

ಹರಿಪ್ರಕಾಶ ಕೋಣೆಮನೆ
(ಲೇಖಕರು ಬಿಜೆಪಿಯ ಹಿರಿಯ ವಕ್ತಾರರು)
ಹೇಳಿಕೇಳಿ ನಾವು ಅಕ್ಟೋಬರ್ ತಿಂಗಳಿನ ಮಧ್ಯಭಾಗದಲ್ಲಿದ್ದೇವೆ. ಸ್ವಾತಂತ್ರ್ಯ ದಿನದ ಕಾರಣಕ್ಕೆ ಆಗಸ್ಟ್ ತಿಂಗಳು, ಗಣರಾಜ್ಯೋತ್ಸವದ ಕಾರಣಕ್ಕೆ ಜನವರಿ ಹೇಗೋ ಹಾಗೆಯೇ ಗಾಂಧಿ ಜಯಂತಿ ಕಾರಣಕ್ಕೆ ಅಕ್ಟೋಬರ್ ತಿಂಗಳು ನಮ್ಮನ್ನು ಆವರಿಸುತ್ತದೆ. ಭಾರತ ಮಾತ್ರವಲ್ಲ, ಈಗ ಇಡೀ ಜಗತ್ತಿಗೆ ಅತಿ ಮಹತ್ವದ್ದು. ಮುಸ್ಲಿಂ ತುಷ್ಟೀಕರಣ ಮತ್ತು ಆಧುನಿಕ ತಂತ್ರಜ್ಞಾನದ ವಿಷಯದಲ್ಲಿ ಋಣಾತ್ಮಕತೆ ಜತೆಗೆ ಧನಾತ್ಮಕ ಪರಿಣಾಮವನ್ನೂ ಒಂದೇ ತಕ್ಕಡಿಯಲ್ಲಿ ತೂಗಿದ ಕಾರಣಕ್ಕೆ ನಾನೂ ಗಾಂಧೀಜಿಯವರ ಕಟು ಟೀಕಾಕಾರನೇ ಆದರೂ, ಭಾರತವನ್ನು ಸ್ವಾವಲಂಬಿ, ಆತ್ಮನಿರ್ಭರ ದೇಶವನ್ನಾಗಿ ಮಾಡಬೇಕೆಂಬ ಗಾಂಧೀಜಿ ಕಲ್ಪನೆ ಮತ್ತು ಸಂಕಲ್ಪದ ವಿಷಯದಲ್ಲಿ ಎರಡನೆಯ ಮಾತೇ ಇಲ್ಲ.
ಸ್ವಾವಲಂಬನೆ ಜೊತೆಗೆ ಧರ್ಮ, ಅಹಿಂಸೆ, ಸತ್ಯದ ತಳಹದಿಯಲ್ಲಿ ದೇಶವನ್ನು ಸಶಕ್ತವಾಗಿ ನಿರ್ಮಾಣ ಮಾಡಬೇಕೆಂಬುದು ಗಾಂಧೀಜಿಯವರ ಆಶಯವಾಗಿದ್ದರೆ, ಭಾರತವನ್ನು ಸ್ವಶಕ್ತಿಯಮೇಲೆ ಮರುನಿರ್ವಣ ಮಾಡಬೇಕೆಂಬುದು ಸರ್ದಾರ್ ಪಟೇಲ್ ಅವರ ಕನಸಾಗಿತ್ತು. ಕಾಕತಾಳೀಯವಾಗಿ ಈ ಇಬ್ಬರೂ ಮಹನೀಯರು ಗುಜರಾತಿನವರು. ದುಃಖದ ಸಂಗತಿ ಎಂದರೆ ಈ ಇಬ್ಬರ ಆಶಯ ಮತ್ತು ಸಂಕಲ್ಪವನ್ನು ಸ್ವಾತಂತ್ರೊ್ಯೕತ್ತರ ಭಾರತದಲ್ಲಿ ಕಾಂಗ್ರೆಸ್ ಪಕ್ಷ ಕಾಲಡಿಯ ಕಸಕ್ಕಿಂತಲೂ ಅನಾದರದಿಂದ ನೋಡಿತು.
