

| ರಾಮ ಕಿಶನ್ ಕೆ.ವಿ.
ಸಮಾಜಕ್ಕೆ ಯಾವುದಾದರೂ ರೂಪದಲ್ಲಿ ಕೊಡುಗೆ ನೀಡಬೇಕೆಂಬ ತುಡಿತ ಹೊಂದಿದ ಯುವಕರ ಗುಂಪುಗಳು ಹೊಸ ಹೊಸ ಆಲೋಚನೆಗಳೊಂದಿಗೆ ಕಾರ್ಯಕ್ರಮ ರೂಪಿಸುವ ಹತ್ತು ಹಲವು ಉದಾಹರಣೆ ನಮ್ಮ ಕಣ್ಣಮುಂದಿವೆ. ಪ್ರಸ್ತುತ ಉದ್ಯೋಗ ವಿಚಾರ ಬಹು ಚರ್ಚೆಯಲ್ಲಿರುವ ವಿಚಾರ ಮತ್ತು ಪೈಪೋಟಿ ಕೂಡ ಸಾಕಷ್ಟಿದೆ. ಈ ವಾತಾವರಣದಲ್ಲಿ ಅಂಗವೈಕಲ್ಯ ಹೊಂದಿದವರು ಸಾಕಷ್ಟು ತ್ರಾಸ ಪಡಬೇಕಾಗುತ್ತದೆ. ಹೀಗಿರುವಾಗ ಯುವ ಸಮೂಹದ ಮೊಬಿಲಿಟಿ ಇಂಡಿಯಾ ಎಂಬ ಸಂಸ್ಥೆ ಅಂಗವಿಕಲರ ಪುನರ್ವಸತಿಗಾಗಿ ಗಮನ ಸೆಳೆಯುವ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ. ನಾವಿಂದು ಸ್ಪರ್ಧಾತ್ಮಕ ಜಗತ್ತಿನಲ್ಲಿದ್ದೇವೆ. ಅವಕಾಶಗಳು ಹೆಚ್ಚಿದ್ದಷ್ಟೇ, ಸ್ಪರ್ಧೆಗಳೂ ಅಷ್ಟೇ ಇರುತ್ತವೆ. ಈ ಸಂದರ್ಭದಲ್ಲಿ ಸರಿಯಾದ ಕ್ರಮದಲ್ಲಿ ಸಲಹೆ ನೀಡುತ್ತಾ, ಮಾರ್ಗದರ್ಶನದ ಅವಶ್ಯಕತೆ ಇರುತ್ತದೆ. ಅದರಲ್ಲೂ ಅಂಗವಿಕಲತೆ ಎಂಬ ಸಮಸ್ಯೆಯಿಂದ ಬಳಲುತ್ತಿರುವ ಯುವ ಸಮೂಹ ಎಷ್ಟೇ ದೃಢ ನಿರ್ಧಾರ ತೆಗೆದುಕೊಂಡರೂ, ಅವರಿಗೆ ಆತ್ಮವಿಶ್ವಾಸದ ಸಮಸ್ಯೆ ಎದುರಾಗುತ್ತದೆ.
ಅಂಗವಿಕಲತೆ ಸಮಸ್ಯೆ ಇದೆ, ಹಾಗೆಂದು ಅವಕಾಶ ಸಿಗಲಿಲ್ಲ ಎಂಬ ಕೊರಗು ಯಾರನ್ನೂ ಕಾಡಬಾರದು. ಯಾರು ಅವಕಾಶದಿಂದ ವಂಚಿತರಾಗುತ್ತಾರೋ ಅವರನ್ನು ಮುಖ್ಯವಾಹಿನಿಗೆ ತರಲು ಸಾಕಷ್ಟು ಪ್ರಯತ್ನಗಳಾಗುತ್ತಿವೆ. ಇದರ ಫಲವಾಗಿ ಅನೇಕ ಕೌಶಲ ತರಬೇತಿ ಕೇಂದ್ರಗಳು ಶ್ರಮಿಸುತ್ತಿವೆ. ಸೂಕ್ತ ಮಾರ್ಗದರ್ಶನ ನೀಡುತ್ತಿದೆ.
2011ರ ಜನಗಣತಿ ದಾಖಲೆಯ ಪ್ರಕಾರ, 2.21 ಪ್ರತಿಶತ ಭಾರತೀಯರು ಅಂಗವಿಕಲರಾಗಿದ್ದಾರೆ. ಇವರಿಗೆ ಕೃತಕ ಅಂಗಗಳು, ವ್ಹೀಲ್ ಚೇರ್ಗಳನ್ನೆಲ್ಲ ನೀಡಿದಾಗ ಎಲ್ಲರಂತೆ ಓಡಾಡಿಕೊಂಡಿರಲು ಸಹಾಯವಾಗುತ್ತದೆ. ಜತೆಗೆ ಸಣ್ಣ ಪುಟ್ಟ ಕೆಲಸಗಳನ್ನು ನಿರ್ವಹಿಸುತ್ತಾ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಡಬ್ಲು್ಯಎಚ್ಒ ಪ್ರಕಾರ, 2.5 ಶತಕೋಟಿ ಜನ ಅಂಗವಿಕಲರಿಗೆ ಸಹಾಯಕ ಉತ್ಪನ್ನಗಳ ಅಗತ್ಯವಿದೆ ಎಂದು ಹೇಳಿದೆ.
