ಅಂತರಂಗ ಸಾರಥಿಯಿಂದಲೇ ಗೀತೋಪದೇಶ..

Geethe
Published on
ಭಗವದ್ಗೀತೆಯು ಶುಕ್ಲ ಏಕಾದಶಿ ಅಥವಾ ಹಿಂದೂ ಕ್ಯಾಲೆಂಡರ್​ನ ಮಾರ್ಗಶೀರ್ಷ ಮಾಸದ 11ನೇ ದಿನದಂದು ಸಮರಾಂಗಣ ಸೂತ್ರಧಾರನೆನಿಸಿಕೊಂಡ ಶ್ರೀಕೃಷ್ಣನಿಂದ ಗೊಂದಲಕ್ಕೊಳಗಾಗಿ ಹತಾಶೆಗೊಂಡ ಅರ್ಜುನನಿಗೆ ಬೋಧಿಸಲ್ಪಟ್ಟಿತ್ತು. ಇಂದು ಅದು ವಿಶ್ವ ಮಾನ್ಯವಾಗಿರುವ ಒಂದು ಆಧ್ಯಾತ್ಮಿಕ ಗ್ರಂಥವಾಗಿದೆ. 5158 ವರ್ಷಗಳ ಹಿಂದೆ ಸೋದರಸಂಬಂಧಿಗಳಾದ ಕೌರವರು ಮತ್ತು ಪಾಂಡವರ ಎರಡು ಪ್ರಬಲ ಸೈನ್ಯಗಳ ನಡುವೆ ಘೊರ ಯುದ್ಧವು ನಡೆಯಿತು. ವಿಫಲವಾದ ಹಲವು ಶಾಂತಿ ಮಾತುಕತೆಗಳ ನಂತರ ನಡೆದ ಈ ಯುದ್ಧವೇ ಹಸ್ತಿನಾವತಿ ರಾಜ್ಯಕ್ಕೆ ನ್ಯಾಯಯುತವಾದ ಉತ್ತರಾಧಿಕಾರವನ್ನು ಪಡೆಯಲು ಅಂತಿಮ ಮಾರ್ಗವಾಯಿತು. ಐವರು ಪಾಂಡವರು ಧರ್ಮ ಸ್ಥಾಪನೆಗಾಗಿ ಭಗವಾನ್ ಶ್ರೀಕೃಷ್ಣನ ಮಾರ್ಗದರ್ಶನದಲ್ಲಿ ತಮ್ಮ ಸೋದರರ, ಗುರುಜನರ ವಿರುದ್ಧ ಈ ಯುದ್ಧದಲ್ಲಿ ಹೋರಾಡುವುದು ಅನಿವಾರ್ಯವಾಯಿತು. ಪಂಚಪಾಂಡವರ ಪೈಕಿ, ಶ್ರೀಕೃಷ್ಣನನ್ನು ಸಾರಥಿಯಾಗಿ ಪಡೆದ ಅರ್ಜುನನೇ ನಾಯಕನಾಗಿ ನಿಂತನು. ತನ್ನ ಪ್ರೀತಿಯ ಪತ್ನಿ ದ್ರೌಪದಿಯು ಕೌರವರ ಕೈಯಲ್ಲಿ ಅನುಭವಿಸಿದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಯುದ್ಧಭೂಮಿಗೆ ಬಂದಿದ್ದ ಅರ್ಜುನನು, ಇದ್ದಕ್ಕಿದ್ದಂತೆ ಗೊಂದಲಕ್ಕೊಳಗಾದನು. ಎದುರು ನಿಂತವರು ಪಿತಾಮಹ ಭೀಷ್ಮ ಮತ್ತು ದ್ರೋಣಾಚಾರ್ಯ ಹಾಗೂ ಕೃಪಾಚಾರ್ಯರಂತಹ ಗುರುಗಳು. ಅವನ ವಿವೇಕ ಮತ್ತು ವಿವೇಚನಾ ಶಕ್ತಿಗಳು ಮೋಹದಿಂದ ಮಸುಕಾದವು. ಇದರಿಂದ ಅವನು ಕಿಂಕರ್ತವ್ಯಮೂಢನಾದನು. ಈ ಗೊಂದಲದ ಪರಿಸ್ಥಿತಿಯಲ್ಲಿ ಅರ್ಜುನನು ಶ್ರೀಕೃಷ್ಣನಿಗೆ ಶರಣಾಗಿ, ಅವನ ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸಿದನು. ಅರ್ಜುನನು ಶಿಷ್ಯನಾಗಿ, ಶ್ರೀಕೃಷ್ಣನು ಅವನ ಗುರುವಾದನು.

