ಕಲ್ಪವೃಕ್ಷಕ್ಕೆ ಕೀಟಕಾಟ

TENGU
Published on
ರೈತರೇ ಗಮನಿಸಿ...:  ಇಲ್ಲಿ ಹೇಳಲಾಗಿರುವ ವಿಷ ಬಳಕೆಯನ್ನು ಬೇರಾವುದೇ ದಾರಿ ಕಾಣದಿದ್ದಾಗ ಮಾತ್ರ ಅನುಸರಿಸಿ. ಕಾರಣ ನಾವು ತೆಂಗನ್ನು ಕಲ್ಪವೃಕ್ಷ ಎನ್ನುತ್ತೇವೆ. ಅದನ್ನು ವಿಷ ರಾಸಾಯನಿಕಗಳನ್ನು ಬಳಸಿ ವಿಷವೃಕ್ಷವನ್ನಾಗಿ ಮಾಡುವುದು ಬೇಡ. ಹಾಗೊಂದೊಮ್ಮೆ ರಾಸಾಯನಿಕ ವಿಷಗಳನ್ನು ಸುರಿಯುವ ಪ್ರಸಂಗ ಬಂದಾಗ ಅಂಥ ಮರದ ಕಾಯನ್ನು ನಾಲ್ಕಾರು ತಿಂಗಳ ಕಾಲ ಬಳಸಬೇಡಿ. ಇದನ್ನು ಯಾರೂ ಅನುಸರಿಸುವುದಿಲ್ಲ. ಅದಕ್ಕಾಗಿಯೇ ವಿಷ ಬಳಕೆಯ ಕುರಿತಾಗಿ ಹೇಳುವಾಗ ಸಂದಿಗ್ಧ ಉಂಟಾಗುತ್ತದೆ. 
  • ತೆಂಗಿನಲ್ಲಿ ಬರುವ ಕೀಟ ಬಾಧೆಗಳ ನಮೂನೆಗಳು ಯಾವುವು? ಅವುಗಳ ನಿಯಂತ್ರಣ ಕ್ರಮ ಹೇಗೆ?

| ಜಯರಾಮಯ್ಯ ಕಡೂರು

ತೆಂಗಿನ ಕೀಟಗಳ ನಿರ್ವಹಣೆ ಕ್ರಮಗಳನ್ನು ಸಮಗ್ರ ರೀತಿಯಲ್ಲಿ ನಿರ್ವಹಿಸುವುದು ಸೂಕ್ತ. ಅಂದರೆ ಯಾಂತ್ರಿಕವಾಗಿ, ರಾಸಾಯನಿಕವಾಗಿ ಮತ್ತು ಜೈವಿಕವಾಗಿ ಮಾಡುವ ನಿಯಂತ್ರಣದಿಂದ ಪರಿಸರ, ಮಣ್ಣು ಮತ್ತು ಬೆಳೆಗಳು ತೀವ್ರವಾಗಿ ವಿಷಕಾರಿಯಾಗುವುದಿಲ್ಲ. ಆದರೂ ವಿಷ ರಾಸಾಯನಿಕಗಳನ್ನು ಬಳಸಿದ ಮೇಲೆ ಅಂಥ ಮರಗಳ ಫಸಲನ್ನು ಒಂದೆರಡು ತಿಂಗಳ ಕಾಲ ತಿನ್ನದೇ ಬಿಟ್ಟರೆ ಒಳ್ಳೆಯದು.

ಕೆಲವರು ವಿಷ ರಾಸಾಯನಿಕಗಳನ್ನು ತಜ್ಞರು ತಿಳಿಸಿದ ಪ್ರಮಾಣಕ್ಕಿಂತ ಹೆಚ್ಚು ಅಥವಾ ಎರಡು ಮಿಶ್ರಣಗಳನ್ನು ತಾವೇ ಸಿದ್ಧಪಡಿಸಿ ಸಿಂಪಡಿಸುವುದನ್ನು ನೋಡಿದ್ದೇನೆ. ಅಂಥ ಸಂದರ್ಭಗಳಲ್ಲಿ ಮರಗಳು ಮಾತ್ರವಲ್ಲದೆ ನೆಲ ಸಹ ವಿಷಮಯವಾಗುತ್ತದೆ. ಆಗ ಅನೇಕ ದಿನಗಳ ಕಾಲ ವಿಷದ ಪ್ರಮಾಣ ಅಲ್ಲಿಯೇ ಇದ್ದು ಆರೆಂಟು ತಿಂಗಳು ಅಲ್ಲಿರುವ ಎಲ್ಲಾ ಮರಗಳ ಫಸಲನ್ನು ಬಳಸದೇ ಬಿಡಬೇಕಾಗುತ್ತದೆ.

ಇದನ್ನು ಯಾವುದೇ ತೆಂಗು ಬೆಳೆಗಾರನೂ ಮಾಡುವುದಿಲ್ಲ. ತಾವೇ ಬಳಸದೇ ಇರಬಹುದು. ಆದರೆ ಮಾರಾಟ ಮಾಡಿಯೇ ಮಾಡುತ್ತಾನೆ. ಅದು ಇನ್ನೊಬ್ಬರ ಒಡಲನ್ನು ಸೇರುತ್ತದೆ. ನೆನಪಿಡಿ ಕೆಲವರು ಕೊಬ್ಬರಿಗೆ ಬಳಕೆ ಮಾಡಿದ ವಿಷ ಸೇರುವುದಿಲ್ಲ ಎಂದು ವಾದಿಸುತ್ತಾರೆ. ಕೊಬ್ಬರಿ ಎಣ್ಣೆ ಮಾಡಿಸುತ್ತಾರೆ. ಆದರೆ ಕೊಬ್ಬರಿ ಎಣ್ಣೆಯಲ್ಲಿ ವಿಷ ರಾಸಾಯನಿಕಗಳ ಸಶೇಷ (ರೆಸಿಡ್ಯುಯಲ್) ದೊರೆತಿರುವುದು ದಾಖಲಾಗಿದೆ.

ಸಮಸ್ಯೆಯ ಲಕ್ಷಣಗಳು, ಪರಿಹಾರೋಪಾಯಗಳು

ಸುಳಿ ಕೊಳೆಯುವ ರೈನೋಸಾರಸ್ ದುಂಬಿ: ಲಕ್ಷಣ: ಪ್ರೌಢ ದುಂಬಿಗಳು ಸುಳಿಯನ್ನೇ ತಿನ್ನುತ್ತವೆ. ಸುಳಿಗಳು ಹೊರಬಂದಾಗ ಗರಿಗಳೆಲ್ಲಾ ಸಮಾನವಾಗಿ ಕತ್ತರಿಸಿದಂತೆ ಕಾಣುತ್ತವೆ.

ಪರಿಹಾರ: ಕಬ್ಬಿಣದ ಸಲಾಕೆಯನ್ನು ಬಳಸಿ ಕೊಕ್ಕೆಯ ಸಹಾಯದಿಂದ ಹೊರಭಾಗದಲ್ಲಿ ಚುಚ್ಚಿ ದುಂಬಿಯನ್ನು ಹೊರತೆಗೆಯಬೇಕು. 2% ಕ್ವೀನಲ್ ಫಾಸ್​ನ್ನು ಸಮ ಪ್ರಮಾಣದ ಮರಳಿನೊಂದಿಗೆ ಮಿಶ್ರ ಮಾಡಿ ಸುಳಿ ಕೊರೆದ ರಂಧ್ರಕ್ಕೆ ತುಂಬಬೇಕು.

ಪ್ರತಿ ಗಿಡಕ್ಕೂ 3 ನ್ಯಾಫ್ತಾಲಿನ್ ಗುಳಿಗೆಗಳನ್ನು ಸುಳಿ ಕೊರೆದ ಜಾಗಕ್ಕೆ ಇಡಬೇಕು. 50 ಗ್ರಾಮ್ ಪೋರೇಟ್ ಹರಳುಗಳನ್ನು 100 ಗ್ರಾಮ್ ಮರಳಿನ ಜೊತೆ ಮಿಶ್ರ ಮಾಡಿ ಹತ್ತಿಯ ಬಟ್ಟೆಯಲ್ಲಿ ಗಂಟು ಕಟ್ಟಿ ಸುಳಿ ಕೊರೆದ ಜಾಗದ ಬಳಿ ಇಡಬೇಕು. ಈ ಹಿಂದೆ ತಿಳಿಸಲಾದ ದಶಪರ್ಣಿ ಕಷಾಯವನ್ನು ಸುಳಿ ಕತ್ತರಿಸಿದ ಜಾಗದಲ್ಲಿ ಹಾಕಿ. ಅದರ ಕಹಿಗೆ ದುಂಬಿಗಳು ನಾಶವಾಗುತ್ತವೆ.