2050ರ ವೇಳೆಗೆ ಹಿರಿತನ, ರೋಗ, ನೈಸರ್ಗಿಕ ವಿಪತ್ತು, ಅಪಘಾತಗಳಿಂದಾಗಿ ಅಂಗವಿಕಲರಾಗುವವರ ಸಂಖ್ಯೆ 3.5 ಶತಕೋಟಿಗೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ. ಸದ್ಯ ಅಂಗವಿಕಲತೆಯಿಂದ ಬಳಲುತ್ತಿರುವವರಿಗೆ ಪುನರ್ವಸತಿ ಕಲ್ಪಿಸಬೇಕಾಗಿದೆ. ಸಾಮಾನ್ಯರಂತೆ ಅಂಗವಿಕಲರಿಗೆ ಓಡಾಡಲು ಸಾಧ್ಯವಾಗುವುದಿಲ್ಲ. ಕುಳಿತಲ್ಲಿಂದಲೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಹೀಗಿದ್ದಾಗ ಯಾರೆಲ್ಲ ಸಣ್ಣ ವಯಸ್ಸಿನಲ್ಲಿ ಅಂಗವಿಕಲತೆಗೆ ಒಳಗಾಗಿದ್ದಾರೆ ಎಂಬುವುದನ್ನು ಗುರುತಿಸಿ ವೃತ್ತಿಪರ ತರಬೇತಿ ನೀಡಿ, ಪೋ›ತ್ಸಾಹಿಸಿದಾಗ ಅವರಿಗೂ ಆದಾಯದ ಮೂಲ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ದೇಶದಲ್ಲಿ ಅಂಗವಿಕಲರ ಸಂಖ್ಯೆ ಹೆಚ್ಚಿದ್ದರೂ, ವೃತ್ತಿಪರ ತರಬೇತಿ ಪಡೆದವರ ಸಂಖ್ಯೆಯಲ್ಲಿ ಕುಂಠಿತವಿದೆ. 10 ಲಕ್ಷದಷ್ಟು ಜನರಲ್ಲಿ, ವಾರ್ಷಿಕವಾಗಿ ಕೇವಲ 250 ಅಂಗವಿಕಲರು ವೃತ್ತಿಪರ ತರಬೇತಿ ಪಡೆದು ಹೊರಬರುತ್ತಿದ್ದಾರೆ. ಯುವ ಅಂಗವಿಕಲರನ್ನು ವೃತ್ತಿಪರರನ್ನಾಗಿಸುವ ಹಲವು ಕೋರ್ಸ್ಗಳು ಇಂದು ಲಭ್ಯವಿದೆ. ಅಂತೆಯೇ ಬೆಂಗಳೂರಿನಲ್ಲಿ ಮೊಬಿಲಿಟಿ ಇಂಡಿಯಾ ಎಂಬ ಸಂಸ್ಥೆ ಅಂಗವಿಕಲರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಕಳೆದ 26 ವರ್ಷಗಳಿಂದ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ತರಗತಿಗಳನ್ನು ನಡೆಸುತ್ತಿದೆ.