ಅಧ್ಯಾತ್ಮಿಕ ಪಥದಲ್ಲಿ, ಹಲವಾರು ಸಾಧಕರೂ ತಮ್ಮ ಅಂತರಂಗದಲ್ಲಿ ಇಂತಹುದೇ ಪರಿಸ್ಥಿತಿಗೆ ಸಿಕ್ಕಿಕೊಳ್ಳುವುದುಂಟು. ತಮ್ಮ ಮನಸ್ಸಿನಲ್ಲಿರುವ ಅಂತ್ಯರಹಿತ ಲೌಕಿಕ ಆಸೆ ಹಾಗೂ ಅವುಗಳಿಂದ ಉಂಟಾದ ವ್ಯಾಮೋಹಗಳನ್ನು ಗೆಲ್ಲಲು ನಿರ್ಧರಿಸಿ ಅಂತರಂಗದಲ್ಲಿ ಹೋರಾಟಕ್ಕೆ ಇಳಿಯುತ್ತಾರೆ. ಆದರೆ, ಎದುರು ನಿಂತಿರುವ ಅಂತರಂಗಶತ್ರುಗಳು, ತಮ್ಮ ಹೋರಾಟದಿಂದ ವಿಚಲಿತರಾಗುತ್ತಾರೆ. ಅದರಿಂದ ವಿಮುಖರಾಗಲು ಹಲವೊಮ್ಮೆ, ಇಂತಹ ಸಾಧಕರು ವಿಚಿತ್ರವಾದ ಕಾರಣಗಳನ್ನು ಕಂಡುಕೊಳ್ಳುವುದೂ ಉಂಟು! ಮಾನಸಿಕ ಚಾಪಲ್ಯಕ್ಕೆ ತುತ್ತಾಗಿ, ಇಂದ್ರಿಯ ಭೋಗಗಳು ಕೂಡ ಪರಮಾತ್ಮನ ಸೃಷ್ಟಿಯೇ ಅಲ್ಲವೇ, ಎಂದು ತಮ್ಮ ದೌರ್ಬಲ್ಯಗಳನ್ನು ಸಮರ್ಥಿಸಿಕೊಳ್ಳುವುದೂ ಕೆಲವೊಮ್ಮೆ ನಡೆಯುತ್ತದೆ! ಲೌಕಿಕ ಆಸೆ ಹಾಗೂ ವ್ಯಾಮೋಹಗಳು ತಮ್ಮ ಬಹುಕಾಲದ ಬಂಧುಮಿತ್ರರಂತೆ ತೋರುವ ಈ ಸನ್ನಿವೇಶದಿಂದ ಪಾರಾಗಲು, ನಾವು ತಮ್ಮ ಅಂತರಂಗದಲ್ಲಿಯೇ ಇರುವ ಪರಮಾತ್ಮನಿಗೆ ಶರಣಾಗಿ, ಅವನ ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸಬೇಕು. ಆಗ ನಮ್ಮ ಅಂತರಂಗ ಸಾರಥಿಯಾದ ಪರಮಾತ್ಮನು ನಮ್ಮ ಆತ್ಮ ಸಾಕ್ಷಿಯಾಗಿ ನಮ್ಮನ್ನು ಸರಿಯಾದ ಪಥದಲ್ಲಿ ಮುನ್ನಡೆಸುತ್ತಾನೆ. ಸೌಮ್ಯವಾಗಿ, ಆದರೆ ದೃಢವಾಗಿ, ಶ್ರೀ ಕೃಷ್ಣನಂತೆಯೇ ನಮ್ಮನ್ನು ಎಚ್ಚರಿಸಿ ನಮ್ಮ ಅಂತರಂಗ ಸಾರಥಿಯು ನಮಗೆ ಗೀತೆಯನ್ನು ಬೋಧಿಸುತ್ತಾನೆ. ಇದುವೇ ನಮ್ಮ ಅಂತರಂಗದಲ್ಲಿಯೇ ಉದ್ಭವವಾಗುವ ಭಗವದ್ಗೀತೆಯಾಗುತ್ತದೆ. ಆದರೆ, ಅದರ ಪಿಸುಮಾತನ್ನು ಕೇಳಬೇಕಾದರೆ, ನಾವು ನಮ್ಮ ಆಸೆ ಹಾಗೂ ವ್ಯಾಮೋಹಗಳ ಗದ್ದಲವನ್ನು ಮೆಟ್ಟಿ ನಿಲ್ಲಬೇಕಾಗುತ್ತದೆ. ಇದಕ್ಕಾಗಿ ನಮ್ಮ ಅಂತರಂಗಸಾರಥಿಗೆ ಶರಣಾಗಿ ಅವನಲ್ಲಿ ಮೊರೆಹೋಗಬೇಕು ಹಾಗೂ ದೃಢಮನೋಶಕ್ತಿಗಾಗಿ ಪ್ರಾರ್ಥಿಸಬೇಕು.

