ಯುವಜನತೆಗೆ ಜೀವನ ಪಾಠದ ಅರಿವು ಅಗತ್ಯ

Youths
Published on
ನಮ್ಮೆಲ್ಲರ ಜೀವನದಲ್ಲಿ ವಿಪತ್ತು, ಸಮಸ್ಯೆ ಅಥವಾ ಅಪಾಯ ಹೇಳಿ ಕೇಳಿ ಬರುವುದಿಲ್ಲ. ಅದು ಆಕಸ್ಮಿಕವಾಗಿ ಎದುರಾಗುತ್ತದೆ. ಯಾವಾಗ, ಹೇಗೆ, ಯಾವ ರೂಪ, ಯಾವ ರೀತಿಯಲ್ಲಿ ಬಂದೆರಗುತ್ತದೆ ಎಂದು ಹೇಳಲು ಮಾತ್ರವಲ್ಲ ಊಹಿಸಿಕೊಳ್ಳಲೂ ಆಗದು. ಅನಾರೋಗ್ಯ, ಅಪಘಾತ, ಅವಘಡ, ಪ್ರಾಕೃತಿಕ ವಿಕೋಪ, ಕಷ್ಟ-ನಷ್ಟ, ನೋವು ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಅಪಾಯ ಎದುರಾಗಬಹುದು. ಪರಿಣಾಮವಾಗಿ ಜೀವನದಲ್ಲಿ ಏರುಪೇರಾಗಬಹುದು. ಬದುಕೇ ಸಾಕೆನ್ನಿಸಬಹುದು. ಸತ್ತೇ ಹೋಗಿ ಬಿಡೋಣ ಎಂದು ಕೆಲವರು ತೀರ್ವನಕ್ಕೆ ಬರಬಹುದು. ಹೀಗೆ ಪ್ರತಿಯೊಬ್ಬರೂ ಸಮಸ್ಯೆಗಳಿಗೆ ಎದುರುಗೊಳ್ಳುತ್ತಲೇ ಇರುತ್ತಾರೆ. ಈ ಸಂದರ್ಭದಲ್ಲಿ ಕೆಲವರು ಅದನ್ನು ಎದುರಿಸಲು ಸಾಧ್ಯವಾದಷ್ಟು ಪ್ರಯತ್ನಿಸುತ್ತಾರೆ. ಇನ್ನು ಕೆಲವರು ಧೈರ್ಯದಿಂದ ಸಮಸ್ಯೆಯನ್ನು ಮೆಟ್ಟಿ ನಿಂತು ಯಶಸ್ಸು, ಸಫಲತೆ ಪಡೆಯುತ್ತಾರೆ. ಮತ್ತೆ ಕೆಲವರು ಸಮಸ್ಯೆಯನ್ನು ಎದುರಿಸಲು ನನ್ನ ಕೈಲಿ ಆಗಲ್ಲಪ್ಪಾ ಎನ್ನುತ್ತಾ ಬೆನ್ನು ಹಾಕಿ ಹಿಂದೆ ಓಡುತ್ತಾರೆ.

ಸಮಸ್ಯೆಗಳು ಯಾರಿಗೆ ತಾನೆ ಇಲ್ಲ ಹೇಳಿ. ಎಲ್ಲರೂ ಒಂದಲ್ಲ ಒಂದು ಸಮಸ್ಯೆಯನ್ನು ಹೊಂದಿರುತ್ತಾರೆ. ಉದ್ಯೋಗ, ಅನಾರೋಗ್ಯ ವೈಯಕ್ತಿಕ ಸಮಸ್ಯೆಯಾದರೆ ದಂಪತಿ ನಡುವಿನ ವೈಮನಸ್ಸು, ಆಸ್ತಿ ಕಲಹ ಇತ್ಯಾದಿ ಕೌಟುಂಬಿಕ ಸಮಸ್ಯೆಗಳು. ಸಮರ್ಪಕ ರಸ್ತೆ, ಕುಡಿಯಲು ನೀರು ಇಲ್ಲದಿರುವುದು, ವಿದ್ಯುತ್ ಸಂಪರ್ಕ ಕಡಿತ, ಅವಘಡ ಇತ್ಯಾದಿ ಸಾಮಾಜಿಕ ಸಮಸ್ಯೆಗಳು. ಇವೆಲ್ಲವನ್ನೂ ಎದುರಿಸುವ ರೀತಿಗಳು ಬೇರೆ ಬೇರೆಯಾಗಿರುತ್ತದೆ. ಕೆಲವೊಮ್ಮೆ ನಾವೊಬ್ಬರೇ, ಕುಟುಂಬಿಕರ ಜೊತೆಯಾಗಿ ಅಥವಾ ಸಮುದಾಯದೊಂದಿಗೆ ಸೇರಿಕೊಂಡು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕಾದ ಸಂದರ್ಭಗಳಿರುತ್ತವೆ.