ಗಾಂಧೀಜಿಯನ್ನೂ ಮತ್ತು ಗಾಂಧೀ ವಿಚಾರದ ಅನುಸರಣೆಯನ್ನು ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ ಸರ್ಕಾರಗಳು ಎಷ್ಟು ಅಸಡ್ಡೆ ಮಾಡಲು ಸಾಧ್ಯವೋ ಅಷ್ಟು ಅಸಡ್ಡೆ ಮಾಡಿದವು. ಅದರ ಒಟ್ಟು ಪರಿಣಾಮ- ಗಾಂಧೀಜಿ ವಿಚಾರ ಮತ್ತು ವ್ಯಕ್ತಿತ್ವ ಎಂದರೆ ಹೊಸ ಪೀಳಿಗೆ ಪಾಲಿಗೆ ಶುದ್ಧ ಗೇಲಿ ಮತ್ತು ತಮಾಷೆಯ ಸಂಗತಿ ಆಯಿತು. ಆದರೆ ತೆರೆಮರೆಗೆ ಸರಿದಿದ್ದ ಗಾಂಧಿ ಮತ್ತು ಸರ್ದಾರ್ ವಲ್ಲಭ್ ಭಾಯಿ ಪಟೇಲ್ ನಿಜವಾಗಿ ಮತೊಮ್ಮೆ ಪ್ರವರ್ಧಮಾನಕ್ಕೆ ಬರತೊಡಗಿದ್ದು ನರೇಂದ್ರ ಮೋದಿ ಗುಜರಾತ್ನ ಮುಖ್ಯಮಂತ್ರಿ ಆದ ಬಳಿಕ. ಸಬರಮತಿ ಆಶ್ರಮವನ್ನು ಅಂತಾರಾಷ್ಟ್ರೀಯ ವೇದಿಕೆಯಾಗಿ ಗುರುತಿಸಿದ್ದು ಮೋದಿ. 2014ರ ತರುವಾಯ ಮೋದಿಯವರೇ ಗಾಂಧಿ ಕನ್ನಡಕವನ್ನು ಸ್ವಚ್ಛ ಭಾರತದ ಲೋಗೋ ಮಾಡುವ ಮೂಲಕ ಗಾಂಧಿ ವ್ಯಕ್ತಿತ್ವವನ್ನು ಗಾಂಧಿ ಸಾವಿನ 65 ವರ್ಷದ ಬಳಿಕ ಗಾಂಧಿಗೆ ಶಾಶ್ವತವಾಗಿ ಮರುಹುಟ್ಟು ನೀಡಿದರು. ಇಲ್ಲಿ ಗಾಂಧಿ ಹೇಳಿದ ಸ್ವಚ್ಛತೆಯನ್ನು ಕೇವಲ ಬೀದಿಬದಿ ಕಸ ಗುಡಿಸುವುದಕ್ಕೆ ಸೀಮಿತವಾಗಿ ನೋಡಿದರೆ ತಪ್ಪು. ಗಾಂಧಿ ಹೇಳಿದ ಸ್ವಚ್ಛತೆಯ ಕಲ್ಪನೆಯನ್ನು ಬೇರೆ ಸಂದರ್ಭದಲ್ಲಿ ವಿವರವಾಗಿ ಚರ್ಚೆ ಮಾಡೋಣ.
ಗಾಂಧಿ ಕಲ್ಪನೆಯ ಸ್ವಾವಲಂಬನೆ ಮತ್ತು ಭಾರತದ ಆತ್ಮನಿರ್ಭರತೆಗೆ ಮತ್ತೆ ಹೊರಳುವುದಾದರೆ, ಆ ಅಧ್ಯಾಯ ಆರಂಭವಾಗಿದ್ದೂ 2014ರ ನಂತರದ ಮೋದಿ ಆಡಳಿತದ ಪರ್ವದಲ್ಲೇ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕಾಗುತ್ತದೆ. ಅಂತಹ ಸ್ವಾವಲಂಬನೆಯ ಪರ್ವವನ್ನು ಮುಖ್ಯವಾಗಿ ಆಲೋಚನೆಯಲ್ಲಿ ಸ್ವಾವಲಂಬನೆ, ಆಚರಣೆಯಲ್ಲಿ ಸ್ವಾವಲಂಬನೆ, ಆರ್ಥಿಕ ಸ್ವಾವಲಂಬನೆ, ಸೈನಿಕ ಸ್ವಾವಲಂಬನೆ, ತಂತ್ರಜ್ಞಾನದಲ್ಲಿ ಸ್ವಾವಲಂಬನೆ ಇತ್ಯಾದಿ. ಈ ಸ್ವಾವಲಂಬನೆಯ ಪರ್ವವನ್ನು ಒಂದೊಂದಾಗಿ ಸ್ಥೂಲವಾಗಿ ನೋಡೋಣ.
ಪ್ರಾಚೀನ ಕಾಲದಿಂದ ಶಿಕ್ಷಣ, ಜ್ಞಾನ, ವಿಜ್ಞಾನ, ತತ್ವಶಾಸ್ತ್ರ, ವಾಸ್ತುಶಿಲ್ಪ, ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದ ಭಾರತ ಇದೀಗ, ಸ್ವಾತಂತ್ರ್ಯದ 75 ವರ್ಷಗಳ ನಂತರ ನೈಜ ವಿಕಾಸ, ನೈಜ ಸ್ವಾವಲಂಬನೆಯ ಅಮೃತಕಾಲಕ್ಕೆ ಗಟ್ಟಿ ಹೆಜ್ಜೆ ಇಟ್ಟಿದೆ. ಒಂದರ್ಥದಲ್ಲಿ ಇಂದಿನ ಆಧುನಿಕ ಭಾರತ ವಿಶ್ವದ ಶಕ್ತಿಯ ಕೇಂದ್ರ, ವಿಶ್ವದ ಗಮನ ಕೇಂದ್ರ. 11 ವರ್ಷಗಳ ಸ್ಥೂಲ ಹಿನ್ನೋಟ ನೋಡುವುದಾದರೆ ನೋಟ್ ಬ್ಯಾನ್ನಂತಹ ಜೇನಿನ ಹುಟ್ಟಿಗೆ ಕೈಹಾಕುವ ಯೋಜನೆಯಿಂದ ಆರಂಭವಾಗಿ ಜನಧನ ಮೂಲಕ ಬ್ಯಾಂಕಿಂಗ್ ಸಾಕ್ಷರತೆ, ಮುದ್ರಾ ಯೋಜನೆ ಮುಖೇನ ಅಶಕ್ತರ ಆರ್ಥಿಕ ಸ್ವಾವಲಂಬನೆ, ಮೇಕ್ ಇನ್ ಇಂಡಿಯಾ, ಸ್ಟಾರ್ಟಪ್ ಇಂಡಿಯಾ, ರಕ್ಷಣಾ ಸಾಮಗ್ರಿ ದೇಶೀಯ ಉತ್ಪಾದನೆಯಲ್ಲಿ ಹತ್ತು ಪಟ್ಟು ಹೆಚ್ಚಳದ ಮೂಲಕ ನಿಜವಾದ ಆತ್ಮನಿರ್ಭರತೆ ಸಾಕಾರಗೊಳಿಸಲಾಯಿತು.
ಬಹಳ ಸವಕಳಿಯಾಗಿದ್ದ ಬಿಜಲಿ, ಸಡಕ್, ಪಾನಿ ಸೌಲಭ್ಯ ಅಥವಾ ಬಡತನ ನಿಮೂಲನೆಯ ಹೇಳಿಕೆಗಳು ಕಣ್ಣಿಗೆ ಕಾಣಲಾರಂಭಿಸಿದವು. ಬಿತ್ತಿದ ಭರವಸೆಯೊಂದು ಫಲ ನೀಡುವ ಲಕ್ಷಣಗಳು ಗೋಚರಿಸಿದವು. ಹೆದ್ದಾರಿ ಅಭಿವೃದ್ಧಿ, ರೈಲ್ವೆ ಸುಧಾರಣೆ, ವಿಮಾನ ನಿಲ್ದಾಣಗಳ ನಿರ್ಮಾಣ ಮತ್ತು ಅಭಿವೃದ್ಧಿ ಭೌತಿಕವಾಗಿ ಕಂಡವು. ಪ್ರತಿ ವ್ಯಕ್ತಿಗೆ ಸೂರು, ನೀರು, ವಿದ್ಯುತ್, ಆರೋಗ್ಯ, ಶಿಕ್ಷಣ ಲಭ್ಯವಾಯಿತು. ಹೀಗೆ ನೈಜ ಅಭಿವೃದ್ಧಿ ಮತ್ತು ಬಡತನ ನಿಮೂಲನೆ ಸಾಕಾರ ಮಾಡಿದ್ದು ಸಣ್ಣ ಸಾಧನೆ ಅಲ್ಲ.
