

ಒಂದೂರಿನಲ್ಲಿ ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದ ಬಡ ಕುಟುಂಬವೊಂದು ವಾಸವಾಗಿತ್ತು. ಮದ್ಯವ್ಯಸನಿಯಾಗಿದ್ದ ಯಜಮಾನ ಪ್ರತಿನಿತ್ಯ ಕುಡಿದು ಬಂದು ಪತ್ನಿ ಹಾಗೂ ಮಕ್ಕಳನ್ನು ನಿಂದಿಸಿ, ಹೊಡೆದು ಹಿಂಸಿಸುತ್ತಿದ್ದ. ಆ ನಿಂದನೆ ಹಾಗೂ ಹಿಂಸೆಯನ್ನು ಅನುಭವಿಸುತ್ತ ಮಕ್ಕಳೀರ್ವರೂ ಬೇರೆ ಬೇರೆ ರೀತಿಯಲ್ಲಿ ಬೆಳೆದರು. ಕಿರಿಯ ಮಗ ಕಷ್ಟಪಟ್ಟು ಕಲಿತು, ವಿದ್ಯಾವಂತನಾಗಿ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿ ಗೌರವಯುತ ಜೀವನ ಸಾಗಿಸುತ್ತಿದ್ದರೆ, ಹಿರಿಯ ಮಗ ವಿದ್ಯೆಯನ್ನು ಅರ್ಧಕ್ಕೇ ನಿಲ್ಲಿಸಿ, ತಂದೆಯಂತೆ ಮಹಾ ಕುಡುಕನಾಗಿ, ಐದು ಕಾಸಿಗೂ ಅನ್ಯರನ್ನು ಬೇಡಲಾರಂಭಿಸಿದ್ದ.
ಒಂದೇ ತಂದೆ-ತಾಯಿಗೆ ಜನಿಸಿ, ಒಂದೇ ಮನೆ, ಒಂದೇ ವಾತಾವರಣದಲ್ಲಿ ಬೆಳೆದ ಇಬ್ಬರು ಮಕ್ಕಳ ವ್ಯಕ್ತಿತ್ವ ಹಾಗೂ ಬೆಳವಣಿಗೆಯಲ್ಲಿನ ವ್ಯತ್ಯಾಸ ಕಂಡು ಊರಿನ ಎಲ್ಲರಲ್ಲೂ ಆಶ್ಚರ್ಯ. ಒಂದು ದಿನ ರಸ್ತೆಯ ಪಕ್ಕ ಕುಡಿದು ಬಿದ್ದಿದ್ದ ಹಿರಿಯ ಮಗನನ್ನು ಊರಿನ ಜನ, ‘ನಿನ್ನ ತಮ್ಮ ನೋಡಿದ್ರೆ ಯಶಸ್ವಿ ಉದ್ಯಮಿ, ನೀನು ಅಪ್ಪನಂತೆ ದೊಡ್ಡ ಕುಡುಕ. ನೀನ್ಯಾಕಪ್ಪಾ ಹೀಗೆ ಕುಡುಕನಾಗಿದ್ದೀಯಾ?’ ಎಂದು ಪ್ರಶ್ನಿಸಿದರು. ಅದಕ್ಕಾತ, ‘ನಾನು ಹೀಗಾಗಲು ನನ್ನಪ್ಪನೇ ಕಾರಣ. ಚಿಕ್ಕಂದಿನಿಂದಲೂ ನನ್ನ ಮನಸ್ಸು, ದೇಹವನ್ನು ನೋಯಿಸಿ, ಹಿಂಸಿಸುತ್ತಿದ್ದ. ಅಪ್ಪನ ಬೈಗುಳ, ಹೊಡೆತಗಳು ನನ್ನನ್ನು ಈ ರೀತಿ ಮಾಡಿವೆ. ಕುಡುಕನ ಕುಟುಂಬವೆಂದು ತಾತ್ಸಾರ ಮಾಡುತ್ತಿದ್ದ ಈ ಸಮಾಜ, ನೆಂಟರಿಷ್ಟರ ಇಲ್ಲಸಲ್ಲದ ಅಪವಾದ, ತಿರಸ್ಕಾರ ತುಂಬಿದ್ದ ಬಾಲ್ಯ, ಇವೆಲ್ಲ ನೋವಿನಿಂದ ಹೊರಬರಲು ಕುಡಿಯತೊಡಗಿದೆ. ಕೊನೆಗೆ ಅದೇ ಜೀವನವಾಯಿತು’ ಎಂದ. ಅದೇ ರೀತಿ ಕಿರಿಯ ಮಗನನ್ನು ಮಾತನಾಡಿಸಿ, ‘ತಂದೆಯ ಮದ್ಯವ್ಯಸನ ನಿನ್ನ ಜೀವನದ ಅಭಿವೃದ್ಧಿಗೆ ಮಾರಕವಾಗಿಲ್ಲವೇ?’ ಎಂದು ಆಶ್ಚರ್ಯದಿಂದ ಪ್ರಶ್ನಿಸಿದರು. ಅದಕ್ಕಾತ, ‘ಖಂಡಿತ ಮಾರಕವಾಗಿಲ್ಲ. ಅಪ್ಪ ಕುಡಿದು ಬಂದು ಗಲಾಟೆ ಮಾಡಿ ನಮಗೆಲ್ಲ ಹೊಡೆದಾಗ ಪ್ರತಿ ಹೊಡೆತಕ್ಕೂ ನನ್ನ ಮನಸ್ಸು ರೊಚ್ಚಿಗೇಳುತ್ತಿತ್ತು. ನಾನೂ ಅಪ್ಪನಂತೆ ಕುಡುಕನಾಗಬಾರದು. ಸಮಾಜದಿಂದ ನಮಗಾದ ತಿರಸ್ಕಾರ, ಅವಮಾನಾದಿಗಳಿಂದ ನನ್ನ ಜೀವನದ ಗುರಿ ಇನ್ನಷ್ಟು ಬಲಗೊಂಡಿತು. ತಿಳಿವಳಿಕೆಯನ್ನು ಹೆಚ್ಚಿಸಿತು. ಹಾಗಾಗಿ, ಗೌರವದಿಂದ ಜೀವನ ಸಾಗಿಸಬೇಕೆಂದು ಛಲ ಹೊತ್ತು, ಓದಿ ಮುಂದೆ ಬಂದೆ’ ಎಂದ.
ಜೀವನವೆಂಬ ಪಾಠಶಾಲೆಯಲ್ಲಿ ಅನುಭವ, ಸಮಾಜ, ಏಳುಬೀಳುಗಳೆಂಬ ಶಿಕ್ಷಕರು ಅನೇಕ ಪಾಠಗಳನ್ನು ಕಲಿಸುತ್ತಿರುತ್ತಾರೆ. ನಾವು ಆ ಪಾಠವನ್ನು ಅದ್ಯಾವ ರೀತಿಯಲ್ಲಿ ಸ್ವೀಕರಿಸಿ ಮುನ್ನಡೆಯುತ್ತೇವೆ ಎಂಬುದು ಮುಖ್ಯ. ಒಂದೇ ತಂದೆ-ತಾಯಿಗೆ ಹುಟ್ಟಿದ ಮಕ್ಕಳಾದರೂ ಅವರಲ್ಲಿ ಕಂಡುಬರುವ ವಿಭಿನ್ನ ಗುಣ, ನಡತೆಗಳು, ಒಂದು ಸಮಾಜ, ಜಾತಿ-ಮತಗಳಲ್ಲೂ ಕಂಡುಬರುವುದು ಸಹಜ. ಯಾವುದೇ ವ್ಯಕ್ತಿಯ ಅಭಿವೃದ್ಧಿ ಅಥವಾ ಅವನತಿ ಕೇವಲ ಹುಟ್ಟಿದ ಮನೆ, ಆನುವಂಶಿಕತೆ, ಸಮಾಜ ಅಥವಾ ವಾತಾವರಣವನ್ನಷ್ಟೇ ಅವಲಂಬಿಸಿರುವುದಿಲ್ಲ. ಜೀವನದೆಡೆಗಿನ ನಮ್ಮ ದೃಷ್ಟಿಕೋನ, ಚಿಂತನೆಗಳು ನಮ್ಮ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂಬುದನ್ನು ಅರಿಯೋಣ.
(ಲೇಖಕರು ಹವ್ಯಾಸಿ ಬರಹಗಾರರು)