

ಕುರಿ ಸಾಕಾಣಿಕೆಯಲ್ಲಿ ಯಶಸ್ಸು ಕಂಡ ಎಂಬಿಎ ಪದವೀಧರ ಆನಂದ ಭಮ್ಮನ್ನವದ ಚಿಕ್ಕೋಡಿ. ನೆಮ್ಮದಿ ಜೀವನ, ಸತಃ ಉದ್ಯೋಗಕ್ಕಾಗಿ ಖಾಸಗಿ ಬ್ಯಾಂಕ್ ನ ಉದ್ಯೋಗ ತೊರೆದ ಎಂಬಿಎ ಪದವೀಧರೊಬ್ಬರು ಕುರಿ ಸಾಕಾಣಿಕೆಯಲ್ಲಿ ಮಾಡುವ ಮೂಲಕ ಯಶಸ್ಸು ಕಂಡಿದ್ದು, ಇಂದಿನ ದಿನಮಾನಗಳಲ್ಲಿ ಕೆಲಸಕ್ಕಾಗಿ ಅಲೆದಾಡುವ ಯುವಕರಿಗೆ ಮಾದರಿಯಾಗಿದ್ದಾರೆ. ಚಿಕ್ಕೋಡಿ ತಾಲೂಕಿನ ತೋರಣಹಳ್ಳಿ ಗ್ರಾಮದ ಬಸವರಾಜ ಶೇಷಗಿರಿ ಸಣ್ಣಲಚ್ಚಪ್ಪಗೋಳ ಎಂಬ ಪದವೀಧರ ಯುವಕ ಕುರಿ ಸಾಕಾಣಿಕೆಯ ಮೂಲಕ ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಮೈಸೂರಿನ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ನಂತರ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ಖಾಸಗಿ ಬ್ಯಾಂಕ್ ವೊಂದರಲ್ಲಿ ಶಾಖಾ ವ್ಯವಸ್ಥಾಪಕರಾಗಿದ್ದರು. ಬ್ಯಾಂಕಿನ ಉದ್ಯೋಗದಲ್ಲಿ ಸಾವಿರಾರು ರೂಪಾಯಿ ವೇತನ ಪಡೆಯುತ್ತಿದ್ದರೂ ನೆಮ್ಮದಿ ಜೀವನ ಸಾಧ್ಯವಾಗದ ಹಿನ್ನೆಲೆಯಲ್ಲಿ ಉದ್ಯೋಗದ ಹುಡುಕಾಟದಲ್ಲಿದ್ದ ಬಸವರಾಜ ಅವರಿಗೆ ಕುರಿ ಸಾಕಾಣಿಕೆ ದಾರಿ ಕಂಡಿತು. ಈಗ ಅದೇ ಕುರಿ ಸಾಕಾಣಿಕೆ ಉದ್ಯೋಗ ಲಕ್ಷಾಂತರ ರೂಪಾಯಿ ಆದಾಯದೊಂದಿಗೆ ನೆಮ್ಮದಿ ಜೀವನ ಕಟ್ಟಿಕೊಂಡಿದ್ದಾರೆ. 3-4 ಲಕ್ಷ ರೂ. ಆದಾಯ: 2022 ರಲ್ಲಿ ಬ್ಯಾಂಕ್ ಉದ್ಯೋಗ ತೊರೆಯುವ ಮೊದಲು ಕುರಿ ಸಾಕಾಣಿಕೆಯಲ್ಲಿ ಲಾಭ-ನಷ್ಟ ಹತ್ತಾರು ಆಲೋಚನೆ ತಲೆಯಲ್ಲಿ ಇಟ್ಟುಕೊಂಡಿದ್ದರು. ಪ್ರಾಯೋಗಿಕವಾಗಿ ಸ್ಥಳೀಯ ತಳಿಯ 10 ಕುರಿಗಳನ್ನು ಖರೀದಿ ಮಾಡಿ ಸಾಕಾಣಿಕೆ ಮಾಡಲು ಪ್ರಾರಂಭಿಸಿದರು. ಒಂದು ವರ್ಷ ಕುರಿಗಳ ಸಾಕಾಣಿಕೆ ಹಾಗೂ ವ್ಯಾಪಾರದ ಮಾಹಿತಿ ಪಡೆದಕೊಂಡರು. ಬಳಿಕ 2023ರಲ್ಲಿ ಬ್ಯಾಂಕ್ ಉದ್ಯೋಗ ತೊರೆದು ನಾರಿ ಸುವರ್ಣ ಮತ್ತು ಸ್ಥಳೀಯ ತಳಿಯ 50 ಕುರಿಗಳನ್ನು ಖರೀದಿಸಿದರು. ಜತೆಗೆ ಸ್ಥಳೀಯ ಮೇಕೆ ಮತ್ತು ಕೋಳಿಗಳನ್ನು ಸಾಕಾಣಿಕೆ ಮಾಡಿದ್ದಾರೆ. ಇದರಿಂದಾಗಿ ಮೊದಲನೇಯ ವರ್ಷದಲ್ಲಿಯೇ 3 ಲಕ್ಷ ರೂ. ಆದಾಯ ಪಡೆದುಕೊಂಡಿದ್ದು, 2024ನೇ ಪ್ರಸಕ್ತ ವರ್ಷದಲ್ಲಿ4 ಲಕ್ಷ ರೂ.ವರೆಗೂ ಆದಾಯ ವೃದ್ಧಿಸಿರುವುದಾಗಿ ಬಸವರಾಜ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಒತ್ತಡದ ಜೀವನ ನಡೆಸುವುದಕ್ಕಿಂತ ನೆಮ್ಮದಿ ಜೀವನಕ್ಕಾಗಿ ಕುರಿ ಸಾಕಾಣಿಕೆ ಮಾಡಲು ಪ್ರಾರಂಭಿಸಿದರು. ಅದರಲ್ಲಿ ಯಶಸ್ಸು ಕಂಡಿದ್ದಾರೆ. ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿದೆ. ಕುರಿ ಸಾಕಾಣಿಕೆ ಮಾಡಲು ಮುಂದಾಗುವ ಹತ್ತಾರು ಯುವಕರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಇದರೊಂದಿಗೆ ತನ್ನ 5 ಎಕರೆ ಕೃಷಿ ಜಮೀನಿನಿಂದ ಉತ್ತಮ ಆದಾಯ ಪಡೆದುಕೊಂಡು ಕುರಿ ಸಾಕಾಣಿಕೆ ಮತ್ತು ಕೃಷಿ ಮೂಲದಿಂದ ವಾರ್ಷಿಕ 7 ಲಕ್ಷ ರೂ.ವರೆಗೆ ಆದಾಯ ಪಡೆಯುತ್ತಿದ್ದಾರೆ. ಹೇಳಿಕೆ----- ಖಾಸಗಿ ಬ್ಯಾಂಕ್ ನಲ್ಲಿ 15 ಸಾವಿರ ರೂ. ಸಂಬಳ ಪಡೆದರೂ ನೆಮ್ಮದಿ ಸಿಗುತ್ತಿರಲಿಲ್ಲ. ಕುರಿ ಸಾಕಾಣಿಕೆ ಮಾಡಿದ ಬಳಿಕ ನೆಮ್ಮದಿ ಜೀವನದೊಂದಿಗೆ ಆದಾಯದಲ್ಲೂ ತೃಷ್ತಿ ಸಿಕ್ಕಿದೆ. ಉದ್ಯೋಗ ಹುಡುಕಿಕೊಂಡು ಹೋಗುವುದಕ್ಕಿಂತ ಕೃಷಿ ಜಮೀನು ಇರುವ ರೈತರ ಮಕ್ಕಳು ಕೃಷಿ ಪೂರಕ ಚಟುವಟಿಕೆಯ ಮೂಲಕ ಆದಾಯದೊಂದಿಗೆ ಮನೆಯವರೊಂದಿಗೆ ಸಂತೋಷ ದಿನ ಕಳೆಯಬಹುದು. -ಬಸವರಾಜ ಸಣ್ಣಲಚ್ಚಪ್ಪಗೋಳ, ಎಂಬಿಎ ಪದವೀಧರ