ಹಾಗೆ ನೋಡಿದರೆ, ಮೋದಿ ಪ್ರಣೀತ ಆತ್ಮನಿರ್ಭರ ಕಲ್ಪನೆಯೇ ಗಾಂಧಿ ಪ್ರಣೀತ ಸ್ವದೇಶಿ ಮತ್ತು ಸ್ವಾವಲಂಬನೆಯ ಯಥಾ ರೂಪ. ಇಂದು ದೇಶದ 140 ಕೋಟಿ ಜನರ ಪಾಲಿಗೆ ಆತ್ಮನಿರ್ಭರ ಭಾರತ ಎಂಬುದೊಂದು ದಿವ್ಯಮಂತ್ರ. ಕೋವಿಡ್-19 ಸಂಕಷ್ಟದ ಕಾಲದಲ್ಲಿ ಮೋದಿ ನೇತೃತ್ವದ ಭಾರತ ಸರ್ಕಾರ ಪರಿಚಯಿಸಿದ ಆತ್ಮನಿರ್ಭರ ಭಾರತ ಅಭಿಯಾನ ದೇಶೀಯ ಉತ್ಪಾದನೆ, ನಾವೀನ್ಯತೆ ಮತ್ತು ಆರ್ಥಿಕ ಬೆಳವಣಿಗೆ ಉತ್ತೇಜಿಸುವ ವೇಗವರ್ಧಕವಾಗಿ ಪರಿಣಮಿಸಿದೆ. ಈ ಹೇಳಿಕೆಯನ್ನು 2014ರ ಮೊದಲು ಮತ್ತು 2014ರ ನಂತರ ಎಂದು ತುಲನೆ ಮಾಡಬೇಕು. ದೇಶದ ಬಜೆಟ್, 17 ಲಕ್ಷ ಕೋಟಿ ರೂ. ಇದ್ದದ್ದು ಈಗ 50.65 ಲಕ್ಷ ಕೋಟಿ ರೂ.ಗೆ ಏರಿಕೆ ಆಗಿದೆ. ಪ್ರತಿ ಭಾರತೀಯನ ತಲಾ ಆದಾಯ ತಿಂಗಳಿಗೆ ಸರಾಸರಿ 6,000 ರೂ. ಇದ್ದದ್ದು 20,000 ರೂ.ಆಗಿದೆ. ಗೃಹ ಬಳಕೆ ಗ್ಯಾಸ್ ಸಂಪರ್ಕ 14 ಕೋಟಿ ಮನೆಗಳಿಂದ 31 ಕೋಟಿ ಮನೆಗಳಿಗೆ ಏರಿಕೆ ಕಂಡಿದೆ.
