ಯುಗಾದಿ ಹೊಸ ಆದಿ, ಹೊಸ ಹಾದಿ

ಸರಹಯ
Published on

ಪ್ರತಿ ಸಂವತ್ಸರದ ಆರಂಭದಲ್ಲಿಯೂ ಮುನ್ನುಡಿಯಂತೆ ಬರುತ್ತದೆ ಯುಗಾದಿ. ಕನ್ನಡ ಕಾವ್ಯ ಲೋಕಕ್ಕೂ ಈ ಮಹಾಪರ್ವಕ್ಕೂ ನಿಡುಗಾಲದ ನಂಟು. ಎಲ್ಲ ಪ್ರಮುಖ ಕವಿಗಳ ಕಾವ್ಯಗಳಲ್ಲೂ ಇದರ ಭಾವಧಾರೆ ಹರಿದಿದೆ. ಅಷ್ಟೇ ಏಕೆ, ಚಿತ್ರರಂಗವೆಂಬ ಬಣ್ಣದ ಲೋಕದಲ್ಲೂ ಯುಗಾದಿಯ ಗೀತಸಾಹಿತ್ಯ ಸುಧೆ ನಿರಂತರವಾಗಿ ಹರಿಯುತ್ತ ಬಂದಿದೆ.

ಪ್ರಕೃತಿಯ ನವನವೋನ್ಮೇಷಶಾಲಿನಿ ಶಕ್ತಿಯು ವ್ಯೆವಿಧ್ಯಮಯ ಮತ್ತು ಚಿರಂತನ. ಜೀವಜಾಲದ ಮೂಲಧಾತುವಾಗಿ ನಿಸರ್ಗವು ಇಡೀ ಜಗತ್ತಿಗೆ ಸಂಭ್ರಮ ತರುತ್ತದೆ; ಶುಭ ಘಳಿಗೆಗಳನ್ನು ಉಂಟು ಮಾಡುತ್ತದೆ. ನಿಸರ್ಗದ ಸ್ವರ್ಗಸದೃಶವಾದ ಸುಖಸಂತೋಷವು ನಿಡುಗಾಲವೂ ಉಳಿಯುವುದು ಹಬ್ಬಗಳ ಆಚರಣೆಯಲ್ಲಿ ಮತ್ತದರ ಲವಲವಿಕೆಯ ಚಟುವಟಿಕೆಗಳ ಆಸ್ವಾದಿಸುವಿಕೆಯಲ್ಲಿ.

ಎಲ್ಲ ಹಬ್ಬಗಳ ಹಿರಿಮೆ-ಗರಿಮೆಗಳಲ್ಲಿ ಕನ್ನಡ ಕಾವ್ಯಲೋಕ ಮನದುಂಬಿ ವಿಹರಿಸಿದೆ. ಪದಪದಗಳ ಪದರುಗಳಲ್ಲಿ ಪದ್ಯಗಳ ಭಾವಬಂಧವಿದೆ. ಅಂದದ, ಚಂದದ, ಎಂದೆಂದೂ ಕುಂದದ ಕವಿತೆಗಳ ಸಮೃದ್ಧವಾದ ಜಗತ್ತನ್ನೇ ಸೃಜಿಸಿರುವ ಈ ಕವಿ-ಕಾವ್ಯಲೋಕ ಯುಗಾದಿಯ ಸಮಾಹಿತವಾದ ಚಿಂತನೆಗಳನ್ನೂ ಭಿನ್ನ- ವಿಭಿನ್ನ ಅವಸ್ಥಾಂತರಗಳಲ್ಲಿ ಅನನ್ಯ ಭಾವಧಾರೆಗಳಲ್ಲಿ ಕಂಡಿರಿಸಿದೆ. ಕವಿಗಳ ಅಂಥ ಯುಗಾದಿಯ ಅದ್ಭುತ ಚಿತ್ರಣವನ್ನು ನೂತನ ಶಾರ್ವರಿ ಸಂವತ್ಸರದ ಸಿಹಿ ಸಂದರ್ಭದಲ್ಲಿ ಅವಲೋಕಿಸೋಣ.