ಸಮಸ್ಯೆ ವ್ಯಕ್ತಿಯನ್ನು ಅವನತಿಯತ್ತ ಕೊಂಡೊಯ್ಯಬಹುದು ಅಥವಾ ಯಶಸ್ಸಿನ ಉತ್ತುಂಗಕ್ಕೂ ಏರಿಸಬಲ್ಲುದು. ಅದು ನಾವು ಹೇಗೆ ಸಮಸ್ಯೆಯನ್ನು ಸ್ವೀಕರಿಸುತ್ತೇವೆ, ಎದುರಿಸುತ್ತೇವೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ಒಬ್ಬಾತ ನದಿಯ ದಡದಲ್ಲಿ ನಿಂತು ‘ನನಗೆ ಈಜು ಬರುವುದಿಲ್ಲವಲ್ಲ ಛೇ’ ಎಂದು ಬಹಳ ಬೇಸರ ಮಾಡಿಕೊಳ್ಳುತ್ತಿದ್ದ. ಅಲ್ಲಿ ಬಂದವರೊಬ್ಬರು ‘ಯಾಕಪ್ಪಾ ಇಲ್ಲಿ ನಿಂತು ಏನು ಮಾಡುತ್ತಿದ್ದೀಯಾ’ ಎನ್ನುತ್ತಾರೆ. ಆಗ ಆತ ‘ಸ್ವಾಮಿ ನನಗೆ ನೀರಿನಲ್ಲಿ ಈಜಾಡಬೇಕೆಂಬ ಆಸೆ. ಆದರೆ ಈಜು ಬರೊಲ್ಲ. ಅದಕ್ಕೆ ತುಂಬಾ ಬೇಸರದಲ್ಲಿದ್ದೇನೆ’ ಎನ್ನುತ್ತಾನೆ. ‘ಹಾಗಾ.. ನೀನು ನೀರಿಗಿಳಿದು ಈಜು ಕಲಿಯಬಹುದಲ್ಲಾ’ ಎಂದಾಗ ಆತ ‘ನನಗೆ ಈಜು ಬರದಿರುವುದೇ ಸಮಸ್ಯೆ. ಅದರಿಂದಾಗಿ ನನಗೆ ನೀರಿಗಿಳಿಯಲು ಭಯ’ ಎಂದುತ್ತರಿಸುತ್ತಾನೆ. ಹೀಗೆ ಅನೇಕರು ನಮಗೆ ಅದು ಸಮಸ್ಯೆ, ಇದು ಸಮಸ್ಯೆ ಎಂದು ಚಿಂತೆ ಮಾಡುತ್ತಾರೆಯೇ ಹೊರತು ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಸ್ವಲ್ಪವೂ ಚಿಂತನೆ ಮಾಡುವುದಿಲ್ಲ. ನೀರಿಗೆ ಇಳಿಯದೇ ಇದ್ದರೆ ಈಜನ್ನು ಹೇಗೆ ತಾನೆ ಕಲಿಯಲು ಸಾಧ್ಯ? ಹಾಗೆಯೇ ಸಮಸ್ಯೆಯನ್ನು ಅವಲೋಕಿಸದೇ ಇದ್ದರೆ ಅದನ್ನು ಪರಿಹರಿಸಲು ಸಾಧ್ಯವಿಲ್ಲ.