ನಲ್ಲಿ ನೀರು ಸಂಪರ್ಕ 3 ಕೋಟಿ ಮನೆಗಳಿಂದ 15 ಕೋಟಿಗೂ ಅಧಿಕ ಮನೆಗಳಿಗೆ ತಲುಪಿದೆ. 11 ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿ, 4 ಕೋಟಿ ಮನೆ ನಿರ್ವಣ, 11 ಕೋಟಿ ಶೌಚಗೃಹ ನಿರ್ವಣ, 27 ಕೋಟಿ ಭಾರತೀಯರನ್ನು ಬಡತನ ರೇಖೆಯಿಂದ ಮೇಲೆತ್ತಿದ್ದು ಕಡಿಮೆ ಸಾಧನೆಯಲ್ಲ. ಇದೆಲ್ಲದರ ಒಟ್ಟು ಪರಿಣಾಮ ದೇಶದ ಸಂಪತ್ತು ಸೃಷ್ಟಿ 13 ಲಕ್ಷ ಕೋಟಿ ರೂ.ನಿಂದ 187 ಲಕ್ಷ ಕೋಟಿ ರೂ.ಗೆ ಅಗಾಧ ಏರಿಕೆ ಕಂಡಿದೆ. ದೇಶದ ಆರ್ಥಿಕತೆ 10ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಏರಿದೆ. ಹಾಗೆಯೇ ದೇಶದ ಸಾಲ, 29 ಲಕ್ಷ ಕೋಟಿ ರೂ.ನಿಂದ 12 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ. ಹಾಗೆಯೇ ಮುಖ್ಯ ಉತ್ಪನ್ನಗಳ ಬೆಲೆ ಏರಿಳಿಕೆ ವಿಚಾರ. ನಾನ್ಸಬ್ಸಿಡಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 1,250 ರೂ. ಇದ್ದದ್ದು 850 ರೂ.ಗೆ ಇಳಿದಿದೆ. 450 ರೂ. ಇದ್ದ ಸಬ್ಸಿಡಿ ಸಿಲಿಂಡರ್ ಬೆಲೆ 500 ರೂ. ಆಗಿದ್ದು 11 ವರ್ಷಗಳಲ್ಲಿ ಕೇವಲ 50 ರೂ. ಏರಿಕೆಯಾಗಿದೆ. ಪೆಟ್ರೋಲ್ ಬೆಲೆ 2004ರಿಂದ 2014ವರೆಗಿನ ಅವಧಿಯಲ್ಲಿ 42 ರೂ. ಹೆಚ್ಚಳವಾಗಿದ್ದರೆ, 2014ರಿಂದ 2025ರವರೆಗಿನ ಅವಧಿಯಲ್ಲಿ 24 ರೂ. ಹೆಚ್ಚಳವಾಗಿದೆ.
ಮೇಕ್ ಇನ್ ಇಂಡಿಯಾ ಎಂಬ ಗಾಂಧಿ ಚಿಂತನೆ: ಗಾಂಧಿ ಕಲ್ಪನೆಯ ಸ್ವದೇಶಿ ತತ್ವವನ್ನು ನಾವು ಸ್ವಲ್ಪ ಉದಾರ ದೃಷ್ಟಿಯಿಂದ ನೋಡುವುದು ಉತ್ತಮ. ಹೀಗಾಗಿ ದೇಶೀಯ ಉತ್ಪನ್ನ ಮತ್ತು ದೇಶದೊಳಗೆ ಉತ್ಪಾದನೆ ಎಂಬ ಎರಡು ಕಲ್ಪನೆಗಳನ್ನು ಸಮೀಕರಣ ಮಾಡಬೇಕಿದೆ. ಅದರ ಫಲವೇ ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ. ದೇಶೀಯ ಉತ್ಪಾದನೆ ಮತ್ತು ದೇಶದಲ್ಲಿ ಉತ್ಪಾದನೆ ಎಂಬುದು ಪರಸ್ಪರ ಸಂಬಂಧ ಮತ್ತು ಸಹಕಾರ ಹೊಂದಿರುವ ಎರಡು ಆಯಾಮಗಳು. ದೇಶದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು, ಹೂಡಿಕೆಯನ್ನು ಆಕರ್ಷಿಸಲು ಮತ್ತು ಉದ್ಯೋಗ ಸೃಷ್ಟಿಸಲು ಇವು ಅತ್ಯಂತ ಸಹಕಾರಿ. ವಿವಿಧ ಕೈಗಾರಿಕಾ ವಲಯಗಳ ಉತ್ಪಾದನೆ ಮತ್ತು ಉದ್ಯಮಶೀಲತಾ ಚಟುವಟಿಕೆಗಳನ್ನು ಬೆಂಬಲಿಸುವ ಸಲುವಾಗಿ ಕೈಗೊಂಡ ಯೋಜನೆ ಇದಾಗಿದೆ. ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಮತ್ತು ದೇಶೀಯ ಉದ್ಯಮಗಳಿಗೆ ಬೆಂಬಲ ನೀಡುವುದು, ವಿದೇಶಿ ಮತ್ತು ದೇಶೀಯ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವುದು, ಆಧುನಿಕ ತಂತ್ರಜ್ಞಾನದ ಬಳಕೆ ಮತ್ತು ಸ್ಥಳೀಯ ಸಂಶೋಧನೆ ಹಾಗೂ ಅಭಿವೃದ್ಧಿಯನ್ನು ಉತ್ತೇಜಿಸುವುದು ಈ ಯೋಜನೆಯ ಮೂಲ ಕಲ್ಪನೆ ಮತ್ತು ಉದ್ದೇಶವಾಗಿದೆ.
