ ಆವರಣವನ್ನು ಸಾರ್ವಜನಿಕರಿಗೆ ತೆರೆಯಲಾಗಿದೆ. ಕಲಾ ಅಂಗಡಿ, ಮ್ಯೂಸಿಯಂ ವೀಕ್ಷಣೆ ಮಾಡಬಹುದು. ಆದರೆ ಕಲಾ ಗ್ಯಾಲರಿಯನ್ನು ಇನ್ನೂ ಸಾರ್ವಜನಿಕರಿಗೆ ಮುಕ್ತಗೊಳಿಸಿಲ್ಲ. ಈ ಕುರಿತು ಪ್ರತಿಕ್ರಿಯಿಸಿದ ಎನ್​ಜಿಎಂಎ ಕ್ಯುರೇಟರ್ ಸುಬರ್ಣ ಪಾತ್ರೊ, ‘ಸದ್ಯದಲ್ಲೆ ಬೃಹತ್ ಪ್ರಮಾಣದ ಚಿತ್ರಪ್ರದರ್ಶನವನ್ನು ಎನ್​ಜಿಎಂಎ ವತಿಯಿಂದಲೇ ಆಯೋಜಿಸಲಾಗುತ್ತಿದೆ. ಕೋವಿಡ್​ಗೂ ಮೊದಲೇ ಈ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಆಗಲೇ ಕಲಾಕೃತಿಗಳೂ ಬಂದು ಸೇರಿವೆ. ಆದರೆ ಲಾಕ್​ಡೌನ್ ಕಾರಣಕ್ಕೆ ಯೋಜನೆ ಅಲ್ಲಿಗೇ ಸ್ಥಗಿತವಾಗಿತ್ತು. ‘ಚಿರಂತನ ಮಹಾರತಿ’ ಎಂಬ ಈ ಚಿತ್ರಪ್ರದರ್ಶನವನ್ನು ಬಹುಶಃ ಸೆಪ್ಟೆಂಬರ್ ಮೂರನೇ ವಾರದಲ್ಲಿ ನವದೆಹಲಿಯ ಎನ್​ಜಿಎಂಎ ಕೇಂದ್ರದಲ್ಲಿ ಉದ್ಘಾಟನೆ ಮಾಡಲಾಗುತ್ತದೆ. ಸೆಪ್ಟೆಂಬರ್ ಅಂತ್ಯ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಚಿತ್ರಪ್ರದರ್ಶನ ಆರಂಭವಾಗಲಿದೆ. ಎರಡೂವರೆ ವರ್ಷದ ನಂತರ ನಡೆಯಲಿರುವ ಮೊದಲ ಪ್ರದರ್ಶನ ಇದಾಗಲಿದೆ. ಆನಂತರದಲ್ಲಿ ಚಿತ್ರಕಲಾವಿದರಿಗೆ ಹಾಗೂ ವೀಕ್ಷಕರಿಗೆ ಗ್ಯಾಲರಿ ಮುಕ್ತವಾಗಲಿದೆ’ ಎಂದಿದ್ದಾರೆ.