ನಮ್ಮ ಅಂತರಂಗ ಸಾರಥಿಯೂ ಶ್ರೀಕೃಷ್ಣ ನಂತೆಯೇ ತನ್ನ ಮಾರ್ಗದರ್ಶನವನ್ನು ನೀಡಿ, ಕೊನೆಯ ನಿರ್ಧಾರವನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯವನ್ನು ನಮಗೇ ನೀಡುತ್ತಾನೆಯೇ ಹೊರತು, ತನ್ನ ನಿರ್ಧಾರವನ್ನು ನಮ್ಮ ಮೇಲೆ ಹೇರುವುದಿಲ್ಲ. ಯಥೇಚ್ಛಸಿ ತಥಾ ಕುರು. ನಿನ್ನ ಇಚ್ಛೆಯಂತೆಯೇ ನಡೆದುಕೋ! ಎಂದು ಸ್ನೇಹದಿಂದ ನಮಗೆ ಸ್ವಾತಂತ್ರ್ಯವನ್ನು ನೀಡುತ್ತಾನೆ!

ಇತಿ ತೇ ಜ್ಞಾನಮಾಖ್ಯಾತಂ ಗುಹ್ಯಾದ್ಗುಹ್ಯತರಂ ಮಯಾ

ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು 18.63

ಗೀತೆಯ ಈ ಶ್ಲೋಕದಲ್ಲಿ ಶ್ರೀ ಕೃಷ್ಣನು ಅರ್ಜುನನಿಗೆ ಹೇಳುವಂತೆ, ಎಲ್ಲ ರಹಸ್ಯಗಳಿಗಿಂತಲೂ ರಹಸ್ಯವಾದ ಈ ಜ್ಞಾನವನ್ನು ನಿನಗೆ ವಿವರಿಸಿದ್ದೇನೆ. ಅದರ ಬಗ್ಗೆ ಆಳವಾಗಿ ಆಲೋಚಿಸಿ, ತದನಂತರ ನೀನು ಬಯಸಿದಂತೆ ಮಾಡು, ಎಂದು ಹೇಳುವುದನ್ನು ನಮ್ಮ ಅಂತರಂಗ ಗೀತೆಯಲ್ಲಿಯೂ ನಾವು ಕಾಣಬಹುದು. ಆದರೆ, ನಾವು ಮಾತ್ರ ಅರ್ಜುನನಂತೆಯೇ ಆತ್ಮಸಾಕ್ಷಿಯ ಧ್ವನಿಗೆ ಶರಣಾಗಬೇಕು ಮತ್ತು ಅದು ನಿರ್ದೇಶಿಸಿದಂತೆ ಮಾಡಬೇಕು.

