ಜೀ ಕನ್ನಡ ವಾಹಿನಿಯಲ್ಲಿ ಮತ್ತೆ ನಾಗಿಣಿ ಪ್ರತ್ಯಕ್ಷ

Nagin 12 Feb 20
Published on

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿನ ನಾಗಿಣಿ ಸದ್ಯದಲ್ಲೇ ಮತ್ತೆ ಪ್ರತ್ಯಕ್ಷ ಆಗಲಿದ್ದಾಳೆ. ಮಾತ್ರವಲ್ಲ, ಈ ಸಲ ಅವಳು ಹೊಸ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಅರ್ಥಾತ್, ಈ ಹಿಂದೆ ಪ್ರಸಾರ ಆಗುತ್ತಿದ್ದ ‘ನಾಗಿಣಿ’ಯ ಎರಡನೇ ಭಾಗ ಫೆ. 17ರಂದು ಜೀ ಕನ್ನಡದಲ್ಲಿ ಆರಂಭವಾಗಲಿದೆ.

ನಾಲ್ಕು ವರ್ಷಗಳಿಂದ ಜನಪ್ರಿಯ ಧಾರಾವಾಹಿಯಾಗಿ ಪ್ರಸಾರವಾಗುತ್ತಿದ್ದ ‘ನಾಗಿಣಿ’, ಪ್ರಸಾರವಾದ ಅಷ್ಟೂ ದಿನ ಒಳ್ಳೆಯ ಟಿಆರ್​ಪಿ ರೇಟಿಂಗ್​ನಲ್ಲಿದ್ದು ಜೀ ವಾಹಿನಿ ಇನ್ನೂ ಹೆಚ್ಚು ಜನರನ್ನು ತಲುಪುವಂತೆ ಮಾಡಿತ್ತು. ಈಗ ಅದೇ ನಾಗಿಣಿ ಹೊಸ ರೂಪದಲ್ಲಿ ಪ್ರೇಕ್ಷಕರ ಮನ ಗೆಲ್ಲಲು ಮತ್ತೊಮ್ಮೆ ವೀಕ್ಷಕರ ಮನೆಗಳಿಗೆ ಬರುತ್ತಿದ್ದಾಳೆ. ಅಂದರೆ ‘ನಾಗಿಣಿ ಭಾಗ 2’ ಆರಂಭವಾಗಲಿದೆ. ಭಾಗ ಒಂದರಲ್ಲಿದ್ದ ಗ್ರಾಫಿಕ್ಸ್ ವೈಭವ ಇಲ್ಲಿ ದುಪ್ಪಟ್ಟಿರಲಿದೆ. ಕನ್ನಡದಲ್ಲಿ ಇದೇ ಮೊದಲಬಾರಿಗೆ ಅದ್ದೂರಿ ಗ್ರಾಫಿಕ್ಸ್​ನ ಕೈಚಳಕವನ್ನು ಇಲ್ಲಿ ಕಾಣಬಹುದು. ಕಿರುತೆರೆಯಿಂದಲೇ ಜನಪ್ರಿಯರಾಗಿರುವ ನಟ ಜಯರಾಮ್ ಕಾರ್ತಿಕ್(ಜೆಕೆ) ‘ನಾಗಿಣಿ-2’ರ ಪ್ರಮುಖ ಆಕರ್ಷಣೆ. ಜತೆಗೆ ಹಿರಿತೆರೆಯ ನಟ ಮೋಹನ್ ಕೂಡ ಗಮನ ಸೆಳೆಯಲಿದ್ದಾರೆ. ಈಗಾಗಲೇ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ನಮ್ರತಾ ಇಲ್ಲಿ ಹೊಸ ನಾಗಿಣಿಯಾಗಿ ಮಿಂಚಲಿದ್ದಾರೆ. ಉಳಿದ ಪಾತ್ರಗಳಲ್ಲಿ ನಿನಾದ್, ಪ್ರಣವ್, ಜೆನ್ನಿಫರ್, ಸೂರ್ಯಕಿರಣ್ ಮುಂತಾದವರು ನಟಿಸುತ್ತಿದ್ದಾರೆ. ಸಿನಿಮಾ ಶೈಲಿಯ ನಿರ್ಮಾಣ ‘ನಾಗಿಣಿ-2’ರ ಪ್ರಮುಖ ಆಕರ್ಷಣೆ ಎಂಬುದಾಗಿ ತಂಡ ಹೇಳಿಕೊಂಡಿದೆ. ಕೊಡಚಾದ್ರಿ, ಚಿಕ್ಕಮಗಳೂರು, ಮೂಡಬಿದ್ರೆ, ಸಕಲೇಶಪುರ, ಕೋಟಿಲಿಂಗದಂಥ ಪ್ರವಾಸಿ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ. ಈಗಾಗಲೇ ಸುಮಾರು 1 ಕೋಟಿ ರೂ. ವೆಚ್ಚದ ಅದ್ದೂರಿ ಸೆಟ್ ನಾಗಿಣಿಗಾಗಿಯೇ ಸಿದ್ಧವಾಗಿದೆ. ಅಲ್ಲದೆ ಫ್ಯಾಂಟಮ್ ಕ್ಯಾಮರಾದಲ್ಲಿ ನಾಗಿಣಿಯ ಅಷ್ಟೂ ವೈಭವ ಸೆರೆಹಿಡಿಯಲಾಗುತ್ತಿದೆ. ಮನುಷ್ಯನ ದುರಾಸೆ, ಅಹಂಕಾರ, ದೈವದ ಬಗ್ಗೆ ಆತನಿಗಿರುವ ನಿರ್ಲಕ್ಷ್ಯ, ಅದರಿಂದ ಆತ ಅನುಭವಿಸುವ ನೋವು-ನಿರಾಸೆಗಳನ್ನು ‘ನಾಗಿಣಿ-2’ ಮೂಲಕ ಹೇಳಲು ಪ್ರಯತ್ನ ಮಾಡಲಾಗಿದೆಯಂತೆ. ನಾಗಮಣಿಯ ದುರಾಸೆಯಿಂದ ತನ್ನವರನ್ನು ಕಳೆದುಕೊಂಡ ನಾಗಿಣಿ, ನಾಗಲೋಕದಿಂದ ಭೂಮಿಗೆ ಬಂದು ಸೇಡು ತೀರಿಸಿಕೊಳ್ಳಲು ತೀಮಾನಿಸುತ್ತಾಳೆ. ಭೂಲೋಕಕ್ಕೆ ಬಂದಮೇಲೆ ನಾಗಿಣಿ ಅನುಭವಿಸುವ ಮಾನವ ಸಹಜ ಸನ್ನಿವೇಶಗಳೇ ನಾಗಿಣಿಯ ಪ್ರಮುಖ ಕಥಾಹಂದರ ಎನ್ನುತ್ತಾರೆ ಜೀ ಕನ್ನಡ ವಾಹಿನಿಯ ರಾಘವೇಂದ್ರ ಹುಣಸೂರು. ರಾಮಿ್ಜೕ ಈ ಧಾರಾವಾಹಿಯ ನಿಮಾಣ ಮತ್ತು ಪ್ರಧಾನ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಫೆ. 17ರಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ಕ್ಕೆ ‘ನಾಗಿಣಿ2’ ಪ್ರಸಾರವಾಗಲಿದೆ.

ಕಾಲ್ಪನಿಕ ಕಥೆಗೆ ಈಗಿನ ಕೆಲ ನೈಜ ದೃಶ್ಯಗಳನ್ನು ಹೆಣೆದು ಪ್ರೇಕ್ಷಕರ ಮುಂದಿಡಲಿದ್ದೇವೆ. ಯಾವುದೇ ಮೂಢನಂಬಿಕೆಗಳನ್ನು ಪ್ರೋತ್ಸಾಹಿಸದೆ, ಮನರಂಜನೆಯನ್ನಷ್ಟೇ ದೃಷ್ಟಿಯಲ್ಲಿಟ್ಟುಕೊಂಡು ಇಡೀ ಧಾರಾವಾಹಿಯನ್ನು ರೂಪಿಸಲಾಗಿದೆ. | ರಾಘವೇಂದ್ರ ಹುಣಸೂರು, ಬಿಜಿನೆಸ್ ಹೆಡ್, ಜೀ ಕನ್ನಡ ವಾಹಿನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net