ಸಿಕೆಪಿಯಲ್ಲಿ ಈಗಷ್ಟೇ ಆರಂಭ

ಚಿತ್ರಪ್ರದರ್ಶನ, ರಚನೆ, ಶಿಕ್ಷಣ ನೀಡುವ ವಿಷಯದಲ್ಲಿ ಪ್ರಸಿದ್ಧವಾಗಿರುವ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ತು ಸಹ ಕರೊನಾ ಸಂದರ್ಭದಲ್ಲಿ ಕಲಾವಿದರ ಬರ ಎದುರಿಸಿತು. ಕರಕುಶಲ ಮೇಳದಂತಹ, ಪ್ರತಿ ವರ್ಷ ನಡೆಯುವ ಕೆಲವು ಕಾರ್ಯಕ್ರಮಗಳು ಹೊರಾಂಗಣದಲ್ಲಿ ಆಯೋಜನೆಯಾದವು. ಕೋವಿಡ್ ನಿಬಂಧನೆಗಳನ್ನು ಪಾಲಿಸುತ್ತಲೆ ಕೆಲ ಗ್ರಾಹಕರೂ ಆಗಮಿಸಿ ಖರೀದಿ ನಡೆಸಿದರು. ಆದರೆ ಗ್ಯಾಲರಿಗಳಲ್ಲಿ ಪ್ರದರ್ಶನಕ್ಕೆ ಕಲಾವಿದರು ಆಗಮಿಸಲಿಲ್ಲ. ಈ ಕುರಿತು ಮಾತನಾಡಿದ ಖ್ಯಾತ ಕಲಾವಿದೆ ಹಾಗೂ ಚಿತ್ರಕಲಾ ಪರಿಷತ್ ಉಪಾಧ್ಯಕ್ಷೆ ಪ್ರೊ. ಎಂ. ಜೆ. ಕಮಲಾಕ್ಷಿ ಅವರು, ‘ಕರೊನಾ ಎರಡನೇ ಅಲೆಯ ನಂತರದಲ್ಲಿ ಗ್ಯಾಲರಿಯ ಬುಕಿಂಗ್ ನಡೆಯುತ್ತಿದೆ. ಕಳೆದ ವಾರವಷ್ಟೇ ಫೋಟೋಗ್ರಫಿ ಕುರಿತ ಚಿತ್ರಪ್ರದರ್ಶನ ನಡೆದಿದೆ. ಸಿಕೆಪಿಯಲ್ಲಿ ಇಲ್ಲಿವರೆಗೆ ಮುಂಭಾಗದ ಮೂರು, ತಳಮಹಡಿಯಲ್ಲಿ ಒಂದು ಗ್ಯಾಲರಿ ಇತ್ತು. ಇವುಗಳ ಜತೆಗೆ, ಹಿಂಬದಿಯಲ್ಲಿದ್ದ ಕಾಲೇಜು ಕೆಂಗೇರಿಗೆ ಸ್ಥಳಾಂತರವಾದ ಹಿನ್ನೆಲೆಯಲ್ಲಿ ಆ ಸ್ಥಳವನ್ನೂ ವಿಶಾಲವಾದ, ಸುಸಜ್ಜಿತ ಗ್ಯಾಲರಿಯನ್ನಾಗಿ ಪರಿವರ್ತನೆ ಮಾಡಲಾಗಿದೆೆ’ ಎಂದಿದ್ದಾರೆ. ಪ್ರಸಿದ್ಧ ಚಿತ್ರಸಂತೆಯನ್ನು ಈ ವರ್ಷ ಆನ್​ಲೈನ್ ಮೂಲಕ ನಡೆಸಲಾಯಿತು. 1 ದಿನ ನಡೆಯುತ್ತಿದ್ದ ಸಂತೆಯನ್ನು ಆನ್​ಲೈನ್​ನಲ್ಲಿ 1 ತಿಂಗಳು ಆಯೋಜಿಸಲಾಗಿತ್ತು. ‘ವರ್ಚುವಲ್ ಚಿತ್ರಸಂತೆಯಲ್ಲಿ ಸಾಕಷ್ಟು ಕಲಾಕೃತಿಗಳು ಮಾರಾಟವಾಗಿದ್ದರೂ ಭೌತಿಕ ವಾಗಿ ನಡೆಸುವಷ್ಟು ಪ್ರಮಾಣದಲ್ಲಿಲ್ಲ. ಕರೊನಾ 3ನೆಯ ಅಲೆ, ಸರ್ಕಾರದ ಮಾರ್ಗಸೂಚಿಗಳನ್ನು ಆಧರಿಸಿ ಈ ಬಾರಿಯ ಚಿತ್ರಸಂತೆ ಸ್ವರೂಪವನ್ನು ನಿರ್ಧಾರ ಮಾಡಲಾಗುತ್ತದೆ’ ಎಂದಿದ್ದಾರೆ ಕಮಲಾಕ್ಷಿ.