ಒಬ್ಬೊಬ್ಬ ಕವಿಗೆ ಒಂದೊಂದು ಕಾಲಘಟ್ಟದಲ್ಲಿ ಒಂದೊಂದು ರೀತಿಯಲ್ಲಿ ಕಂಡಿರುವ ಯುಗಾದಿ ಕಾವ್ಯಲೋಕದಲ್ಲಿ ವಿಶಿಷ್ಟವಾಗಿ ಮೈದಾಳಿದೆ. ‘ವಸಂತ ಬಂದ ಋತುಗಳ ರಾಜ ತಾ ಬಂದ...’ ಎಂದು ಚೈತ್ರಾಗಮನದ ಹುರುಪನ್ನು ಕನ್ನಡದ ಕಣ್ವ ಬಿ.ಎಂ. ಶ್ರೀಕಂಠಯ್ಯ ವರ್ಣಿಸಿದರೆ; ಜಿ.ಎಸ್. ಶಿವರುದ್ರಪ್ಪನವರಿಗೆ ಯುಗಾದಿ ಧೈರ್ಯ- ಸ್ಥೈರ್ಯಗಳ ಸ್ಪಷ್ಟ ತೋರುದೀಪವಾಗಿ ಸುಸ್ಥಿರವೆನ್ನಿಸುತ್ತದೆ.

ಮಬ್ಬು ಕವಿದರೇನು ನನ್ನ

ಹಬ್ಬಿದಿರುಳ ಜ್ವಾಲೆಗೆ

ನಡೆಮುಂದಕೆ ಧೈರ್ಯದಿಂದ

ಅರುಣೋದಯ ತೀರಕೆ...

ಹಾಗೇ ಮುಂದುವರೆದು ಜಿ.ಎಸ್.ಎಸ್. ‘ಚೈತ್ರಮಾಸವು ದಿಟ್ಟತನ ಮತು ಭರವಸೆಗಳನ್ನು ನಮ್ಮಲ್ಲಿ ನೆಲೆಗೊಳಿಸುವ ಅದ್ಭುತ ಋತು’ ಎಂದು ಅದನ್ನು ಮನುಷ್ಯ ಜಗತ್ತಿನ ನಂಬಿಕೆಯ ಶಕ್ತಿಯಾಗಿ ನೋಡುತ್ತಾರೆ.

ಹಳೆ ನೆನಪುಗಳುದುರಲಿ ಬಿಡು

ಬೀಸುವ ಛಳಿಗಾಳಿಗೆ

ತರಗೆಲೆಗಳ ಚಿತೆಯುರಿಯಲಿ

ಚೈತ್ರೋದಯ ಜ್ವಾಲೆಗೆ (ಯುಗಾದಿ ಹಾಡು)

ಚೈತ್ರಮಾಸ ಸಶಕ್ತವಾಗಿ ರೂಪು ತಾಳಿರುವುದು ಜಿ.ಎಸ್.ಎಸ್. ಕಾವ್ಯದಲ್ಲಿ ಮಾತ್ರವಲ್ಲ; ಕವಿಯ ಮನೆಯ ಹೆಸರೂ ‘ಚೈತ್ರ’ವೇ! ಇದನ್ನು ಗಮನಿಸಿದರೆ ಕವಿಯು ‘ಚೈತ್ರ’ಕ್ಕೆ ಕೊಟ್ಟ ನೆಲೆ-ಬೆಲೆ ಎಂಥದೆಂಬುದು ಮನದಟ್ಟಾಗುತ್ತದೆ.