ಕೆಂಪು ಮೂತಿ ದುಂಬಿ: ಲಕ್ಷಣ: ಹೆಣ್ಣು ದುಂಬಿಗಳು ಕಾಂಡದ ಮೇಲೆ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಯೊಡೆದು ಹೊರ ಬರುವ ಮರಿಗಳು ಕಾಂಡವನ್ನು ಕೊರೆದು ಒಳಭಾಗವನ್ನು ತಿನ್ನುತ್ತವೆ. ಅಂಥ ಭಾಗದಲ್ಲಿ ದ್ರವ ಸೋರುವಿಕೆ ಪ್ರಾರಂಭವಾಗುತ್ತದೆ. ಮರ ಕ್ರಮೇಣ ಪೊಳ್ಳಾಗಿ ಮುರಿದು ಬೀಳುತ್ತದೆ. ಅಥವಾ ಗಾಳಿಗೆ ಬಿದ್ದು ಹೋಗುತ್ತದೆ.

ಪರಿಹಾರ: ಕಾಂಡವನ್ನು ಗಮನಿಸುತ್ತಿರಬೇಕು. ಡೈಕ್ಲೋರೋವಾಸ್ 76 ಇಸಿಯನ್ನು ಒಂದು ಲೀಟರ್ ನೀರಿಗೆ ನಾಲ್ಕು ಮಿಲಿಲೀಟರ್ ಮಿಶ್ರ ಮಾಡಿ ರಂಧ್ರದಲ್ಲಿ ಹಾಕಿ. ಹಸಿ ಮಣ್ಣಿನಿಂದ ಮುಚ್ಚಿ. ಮೋಹಕ ಬಲೆ ಅಥವಾ ಲಿಂಗಾಕರ್ಷಕ ಬಲೆಗಳನ್ನು ಹಾಕಿ ದುಂಬಿಗಳನ್ನು ಸೆಳೆದು ನಾಶ ಮಾಡಬಹುದು.

ಗರಿ ತಿನ್ನುವ ಕಪ್ಪು ತಲೆಹುಳು: ಲಕ್ಷಣ: ಮರಿ ಹುಳುಗಳು ಗರಿಗಳ ಕೆಳಭಾಗದಲ್ಲಿ ಕೆರೆದು ಕೆರೆದು ತಿನ್ನುತ್ತವೆ. ಇದು ಕೆಂಪಾಗಿ ಬೆಂಕಿಯಲ್ಲಿ ಸುಟ್ಟಂತೆ ಕಾಣಿಸುತ್ತದೆ.

ಪರಿಹಾರ: ಹಾನಿಗೊಳಗಾದ ಗರಿಗಳನ್ನು ಕಿತ್ತು ಸುಟ್ಟು ಹಾಕಬೇಕು. 2 ಮಿಲಿಲೀಟರ್ ಮೆಲಾಥಿಯಾನ್ 50 ಇಸಿಯನ್ನು ಒಂದು ಲೀಟರ್ ನೀರಿಗೆ ಸೇರಿಸಿ ಗರಿಗಳ ತಳಭಾಗಕ್ಕೆ ಸಿಂಪಡಿಸಬೇಕು. ತುಂಬಾ ಸುಲಭದ ಉಪಾಯವೆಂದರೆ ಗೋನಿಯೋಜಸ್ ಪರತಂತ್ರ ಜೀವಿಯನ್ನು ಗರಿಗಳಿಗೆ ಬಿಡುವುದು.

ಅದಕ್ಕೆ ನೀವು ನಿಮ್ಮ ಹತ್ತಿರದ ಜೈವಿಕ ಕೇಂದ್ರವನ್ನು ಅಥವಾ ತೆಂಗು ಸಂವರ್ಧನಾ ಕೇಂದ್ರವನ್ನು ಅಥವಾ ತೋಟಗಾರಿಕಾ ಇಲಾಖೆಯನ್ನು ಸಂರ್ಪಸಿ. ಅಲ್ಲಿ ನೀವು ಪಹಣಿ ಅರ್ಥಾತ್ ಆರ್​ಟಿಸಿ ಕೊಟ್ಟರೆ ನಿಮ್ಮಲ್ಲಿರುವ ಸರಾಸರಿ ಮರಗಳಿಗೆ ತಕ್ಕಷ್ಟು (ಒಂದಕ್ಕೆ ಸುಮಾರು 10-12) ಗೋನಿಯೋಜಸ್ ಪರತಂತ್ರ ಜೀವಿಯನ್ನು ಉಚಿತವಾಗಿ ನೀಡುತ್ತಾರೆ. ಅದನ್ನು ನೀವು ಅವರು ಹೇಳಿದಂತೆ ಗರಿಗಳ ಮೇಲೆ ಬಿಟ್ಟರಾಯಿತು. ಪರತಂತ್ರ ಜೀವಿಗಳು ಕಪ್ಪುತಲೆ ಹುಳುಗಳನ್ನು ತಿಂದು ಹಾಕುತ್ತವೆ.