ಮ್ಯಾಗ್ನಿಟ್ಯೂಡ್ ಚೇತರಿಕೆ

ನಗರದ ಅನೇಕ ಖಾಸಗಿ ಗ್ಯಾಲರಿಗಳಲ್ಲೂ ಚಟುವಟಿಕೆ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಚೇತರಿಕೆ ಕಾಣುವ ನಿರೀಕ್ಷೆ ಹೊಂದಿದ್ದಾರೆ. ಆಟೊಮೊಬೈಲ್ ಜತೆಗೆ ಚಿತ್ರಪ್ರದರ್ಶನ ಎಂಬ ವಿನೂತನ ಚಿಂತನೆಯಲ್ಲಿ ರೂಪಿತಗೊಂಡಿರುವುದು ಜಯನಗರದ ಮ್ಯಾಗ್ನಿಟ್ಯೂಡ್ ಗ್ಯಾಲರಿ. ಗ್ರಾಹಕರ ಮನಸ್ಸಿನಲ್ಲಿರುವಂತೆಯೇ ಚಿತ್ರಗಳನ್ನು ರಚಿಸುವ, ಪ್ರತಿ ತಿಂಗಳು ಚಿತ್ರಪ್ರದರ್ಶನದ ಥೀಂ ಬದಲಾಯಿಸಲಾಗುತ್ತದೆ. ಈ ಕುರಿತು ಮಾತನಾಡಿದ ಸಂಸ್ಥೆಯ ರಮೇಶ್ ಮಗರ್, ‘2ನೇ ಅಲೆಯ ಮುಕ್ತಾಯದ ನಂತರವೂ ಯಾವುದೇ ಚಟುವಟಿಕೆ ಕಂಡುಬಂದಿಲ್ಲ. ಮೂರನೇ ಅಲೆ ಬರುವುದಿಲ್ಲ ಎಂಬುದು ಖಾತ್ರಿಯಾದರೆ ಬಹುಶಃ ಗ್ರಾಹಕರು ಇತ್ತ ಆಗವಿಸುತ್ತಾರೆ’ ಎಂದರು.

ವೆಂಕಟಪ್ಪದಲ್ಲಿ ಮೊದಲ ಬುಕಿಂಗ್

ನಾಡಿನ ಪ್ರಸಿದ್ಧ ಹಾಗೂ ಹಳೆಯ ಚಿತ್ರಕಲಾ ಗ್ಯಾಲರಿಗಳಲ್ಲಿ ವೆಂಕಟಪ್ಪ ಆರ್ಟ್ ಗ್ಯಾಲರಿ ಸಹ ಒಂದು. 2020ರ ಮಾರ್ಚ್​ನಲ್ಲಿ ಕರೊನಾ ಲಾಕ್​ಡೌನ್ ಘೋಷಣೆಯಾದ ನಂತರ ಮುಚ್ಚಲ್ಪಟ್ಟ ಗ್ಯಾಲರಿಯಲ್ಲಿ ಇಲ್ಲಿವರೆಗೆ ಯಾವುದೇ ಚಿತ್ರಪ್ರದರ್ಶನ ನಡೆದಿಲ್ಲ. ಮೊದಲನೆಯ ಅಲೆಯ ನಂತರ ನಿಯಮಾವಳಿ ಸಡಿಲವಾಗಿತ್ತಾದರೂ ಯಾವುದೇ ಪ್ರದರ್ಶನ ನಡೆಯಲಿಲ್ಲ. ಇದೀಗ ಎರಡನೆಯ ಅಲೆಯ ನಂತರ ಒಂದು ಕಾರ್ಯಕ್ರಮ ಬುಕಿಂಗ್ ಆಗಿದೆ. ‘ಎರಡನೇ ಅಲೆ ನಂತರ ನಿಯಮಾವಳಿ ಸಡಿಲಿಕೆ ಮಾಡಲಾಗಿದೆ. ಕೋವಿಡ್ ನಿಯಮಗಳನ್ನು ಪಾಲಿಸುತ್ತಲೆ ಪ್ರದರ್ಶನಕ್ಕೆ ಅವಕಾಶವಿದೆ. ಒಂದು ತಂಡವು ಸೆ.19ರಿಂದ 10 ದಿನಗಳವರೆಗೆ ಪ್ರದರ್ಶನ ನಡೆಸಲು ಬುಕ್ ಮಾಡಿದೆ. ಜತೆಗೆ ಸೆ.19ರಿಂದ ಮೂರು ದಿನದವರೆಗೆ ಆಡಿಟೋರಿಯಂ ಕಾಯ್ದಿರಿಸಲಾಗಿದೆ’ ಎಂದು ಕರ್ನಾಟಕ ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕಿ ಕಾವ್ಯಶ್ರೀ ಹೇಳುತ್ತಾರೆ.