ಕನ್ನಡದ ಮತ್ತೊಬ್ಬ ಹೆಮ್ಮೆಯ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರು ‘ಮೈಸೂರು ಮಲ್ಲಿಗೆ’ ಕವನ ಸಂಕಲನದಿಂದ ಹೆಸರಾದರೂ ಅದಕ್ಕಿಂತ ಮುಖ್ಯವಾಗಿ ಬದುಕಿನ ದುರ್ಭರ ಸಂಗತಿಗಳನ್ನು ಸಂಕಟಗಳನ್ನು ಒಳಗೇ ಅದುಮಿಟ್ಟುಕೊಂಡು ನೋವು ನಲಿವು ಎರಡನ್ನೂ ಸಮಚಿತ್ತದ ದೃಷ್ಟಿಕೋನದಲ್ಲೇ ಪರಿಭಾವಿಸಿದವರು ಮತ್ತು ಅನುಭವಿಸಿದವರು. ಅವರಿಗೆ ಮಾವು-ಬೇವು ಎರಡರ ಸಂಗಮವಾದ ಬದುಕನ್ನು ಜೀರ್ಣಾಗ್ನಿ ಆಗಿಸಿಕೊಳ್ಳುವುದರ ಬಗ್ಗೆ ಅಪಾರ ನಂಬಿಕೆ. ಹೀಗಾಗಿಯೇ ಅವರು ಮಾವಿನ ಸಿಹಿ, ಬೇವಿನ ಕಹಿ ಎರಡನ್ನೂ ಅದೇ ಸಲೀಸುತನದಲ್ಲಿ ಬಾಳಿನ ಅತ್ಯಂತ ಸಹಜ ಭಾಗವಾಗಿ ಒಪ್ಪಿಕೊಳ್ಳುತ್ತಾರೆ.

ತರುಲತೆಗಳ ಜೀವನದಲಿ

ನವಚೇತನದುಸಿರು

ನವಪಲ್ಲವದುಡುಗೊರೆಯಲಿ

ಉರಿಬಿಸಿಲೂ ಹಸಿರು

ಎಂದು ಕೆ.ಎಸ್.ನ. ‘ನವಪಲ್ಲವ’ ಕವಿತೆಯಲ್ಲಿ ಹೇಳಿದರೂ, ಕವಿಗೆ ಮಾವು-ಬೇವು ಎರಡರ ಶ್ರೇಷ್ಠತೆಯ ಬಗ್ಗೆಯೂ ಅಗಾಧ ಗೌರವವಿದೆ. ಅದನ್ನೇ ಅವರು ಮುಂದೆ ಗಟ್ಟಿಗೊಳಿಸುತ್ತಾ,

ಮಾವೊಂದೇ ಚಿಗುರಲಿಲ್ಲ

ಚಿಗುರುತ್ತಿದೆ ಬೇವು

ನಲಿವೊಂದೇ ಹರಸಲಿಲ್ಲ

ಜತೆಯಲ್ಲಿತ್ತು ನೋವು...

ಎನ್ನುತ್ತಾರೆ. ಅಂದರೆ ಕವಿಗೆ ನೋವು-ನಲಿವು ಎರಡನ್ನೂ ಒಳಗೊಳ್ಳುವ ಪ್ರಕೃತಿಯ ಈ ಮಾಂದಳಿರಿನ ವ್ಯೆವಿಧ್ಯ ಹೀಗೆ ಮುಖ್ಯವೆನ್ನಿಸುತ್ತದೆ.

