ಕ್ಷಯ ರೋಗ ಪತ್ತೆ ಆಂದೋಲನ ಜಾಥಾ

17 SARAG 1
Published on

ಸರಗೂರು: ರಾಜ್ಯಾದ್ಯಂತ ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸರಗೂರು ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ತಿಳಿಸಿದರು.


ತಾಲೂಕಿನ ಸಾಗರೆ ಗ್ರಾಮದಲ್ಲಿ ಸೋಮವಾರ ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಜು.17ರಿಂದ ಆ.2ರವರೆಗೆ ಆಂದೋಲನ ಹಮ್ಮಿಕೊಳ್ಳಲಾಗಿದೆ. ಪ್ರತಿ ಗ್ರಾಮದಲ್ಲೂ ಆಶಾ ಕಾರ್ಯಕರ್ತೆಯರು ಮನೆ ಮನೆ ಸಮೀಕ್ಷೆ ಮಾಡಲಿದ್ದಾರೆ. 2025ರ ಒಳಗೆ ಕ್ಷಯ ಮುಕ್ತ ಭಾರತ ಮಾಡುವುದು ಇದರ ಉದ್ದೇಶವಾಗಿದೆ ಎಂದರು.


ಕ್ಷಯ ರೋಗವು ಮೈಕೋ ಬ್ಯಾಕ್ಟೀರಿಯಂ ಟ್ಯೂಬರ್ ಕ್ಯುಲೋಸಿಸ್ ಎಂಬ ಸೂಕ್ಷ್ಮ ರೋಗಾಣುವಿನಿಂದ ಬರುತ್ತದೆ. ಕ್ಷಯ ರೋಗಿಯು ಕೆಮ್ಮಿದಾಗ ಅಥವಾ ಸೀನಿದಾಗ ಹೊರ ಬರುವ ತುಂತುರುಗಳಿಂದ ಈ ರೋಗಾಣುಗಳು ಗಾಳಿ ಮೂಲಕ ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶ ಸೇರಿ ಅವನಿಗೆ ಸೋಂಕು ಉಂಟಾಗುತ್ತದೆ. ಎರಡು ವಾರ ಅಥವಾ ಅದಕ್ಕಿಂತ ಮೇಲ್ಪಟ್ಟ ಸತತವಾದ ಕೆಮ್ಮು, ಜ್ವರ, ಸಂಜೆ ವೇಳೆ ಜ್ವರ ಬರುವುದು, ಎದೆಯಲ್ಲಿ ನೋವು, ತೂಕ ಕಡಿಮೆಯಾಗುವುದು, ಹಸಿವಾಗದಿರುವುದು, ಕಫದಲ್ಲಿ ರಕ್ತ ಬೀಳುವುದು ಕ್ಷಯ ರೋಗದ ಲಕ್ಷಣಗಳಾಗಿವೆ ಎಂದು ವಿವರಿಸಿದರು.


ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕಿರಣ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜ್, ಗ್ರಾಪಂ ಅಧ್ಯಕ್ಷ ಮೃತ್ಯುಂಜಯ, ಆರೋಗ್ಯ ಇಲಾಖೆಯ ನಾಗರಾಜ್ , ಕೃಷ್ಣ, ಸೋಮಣ್ಣ , ರವಿರಾಜ್, ಉಮೇಶ್, ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net