ನಿರಂತರ ಚಟುವಟಿಕೆ

ಕಲೆ ಹಾಗೂ ಕಲಾವಿದರ ನಡುವಿನ ಕೊಂಡಿಯಾಗುವಂತೆ ರೂಪುಗೊಂಡಿರುವ, ಬನಶಂಕರಿ ಎರಡನೇ ಹಂತದಲ್ಲಿರುವ ಫಿಡಿಲಿಟಸ್ ಗ್ಯಾಲರಿ ಕರೊನಾ ಸಮಯದಲ್ಲಿಯೂ ಚಟುವಟಿಕೆಯಿಂದ ವಿಮುಖವಾಗಿಲ್ಲ. ಈ ಕುರಿತು ಗ್ಯಾಲರಿಯ ಸ್ಥಾಪಕ ಅಚ್ಯುತ್ ಗೌಡ ಹೇಳುವುದು ಹೀಗೆ: ‘ಕರೊನಾ ಸಮಯದಲ್ಲಿ ಬಹುತೇಕ ಗ್ಯಾಲರಿಗಳು ಮುಚ್ಚಿದಾಗ, ನಾವು ಇದನ್ನು ಸವಾಲಾಗಿ ಸ್ವೀಕರಿಸಿದೆವು. ಆರ್ಟ್ ಗ್ಯಾಲರಿಯಲ್ಲಿ ಪೇಂಟಿಂಗ್ ಬದಲಿಗೆ ಶಿಲ್ಪಗಳ ಪ್ರದರ್ಶನ ಮಾಡಿದೆವು. 2020ರ ಆಗಸ್ಟ್ ನಲ್ಲಿ ಎಚ್.ಎನ್. ಕೃಷ್ಣಮೂರ್ತಿಯವರ ‘ಮಲೆನಾಡಿನ ಮುಖಗಳು’ ಎಂಬ ಶೋ ನಾಲ್ಕೂವರೆ ಸಾವಿರ ಜನರಿಂದ ವೀಕ್ಷಿಸಲ್ಪಟ್ಟಿತು. 2021ರ ಜನವರಿಯಲ್ಲಿ ಕೋಟೆಗದ್ದೆ ರವಿ ಅವರ ‘ನಿರ್ವಾಣ’ ಪ್ರದರ್ಶನವೂ ಯಶಸ್ವಿಯಾಯಿತು. ಕರೊನಾ ಲಾಕ್​ಡೌನ್ ಸಂದರ್ಭದಲ್ಲಿ 360 ಡಿಗ್ರಿ ಕ್ಯಾಮೆರಾ ಬಳಸಿ ವರ್ಚುವಲ್ ಪ್ರದರ್ಶನ ನಡೆಯಿತು, ಅಂತಾರಾಷ್ಟ್ರೀಯ ಮಟ್ಟದಿಂದಲೂ ಆಸಕ್ತಿ ವ್ಯಕ್ತವಾಯಿತು. ಇದೀಗ ಗ್ಯಾಲರಿ 7ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಖ್ಯಾತನಾಮರು ಆಗಮಿಸಿ ಉದ್ಘಾಟಿಸಿದರು. 150ಕ್ಕೂ ಹೆಚ್ಚು ಕಲಾವಿದರೊಂದಿಗೆ ಸಂವಾದ ನಡೆಯಿತು. ಕಲೆಗೆ ಮಿತಿಯಿಲ್ಲ, ಹಾಗೆಯೇ ಕಲಾವಿದನಿಗೂ ಮಿತಿ ಇರಬಾರದು ಎಂದು ನಿರಂತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದೇವೆ’.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net