ಸ್ಟಾರ್ಟ್ಅಪ್ ಇಂಡಿಯಾ- ನಮೋ ಮ್ಯಾಜಿಕ್: ದೇಶದಲ್ಲಿ ಹೊಸದಾಗಿ ಉದ್ಯಮವನ್ನು ಆರಂಭಿಸಲು ಬಯಸುವವರಿಗೆ ಅವಕಾಶವನ್ನು ಸೃಷ್ಟಿಸುವ ಮತ್ತು ದೇಶದಲ್ಲಿ ಸ್ಟಾರ್ಟ್ಅಪ್ಗಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ 2016ರಲ್ಲಿ ಸ್ಟಾರ್ಟ್ ಅಪ್ ಇಂಡಿಯಾ ಯೋಜನೆ ಆರಂಭವಾಯಿತು. ಈ ಯೋಜನೆಯಡಿ ನೀಡಿದ ಸಾಲ ಸಹಾಯ, ತೆರಿಗೆ ವಿನಾಯಿತಿ ಪರಿಣಾಮ ಅಮೆರಿಕ, ಚೀನಾ ನಂತರ ಈಗ ಭಾರತ ಅತಿ ಹೆಚ್ಚು ಸ್ಟಾರ್ಟ್ಅಪ್ಗಳನ್ನು ಹೊಂದಿರುವ ಮೂರನೇ ದೇಶವಾಗಿದೆ. ಒಂದು ದೇಶದ ಅರ್ಥವ್ಯವಸ್ಥೆಯ ಜೀವಂತಿಕೆಗೆ ಸಾಕ್ಷಿಯಾಗಿ ನಿಲ್ಲುವುದು ಸ್ಟಾರ್ಟ್ಅಪ್ಗಳು. 2015ರಲ್ಲಿ ದೇಶದಲ್ಲಿದ್ದ ಸ್ಟಾರ್ಟ್ಅಪ್ಗಳ ಸಂಖ್ಯೆ 400 ಮಾತ್ರ. ನಂತರದ 9 ವರ್ಷದಲ್ಲಿ ಸ್ಟಾರ್ಟ್ಅಪ್ಗಳ ಸಂಖ್ಯೆ 400 ಪಟ್ಟು ಹೆಚ್ಚಾಗಿ, 1.60 ಲಕ್ಷಕ್ಕೆ ತಲುಪಿದೆ. 11 ವರ್ಷಗಳ ಪೂರ್ವದಲ್ಲಿ ಐದು ಯೂನಿಕಾರ್ನ್ ಕಂಪನಿಗಳಿದ್ದರೆ ಈಗ ಭಾರತದಲ್ಲಿ ಅವುಗಳ ಸಂಖ್ಯೆ 110ರ ಗಡಿ ದಾಟಿದೆ.
