

| ಉಮೇಶ್ಕುಮಾರ್ ಶಿಮ್ಲಡ್ಕ ಬೆಂಗಳೂರು
ದೇಶಾದ್ಯಂತ ಪ್ರತಿವರ್ಷ 10 ಲಕ್ಷ ವಿದ್ಯಾರ್ಥಿಗಳು ನಾಗರಿಕ ಸೇವಾ ಪರೀಕ್ಷೆ ಎದುರಿಸುತ್ತಿದ್ದಾರೆ. ಇದರಲ್ಲಿ ಉತ್ತೀರ್ಣರಾಗುವವರ ಪ್ರಮಾಣ ಕೇವಲ ಶೇಕಡ 1.5. ಹೀಗಾಗಿಯೇ ಜಗತ್ತಿನ ಅತಿ ಕಠಿಣ ಪರೀಕ್ಷೆಗಳ ಪೈಕಿ ಎರಡನೆಯದು ಎಂಬ ಅಭಿಪ್ರಾಯ ಇದರ ಬಗ್ಗೆ ರೂಪುಗೊಂಡಿದೆ. ಈ ವರ್ಷವೂ 761 ಹುದ್ದೆಗಳಿಗೆ 10 ಲಕ್ಷ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ವಿಶೇಷ ಎಂದರೆ ಈ ಪೈಕಿ ಇಂಜಿನಿಯರ್ಗಳೇ ಅಧಿಕ. ಕಳೆದ ಒಂದು ವರ್ಷದ ಡೇಟಾದಲ್ಲಿ ಗಮನಸೆಳೆದ ಟ್ರೆಂಡ್ ಕೂಡ ಇದುವೇ. ಟಾಪರ್ಗಳನ್ನು ಗಮನಿಸಿದರೆ ಅದರಲ್ಲಿ ಶೇಕಡ 50ಕ್ಕಿಂತ ಹೆಚ್ಚು ಇಂಜಿನಿಯರ್ಗಳು ಮತ್ತು ಐಐಟಿಯಲ್ಲಿ ಕಲಿತವರೇ ಇದ್ದಾರೆ. ಲಾಲ್ ಬಹಾದುರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಶನ್ಗೆ
ತರಬೇತಿಗಾಗಿ 2020ನೇ ಸಾಲಿನ 428 ನಾಗರಿಕ ಸೇವಾ ಅಧಿಕಾರಿಗಳ ತಂಡ ಸೇರಿಕೊಂಡಿದೆ. ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಇತ್ತೀಚೆಗೆ ಬಿಡುಗಡೆ ಮಾಡಿದ ಡೇಟಾ ಪ್ರಕಾರ, ಈ ತಂಡದಲ್ಲಿ 245 ಅಭ್ಯರ್ಥಿಗಳು (57.25%) ಇಂಜಿನಿಯರಿಂಗ್ ಪದವೀಧರರು. ಕೇವಲ 84 ಅಭ್ಯರ್ಥಿಗಳು (19.6%) ಮಾನವಶಾಸ್ತ್ರಗಳ ಹಿನ್ನೆಲೆಯವರು. ಇನ್ನೂ ಆಸಕ್ತಿದಾಯಕ ವಿಚಾರ ಎಂದರೆ ನಾಗರಿಕ ಸೇವೆಗೆ ಆಯ್ಕೆ ಆಗುತ್ತಿರುವವರ ಪೈಕಿ ಟಾಪರ್ಗಳಲ್ಲಿ ಹೆಚ್ಚಿನವರು ಐಐಟಿ ಮತ್ತು ಎನ್ಐಟಿಯಲ್ಲಿ ಕಲಿತವರು. ಸೆಪ್ಟೆಂಬರ್ನಲ್ಲಿ ಪ್ರಕಟವಾದ ಫಲಿತಾಂಶವನ್ನು ಗಮನಿಸಿದರೆ ಟಾಪ್ 10 ರ್ಯಾಂಕ್ ಪಡೆದವರಲ್ಲಿ ನಾಲ್ವರು ಐಐಟಿಯವರು. ಒಬ್ಬರು ಡೆಲ್ಲಿ ಟೆಕ್ನಾಲಾಜಿಕಲ್ ಯೂನಿವರ್ಸಿಟಿ (ಡಿಟಿಯು) ಮತ್ತು ಇನ್ನೊಬ್ಬರು ಮಧ್ಯಪ್ರದೇಶದ ಭೋಪಾಲದ ಮೌಲಾನಾ ಆಜಾದ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಎಎನ್ಐಟಿ)ಯವರು. 2011 ಮತ್ತು 2015 ಬಿಟ್ಟರೆ ಇಡೀ ದಶಕದ ಯುಪಿಎಸ್ಸಿ ಟಾಪರ್ಗಳ ಡೇಟಾ ಗಮನಿಸಿದರೆ ಇಂಜಿನಿಯರ್ಗಳದ್ದೇ ಮೇಲುಗೈ ಕಾಣಿಸುತ್ತದೆ.