ನಷ್ಟೋ ಮೋಹಃ ಸೃ್ಮರ್ಲಬ್ಧಾ ತ್ವತ್ಪ›ಸಾದಾನ್ಮಯಾಚ್ಯುತ

ಸ್ಥಿತೋಸ್ಮಿ ಗತಸಂದೇಹಃ ಕರಿಷ್ಯೇ ವಚನಂ ತವ 18.73

‘ಓ ಅಚ್ಯುತ ನಿನ್ನ ಅನುಗ್ರಹದಿಂದ ನನ್ನ ಮೋಹವು ನಷ್ಟವಾಗಿದೆ; ಸರಿಯಾದ ಪಥವು ಗೋಚರವಾಗಿದೆ. ನನ್ನ ಸಂದೇಹಗಳಿಂದ ಮುಕ್ತನಾಗಿ ನಿಂತಿದ್ದೇನೆ. ನೀನು ಹೇಳಿದಂತೆಯೇ ನಾನು ಮಾಡುತ್ತೇನೆ’, ಎಂದು ಅರ್ಜುನನು ಶರಣಾದಂತೆ, ನಾವೂ ನಮ್ಮ ಅಂತರಂಗಸಾರಥಿಯ ಮಾರ್ಗದರ್ಶನಕ್ಕನುಗುಣವಾಗಿ ಶ್ರದ್ಧೆಯಿಂದ ನಡೆದುಕೊಳ್ಳಬೇಕು.

ಈ ಅಂತರಂಗ ಗೀತೆಯಲ್ಲಿ, ಮನಸ್ಸೇ ಅರ್ಜುನ, ಹಾಗೂ ಅಂತಃಸಾಕ್ಷಿಯ ಸ್ಥಾನವಾದ ಹೃದಯವೇ ಶ್ರೀಕೃಷ್ಣ. ಯಶಸ್ವೀ ಮಾನವ ಜೀವನಕ್ಕಾಗಿ ಮನಸ್ಸು ಹಾಗೂ ಹೃದಯಗಳ ಮಧ್ಯೆ ಸರಿಯಾದ ಪಾಲುದಾರಿಕೆ (Partnership) ಏರ್ಪಡಿಸಬೇಕು. ಇದಕ್ಕಾಗಿ ಮನಸ್ಸು ಹೃದಯದ ಮಾರ್ಗದರ್ಶನವನ್ನು ಒಪ್ಪಿಕೊಂಡು ಅದರ ಪ್ರಕಾರ ನಡೆಯಬೇಕು. ಆಗ ಮಾನವನು ಅಂತರಂಗಯುದ್ಧದಲ್ಲಿ ಜಯವನ್ನು ಪಡೆಯುತ್ತಾನೆ; ಇಲ್ಲದಿದ್ದರೆ ಅಂತರಂಗ ಶತ್ರುಗಳು ಜಯಿಸಿ, ಮಾನವನ ಅಧಃಪತನವಾಗುತ್ತದೆ.