ಡಿಜಿಟಲ್ ಇಂಡಿಯಾ ಮಂತ್ರದಂಡ: ಡಿಜಿಟಲ್ ಇಂಡಿಯಾ ಯೋಜನೆ ಸುಧಾರಿತ ಆನ್ಲೈನ್ ಮೂಲಸೌಕರ್ಯ ಮತ್ತು ಸಂಪರ್ಕದ ಮೂಲಕ ನಾಗರಿಕರಿಗೆ ವಿದ್ಯುನ್ಮಾನವಾಗಿ ಸರ್ಕಾರಿ ಸೇವೆಗಳನ್ನು ಒದಗಿಸಲು ಮೋದಿ ಸರ್ಕಾರ ಆರಂಭಿಸಿದ ಪ್ರಮುಖ ಉಪಕ್ರಮ. ಈ ಅಭಿಯಾನವು ಮೋದಿ ಸರ್ಕಾರದ ಪರಿವರ್ತನಾಶೀಲ ಪ್ರಯತ್ನಗಳಲ್ಲಿ ಒಂದಾಗಿದ್ದು, ಇದು ಡಿಜಿಟಲ್ ಅಂತರವನ್ನು ಕಡಿಮೆ ಮಾಡುವುದು ಮತ್ತು ಆಡಳಿತ ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯಿಂದಾಗಿ ದೇಶದ ಮೂಲೆಮೂಲೆಗೂ ಇಂದು ಇಂಟರ್ನೆಟ್ ಸೌಲಭ್ಯ, ಡಿಜಿಟಲ್ ಪರಿಕರಗಳು ಲಭ್ಯವಾಗುವಂತಾಗಿದೆ. ಯುಪಿಐ (ಏಕೀಕೃತ ಪಾವತಿ ಇಂಟರ್ಫೆಸ್) ಮತ್ತು ಡಿಜಿಟಲ್ ಬ್ಯಾಂಕಿಂಗ್ ಕ್ರಾಂತಿ, ಗ್ರಾಮೀಣ ಪ್ರದೇಶಗಳಲ್ಲಿ ಸಿಎಸ್ಸಿ (ಸಾಮಾನ್ಯ ಸೇವಾ ಕೇಂದ್ರಗಳು) ಸ್ಥಾಪನೆ, 5ಜಿ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ.
ಜಾಗತಿಕ ಸಂಪತ್ತು ಸೃಷ್ಟಿಯಲ್ಲಿ ಭಾರತದ ಐತಿಹಾಸಿಕ ಪಾತ್ರ: ಭಾರತದಲ್ಲಿ ಬಿಲಿಯನೇರ್ಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಜಾಗತಿಕ ರಿಯಲ್ ಎಸ್ಟೇಟ್ ಏಜೆನ್ಸಿ ನೈಟ್ ಫ್ರಾಂಕ್ ಬಿಡುಗಡೆ ಮಾಡಿರುವ ‘ದಿ ವೆಲ್ತ್ ರಿಪೋರ್ಟ್ 2025’ರ ವರದಿ ಪ್ರಕಾರ ಪ್ರಸ್ತುತ ಭಾರತದಲ್ಲಿ 190ಕ್ಕೂ ಹೆಚ್ಚು ಶತಕೋಟ್ಯಧಿಪತಿಗಳಿದ್ದಾರೆ. ಹಿಂದಿನ ವರ್ಷದಲ್ಲಿ ಭಾರತದಲ್ಲಿ ಅತಿ ಹೆಚ್ಚು ಆಸ್ತಿ ಹೊಂದಿರುವವರ ಸಂಖ್ಯೆ 80,686ರಷ್ಟಿತ್ತು. ಆದರೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಅದು 85,698ಕ್ಕೆ ಅಂದರೆ ಶೇ. 6ರಷ್ಟು ಹೆಚ್ಚಾಗಿದೆ. 