ಕನ್ನಡದ ಬಹುಮುಖ್ಯ ಕವಿಯಾಗಿ ಭಾಗವತ ನಿಲುವಿನ ಚಿಂತನೆಯವರಾದ ಪು.ತಿ. ನರಸಿಂಹಾಚಾರ್ ಅವರಿಗೆ ನಿಸರ್ಗದಲ್ಲಿ ಎಲ್ಲ ಸಂತೋಷವನ್ನು ಕಾಣುವ ತುಡಿತ ಇತ್ತು. ಅವರ ನಿಲುವಿನಲ್ಲಿ ಪ್ರಕೃತಿಯ ಅರಳಿದ ಮತ್ತು ವಿಕಸಿತಗೊಂಡು ನಳನಳಿಸುವ ಋತುಸಂಭ್ರಮ ಕಾಣುತ್ತದೆ. ಮುದದಿಂದಲೇ ತನ್ನನ್ನು ತಾನು ಆ ಹೊಸರೂಪಿನ ನಿಸರ್ಗದ ಸೌಂದರ್ಯದಲ್ಲಿ ಶ್ರದ್ಧೆಯಿಂದ ತೊಡಗಿಕೊಳ್ಳುವಷ್ಟು ತೃಪ್ತಿಯನ್ನು ನೀಡುತ್ತದೆ. ಆ ಅನುಭವ ಅವರಲ್ಲಿ ಹೀಗೆ ಅಭಿವ್ಯಕ್ತಗೊಳ್ಳುತ್ತದೆ.

ಹುಲ್ಲುಗಾವಲಿನ ಹೂತಮರಗಳ

ಎಲೆಗಳು ಬಡಿಸುವ

ಬಾನಬಿಂದುಗಳ

ಲೆಕ್ಕದೊಳಾಯ್ತು ನನ್ನಾಸಕ್ತಿ...

ಯುಗಾದಿ ಎಂದ ಕೂಡಲೇ ಮತ್ತೆ ಮತ್ತೆ ನೆನಪಾಗುವ ದ.ರಾ. ಬೇಂದ್ರೆಯವರ ‘ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ...’ ಕವನವನ್ನು ಹೇಗೆ ತಾನೇ ಮರೆಯಲು ಸಾಧ್ಯ? ಚಿತ್ರಗೀತೆಯಲ್ಲಿ ಇದನ್ನು ಜಿ.ಕೆ. ವೆಂಕಟೇಶ್ ಅದ್ಭುತವಾಗಿ ಸಂಯೋಜಿಸಿದ್ದಾರೆ ಎನ್ನುವ ಕಾರಣಕ್ಕೆ ಮಾಧುರ್ಯದ ರಸಪಾಕವನ್ನೇ ಈ ಗೀತೆ ಹೊಂದಿದೆ ನಿಜ. ಆದರೆ ಈ ಕವಿತೆಯಲ್ಲಿ ಜೀವಪರವಾದ ಹುಮ್ಮಸ್ಸೂ ಇದೆ. ನಾವು-ನೀವು ಕಳೆದುಕೊಳ್ಳಬಾರದ ಸಾರ್ಥಕ ಸಂದೇಶ ಇದೆ. ಯುಗಾದಿಯ ಚೆಲುವು-ನಲಿವುಗಳಿವೆ. ‘ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತಕೇಲಿ’ಯಲ್ಲಿ ಮಾತ್ರ ಮೈಮರೆಯದೆ ಕವಿ ಬೇಂದ್ರೆಯವರು ‘ಒಂದೇ ಒಂದು ಜನ್ಮದಲಿ ಒಂದೇ ಬಾಲ್ಯ ಒಂದೇ ಹರೆಯ ನಮಗದಷ್ಟೇ ಏತಕೋ’ ಎಂದು ಪ್ರಕೃತಿಗೇ ಸವಾಲೆಸೆದಿದ್ದಾರೆ.

ಯುವ ಜೀವನಾಸಕ್ತಿಯನ್ನು ಹೊರಸೂಸುವ ಅಪೂರ್ವ ಆತ್ಮವಿಶ್ವಾಸದ ಸಮೃದ್ಧತೆ ಇದಕ್ಕಿದೆ.