ನುಸಿ ಪೀಡೆ: ಲಕ್ಷಣ: ಈ ನುಸಿಗಳು ಎರಡು ಮೂರು ತಿಂಗಳ ಕಾಯಿಯ ಪುಷ್ಪಪಾತ್ರೆಯಲ್ಲಿ ಸೇರಿಕೊಳ್ಳುತ್ತವೆ. ಅದರ ರಸವನ್ನು ಹೀರಿ ಕಾಯಿಯ ಬೆಳವಣಿಗೆಯನ್ನೇ ಕುಂಠಿತಗೊಳಿಸುತ್ತವೆ. ಮೊದಲಿಗೆ ಕೆಳಭಾಗದಲ್ಲಿ ಹಳದಿ ಮಿಶ್ರಿತ ಬಿಳಿ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ಕ್ರಮೇಣ ಅದೇ ಹಿಗ್ಗುತ್ತಾ ಉದ್ದನೆಯ ಬಿರುಕುಗಳಾಗುತ್ತವೆ. ಬಿರುಕುಗಳಿಂದ ಕಾಯಿಯ ಜೀವರಸ ಹೊರಬರುತ್ತದೆ.

ಕಾಯಿಗಳು ಎಳತಾಗಿದ್ದರೆ ಉದುರುತ್ತವೆ. ಬಲಿತಿದ್ದರೆ ಸೊಟ್ಟಾಪಟ್ಟಾ ಆಗುತ್ತವೆ. ಸಿಪ್ಪೆ ಸುಲಿಯುವಿಕೆ ತುಂಬಾ ಕಷ್ಟಕರ. ಮೃದುವಾಗಿರದೆ ವಿಪರೀತ ಗಟ್ಟಿಯಾಗುತ್ತದೆ. ಪರಿಹಾರ: ತೆಂಗಿನ ಮರಗಳನ್ನು ಸುಪುಷ್ಟ ಗೊಳಿಸುವುದೇ ಪ್ರಮುಖ ಕೆಲಸ. ಪೋಷಣೆ ಮತ್ತು ಸಮಗ್ರ ಪೋಷಕಾಂಶಗಳ ನಿರ್ವಹಣೆ ಅತ್ಯಗತ್ಯ. 1.5 ಕಿಲೋ ಯೂರಿಯಾ, 2 ಕಿಲೋ ಸಿಂಗಲ್ ಸೂಪರ್ ಫಾಸ್ಪೇಟ್, 2 ಕಿಲೋ ಮ್ಯೂರೇಟ್ ಆಫ್ ಪೊಟ್ಯಾಶ್, 2.5 ಕಿಲೋ ಜಿಪ್ಸಂ, ಅರ್ಧ ಕಿಲೋ ಮ್ಯಾಗ್ನೀಷಿಯಮ್ ಸಲ್ಪೇಟ್, 75 ಗ್ರಾಮ್ ಝಿಂಕ್ ಸಲ್ಪೇಟ್, 50 ಗ್ರಾಮ್ ಬೋರಾನ್, 10 ಕಿಲೋ ಬೇವಿನ ಹಿಂಡಿ ಮತ್ತು 50 ಕಿಲೋ ತಿಪ್ಪೆ ಗೊಬ್ಬರ ಅವಶ್ಯಕ.

ರಾಸಾಯನಿಕ ಗೊಬ್ಬರಗಳನ್ನು ಎರಡು ಕಂತುಗಳಲ್ಲಿ ಹಾಕಬಹುದು. ಏಪ್ರಿಲ್, ಮೇ ಮತ್ತು ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ನೀಡಬಹುದು. ಮರಗಳ ಸುತ್ತಲೂ ಒಂದು ಮೀಟರ್ ದೂರದಲ್ಲಿ ವೃತ್ತಾಕಾರವಾಗಿ ಅರ್ಧ ಮೀಟರ್ ಆಳದ ಗುಂಡಿ ನಿರ್ಮಾಣ ಮಾಡಿ. ಅದಕ್ಕೆ ಹತ್ತು ಕಿಲೋ ಬೇವಿನ ಬೀಜದಿಂದ ತಯಾರಿಸಿದ ಪುಡಿ ಹಾಕಿ. ಮಣ್ಣು ಮುಚ್ಚಿ ಅದರ ಮೇಲೆ ಅರಿಸಿನವನ್ನು ಬೆಳೆಯಿರಿ. ನುಸಿ ಪೀಡೆ ಎರಡು ವರ್ಷಗಳಲ್ಲಿ ಹೇಳ ಹೆಸರಿಲ್ಲದಂತೆ ಆಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net