ನಮ್ಮ ಕ್ಷೇತ್ರವು ಚತುರ್ದಾನಗಳಲ್ಲಿ ಒಂದಾದ ಅಭಯ ದಾನಕ್ಕೂ ಸಾಕಷ್ಟು ಪ್ರಸಿದ್ಧವಾಗಿದೆ. ಈ ಮೊದಲು ಧರ್ವಧಿಕಾರಿಗಳಾಗಿದ್ದವರೆಲ್ಲ ಈ ಪರಂಪರೆಯನ್ನು ಶ್ರದ್ಧಾ ಭಕ್ತಿಯಿಂದ ನಡೆಸಿಕೊಂಡು ಬಂದಿದ್ದು, ನಾನೂ ಕೂಡ ಅದನ್ನು ಶ್ರೀಸ್ವಾಮಿಯ ಸೇವೆ ಮಾಡುವ ಮೂಲಕ ಯಥಾಶಕ್ತಿಯಿಂದ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ದಿನವೂ ಭಕ್ತರು ಶ್ರೀಸ್ವಾಮಿಯ ಸೇವೆ ಮಾಡಿ ಅಭಯ ದಾನಕ್ಕಾಗಿ ಬೀಡಿಗೆ ಬರುತ್ತಿರುತ್ತಾರೆ. ಒಬ್ಬೊಬ್ಬರದು ಒಂದೊಂದು ರೀತಿಯ ಸಮಸ್ಯೆ, ಬೇಡಿಕೆ, ಅನಿಸಿಕೆ, ಅಭಿಪ್ರಾಯಗಳು ಇರುತ್ತವೆ. ಎಲ್ಲರನ್ನೂ, ಎಲ್ಲವನ್ನೂ ಆಲಿಸಿ ಅವರಿಗೆ ಸಾಂತ್ವನ, ಪರಿಹಾರ, ಮಾರ್ಗದರ್ಶನವನ್ನು ನೀಡುತ್ತೇನೆ. ಎಲ್ಲರೂ ತಮ್ಮ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಬೇಕು. ಇತರರನ್ನು ತುಳಿಯದೆ ತಿಳಿದು ಬದುಕಬೇಕು. ಅಂದರೆ ನಾವು ಬದುಕುವುದರ ಜೊತೆಗೆ ಇನ್ನೊಬ್ಬರಿಗೂ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ನಾನು ಆಗಾಗ ಹೇಳುತ್ತಿರುತ್ತೇನೆ.

ಬದುಕು ಭಗವಂತ ನಮಗೆ ಕೊಟ್ಟ ಒಂದು ಉತ್ತಮ ಅವಕಾಶ. ಅದನ್ನು ನಮ್ಮ ಕೈಯಾರೆ ಹಾಳು ಮಾಡಿಕೊಳ್ಳಬಾರದು. ಎಷ್ಟು ಸಾಧ್ಯವೋ ಅಷ್ಟು ಉತ್ತಮ ರೀತಿಯಲ್ಲಿ ಬದುಕಬೇಕು. ಸತ್ತಾಗ ನಾಲ್ಕು ಜನರಿಂದ ಒಳ್ಳೆಯ ಮಾತುಗಳು ಬರಬೇಕೇ ಹೊರತು, ಆತ ಸತ್ತದ್ದು ಒಳ್ಳೆಯದೇ ಆಯಿತು ಅನ್ನುವ ಹಾಗೆ ಬದುಕಬಾರದು. ಉಗ್ರಗಾಮಿಗಳು, ಭಯೋತ್ಪಾದಕರು ಸತ್ತಾಗ ಯಾರೂ ಅವರಿಗಾಗಿ ಮಿಡಿಯುವುದಿಲ್ಲ. ಆದರೆ ಕೆಲ ಮಹಾನ್ ವ್ಯಕ್ತಿಗಳು, ಸಾಧು-ಸಂತರು, ಪರೋಪಕಾರಿಗಳು ನಿಧನರಾದಾಗ ಸಾವಿರಾರು ಜನರು ದುಃಖ ವ್ಯಕ್ತಪಡಿಸುತ್ತಾರೆ. ಮೊನ್ನೆಯಷ್ಟೇ ಭಾರತದ ಖ್ಯಾತ ಉದ್ಯಮಿ ರತನ್ ಟಾಟಾ ನಮ್ಮನ್ನಗಲಿದ್ದಾರೆ. ಅವರ ಅಗಲುವಿಕೆ ದೇಶಕ್ಕೆ ಬಹುದೊಡ್ಡ ನಷ್ಟ. ಅಂತಹ ವ್ಯಕ್ತಿಯ ಸಾವಿಗೆ ಎಲ್ಲರೂ ಕಂಬನಿ ಸುರಿಸಿದ್ದಾರೆ. ಅವರು ದೇಶದ ಪ್ರಮುಖ ವ್ಯಾಪಾರ ಉದ್ಯಮಿ, ಲೋಕೋಪಕಾರಿಯಾಗಿ ಖ್ಯಾತರಾದವರು ಮಾತ್ರವಲ್ಲದೆ ಭಾರತದ ಉದ್ಯಮವನ್ನು ವಿಶ್ವದಾದ್ಯಂತ ಹಬ್ಬಿಸಿ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದವರು. ಅವರ ಯಶಸ್ಸಿನ ಕಥೆಯು ನಮಗೆಲ್ಲ ಸ್ಪೂರ್ತಿಯಾಗಿದೆ. ಟಾಟಾ ಗ್ರೂಪ್ ಭಾರತದ ಪ್ರತಿಷ್ಠಿತ ಬಹುರಾಷ್ಟ್ರೀಯ ಸಂಘಟಿತ ಸಂಸ್ಥೆಯಾಗಿದ್ದು ವಾಹನ, ಉಕ್ಕು, ಮಾಹಿತಿ ತಂತ್ರಜ್ಞಾನ, ದೂರಸಂಪರ್ಕ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅದು ಸ್ಥಾಪನೆಯಾದದ್ದು 1868ರಲ್ಲಿ. ಟಾಟಾ ಸನ್ಸ್​ನ ಜೆಆರ್​ಡಿ ಟಾಟಾ ಅಧ್ಯಕ್ಷ ಪದವಿಯಿಂದ ಕೆಳಗಿಳಿದ ನಂತರ ಅವರ ಉತ್ತರಾಧಿಕಾರಿಯಾಗಿ 1990-91ರಲ್ಲಿ ರತನ್ ಟಾಟಾ ಅಧಿಕಾರ ವಹಿಸಿಕೊಳ್ಳುತ್ತಾರೆ. ಅವರು ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡವರು. ಸೋಲು ಸಮಸ್ಯೆಗಳಿಗೆ ಜಗ್ಗದೆ, ಯಶಸ್ಸಿಗೆ ಹಿಗ್ಗದೆ ಎಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಿ ಹೊಸ ಹೊಸ ಆಲೋಚನೆಗಳ ಮೂಲಕ ಜನಮನವನ್ನು ಗೆದ್ದವರು. ದೇಶದ ಜೊತೆಗೆ ಸದಾ ಇದ್ದು ಸಂಕಷ್ಟದ ಪರಿಸ್ಥಿತಿಯಲ್ಲಿ ಕೈಲಾದಷ್ಟು ನೆರವು ನೀಡಿದವರು. ಅವರ ದೂರದೃಷ್ಟಿ, ನಾಯಕತ್ವ, ಸಾಮಾಜಿಕ ಜವಾಬ್ದಾರಿ, ಅಪಾಯ ಅಥವಾ ಸಮಸ್ಯೆಗಳನ್ನು ಎದುರಿಸುವ ಛಾತಿ, ವೈಫಲ್ಯವನ್ನು ಮೆಟ್ಟಿ ನಿಲ್ಲುವ ಬಗೆ ಇವೆಲ್ಲ ನಾವು ಅವರಿಂದ ಕಲಿಯಬೇಕಾದಂತಹ ವಿಷಯವಾಗಿದೆ.

ಹೊಸದಾಗಿ ಮನೆ ಕಟ್ಟುವಾಗ ಅದಕ್ಕೊಂದು ಪ್ಲ್ಯಾನ್ ಹಾಕಲಾಗುತ್ತದೆ. ಮನೆ ಸಣ್ಣದಿರಲಿ ದೊಡ್ಡದಿರಲಿ ಪ್ಲ್ಯಾನ್ ಬೇಕೇ ಬೇಕು. ಖರ್ಚು ವೆಚ್ಚ, ಎಷ್ಟು ಕೋಣೆಗಳು, ಹಾಲ್, ಅಡಿಗೆ ಕೋಣೆ, ದೇವರ ಕೋಣೆ ಎಲ್ಲಿ ಬರಬೇಕು, ಮುಖ್ಯ ದ್ವಾರ, ಬಾಗಿಲು ಕಿಟಕಿಗಳನ್ನು ಎಲ್ಲಿ ಇಡಬೇಕು ಎಂದೆಲ್ಲ ತಜ್ಞರೊಂದಿಗೆ ರ್ಚಚಿಸಿ ಯೋಜನೆ ಮಾಡುತ್ತೇವೆ. ಹಾಗೆಯೇ ಬದುಕಿಗೂ ಆ ರೀತಿಯಾದ ಯೋಜನೆ ಬಹಳ ಮುಖ್ಯ. ಮದುವೆ, ಮಕ್ಕಳು, ಮಕ್ಕಳ ಶಿಕ್ಷಣ, ಅವರ ಬೇಕು ಬೇಡಗಳು, ಕುಟುಂಬ ನಿರ್ವಹಣೆ, ಆದಾಯ-ಖರ್ಚು ಹೀಗೆ ಎಲ್ಲದರ ಬಗ್ಗೆ ಯೋಜನೆಗಳನ್ನು ಹಾಕಿಕೊಂಡಿದ್ದರೆ ಬದುಕನ್ನು ಸುಗಮವಾಗಿ ಸಾಗಿಸಲು ಸಾಧ್ಯ. ಇಲ್ಲದಿದ್ದಲ್ಲಿ ಬದುಕು ಗೋಜಲು ಗೋಜಲಾಗಿ ಅಯ್ಯೋ ಈ ಜೀವನವೇ ಸಾಕು ಎಂಬ ಹತಾಶೆಯ ಭಾವನೆ ಮೂಡಬಹುದು. ನಿತ್ಯ ಜೀವನದಲ್ಲೂ ಅಷ್ಟೇ. ಬೆಳಗ್ಗೆ ಬೇಗನೇ ಎದ್ದರೆ ನಿತ್ಯ ಕರ್ಮಗಳ ಸಹಿತ ಎಲ್ಲಾ ಕೆಲಸ ಕಾರ್ಯಗಳನ್ನು ಸರಿಯಾದ ಸಮಯದಲ್ಲಿ ಮಾಡಿ ಮುಗಿಸಬಹುದು. ತಡವಾಗಿ ಇದ್ದರೆ ಎಲ್ಲಾ ಕೆಲಸ ಕಾರ್ಯಗಳನ್ನು ಗಡಿಬಿಡಿಯಿಂದಲೇ ಮಾಡಬೇಕಾದ ಪರಿಸ್ಥಿತಿಯ ಜೊತೆಗೆ ಮಾಡಿದ ಕೆಲಸವೂ ಪರಿಪೂರ್ಣವಾಗಲಾರದು.