ತಣ್ಣಗಿನ ಕಾವ್ಯಸ್ಪರ್ಶದಲ್ಲೇ ನಿತ್ಯನೂತನವಾದ ಜಗತ್ತನ್ನು ಅನ್ವೇಷಿಸುವ ಕವಿ ಚೆನ್ನವೀರ ಕಣವಿಯವರು ತಮ್ಮ ‘ಯುಗಾದಿ 1988’ ಎನ್ನುವ ಪದ್ಯದಲ್ಲಿ

ನೆಟ್ಟಗೆ ಧ್ವಜಸ್ತಂಭದಂತಿರುವ

ಅಶೋಕವೃಕ್ಷದ ಕೆಳಗೆ

ಹಣ್ಣೆಲೆ ರಾಶಿ ಹಗಲಿರುಳು ಉದುರಿ

ಗಾಳಿಗೆ ಚದುರಿ ಅತ್ತ ಹೊರಳಿದೆ ನೆರಳು

ಮೈತುಂಬ ಎಣ್ಣೆ ಬಸಿಯುವ

ಚಿಗುರು ಈ ತನಕ

ಎಂದು ಯುಗಾದಿಯನ್ನು ಬರಮಾಡಿಕೊಳ್ಳುತ್ತಾರೆ.

ಕನ್ನಡದಲ್ಲಿ ನವ್ಯಕವಿ ಎಂದೇ ಹೆಸರಾದ ಗೋಪಾಲಕೃಷ್ಣ ಅಡಿಗರು ಸಹ ಯುಗಾದಿಯನ್ನು ತಮ್ಮ ಅದೇ ಹೆಸರಿನ ಪದ್ಯದಲ್ಲಿ...

ಈ ಯುಗಾದಿಯೂ ಮಾತು ಕೇಳುತಿದೆ ಮರಮರಳಿ

ಮೊದಲಾಗುತಿದೆ ಯುಗವು ನರನ ಜಗವು

ವರುಷವರುಷವು ನಮ್ಮಪಯಣ ಮೊದಲಾಗುತಿದೆ

ಇದಕೂ ಮಿಗಿಲಿಲ್ಲ ಹಾ ನರಗೆ ಸೊಗವು

ಎಂದು ಯುಗಾದಿಯನ್ನು ಸ್ವರ್ಗವಾಗಿ ಗಮನಿಸುತ್ತಾರೆ.

ಆದರೆ ಕವಿ ದೊಡ್ಡರಂಗೇಗೌಡರಿಗೆ ಯುಗಾದಿಯ ನಿಜವಾದ ಆಚರಣೆ ಯಾವಾಗ ಸಾಧ್ಯ ಎಂಬ ಬಗ್ಗೆ ಮುನ್ನೆಲೆಗಳಿವೆ. ಈ ದಿಸೆಯಲ್ಲಿ ಅವರು ‘ನಿಜವಾದ ಯುಗಾದಿ’ ಎನ್ನುವ ಅವರ ಪ್ರಗಾಥದಲ್ಲಿ ಹೀಗೆ ಹೇಳುತ್ತಾರೆ.

ತೊಟ್ಟಿ ಬಳಿ ಚೂರು ಚೂರಿಗೆ ತುತ್ತು ತುತ್ತಿಗೆ

ಕಿತ್ತಾಡದೆ ಅನ್ನ ಸಿಕ್ಕುವಂತಾದ ದಿನ

ಕಡುಬಡ ರೈತ ಕಂಗೆಡದೆ ನಿಟ್ಟುಸಿರಿಡದೆ

ಲವಲವಿಕೆಯಲಿ ನಕ್ಕ ದಿನ

ನಿಜವಾದ ಯುಗಾದಿ...

ಇದು ಜಗತ್ತಿನ ಸಾರ್ವಕಾಲಿಕ ಸತ್ಯದ ಮಾತಾಗಿದೆ.

(ಲೇಖಕರು ಕೆಜಿಎಫ್​ನ ಶ್ರೀ ಭಗವಾನ್ ಮಹಾವೀರ ಜೈನ್ ಕಾಲೇಜಿನ ಕನ್ನಡ ಉಪನ್ಯಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net