ವೃತ್ತಿಪರ ತರಬೇತಿಯಿಂದ ಹೊಸತನ್ನು ಕಲಿಯಲು ಸಾಧ್ಯವಾಗಿದೆ. ಅಂಗವೈಕಲ್ಯದ ಸಮಸ್ಯೆಯಿಂದ ಬಳಲುತ್ತಿದ್ದಾಗ, ವೃತ್ತಿಪರ ತರಬೇತಿಗಳ ಮಾರ್ಗದರ್ಶನ ಲಭಿಸಿತು. ಧೈರ್ಯವಾಗಿ ಮುಂದುವರಿದೆ. ಇದರಿಂದಾಗಿ ನನಗೆ ಎಲ್ಲರೊಂದಿಗೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿದೆ. | ದೀಪಿಕಾ ರವೇಲಾ ಆಂಧ್ರ ಪ್ರದೇಶ
ಸಣ್ಣ ವಯಸ್ಸಿನಲ್ಲೇ ಅಂಗವಿಕಲತೆಯಿಂದ ತೊಂದರೆಗೊಳಗಾದವರು, ಅಪಘಾತದಿಂದ ಅಂಗವಿಕಲರಾದವರು, ಸ್ನಾಯು ಸಮಸ್ಯೆಯಿಂದ ಬಳಲುತ್ತಿರುವವರು, ಕೀಲು ಊತ, ಪ್ರಾಸ್ತೆಟಿಕ್ ಮತ್ತು ಆಥೋಟಿಕ್ಸ್ ಕೋರ್ಸ್ಗೆ ಪ್ರವೇಶಾತಿ ಪಡೆಯಬಹುದು. ಕೋರ್ಸ್ ಪೂರ್ಣವಾದ ನಂತರ ಕ್ಲಿನಿಕಲ್ ವಿಭಾಗದ ಸಹಾಯಕರು, ವ್ಯಾಪಾರ ವಹಿವಾಟು, ವೈದ್ಯರ ಸಹಾಯಕರು, ಸರ್ಕಾರಿ ವಲಯ, ವೃತ್ತಿಪರ ಕೆಲಸಗಾರರ ಸಹಾಯಕರರು ಮುಂತಾದ ಕ್ಷೇತ್ರಗಳಲ್ಲಿ ಉದ್ಯೋಗಿಗಳಾಗಿ ಕೆಲಸ ನಿರ್ವಹಿಸಲು ಅವಕಾಶವಿದೆ. ಇದೀಗ ಮೊಬಿಲಿಟಿ ಇಂಡಿಯಾ ಸಂಸ್ಥೆಯು ಪ್ರಾಸ್ಥೆಟಿಕ್ಸ್ ಮತ್ತು ಆಥೋಟಿಕ್ಸ್ ವಿಷಯದಲ್ಲಿ ಎರಡು ವರ್ಷಗಳ ಸ್ನಾತಕೋತ್ತರ ಪದವಿಯನ್ನು ಆರಂಭಿಸುತ್ತಿದೆ. ಜೂನ್ನಲ್ಲಿ ಪ್ರವೇಶ ಪರೀಕ್ಷೆ ಆರಂಭವಾಗಲಿದೆ.
ಪ್ರಾಸ್ತೆಟಿಕ್ಸ್ ಮತ್ತು ಆಥೋಟಿಕ್ಸ್ ವಿಷಯ: ಪದವಿ ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಪ್ರಾಸ್ತೆಟಿಕ್ಸ್ ಮತ್ತು ಆಥೋಟಿಕ್ಸ್ ವಿಭಾಗಗಳಿದ್ದು, ಇಲ್ಲಿ ಕ್ಲಿನಿಕಲ್ ಮತ್ತು ತಾಂತ್ರಿಕ ತರಬೇತಿ ನೀಡಲಾಗುತ್ತದೆ. ನಾಲ್ಕೂವರೆ ವರ್ಷ ಈ ತರಬೇತಿಯಿದ್ದು, ಕರ್ನಾಟಕದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಒಡಂಬಡಿಕೆಯೊಂದಿಗೆ ನಡೆಯುತ್ತಿದೆ. ನವದೆಹಲಿಯಲ್ಲಿರುವ ಭಾರತೀಯ ಪುನರ್ವಸತಿ ಮಂಡಳಿಯಿಂದ ಮಾನ್ಯತೆ ಪಡೆದಿದೆ.
ಅರ್ಹತೆ: ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸುವ ಪರೀಕ್ಷೆಯಲ್ಲಿ (ಪಿಯುಸಿ) ಉತ್ತೀರ್ಣರಾಗಿರಬೇಕು. ಅಥವಾ ಇತರೆ ಪರೀಕ್ಷಾ ಮಂಡಳಿ ನಡೆಸುವ ಪರೀಕ್ಷೆಯಲ್ಲಿ ಇಂಗ್ಲೀಷ್ ಭಾಷೆಯೊಂದಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಅಥವಾ ಜೀವಶಾಸ್ತ್ರದಲ್ಲಿ ಶೇ.50 ಅಂಕದೊಂದಿಗೆ ತೇರ್ಗಡೆಯಾದವರು ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಭಾರತೀಯ ಪುನರ್ವಸತಿ ಕೌನ್ಸಿಲ್ ಅನುಮೋದಿಸಿದ ಪ್ರಾಸ್ತೆಟಿಕ್ಸ್ ಮತ್ತು ಆಥೋಟಿಕ್ಸ್ನಲ್ಲಿ ಡಿಪ್ಲೊಮಾ ಪದವಿ ಪಡೆದ ಅಭ್ಯರ್ಥಿಗಳು ಅರ್ಹರಾಗಿದ್ದು, ನೇರವಾಗಿ ಬಿಪಿಒ ಕೋರ್ಸ್ನ ಮೂರನೇ ವರ್ಷಕ್ಕೆ ಪ್ರವೇಶ ಪಡೆಯಬಹುದಾಗಿದೆ.