2028ರ ವೇಳೆಗೆ ಭಾರತದಲ್ಲಿ ಈ ಸಂಖ್ಯೆ 93,753ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ದೇಶದಲ್ಲಿ ಶ್ರೀಮಂತರ ಸಂಖ್ಯೆ ಹೆಚ್ಚಾಗುತ್ತಿರುವುದು ದೇಶದ ಬಲವಾದ ದೀರ್ಘಕಾಲೀನ ಆರ್ಥಿಕ ಬೆಳವಣಿಗೆ, ಹೆಚ್ಚುತ್ತಿರುವ ಹೂಡಿಕೆ ಅವಕಾಶ ಮತ್ತು ಮಾರುಕಟ್ಟೆ ವಿಸ್ತರಣೆಯನ್ನು ತೋರುತ್ತದೆ. ಮಾತ್ರವಲ್ಲದೆ ಈ ಬೆಳವಣಿಗೆ ಜಾಗತಿಕ ಸಂಪತ್ತು ಸೃಷ್ಟಿಯಲ್ಲಿ ಭಾರತವನ್ನು ಪ್ರಮುಖ ರಾಷ್ಟ್ರವನ್ನಾಗಿಸುತ್ತದೆ.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್: ಇದು ಈಗ ಭಾರತದ ಧ್ಯೇಯವಾಕ್ಯ. ಕೇವಲ ಹೇಳಿಕೆಗೆ ಸೀಮಿತವಾಗಿರದೆ ನಿಜಕ್ಕೂ ಸಾಕಾರಗೊಂಡಿದೆ. ಮೋದಿ ಸರ್ಕಾರದ ಆಡಳಿತದಲ್ಲಿ ವಿಶ್ವದಲ್ಲಿಯೇ ಸಾಮಾಜಿಕ ಭದ್ರತಾ ವ್ಯಾಪ್ತಿ ಅತಿವೇಗವಾಗಿ ವಿಸ್ತರಣೆಯಾಗಿದೆ. 2015ರಲ್ಲಿ ಭಾರತದಲ್ಲಿ ಶೇಕಡ 19ರಷ್ಟಿದ್ದ ಸಾಮಾಜಿಕ ಭದ್ರತೆಯ ಪ್ರಗತಿ, 2025ರಲ್ಲಿ ಶೇ. 64.3ರಷ್ಟು ವಿಸ್ತರಣೆ ಆಗಿದೆ. ಇದೊಂದು ಅಭೂತಪೂರ್ವ ಯಶಸ್ಸು. ದೇಶದ ಸುಮಾರು 94 ಕೋಟಿಗೂ ಅಧಿಕ ಜನ ಮೋದಿ ಸರ್ಕಾರದ ಸಾಮಾಜಿಕ ಭದ್ರತೆಯಡಿ ಬದುಕು ಕಟ್ಟಿಕೊಂಡಿದ್ದಾರೆ. ಹೀಗಾಗಿಯೇ ಮೋದಿ ಸರ್ಕಾರದ ಸಾಮಾಜಿಕ ರಕ್ಷಣಾ ಕ್ರಮಗಳಿಗೆ ಅತ್ಯುತ್ತಮ ಸಾಧನೆಯ ಮನ್ನಣೆ ದೊರೆತಿದ್ದು, ಮಲೇಷ್ಯಾದ ಐಎಸ್ಎಸ್ಎಯ (ಇಂಟರ್ ನ್ಯಾಷನಲ್ ಸೋಶಿಯಲ್ ಸೆಕ್ಯೂರಿಟಿ ಅಸೋಸಿಯೇಷನ್) 2025ರ ಪ್ರಶಸ್ತಿಗೆ ಭಾಜನವಾಗಿದೆ.
ಗಾಂಧಿ ಹೇಳಿದ ಶಾಂತಿಮಂತ್ರ: ದೇಶದಲ್ಲಿ ನಕ್ಸಲ್ ಹಾವಳಿ ಶೇ. 99.90ರಷ್ಟು ನಿಗ್ರಹವಾಗಿದೆ. ಭಯೋತ್ಪಾದಕ ಚಟುವಟಿಕೆ ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿದರೆ ಶೇ. ನೂರಕ್ಕೆ ನೂರು ನಿಯಂತ್ರಣಕ್ಕೆ ಬಂದಿದೆ. ಸ್ವಘೊಷಿತ ಗಾಂಧಿ ವಾರಸುದಾರರು ಸಹಕಾರ ನೀಡಿದರೆ ಅದೂ ನೂರಕ್ಕೆ ನೂರು ಸಾಕಾರ ಆಗುತ್ತದೆ. ಈಗ ಹೇಳಿ ನಿಜವಾಗಿಯೂ ಗಾಂಧಿಯನ್ನು ಶಾಶ್ವತವಾಗಿ ಜೀವಂತ ಇಡಲು ಶ್ರಮಿಸುತ್ತಿರುವವರು ಯಾರು? ದಿನವೂ ಗಾಂಧಿಯನ್ನು ಕೊಲ್ಲುತ್ತಿರುವವರು ಯಾರು?