ಎಸ್ಸೆಸ್ಸೆಲ್ಸಿ ಪರೀಕ್ಷೆ ಕೈಬಿಡಿ

Janamata
Published on

ಪ್ರಸಕ್ತ ಸೃಷ್ಟಿ ಆಗಿರುವ ಅನಿಶ್ಚಿತತೆಯಿಂದಾಗಿ ವಿದ್ಯಾರ್ಥಿಗಳಲ್ಲಿ ನೀರಸ ಭಾವ ಸೃಷ್ಟಿಯಾಗಿದೆ. ಇದರ ಪರಿಣಾಮ ಪರೀಕ್ಷಾ ಫಲಿತಾಂಶದ ಮೇಲೂ ಆಗೇ ಆಗುತ್ತದೆ. ಹಾಗಾಗಿ, ಮಾನಸಿಕ ಪರಿಣಾಮಗಳು ಮತ್ತು ಕರೊನಾ ಸೋಂಕಿನಿಂದ ಉಂಟಾಗಿರುವ ಸಾಮಾಜಿಕ ದಿಗ್ಬಂಧನವನ್ನು ಗಮನಿಸಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಕೈ ಬಿಡುವುದೇ ಉತ್ತಮ ಮಾರ್ಗ. ಪಿಯುಸಿ ಪ್ರವೇಶಕ್ಕೆ ಕಾಲೇಜುಗಳಲ್ಲಿ 10ನೇ ಇಯತ್ತೆ ಆಧಾರಿತ ಪ್ರವೇಶ ಪರೀಕ್ಷೆ ನಡೆಸಿ ದಾಖಲಾತಿ ಮಾಡಿಕೊಳ್ಳುವುದು ಸೂಕ್ತವೂ, ಸಮರ್ಪಕವೂ ಆದ ಮಾರ್ಗ. ಅಂಕಪಟ್ಟಿಯನ್ನು ಎಂದಿನ ಮಾದರಿಯಂತೆ ಹೊರಡಿಸಿ, ಅಂಕಗಳ ಅಂಕಣ(ಜಾಗ)ದಲ್ಲಿ ‘ಮುಕ್ತ-ಕರೊನಾ-ಮುಂದಿನ ವಿದ್ಯಾಭ್ಯಾಸಕ್ಕೆ ಅರ್ಹತೆ ನೀಡಿದೆ’ ಎಂದು ನಮೂದಿಸುವುದು. ಇದರಿಂದ ಭವಿಷ್ಯದಲ್ಲಿ ದಾಖಲೆಯಾಗಿ ನೀಡಲು ತೊಂದರೆ ಆಗದು. ಅಂತೆಯೇ, ಕರೊನಾ ಬಗ್ಗೆ ಅದು ಜಾಗೃತ ದಾಖಲೆಯೂ, ಚಾರಿತ್ರಿಕ ಸ್ಮೃತಿಯೂ ಆಗುವುದು. ಶಿಕ್ಷಣ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಪರಾಮರ್ಶೆ ನಡೆಸಿ, ಸೂಕ್ತ ನಿರ್ಧಾರಕ್ಕೆ ಬರುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಗತ್ಯ.

| ಸ.ರಘುನಾಥ, ಡಾ.ವೈ.ವಿ.ವೆಂಕಟಾಚಲ

ಟಾಸ್ಕ್​ಫೋರ್ಸ್ ಬಲವರ್ಧನೆಯಾಗಲಿ

ಕರೊನಾ ಸೋಂಕು ವ್ಯಾಪಕವಾಗಿ ಹರಡದಂತೆ ಅನೇಕ ಮುಂಜಾಗ್ರತಾ ಕ್ರಮ ಕೈಗೊಂಡರೂ, ವೈರಸ್ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತ ಜನರಲ್ಲಿ ಆತಂಕ ಹೆಚ್ಚಿಸಿದೆ. ರಾಜ್ಯದಲ್ಲಿ ಟಾರ್ಸ್ಕ್​ಪೋರ್ಸ್ ರಚನೆಯಾಗಿವೆ ನಿಜ. ಆದರೆ ಅವುಗಳಿಂದ ನಿರೀಕ್ಷಿತ ಮಟ್ಟದಲ್ಲಿ ಕಾರ್ಯಗಳು ಆಗುತ್ತಿಲ್ಲ. ತಾಲೂಕವಾರು ಶಾಸಕರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿ, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಗ್ರಾಮೀಣ ಮಟ್ಟದಲ್ಲಿ ರಚನೆಯಾಗಿರುವ ಟಾಸ್ಕ್​ಫೋರ್ಸ್​ಗಳು ಕ್ರಿಯಾಶೀಲವಾಗಿಲ್ಲ. ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಸಂಘಸಂಸ್ಥೆಗಳು ತಳಹಂತದಲ್ಲಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಅವುಗಳ ಬಲವರ್ಧನೆಯಾಗಬೇಕು. ಗ್ರಾಮೀಣ ಹಾಗೂ ತಾಲೂಕು ಮಟ್ಟದಲ್ಲಿ ಸಾಕಷ್ಟು ಕೆಲಸಗಳಾಗಬೇಕಿದೆ. ಆ ನಿಟ್ಟಿನಲ್ಲಿಯೂ ಸೂಕ್ತ ಗಮನ ವಹಿಸಬೇಕು, ಶಾಸಕರು ಹೆಚ್ಚಿನ ಕಾಳಜಿ, ಜವಾಬ್ದಾರಿ ತೆಗೆದುಕೊಂಡು ಸ್ವಕ್ಷೇತ್ರದತ್ತ ಚಿತ್ತ ಹರಿಸಬೇಕು.

| ಮಲ್ಲಿಕಾರ್ಜುನ ಎಂ. ಸಜ್ಜನ ಶೂಲೇಭಾವಿ (ಬಾಗಲಕೋಟೆ ಜಿಲ್ಲೆ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net