ಮಕ್ಕಳಿಗೆ, ಯುವ ಜನತೆಗೆ ಪಠ್ಯ ಶಿಕ್ಷಣ ಮಾತ್ರವಲ್ಲದೆ ಜೀವನದ ಪಾಠವನ್ನೂ ತಿಳಿಸಿಕೊಡಬೇಕಾದ ಅಗತ್ಯವಿದೆ. ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ., ರೋವರ್ಸ್, ರೇಂಜರ್ಸ್ ಘಟಕಗಳು ಮುಂತಾದ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸರ್ವತೋಮುಖವಾಗಿ ವಿಕಾಸಗೊಳಿಸುವಲ್ಲಿ ಬಹಳಷ್ಟು ಪರಿಣಾಮಕಾರಿಯಾಗಿವೆ. ನಾಯಕತ್ವ ಗುಣ, ಶಿಸ್ತು, ಕೌಶಲ ವೃದ್ಧಿ, ಶ್ರಮ ಜೀವನ, ಸೇವಾ ಕಳಕಳಿ, ಸಮಾಜ ಸೇವೆ, ಕಾರ್ಯ ಬದ್ಧತೆ, ಟೀಮ್ ವರ್ಕ್ ಮುಂತಾದ ಮೌಲ್ಯಯುತ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಬದುಕಿನ ಮೌಲ್ಯ ತನ್ನಿಂದ ತಾನೇ ವೃದ್ಧಿಯಾಗುತ್ತದೆ. ಜೊತೆಗೆ ಇಂತಹ ಚಟುವಟಿಕೆಗಳು ಮಕ್ಕಳಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಅಭಿವ್ಯಕ್ತಿ, ಅನಾವರಣಗೊಳಿಸಲು ಸಹಕಾರಿಯಾಗುತ್ತದೆ.

ಹನುಮಂತನ ಶಕ್ತಿ ಸಾಮರ್ಥ್ಯ ಏನೆಂಬುದು ಮೊದಲು ಆತನಿಗೇ ತಿಳಿದಿರಲಿಲ್ಲ. ಸಮುದ್ರವನ್ನು ಯಾರು ದಾಟಬಲ್ಲರು ಎಂಬ ಸಮಸ್ಯೆ ಉದ್ಭವಿಸಿದ ಸಂದರ್ಭದಲ್ಲಿ ಪರಿಹಾರೋಪಾಯಗಳನ್ನು ಯೋಚಿಸುವಾಗ ಹನುಮಂತನಲ್ಲಿರುವ ಶಕ್ತಿ ಎಲ್ಲರೆದುರು ಪ್ರಕಟವಾಯಿತು. ಹನುಮಂತನಿಗೆ ಅಪಾರ ಶಕ್ತಿ ಇದೆ ಎಂದು ಆತನಿಗೆ ತಿಳಿಯದಿರುವ ಶಾಪವಿತ್ತಂತೆ. ಮುಂದೆ ಆತನ ಶಕ್ತಿಗಳ ಗುಣಗಾನ ಮಾಡುತ್ತಾ ಹೋದಂತೆ ಆತನಿಗೆ ಸಮುದ್ರೋಲಂಘನದ ಶಕ್ತಿ ನೆನಪಿಗೆ ಬಂತು. ಸೀತೆಯನ್ನು ಹುಡುಕಲು ಸಮುದ್ರದ ಮೇಲೆ ಹಾರಿ ಲಂಕೆಯನ್ನು