ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿ: ಜನಮತ

Janamatha1
Published on

‘ಅನ್ನಭಾಗ್ಯ ಅಕ್ಕಿ ಆಫ್ರಿಕಾ ಪಾಲು?!’ (ವಿಜಯವಾಣಿ ವಿಶೇಷ ಆಗಸ್ಟ್ 25) ವರದಿಯು ವ್ಯವಸ್ಥೆಯನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಅದೆಷ್ಟೋ ಜನರು ಸ್ವಾರ್ಥಜಗತ್ತಿನ ಬೆನ್ನು ಬಿದ್ದು ಭ್ರಷ್ಟಾಚಾರ, ಅಕ್ರಮ ಕೃತ್ಯಗಳಲ್ಲಿ ತೊಡಗಿದ್ದಾರೆ. ‘ಬೇಲಿಯೇ ಎದ್ದು ಬೆಳೆಯನ್ನು ಮೇಯ್ದರೆ, ಬೆಳೆಯು ತನ್ನ ಅಳಲನ್ನು ಯಾರ ಮುಂದೆ ತೋಡಿಕೋಳ್ಳಬೇಕು?’ ಹೀಗೆಯೇ, ಅಕ್ಕಿ ಪೂರೈಸುವ ಅಕ್ಕಿ ಗಿರಣಿಗಳೇ ಇಂತಹ ಅಕ್ರಮಕ್ಕಿಳಿದರೆ ಬಡವರು ಹಸಿವಿನ ಅಳಲನ್ನು ಯಾರ ಮುಂದೆ ತೋಡಿಕೋಳ್ಳಬೇಕು? ಕರೊನಾ ಹಾವಳಿಯ ಪರಿಣಾಮ ಆಹಾರ ಪದಾರ್ಥಗಳ ಬೆಲೆಯೂ ಹೆಚ್ಚಿದೆ. ಹಳ್ಳಿಯ ಜನರು ಸರಿಯಾದ ಕೂಲಿ ಇಲ್ಲದೆ, ಇದ್ದರೂ ಮೊದಲಿದ್ದ ಕೂಲಿಯಲ್ಲೇ ದುಡಿಯುತ್ತಿರುವುದರಿಂದ ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಗೆ ತಲುಪಿದ್ದಾರೆ. ಈ ಸಂದರ್ಭದಲ್ಲಿ ಇಂತಹ ಅಕ್ರಮದ ದಂಧೆಗಳು ಬಡವರ ಹಸಿವಿನ ಗಾಯದ ಮೇಲೆ ಬರೆ ಎಳೆಯುತ್ತಿವೆ.

ರಾಜಕೀಯ ಕುಟಿಲತೆ ಮತ್ತು ಹಣದ ಪ್ರಭಾವದಿಂದ ಈ ಕಣ್ಣಾಮುಚ್ಚಾಲೆ ಆಟಗಳು ಕಂಡು ಕಾಣದಂತೆ ಸರಾಗವಾಗಿ ಸಾಗುತ್ತಿವೆ. ಹಾಗಾಗಿ, ಆಹಾರ ಇಲಾಖೆಯ ತನಿಖಾ ದಳಗಳು ಇನ್ನಷ್ಟು ಚುರುಕುಗೊಳ್ಳಬೇಕಿದೆ. ಇಂತಹ ಅಕ್ರಮ ಕಳ್ಳಾಟಕ್ಕೆ ಕಡಿವಾಣ ಹಾಕಬೇಕಿದೆ. ದಾಸ್ತಾನು ಸಾಗಾಣಿಕೆ ಜನರಿಗೆ ತಲುಪುವವರೆಗೂ ಆಹಾರ ಇಲಾಖೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿ ಹದ್ದಿನ ಕಣ್ಣಿಡಬೇಕು. ಇಂತಹ ಅಕ್ರಮ ಪ್ರಕರಣಗಳಲ್ಲಿ ಶಾಮೀಲಾದವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಆಗಲೇ ಇಂತಹ ದಂಧೆಗಳಿಗೆ ಕಡಿವಾಣ ಹಾಕಲು, ಅನ್ನಭಾಗ್ಯ ಸೌಲಭ್ಯವನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸಲು ಸಾಧ್ಯ.

| ನಾರಾಯಣ ಡಂಬಳಿ ಕೋಹಳ್ಳಿ (ಅಥಣಿ ತಾಲೂಕು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net