ಯತ್ರ ಯೋಗೀಶ್ವರಃ ಕೃಷ್ಣೋ ತತ್ರ ಪಾಥೋ ಧನುರ್ಧರಃ

ತತ್ರ ಶ್ರೀರ್ವಿಜಯೋರ್ಭತಿರ್ಧ್ರುವಾ ನೀತಿರ್ಮತಿರ್ಮಮ 18.78

ಎಲ್ಲಿ ಪರಮ ಗುರು ಅಥವಾ ಮಾರ್ಗದರ್ಶಕನಾದ ಶ್ರೀಕೃಷ್ಣನಿರುವನೋ ಮತ್ತು ಎಲ್ಲಿ ಆಜ್ಞಾಧಾರಕ ಶಿಷ್ಯ ಧನುರ್ಧಾರಿಯಾದ ಅರ್ಜುನನಿದ್ದಾನೆಯೋ ಅಲ್ಲಿ ನಿಸ್ಸಂಶಯವಾಗಿಯೂ ಐಶ್ವರ್ಯ, ವಿಜಯ, ಸಮೃದ್ಧಿ ಮತ್ತು ಸದಾಚಾರಗಳು ಇರುತ್ತವೆ, ಎಂಬರ್ಥದಲ್ಲಿ ಮೇಲಿನ ಗೀತಾ ಶ್ಲೋಕವು ಹೇಳಿದರೂ ಅದರ ಗೂಢ ಅರ್ಥವೂ, ಅಂತಃಸಾಕ್ಷಿಯ ಆಜ್ಞೆಯಂತೆ ಮನಸ್ಸು ನಡೆದಾಗ ಮಾತ್ರ ಅಂತರಂಗಯುದ್ಧದಲ್ಲಿ ಜಯವು ಸಾಧ್ಯ, ಎಂಬುದಾಗಿದೆ. ಅಂತರಂಗಯುದ್ಧದಲ್ಲಿ ಮಾನವನು ಜಯಿಸಿದರೆ ಮಾತ್ರ ಸಮಾಜದಲ್ಲಿ ಸುಖ-ಶಾಂತಿ-ಭದ್ರತೆಗಳು ಸ್ಥಿರವಾಗಿ ನೆಲೆಸುತ್ತವೆ. ಇದಕ್ಕಾಗಿ ಮಾನವನ ಅಂತರಂಗದಲ್ಲಿ ತ್ರಿಕರಣ ಶುದ್ಧಿಯು ನೆಲೆಸಬೇಕು. ಎಂದರೆ ಅವನ ಯೋಚನೆ, ಮಾತು ಹಾಗೂ ಕೃತಿಗಳಲ್ಲಿ ಏಕತ್ವವಿರಬೇಕು. ಇದಕ್ಕಾಗಿ, ಮನಸ್ಸು ಆತ್ಮಸಾಕ್ಷಿಯನ್ನು ಅನುಸರಿಸಬೇಕು.

ನಮ್ಮ ಶ್ರೀ ಸತ್ಯಸಾಯಿ ಲೋಕ ಸೇವಾ ಗುರುಕುಲ ವಿದ್ಯಾಸಂಸ್ಥೆಗಳಲ್ಲಿ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಕಲಿಸುವಾಗ, ಮೇಲೆ ಹೇಳಿದಂತೆ ಮನಸ್ಸು ಹಾಗೂ ಹೃದಯಗಳ ನಡುವಿನ ಸಂಬಂಧದ ಕುರಿತಾಗಿ ವ್ಯಾವಹಾರಿಕ ನಿದರ್ಶನಗಳೊಂದಿಗೆ ತರಬೇತಿ ನೀಡಲಾಗುತ್ತದೆ. ಇದರಿಂದ ಅವರು ಜೀವನದ ವಿವಿಧ ಸನ್ನಿವೇಶಗಳಲ್ಲಿ ಸರಿಯಾದ ನಿರ್ಧಾರಗಳನ್ನು ಕೈಗೊಳ್ಳಲು ಸಮರ್ಥರಾಗುತ್ತಾರೆ. ಈ ಪ್ರಯೋಗದಲ್ಲಿ ನಾವು ಸಾಕಷ್ಟು ಯಶಸ್ಸನ್ನು ಪಡೆದಿದ್ದೇವೆಂದು ಹೇಳಬಹುದು.

(ಸದ್ಗುರು ಶ್ರೀ ಮಧುಸೂದನ ಸಾಯಿಯವರು ಬೋಧಿಸಿದ ಭಗವದ್ಗೀತೆಯ ಕುರಿತು sadgurusrimadhusudansai.comನಲ್ಲಿ ಇನ್ನಷ್ಟು ತಿಳಿದುಕೊಳ್ಳಬಹುದು.)

(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net