ತಲುಪಿ, ಸೀತಾಮಾತೆಯನ್ನು ಕಂಡು ಸಂದೇಶ ತಲುಪಿಸಿದ. ಬಹುಶಃ ಅಂತಹ ಸಮಸ್ಯೆ ಎದುರಾಗದೇ ಇದ್ದಿದ್ದರೆ ಹನುಮಂತನ ಶಕ್ತಿ ಬೆಳಕಿಗೆ ಬರುತ್ತಲೂ ಇರಲಿಲ್ಲ, ರಾಮಾಯಣದ ಸಮದ್ರೋಲ್ಲಂಘನದಲ್ಲಿ ಹನುಮಂತನ ವಿವಿಧ ಸಾಹಸಮಯ ಕತೆಗಳು ಹುಟ್ಟಿಕೊಳ್ಳುತ್ತಲೂ ಇರಲಿಲ್ಲ ಎಂದೆನಿಸುತ್ತದೆ. ಕೆಲವೊಮ್ಮೆ ಸಮಸ್ಯೆಗಳು ನಮ್ಮ ಒಳಿತಿಗೆ ಉದ್ಭವಿಸುತ್ತಿರುವಂತೆ ಭಾಸವಾಗುತ್ತದೆ. ಅದಕ್ಕಾಗಿಯೇ ಕೆಲವರು ಧನಾತ್ಮಕ ಚಿಂತನೆಯಿಂದ ‘ಆಗುವುದೆಲ್ಲ ಒಳ್ಳೆಯದಕ್ಕೇ’ ಎಂದು ಹೇಳುತ್ತಿರುತ್ತಾರೆ.

ಸದಾ ಧನಾತ್ಮಕ ಚಿಂತನೆಯನ್ನು ಹೊಂದಿದ್ದರೆ ಯಾವುದೇ ಕಷ್ಟದ ಪರಿಸ್ಥಿತಿಯನ್ನು ಎದುರಿಸಬಹುದು. ಕಷ್ಟಗಳಿರಲಿ, ನೋವುಗಳಿರಲಿ ಅವು ಸಮುದ್ರದ ಮೇಲಿರುವ ತೆರೆಗಳಂತೆ ಒಮ್ಮೆ ದಡವನ್ನು ಅಪ್ಪಳಿಸಿ ಮತ್ತೆ ಹಿಂದಿರುಗಿ ಹೋಗುತ್ತವೆ. ತೆರೆಗಳಿಗೆ ಅಂಜಿ ದೋಣಿಯನ್ನು ನಡೆಸದೆ ದಡದಲ್ಲೇ ಕೂತರೆ ಮೀನುಗಾರರ ಬದುಕು ನಡೆಯದು. ಮುಗಿಲೆತ್ತರಕ್ಕೆ ಚಿಮ್ಮುವ ತೆರೆಗಳ ಮಧ್ಯೆ ಧೈರ್ಯದಿಂದ ದೋಣಿಯನ್ನು ನಡೆಸಿ, ಬಲೆ ಬೀಸಿ ಶ್ರಮದಿಂದ ದುಡಿದರೆ ಮಾತ್ರ ಬದುಕಿನ ಬುತ್ತಿಯನ್ನು ತುಂಬಿಸಿಕೊಳ್ಳಲು ಸಾಧ್ಯ. ಹಾಗೆಯೇ ಕಷ್ಟಗಳಿಗೆ ಅಂಜಿ ಕೂತರೆ ಬದುಕು ನಡೆಯದು. ದೇವರ ಕೃಪೆಯಿಂದ ಎದುರಿಸುತ್ತೇನೆ ಎಂದು ಮುನ್ನಡೆದಾಗ ಸ್ವತಃ ಭಗವಂತನೇ ಕಷ್ಟವನ್ನು ಪರಿಹರಿಸಲು ನಮ್ಮ ಬೆನ್ನ ಹಿಂದೆ ನಿಲ್ಲುತ್ತಾನೆ. ಪ್ರತಿಯೊಂದು ಸಮಸ್ಯೆಗೂ ಪರಿಹಾರವಂತೂ ಇದ್ದೇ ಇದೆ. ಅದನ್ನು ನಾವೆಲ್ಲ ತಾಳ್ಮೆಯಿಂದ ಕಂಡುಕೊಳ್ಳಬೇಕಷ್ಟೇ.

ಸಮಸ್ಯೆಗಳು ಎದುರಾದಾಗ ಅವನ್ನು ಪರಿಹರಿಸುವ ನಿಟ್ಟಿನಲ್ಲಿ ನಾವು ಮಾಡುವ ಪ್ರಯತ್ನಗಳೆಲ್ಲ ವಿಫಲವಾದರೂ ಅವು ನಮಗೆ ಹೊಸ ಹೊಸ ಪಾಠಗಳನ್ನು ಕಲಿಸಿರುತ್ತವೆ. ಸೋಲುಗಳು ನಮ್ಮನ್ನು ಮತ್ತಷ್ಟು ಗಟ್ಟಿಗೊಳಿಸಿ ಹೊಸ ಹೊಸ ದಾರಿಗಳನ್ನು ಕಂಡುಕೊಂಡು ಯಶಸ್ಸನ್ನು ಪಡೆಯಲು ನೆರವಾಗುತ್ತವೆ. ಹೆಚ್ಚು ಉಳಿ ಪೆಟ್ಟು ತಿನ್ನುವ ಕಲ್ಲು ದೇವರ ಮೂರ್ತಿಯಾಗುವಂತೆ ಕಷ್ಟ-ನಷ್ಟ, ನೋವುಗಳನ್ನು ಅನುಭವಿಸದೆ ಜೀವನದಲ್ಲಿ ಸುಖವನ್ನು ಪಡೆಯಲು ಸಾಧ್ಯವಿಲ್ಲ. ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ವಿಷಯಗಳಿಗೂ ಮನನೊಂದು ಆತ್ಮಹತ್ಯೆಯಂತಹ ತಪ್ಪು ಕೆಲಸಗಳನ್ನು ಮಾಡುವುದು ಹೆಚ್ಚಾಗಿದೆ. ಗಂಡ- ಹೆಂಡತಿಯ ನಡುವೆ ಸಣ್ಣ ವಿಷಯಕ್ಕೆ ಶುರುವಾದ ಗಲಾಟೆ ವಿಚ್ಛೇದನವರೆಗೂ ಹೋಗುತ್ತಿರುವುದು ಬಹಳಷ್ಟು ಹೆಚ್ಚಾಗಿದೆ. ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಸಮಯದಲ್ಲಿ ಪರಿಹರಿಸದೇ ಇದ್ದಾಗ ಇಂತಹ ಘಟನೆಗಳು ನಡೆಯುತ್ತವೆ. ಜ್ವರ, ತಲೆ ನೋವು, ಹೊಟ್ಟೆನೋವು ಬಂದಾಗಲೇ ಅದನ್ನು ಉಪಶಮನ ಮಾಡುವ ಮದ್ದನ್ನು ತಕ್ಷಣವೇ ತೆಗೆದುಕೊಳ್ಳಬೇಕು. ನಾಳೆ ತೆಗೆದುಕೊಳ್ಳುವ, ನಾಳಿದ್ದು ನೋಡುವ ಎಂದು ಸುಮ್ಮನಿದ್ದರೆ ನೋವು ಉಲ್ಬಣವಾಗಿ ಮತ್ತೊಂದಷ್ಟು ಆರೋಗ್ಯ ಸಮಸ್ಯೆಗಳು ಕಾಡದೇ ಇರದು.

ಸಮಸ್ಯೆಗಳು ಸಣ್ಣದಿರಲಿ, ದೊಡ್ಡದಿರಲಿ ಮೊದಲು ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಬೇಕು. ಬಳಿಕ ನಮ್ಮಿಂದ ಪರಿಹಾರ ಮಾಡಲು ಆಗದಿದ್ದರೆ ಆತ್ಮೀಯರು, ಬಂಧು-ಕುಟುಂಬವರ್ಗ ಅಥವಾ ನಂಬಿಕಸ್ಥರೊಡನೆ ಸಮಾಲೋಚಿಸಿ ಸಮಸ್ಯೆಯನ್ನು ನಿವಾರಿಸಬಹುದು. ನಾವು ಮಾಡುವ ಕೆಲಸ ನಮಗೆ ತೃಪ್ತಿ ನೀಡಬೇಕು. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವುದು, ಪಕ್ಕದ ಮನೆಯವ ಕಾರು ತಂದ ಎಂದು ನಾವೂ ಸಾಲ ಮಾಡಿ ಆತನ ಕಾರಿಗಿಂತ ಹೆಚ್ಚು ಬೆಲೆಯ ಕಾರು ತರುವುದು, ಯಾರೋ ಹಣ ಡಬಲ್ ಮಾಡಿಕೊಡುತ್ತೇನೆ ಎಂದರೆ ಇದ್ದ ಬದ್ದ ಹಣ ಕೊಟ್ಟು ಮೋಸ ಹೋಗುವುದು, ಆನ್​ಲೈನ್ ಗೇಮ್ಲ್ಲಿ ಹಣ ಬರುತ್ತೆ ಅಂತ ಅತಿಯಾಸೆಗೆ ಬಲಿ ಬಿದ್ದು ಇದ್ದುದನ್ನು ಕಳೆದುಕೊಳ್ಳುವುದು... ಮುಂತಾದವುಗಳಿಂದ ದೂರವಿದ್ದರೇನೆ ಒಳ್ಳೆಯದು. ನಮ್ಮ ಹಿರಿಯರು ಬಹಳ ಚೆನ್ನಾದ ಮಾತನ್ನು ಹೇಳಿದ್ದಾರೆ- ‘ನಮ್ಮ ತಲೆಗೆ ನಮ್ಮದೇ ಕೈ’. ಅಂದರೆ ಸುಖದಲ್ಲಿ ನಮ್ಮೊಂದಿಗೆ ಸಾಕಷ್ಟು ಜನ ಬರಬಹುದು. ಆದರೆ ಕಷ್ಟ ಕಾಲದಲ್ಲಿ ನಮ್ಮೊಂದಿಗೆ ಬರುವವರು ಬೆರಳೆಣಿಕೆಯ ಮಂದಿ ಮಾತ್ರ. ಕಷ್ಟ-ನಷ್ಟ ಅನುಭವಿಸಿದಾಗ ಯಾರೂ ನಮ್ಮ ಜೊತೆ ನಿಲ್ಲಲಾರರು. ಆಗ ನಮ್ಮ ತಲೆಗೆ ನಮ್ಮದೇ ಕೈಯನ್ನು ಇಟ್ಟುಕೊಳ್ಳಬೇಕಷ್ಟೇ.

ಕಷ್ಟ, ಸಮಸ್ಯೆಗಳು ನಮಗೆ ಮಾತ್ರ ಅಲ್ಲ. ದೇವಾನುದೇವತೆಗಳೂ ಒಂದಲ್ಲ ಒಂದು ಕಷ್ಟ ಅನುಭವಿಸಿ ಬಳಿಕ ಜಯವನ್ನು ಪಡೆದ ಬಗ್ಗೆ ಪುರಾಣ ಕತೆಗಳಲ್ಲಿ ಓದಿದ್ದೇವೆ. ನಾವೂ ಅಷ್ಟೇ, ಈಗ ಕಷ್ಟ ಅನುಭವಿಸಿದರೂ ಕಾಲಾನಂತರದಲ್ಲಿ ಕಷ್ಟವು ದೂರವಾಗಿ ಸುಖ ಪ್ರಾಪ್ತಿಯಾಗುತ್ತದೆ. ಬದುಕು ಬೇವು-ಬೆಲ್ಲದಂತೆ ಕಷ್ಟ-ಸುಖ, ನೋವು-ನಲಿವುಗಳ ಸಮ್ಮಿಶ್ರಣ. ನಾವಿಂದು ಹಬ್ಬ-ಹರಿದಿನಗಳನ್ನೆಲ್ಲ ಬಹಳ ಸಂಭ್ರಮದಿಂದ ಆಚರಿಸುತ್ತೇವೆ. ದುಷ್ಟ ಶಕ್ತಿಗಳನ್ನು ದೂರ ಮಾಡುವ ದೇವರನ್ನು ಆರಾಧಿಸಿ, ನಮಗೂ ಕಷ್ಟಗಳನ್ನು ಎದುರಿಸುವ ಶಕ್ತಿ ಕೊಡು ಎಂದು ಪ್ರಾರ್ಥಿಸುತ್ತೇವೆ. ಈಗಷ್ಟೇ ಅಸುರ ಶಕ್ತಿಯನ್ನು ನಾಶ ಮಾಡಿದ ದುರ್ಗಾದೇವಿಯನ್ನು ನಾವೆಲ್ಲ ನವರಾತ್ರಿ, ದಸರಾದ ಮೂಲಕ ಆಚರಿಸಿದ್ದೇವೆ. ನಮ್ಮಲ್ಲಿನ, ಸಮಾಜದಲ್ಲಿರುವ ಅರಿಷಡ್ವರ್ಗಗಳು ದೂರವಾಗಿ ಸಾತ್ವಿಕ ಮನೋಭಾವಗಳು ಹೊರ ಹೊಮ್ಮಿ, ಜೀವನೋತ್ಸಾಹ ಸದಾ ಚಿಮ್ಮುತ್ತಿರಲಿ.

(ಲೇಖಕರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net